News Kannada
Sunday, March 26 2023

ಸಂಪಾದಕರ ಆಯ್ಕೆ

ಸರ್ಕಾರ ಪ್ರವೇಶ ನಿಷೇಧಿಸಿರುವ ಆ ನಿಗೂಢ ದ್ವೀಪ

That mysterious island where the government has banned entry
Photo Credit : Wikimedia

ಗಳಿಗೆ ಗಳಿಗೂ ಹೊಸ ಹೊಸ ರೀತಿಗೆ ಈ ಜಗ ಓಡುತ್ತಿದೆ. ಪ್ರಗತಿಯ ಹಂತಕ್ಕೂ, ಪ್ರಳಯ ದುರಂತಕ್ಕೊ ಹಳೆತ ನೋಡಿತಾ ಕಲಕಲ ನಗುತಲಿ ಈ ಜಗ ಓಡುತ್ತಿದೆ-ಇದು ಕವಿ ಪುತಿನ ಅವರ ಕವಿತೆ ಒಂದು ಸಾಲು. ಜಗತ್ತಿನ ಹೊಸ ಹೊಸ ಆವಿಷ್ಕಾರಗಳು ಬೆರಗಿನಿಂದ ನೋಡುವಂತೆ ಮಾಡಿದೆ. ಮನುಷ್ಯ ನಿರ್ಮಿಸಿದ ನೂರಾರು ಉಪಗ್ರಹಗಳು ಅಂತರಿಕ್ಷದಲ್ಲಿ ಪ್ರದಕ್ಷಿಣೆ ಹಾಕುತ್ತಿದೆ. ಪ್ರಪಂಚದ ಯಾವ ಮೂಲೆಯ ಮಾಹಿತಿಯನ್ನು ಸಹ ಪಡೆಯಬಹುದಾದ ತಂತ್ರಜ್ಞಾನ ಈಗ ಕೈ ಅಂಚಿನಲ್ಲಿದೆ. 5ಜಿ ಸಮಾನವನ್ನು ದಾಟಿ ಮುಂದೆ ಮುಂದೆ ಸಾಗುತ್ತಿರುವ ಈ ಕಾಲಗಟ್ಟದಲ್ಲಿ ಈ ಯಾವ ಆವಿಷ್ಕಾರದ ಅರಿವು ಇಲ್ಲದೇ ಆಧುನಿಕ ಜಗತ್ತಿನ ಸಂಪರ್ಕವೇ ಇಲ್ಲದೇ ಬಾಣ ಬರ್ಜಿಗಳನ್ನು ಹಿಡಿದು ನಮ್ಮ ಭಾರತದ ಭಾಗವೇ ಆದ ದ್ವೀಪವೊಂದರಲ್ಲಿ ಶತಶತಮಾನಗಳಿಂದ ಬಾಳಿ ಬದುಕುತ್ತಿರುವ ವಿಶ್ವದ ಪುರಾತನ ಜನಾಂಗದ ಕತೆ ಇದು.

ಅಂಡಮಾನ್ ನಿಕೋಬಾರ್‌ನ ನಾರ್ಥ್ ಸೆಂಟಿನಲ್ ದ್ವೀಪದಲ್ಲಿ ವಸ್ತ್ರ ಏನೆಂಬುದನ್ನೇ ಅರಿಯದ, ಇಂಟರ್ ನೆಟ್, ವಾಹನ, ವಿದ್ಯುತ್, ಮೊಬೈಲ್ ಏನೆಂದು ಅರಿಯದ, ಮನುಷ್ಯರನ್ನು ಕಂಡರೇ ಬಾಣ ಎಸೆದು ಕೊಲ್ಲುವ ಪ್ರಪಂಚದ ಅತ್ಯಂತ ಪುರಾತನ ಜನಾಂಗವಾದ ಸೆಂಟಿನಲ್ ಇಂದಿಗೂ ವಾಸಿಸುತ್ತಿದ್ದಾರೆ.

