ಹೆಣ್ಣುಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ನಮ್ಮ ನಡವಳಿಕೆಗಳು ಅನೇಕ ಸಂದರ್ಭಗಳಲ್ಲಿ ಅವರ ಮೂಲಭೂತ ‘ಹಕ್ಕುಗಳನ್ನು ಮೊಟಕುಗೊಳಿಸುವಂತಿರುತ್ತವೆ. ಅವರ ಬಗ್ಗೆ ಕಾಳಜಿಯ ಮಾತನಾಡುತ್ತಲೇ ಲಿಂಗಭೇದಕ್ಕೆ ಆಸ್ಪದ ಕಲ್ಪಿಸುವ ಪ್ರಯತ್ನವನ್ನು ಪೋಷಿಸುತ್ತಿರುತ್ತೇವೆ. ಇಂಥ ಪ್ರಯತ್ನಗಳು ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿ ಆನೇಕ ಸಂದರ್ಭಗಳಲ್ಲಿ ಅಪ್ರಜ್ಞಾಪೂರ್ವಕವಾಗಿ ನಡೆಯುತ್ತಿರುತ್ತವೆ.
ಗಂಡು ಮತ್ತು ಹೆಣ್ಣಿನ ನಡುವಿನ ತಾರತಮ್ಯ ಮನೆಯಿಂದಲೇ ಆರಂಭವಾಗುತ್ತದೆ. ಬಹುತೇಕ ಕುಟುಂಬಗಳಲ್ಲಿ ಗಂಡುಮಕ್ಕಳಿಗೆ ದೊರೆಯುವ ಸ್ವಾತಂತ್ರ್ಯ ಮತ್ತು ಸವಲತ್ತುಗಳು ಹುಡುಗಿಯರಿಗೆ ದೊರೆಯುವುದಿಲ್ಲ. ಈ ತಾರತಮ್ಯವನ್ನು ಬಾಲಕಿಯರ ಸುರಕ್ಷತೆಯ ಹೆಸರಿನಲ್ಲಿ ಸಮರ್ಥಿಸಲಾಗುತ್ತದೆ. ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಅತಿ ಕಾಳಜಿ ವಹಿಸುವುದು ಇಂದಿನ ಸಾಮಾಜಿಕ ಸಂದರ್ಭದಲ್ಲಿ ಸರಿಯಾಗಿಯೇ ಇದೆ. ಆದರೆ, ಈ ಕಾಳಜಿ ಅವರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುವಂತಾಗಬಾರದು ಹಾಗೂ ಲಿಂಗಭೇದಕ್ಕೆ ಅವಕಾಶ ಕಲ್ಪಿಸುವಂತಿರಬಾರದು. ಮನೆಗಳಲ್ಲಿ ಮಾತ್ರವಲ್ಲ, ಶಾಲಾಕಾಲೇಜುಗಳಲ್ಲಿ ಕೂಡ ಹೆಣ್ಣುಮಕ್ಕಳನ್ನು ಕಾವಲಿನಲ್ಲಿ ಇರಿಸಲಾಗುತ್ತದೆ. ಉದ್ಯೋಗ ಸ್ಥಳಗಳಲ್ಲಿಯೂ ಸುರಕ್ಷತೆಯ ಹೆಸರಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಹಿಂಜರಿಯುವ ಪರಿಸ್ಥಿತಿಯಿದೆ. ಈ ತಾರತಮ್ಯವನ್ನು ಹೆಚ್ಚಿನ ಮಹಿಳೆಯರು ಸಹಜವೆಂದು ಒಪ್ಪಿಕೊಳ್ಳುವುದರ ಜೊತೆಗೆ ಆ ಪರಿಸ್ಥಿತಿಯನ್ನು ಪೋಷಿಸಲು ತಮ್ಮ ಕೊಡುಗೆಯನ್ನೂ ನೀಡುತ್ತಾರೆ. ಇಂಥ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕ ಪ್ರಯತ್ನಗಳು ಹಾಗೂ ನಿರಂತರ ಸಂವಾದಗಳು ಅಗತ್ಯ.