ಈಗ ಈ ದ್ವೀಪದಲ್ಲಿರುವ ಸೆಂಟಿನಲ್ಸ್‌ ಜನರ ಜನಸಂಖ್ಯೆ 40 ಕ್ಕೂ ಕಡಿಮೆ ಎನ್ನಲಾಗಿದೆ. ಜನಸಂಖ್ಯೆಯ ಕುರಿತು ನಿಖರ ಮಾಹಿತಿ ಇದುವರೆಗೂ ದಾಖಲಾಗಿಲ್ಲ, ಇದು 2001 ರ ಜನಗಣತಿಯಲ್ಲಿ ಜನಗಣತಿ ಅಧಿಕಾರಿಗಳು ದೂರದಿಂದ ನಡೆಸಿದ ಸಮೀಕ್ಷೆಯಲ್ಲಿ ದೊರೆತ ಅಂಕಿ ಅಂಶಗಳು. ಸಣ್ಣ ಗಾತ್ರದ ದೇಹ, ಕಪ್ಪು ಚರ್ಮದ ಸಣ್ಣ ಮತ್ತು ಬಿಗಿಯಾದ ಗುಂಗುರು ಕೂದಲಿನ ಈ ಜನರ ಆಹಾರ ಕಾಡುಪ್ರಾಣಿಗಳು, ಕಾಡುಜೇನು, ಹಣ್ಣುಗಳು, ಬೇಟೆಯಾಡಲು ಮತ್ತು ರಕ್ಷಣೆಗೆ ಈಟಿಗಳು, ಬಿಲ್ಲು ಬಾಣಗಳನ್ನು ಈ ಜನಾಂಗ ಬಳಸುತ್ತದೆ.

ಅಂಡಮಾನ್ ಮತ್ತು ನಿಕೋಬಾರ್ ಭಾರತದ ಗಡಿಯಿಂದ ಬಂಗಾಳಕೊಲ್ಲಿಯ ಸಮುದ್ರದ ನಡುವೆ ಸುಮಾರು 1200 ಕಿ.ಮೀ ದೂರದಲ್ಲಿ 223 ದ್ವೀಪ ಸಮೂಹ. ಸುತ್ತಲ್ಲೂ ಬೋರ್ಗರೆಯುವ ಸಮುದ್ರ ಸುತ್ತುವರಿದಿರುವ, ಮರಳು ತುಂಬಿದ ತೀರಗಳು, ಹವಳ ದ್ವೀಪಗಳಿಂದ ತುಂಬಿರುವ, ತೆಂಗಿನ ವೃಕ್ಷ, ಇತರ ಬೃಹತ್ ಕಾಡುಮರಗಳಿಂದ ತುಂಬಿರುವ ಮನೋಹರವಾದ ದ್ವೀಪಗಳಿವು. ಸುಮಾರು 4 ಲಕ್ಷದಷ್ಟು ಜನರು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ವಾಸಿಸುತ್ತಿದ್ದಾರೆ. ಮಲಯಾಳಂ, ಹಿಂದಿ, ತಮಿಳು, ತೆಲುಗು, ಪಂಜಾಬಿ, ಇಂಗ್ಲೀಷ್, ನಿಕೋಬರಿಸ್ ಭಾಷೆಗಳಲ್ಲಿ ಇಲ್ಲಿನವರು ಮಾತನಾಡುತ್ತಾರೆ.

ಪ್ರವಾಸೋಧ್ಯಮಕ್ಕೆ ಸಂಬಂಧಿಸಿದ ಕೆಲಸಗಳು ಮತ್ತು ಸಮುದ್ರ ಉತ್ಪನ್ನಗಳೇ ಇಲ್ಲಿನವರ ಆದಾಯದ ಮೂಲ. ಭಾರತ ಸ್ವಾತಂತ್ರ್ಯ ಸಮರ ಕಾಲಘಟ್ಟದಲ್ಲಿ ಸ್ವಾತಂತ್ರ ಹೋರಾಟ ಸೇನಾನಿಗಳನ್ನು ಅಂಡಮಾನ್ ನಿಕೋಬಾರ್‌ನ ಬಂದಿಖಾನೆಗಳಲ್ಲಿ ಬಂಧಿಸಲಾಗುತ್ತದೆ. ನಾಲ್ಕು ದಿಕ್ಕಿಗೂ ಕಣ್ಣು ಹಾಯಿಸುವಷ್ಟು ದೂರವು ಸಮುದ್ರವೇ ಆವರಿಸಿರುವ ಈ ಪ್ರದೇಶದಿಂದ ಕಳ್ಳರು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಅಂಡಮಾನ್ ನಿಕೋರ್ಬಾಗಳಲ್ಲಿರುವ 223 ದ್ವೀಪಗಳಲ್ಲಿ ಕೆಲ ದ್ವೀಪಗಳಲ್ಲಿ ಮಾತ್ರ ಜನರು ವಾಸವಿದ್ದಾರೆ. ಈ ದ್ವೀಪಗಳಿಂದ ಸುಮಾರು 50 ಕಿ.ಮಿ ದೂರದಲ್ಲಿದೆ ನಾರ್ಥ್ ಸೆಂಟಿನಲ್ ದ್ವೀಪ. ಈ ದ್ವೀಪದಲ್ಲಿ ಹೊರ ಜಗತ್ತಿನೊಂದಿಗೆ ಯಾವ ಸಂಪರ್ಕವೂ ಇಲ್ಲದೇ ಜಗತ್ತಿನ ಹೊಸ ಹೊಸ ಆವಿಷ್ಕಾರಗಳು ಬದಲಾವಣೆಗಳ ಬಗ್ಗೆ ಅರಿವೇ ಇಲ್ಲದ ಈಗಲೂ ಶಿಲಾಯುಗದ ಮನುಷ್ಯರಂತೆ ಬದುಕುವ ಪುರಾತನ ಸೆಂಟಿನಲ್ಸ್ ಜನಾಂಗವೊಂದು ವಾಸಿಸುತ್ತಿರುವುದು.