ಬಾಲಕಿಯರ ಸಾಂವಿಧಾನಿಕ ಹಕ್ಕುಗಳ ಕುರಿತಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪು ಸುರಕ್ಷತೆಯ ಹೆಸರಿನಲ್ಲಿನ ಸಮಾಜದಲ್ಲಿ ಬೇರುಬಿಟ್ಟಿರುವ ಪೂರ್ವಗ್ರಹಗಳನ್ನು ತಿಳಿಯಾಗಿಸಲು ಒತ್ತಾಯಿಸುವಂತಿದೆ. ಕೋಯಿಕ್ಕೋಡ್ನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರಿಗೆ ವಿಧಿಸಿರುವ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ನೀಡಿರುವ ನಿರ್ದೇಶನ, ಹೆಣ್ಣುಮಕ್ಕಳಿಗೆ ಇರುವ ಸಾಂವಿಧಾನಿಕ ಹಕ್ಕುಗಳನ್ನು eತ್ತಿಹಿಡಿದಿದೆ ಹಾಗೂ ಲಿಂಗ ತಾರತಮ್ಯ ನಿವಾರಣೆಗೆ ಪೂರಕವಾಗಿದೆ. ರಾತ್ರಿ 9.30ರ ನಂತರ ವಿದ್ಯಾರ್ಥಿನಿಯರು ಹಾಸ್ಟೆಲ್ನಿಂದ ಹೊರಬರುವುದರ ವಿರುದ್ಧ ಹೇರಲಾಗಿದ್ದ ನಿರ್ಬಂಧವನ್ನು ವಿದ್ಯಾರ್ಥಿನಿಯರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿರುವ ವಿಚಾರಣೆ, ಸಮಾಜದಲ್ಲಿ ಲಿಂಗತಾರತಮ್ಯ ಯಾವೆಲ್ಲ ರೂಪದಲ್ಲಿ ಜೀವಂತವಾಗಿದೆ ಎನ್ನುವುದಕ್ಕೆ ಉದಾಹರಣೆಯಂತಿದೆ.
ಹಾಸ್ಟೆಲ್ನಿಂದ ಹೊರಬರಲು ವಿದ್ಯಾರ್ಥಿನಿಯರಿಗೆ ಕಾಲಮಿತಿ ಗೊತ್ತುಪಡಿಸಲು ಆಡಳಿತ ಮಂಡಳಿ ನೀಡಿರುವ ಕಾರಣಗಳು ಪುರುಷ ಯಾಜಮಾನ್ಯ ಮನಸ್ಥಿತಿಯನ್ನು ಬಿಂಬಿಸುವಂತಿವೆ. ‘ವಿದ್ಯಾರ್ಥಿನಿಯರಿಗೆ ಸಾಕಷ್ಟು ನಿದ್ರೆ ಅಗತ್ಯವಿದೆ. ನಿದ್ದೆಗೆಡುವುದು ಅಥವಾ ರಾತ್ರಿ ಜೀವನ (ನೈಟ್ ಲೈಫ್) ಅವರಿಗೆ ಒಳ್ಳೆಯದಲ್ಲ’ ಎಂದು ಆಡಳಿತಮಂಡಳಿ ವಾದಿಸಿದೆ. “ಹದಿಹರೆಯದವರ ಮೆದುಳು ದುರ್ಬಲವಾಗಿದ್ದು, ಆದೌರ್ಬಲ್ಯ ಅಪಾಯಕಾರಿ ನಡವಳಿಕೆಗಳಿಗೆ ಕಾರಣವಾಗಬಹುದು, ಮಾದಕ ವ್ಯಸನ ಅಥವಾ ಅಸುರಕ್ಷಿತ ಲೈಂಗಿಕತೆಗೆ ಆಸ್ಪದ ಕಲ್ಪಿಸಬಹುದು’ ಎಂದೂ ವಾದಿಸಲಾಗಿದೆ. ಈ ಪೊಳ್ಳುವಾದಕ್ಕೆ ಪ್ರತಿಯಾಗಿ, ‘ಬಾಲಕಿಯರ ಹಿತರಕ್ಷಣೆ ಕುರಿತಂತೆ ಹಾಸ್ಟೆಲ್ ಆಡಳಿತ ಮಂಡಳಿಯ ತರ್ಕಸರಣಿ ಹುಡುಗರಿಗೂ ಅನ್ವಯವಾಗಬೇಕಲ್ಲವೆ?’ ಎನ್ನುವ ವಿದ್ಯಾರ್ಥಿನಿಯರ ತರ್ಕವನ್ನು ಹೈಕೋರ್ಟ್ ಒಪ್ಪಿಕೊಂಡಿದೆ.