See also  ಬೈಂದೂರು: ಶಾಸಕರಿಂದ ಮುಖ್ಯ ಮಂತ್ರಿಗಳಿಗೆ ಮನವಿ

ಬ್ರಿಟಿಷ್ ಅಧಿಕಾರಿಯೊಬ್ಬ ಈ ದ್ವೀಪದ ಸಮೀಪ ದೋಣಿಯಲ್ಲಿ ಸಂಚರಿಸುವಾಗ ನಾರ್ಥ್ ಸೆಂಟಿನಲ್ ದ್ವೀಪದಲ್ಲಿ ಮನುಷ್ಯ ವಾಸ ಇರುವ ಬಗ್ಗೆ ಮೊದಲ ಬಾರಿಗೆ ಕಂಡ, ಕಾಲ ಕಳೆದಂತೆ ಬ್ರಿಟಿಷ್ ಅಧಿಕಾರಿಗಳಿಗೆ ದ್ವೀಪವಾಸಿಗಳಾದ ಪುರಾತನ ಸೆಂಟಿನಲ್ ಜನಾಂಗದ ಜೀವನ ವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಮೂಡಿ ಬ್ರಿಟಿಷ್ ಅಧಿಕಾರಿಗಳ ತಂಡ ತನ್ನ ಸೇನೆಯೊಂದಿಗೆ ಮೊದಲ ಬಾರಿಗೆ ನಾರ್ಥ್ ಸೆಂಟಿನಲ್ ದ್ವೀಪಕ್ಕೆ ಕಾಲಿಟ್ಟಿತ್ತು. ಆ ಜನಾಂಗದ ಆರು ಮಂದಿಯನ್ನು ಬ್ರಿಟಿಷ್ ಅಧಿಕಾರಿಗಳು ಕರೆದುಕೊಂಡು ಹೋದರು. ನಾರ್ಥ್ ಸೆಂಟಿನಲ್ ದ್ವೀಪವನ್ನು ಬಿಟ್ಟು ಬೇರೆಲ್ಲಿಯೂ ಹೋಗಿರದ ಆ ಸೆಂಟಿನಲ್ಸ್ ದ್ವೀಪವಾಸಿಗಳಿಗೆ ಹೊಸ ಪ್ರದೇಶದ ಪರಿಸರದ ವ್ಯತ್ಯಾಸ ಮತ್ತು ಹೊರ ಜಗತ್ತಿನ ಮನುಷ್ಯರ ಸಂಪರ್ಕದಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಆರು ಮಂದಿಯಲ್ಲಿ ಇಬ್ಬರು ರೋಗದಿಂದಾಗಿ ಮೃತಪಟ್ಟರು. ಉಳಿದ ನಾಲ್ವರಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳತೊಡಗಿದವು. ಇದರಿಂದಾಗಿ ಬ್ರಿಟಿಷ್ ಅಧಿಕಾರಿಗಳು ಉಳಿದ ನಾಲ್ವರನ್ನು ನಾರ್ಥ್ ಸೆಂಟಿನಲ್ ದ್ವೀಪಕ್ಕೆ ಬಿಟ್ಟು ಬಂದರು. ಈ ಘಟನೆಯ ನಂತರ ನಾರ್ಥ್ ಸೆಂಟಿನಲ್ ದ್ವೀಪಕ್ಕೆ ಹೊರ ಜಗತ್ತಿನಿಂದ ಯಾರೇ ಕಾಲಿಟ್ಟರೂ ಸೆಂಟಿನಲ್ಸ್ ಜನಾಂಗದವರ ಬಾಣಕ್ಕೆ ಬಲಿಯಾಗುತ್ತಿದ್ದರು.

ಆ ನಂತರದಲ್ಲಿ ಸೆಂಟಿನಲ್ಸ್ ಜನಾಂಗವನ್ನು ಸಂಪರ್ಕಿಸಲು ಯತ್ನಿಸಿದ ಅಥವಾ ನಾರ್ಥ್ ಸೆಂಟಿನಲ್ ದ್ವೀಪವನ್ನು ಪ್ರವೇಶಿಸಿದ ಹಲವರು ಸೆಂಟಿನಲ್ಸ್ ಜನಾಂಗದವರ ದಾಳಿಗೆ ಬಲಿಯಾದರು. ಒಮ್ಮೆ ಸರಕು ತುಂಬಿದ ಹಡಗೊಂದು ಸಮುದ್ರದಲ್ಲಿ ಸಾಗುತ್ತಿರುವಾಗ ಬಿರುಗಾಳಿಗೆ ಸಿಕ್ಕಿ ಅದರಲ್ಲಿದ್ದ ಜನರ ಜೀವನ್ಮರಣದ ಉಳಿವಿನ ಪ್ರಶ್ನೆ ಎದುರಾಯಿತು. ಬಿರುಗಾಳಿಗೆ ಸಿಕ್ಕಿ ಹಡಗು ಮುಳುಗುವ ಆತಂಕ ಎದುರಾದಾಗ ಹಡಗಿನಲ್ಲಿದ್ದವರು ಸಮೀಪದಲ್ಲಿ ಕಂಡ ದ್ವೀಪದ ಕಡೆಗೆ ಈಜಿ ದಡ ಸೇರಿದರು. ಆದರೆ ಆ ದ್ವೀಪ ತೀರದಲ್ಲಿ ಮತ್ತೊಂದು ಅವಘಡ ಎದುರಾಗಿತ್ತು. ಕರಿಯರಾದ ಮತ್ತು ನಗ್ನರಾದ ಆ ದ್ವೀಪದ ಸೆಂಟಿನಲ್ಸ್ ಜನರು ಬಾಣ ಮತ್ತು ಈಟಿಯಿಂದ ಆಕ್ರಮಿಸಿದರು. ಆ ವೇಳೆಗೆ ಹಡಗು ಬಿರುಗಾಳಿಯ ಸುಳಿಗೆ ಸಿಕ್ಕಿರುವ ಸಂದೇಶದ ಬೆನ್ನು ಹತ್ತಿ ಹೆಲಿಕ್ಯಾಪ್ಟರ್ ಒಂದು ಸ್ಥಳಕ್ಕೆ ಆಗಮಿಸಿತ್ತು. ಹೆಲಿಕ್ಯಾಪ್ಟರ್‌ನ್ನು ಕಂಡ ಆ ಸೆಂಟಿನಲ್ಸ್‌ ಜನರು ಹೆದರಿ ಕಾಡಿನಲ್ಲಿ ಮರೆಯಾಯಿತು.

1974 ರಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ನ ತಂಡ ಸೆಂಟಿನಲ್ಸ್‌ ಜನಾಂಗದ ಬಗ್ಗೆ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಲು ನಾರ್ಥ್ ಸೆಂಟಿನಲ್ ದ್ವೀಪದ ಕಡೆಗೆ ಹೊರಟಿತು. ಈ ತಂಡದಲ್ಲಿ ಸಶಸ್ತ್ರ ಪೊಲೀಸ್‌ ಅಧಿಕಾರಿಗಳು ಇದ್ದರು. ಈ ತಂಡ ದ್ವೀಪತೀರದ ಸಮೀಪ ತಲುಪಿದಾಗ ಸೆಂಟಿನಲ್ಸ್‌ಗಳು ಬಾಣಗಳನ್ನು ಬಿಟ್ಟರು. ಆ ತಂಡ ಚಿಕ್ಕ ಪ್ಲಾಸ್ಟಿಕ್ ಕಾರು, ತೆಂಗಿನಕಾಯಿಗಳು, ಜೀವಂತ ಹಂದಿ, ಗೊಂಬೆ ಅಲ್ಯೂಮಿನಿಯಂ ಪಾತ್ರೆಗಳನ್ನು ತೀರದ ಮರಳಿನ ಮೇಲೆ ಇಟ್ಟು ದೋಣಿಗೆ ಮರಳಿದರು. ಸೆಂಟಿನಲ್ಸ್‌ಗಳು ಜೀವಂತ ಹಂದಿಯನ್ನು ಸಮಾಧಿ ಮಾಡಿ ತೆಂಗಿನಕಾಯಿಗಳು, ಅಲ್ಯೂಮಿನಿಯಂ ಪಾತ್ರೆಗಳನ್ನು ಮಾತ್ರ ತೆಗೆದುಕೊಂಡರು. ಸೆಂಟಿನಲ್ಸ್‌ಗಳು ಮತ್ತೆ ಬಾಣ ಪ್ರಯೋಗ ಮಾಡತೊಡಗಿದರು. ಒಂದು ಬಾಣ ಸಾಕ್ಷ್ಯಚಿತ್ರ ನಿರ್ದೇಶಕನ ತೊಡೆಗೆ ನಾಟಿತು. ಹಾಗೆ ಆ ತಂಡ ಅಲ್ಲಿಂದ ಹಿಂದಿರುಗಿತು.