“ವಿದ್ಯಾರ್ಥಿ ನಿಲಯಗಳು ಜೈಲುಗಳಲ್ಲ’ ಎಂದು ಹೇಳಿರುವ ಹೈಕೋರ್ಟ್, ‘ರಕ್ಷಣೆಯ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ನಿರ್ಬಂಧಿಸುವಂತಿಲ್ಲ. ರಸ್ತೆಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳನ್ನು ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿ ಇರಿಸುವುದು ಸಮಾಜದ ಕರ್ತವ್ಯವಾಗಿದೆ’ ಎಂದು ಸ್ಪಷ್ಟವಾಗಿ ಹೇಳಿದೆ, “ಪುರುಷರನ್ನು ನಿರ್ಬಂಧಿಸಿ ಏಕೆಂದರೆ, ಅವರು ತೊಂದರೆಗಳನ್ನು ಸೃಷ್ಟಿಸುತ್ತಾರೆ. ಹೆಣ್ಣುಮಕ್ಕಳನ್ನು ಮುಕ್ತವಾಗಿ ಓಡಾಡಲು ಬಿಡಿ’ ಎಂದೂ ನ್ಯಾಯಾಲಯ ಮಾರ್ಮಿಕವಾಗಿ ಹೇಳಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿಯೇ ಹೆಣ್ಣುಮಕ್ಕಳ ಸ್ವಾತಂತ್ರಕ್ಕೆ ನಿರ್ಬಂಧಗಳಿದ್ದರೆ, ಉಳಿದ ಸ್ಥಳಗಳಲ್ಲಿ ಸಮಾನತೆಯನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ? ಈ ಆತಂಕದ ನಡುವೆಯೂ, ಲಿಂಗಸಮಾನತೆಯನ್ನು ಒತ್ತಾಯಿಸಿ ಅಲ್ಲಲ್ಲಿ ಗಟ್ಟಿದ್ದನಿಗಳು ಕೇಳಿಸುತ್ತಿವೆ ಹಾಗೂ ಅಂಥ ಧ್ವನಿಗಳನ್ನು ನ್ಯಾಯಾಂಗವೂ ಸಾವಧಾನದಿಂದ ಆಲಿಸುತ್ತಿದೆ. ಕೇರಳ ಹೈಕೋರ್ಟ್ ತೀರ್ಪು ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ ಸಮಾನತೆಯ ವಾತಾವರಣ ರೂಪುಗೊಳ್ಳಲು ಪ್ರೇರಣೆಯಾಗಬೇಕು. ಆದರೆ, ಲಿಂಗಸಮಾನತ ಪರಿಣಾಮಕಾರಿಯಾಗಿ ಸಾಧ್ಯವಾಗಬೇಕಾದುದು ಮನೆಗಳಲ್ಲಿ, ಹೆಣ್ಣುಮಕ್ಕಳ ಸುರಕ್ಷತೆ ಎನ್ನುವುದು ಗಂಡುಮಕ್ಕಳ ಸ್ಟೇಚ್ಛಾಚಾರಕ್ಕೆ ನೀಡಿದ ಪರವಾನಗಿ ಆಗಬಾರದು. ಮನೆಗಳಲ್ಲಿನ ಲಿಂಗಭೇದದ ನಡವಳಿಕೆಗಳು, ಹುಡುಗರಲ್ಲಿ ಮೇಲರಿಮೆಯನ್ನು ಸೃಷ್ಟಿಸಿ ಅವರು ಅನಾಹುತಗಳನ್ನು ಎಸಗಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಬಹುತೇಕ ಗಂಡಸರು ‘ಪುರುಷ ಯಾಜಮಾನ್ಯ’ದ ಸೋಂಕಿನಿಂದ ಬಳಲುತ್ತಿರುತ್ತಾರೆ. ಆ ಸೋಂಕನ್ನು ತಡೆಗಟ್ಟುವುದು ಪೋಷಕರ ಹೊಣೆಗಾರಿಕೆಯೇ ಆಗಿದೆ.
ಲಿಂಗ ಸಮಾನತೆ ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಾದುದು ಮನೆಗಳಲ್ಲಿ. ಹೆಣ್ಣು ಮಕ್ಕಳ ಸುರಕ್ಷತೆ ಎನ್ನುವುದು ಗಂಡು ಮಕ್ಕಳ ಸ್ವೇಚ್ಛಾಚಾರಕ್ಕೆ ನೀಡಿದ ಪರವಾನಗಿ ಆಗಬಾರದು. ಮನೆಗಳಲ್ಲಿ ಲಿಂಗ ಭೇದದ ನಡುವಳಿಕೆಗಳು ಹುಡುಗರಲ್ಲಿ ಮೇಲರಿಮೆಯನ್ನು ಸೃಷ್ಟಿಸಿ ಅವರು ಅನಾಹುತಗಳನ್ನು ಎಸೆಗಲು ಅವಕಾಶ ಕಲ್ಪಿಸಬಹುದು.
-ಮಣಿಕಂಠ ತ್ರಿಶಂಕರ್, ಮೈಸೂರು