See also  ಬಿಪಿಯನ್ನು ಸಮತೋಲನದಲ್ಲಿರಿಸಲು ಕೆಲವು ಆಹಾರ ಕ್ರಮಗಳು

1991ರಲ್ಲಿ ಭಾರತೀಯ ಮಾನವ ಶಾಸ್ತ್ರಜ್ಞೆ ಮಧುಮಾಲಾ ಚಟ್ಟೋಪಾಧ್ಯಾಯ ಅವರು ಅಂಡಮಾನ್ ದ್ವೀಪಗಳ ಬುಡಕಟ್ಟು ಜನಾಂಗದವರೊಂದಿಗೆ ಕ್ಷೇತ್ರ ಸಂಶೋಧನೆ ಮಾಡುವ ಸಲುವಾಗಿ ನಾರ್ಥ್ ಸೆಂಟಿನಲ್ ದ್ವೀಪದ ಕಡೆಗೆ ತನ್ನ ತಂಡದ ಜೊತೆಗೆ ಹೋದರು. ಆ ದ್ವೀಪದ ತೀರವನ್ನು ತಲುಪಿದಾಗ ಸೆಂಟಿನಲ್ಸ್ ಜನಾಂಗದ ಪುರುಷರು ಬಿಲ್ಲು ಮತ್ತು ಬಾಣಗಳೊಂದಿಗೆ ಮರಗಳ ಹಿಂದೆ ಕಾಣಿಸಿಕೊಂಡರು. ಮಾನವ ಶಾಸ್ತ್ರಜ್ಞೆ ಮಧುಮಾಲಾ ಚಟ್ಟೋಪಾಧ್ಯಾಯ ತನ್ನ ತಂಡದೊಂದಿಗೆ ದ್ವೀಪದ ತೀರದ ಕಡೆಗೆ ನೀರಿನಲ್ಲಿ ತೆಂಗಿನಕಾಯಿಗಳನ್ನು ತೇಲಿ ಬಿಡಲು ಪ್ರಾರಂಬಿಸಿದರು. ಸ್ವಲ್ಪ ಸಮಯದ ನಂತರ ಆ ದ್ವೀಪದ ಸೆಂಟಿನಲ್ಸ್ ಜನಾಂಗದ ಪುರುಷರು ಬಂದು ನೀರಿನಲ್ಲಿ ತೇಲುವ ತೆಂಗಿನಕಾಯಿಗಳನ್ನು ಸಂಗ್ರಹಿಸಿದರು. ಮಧುಮಾಲಾ ಮತ್ತವರ ತಂಡದ ನೀರಿಗೆ ಇಳಿದು ದಡದ ಕಡೆಗೆ ಹೋಗತೊಡಗಿದರು. ಆ ವೇಳೆಗೆ ಸೆಂಟಿನಲ್ಸ್ ಪುರುಷನೊಬ್ಬ ಬಾಣ ಬಿಡಲು ಸಜ್ಜಾದ. ಆದರೆ ಸೆಂಟಿನಲ್ಸ್ ಮಹಿಳೆಯೊಬ್ಬಳು ಬಾಣ ಬಿಡದಂತೆ ಸೂಚಿಸಿದಳು. ಆ ನಂತರದಲ್ಲಿ ಮದುಮಾಲಾ ಮತ್ತವರ ತಂಡ ಕೈಗಳಿಂದಲ್ಲೇ ತೆಂಗಿನಕಾಯಿಗಳನ್ನು ಕೊಡಲು ಪ್ರಾರಂಭಿಸಿದರು. ಸೆಂಟಿನಲ್ಸ್ ಜನಾಂಗದ ಕೆಲವರು ನರಿಯಾಲಿ ಜಬ ಜಬ ಎಂದು ಕೂಗಿದರು. ಹಾಗೆಂದರೇ ಹೆಚ್ಚು ಹೆಚ್ಚು ತೆಂಗಿನಕಾಯಿಗಳು ಎಂದು ಅರ್ಥ. ಹಾಗೇ ತೆಂಗಿನಕಾಯಿ ನೀಡುವುದರ ಮೂಲಕ ಆ ಜನಾಂಗದ ವಿಶ್ವಾಸ ಗಳಿಸಿದ ಮಧುಮಾಲಾ ಸೆಂಟಿನಲ್ಸ್ ಜನಾಂಗವನ್ನು ಭೇಟಿಯಾಗಿ ಬಂದ ಮೊದಲ ಮಹಿಳೆಯಾಗಿದ್ದಾರೆ. 2004ರಲ್ಲಿ ದಕ್ಷಿಣ ಭಾರತದ ಸಮುದ್ರ ತೀರಪ್ರದೇಶ ವ್ಯಾಪ್ತಿಯಲ್ಲಿ ಸಂಭವಿಸಿದ ಸುನಾಮಿಯಿಂದಾಗಿ ಅಪಾರ ಸಾವು ನೋವು ಸಂಭವಿಸಿತ್ತು.

ಆ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯಿಂದ ನಾರ್ಥ್ ಸೆಂಟಿನಲ್ ದ್ವೀಪದಲ್ಲಿ ಆಗಿರಬಹುದಾದ ಸಾವು ನೋವುಗಳನ್ನು ಪರಿಶೀಲಿಸಲು ಆಹಾರ ಸಾಮಾಗ್ರಿಗಳೊಂದಿಗೆ ಕಳಿಸಿಕೊಡಲಾಯಿತು. ಸೆಂಟಿನಲ್ ಜನರು ಹೆಲಿಕ್ಯಾಪ್ಟರ್‌ನ್ನು ಕಂಡಾಗ ಬಾಣ ಪ್ರಯೋಗ ಮಾಡುವ ಪ್ರಯತ್ನವನ್ನು ಮಾಡಿದರು. ಸುನಾಮಿಯ ಅಪಾಯದಿಂದ ಸೆಂಟಿನಲ್ಸ್ ಜನರು ಪಾರಾಗಿದ್ದರು.

ಆ ನಂತರದಲ್ಲಿ ಭಾರತ ಸರ್ಕಾರವು ಸೆಂಟಿನಲ್ಸ್‌ ಜನಾಂಗದ ಆವಾಸ ವ್ಯವಸ್ಥೆಗೆ ದಕ್ಕೆ ಬಾರದಿರಲು ಮತ್ತು ಹೊರ ಜಗತ್ತಿನ ಸಂಪರ್ಕದಿಂದ ಸೆಂಟಿನಲ್ಸ್‌ ಜನಾಂಗ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ಈ ದ್ವೀಪದ ಸುತ್ತಲ್ಲೂ 5 ಕಿ.ಮಿ ವ್ಯಾಪ್ತಿಯಲ್ಲಿ ಪ್ರವೇಶವನ್ನು ನಿಷೇಧಿಸಿದೆ. ಇಂದಿಗೂ ನಾರ್ಥ್ ಸೆಂಟಿನಲ್ ದ್ವೀಪದಲ್ಲಿ ಸೆಂಟಿನಲ್ಸ್ ಜನಾಂಗವೂ ಹೊರ ಜಗತ್ತಿನ ಸಂಪರ್ಕವಿಲ್ಲದೇ ಆಧುನಿಕ ಜಗತ್ತಿನಲ್ಲಿ ಆಗುತ್ತಿರುವ ನವನವೀನ ಆವಿಷ್ಕಾರದ ಪರಿವೆ ಇಲ್ಲದೇ ಬದುಕುತ್ತಿದೆ.

-ಮಣಿಕಂಠ ತ್ರಿಶಂಕರ್, ಮೈಸೂರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

34905
ಮಣಿಕಂಠ ತ್ರಿಶಂಕರ್

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು