ದುರ್ಜನರ ಸಂಗ ಬಿಡು, ಸಜ್ಜನರ ಸಹವಾಸ ಮಾಡು ಹೀಗೊಂದು ಹಿತೋಕ್ತಿಯಿದೆ. ಅದರ ಜತೆಗೆ ಸಜ್ಜನರ ಸಂಗ ಜೇನು ಸವಿದಂತೆ, ದುರ್ಜನರ ಸಂಗ ಜೇನು ಹುಳ ಕಡಿದಂತೆ ಎಂಬ ಮಾತುಗಳು ಪ್ರಚಲಿತದಲ್ಲಿವೆ. ಇವುಗಳೆಲ್ಲವನ್ನು ಹಿರಿಯರು ಸುಖಾಸುಮ್ಮನೆ ಹೇಳಿಲ್ಲ. ಅನುಭವದಿಂದಲೇ ಹೇಳಿದ್ದಾರೆ.
ಇಷ್ಟಕ್ಕೂ ನಮಗೆಲ್ಲರಿಗೂ ಸಜ್ಜನರು ಯಾರು ದುರ್ಜನರು ಯಾರು ಎಂಬುದು ಬದುಕಿನಲ್ಲಿ ಅನುಭವವಾಗಿರುತ್ತದೆ. ಹೀಗಾಗಿ ನಾವು ಸಜ್ಜನರ ಸಂಗದಿಂದ ಪಡೆದದ್ದು,ದುರ್ಜನರಿಂದ ಕಳೆದುಕೊಂಡಿದ್ದು ಒಂದು ಕ್ಷಣ ಯೋಚಿಸಿದಾಗ ಗೊತ್ತಾಗಿ ಬಿಡುತ್ತದೆ. ಕೆಲವೊಮ್ಮೆ ತಿಳಿದೋ ತಿಳಿಯದೆಯೋ ದುರ್ಜನರ ಸಹವಾಸ ಮಾಡಿರುತ್ತೇವೆ. ಅವರೊಂದಿಗೆ ಸೇರಿ ಮಾಡಬಾರದ್ದನೆಲ್ಲಾ ಮಾಡಿ ಬಿಡುತ್ತೇವೆ.ಕ್ರಮೇಣ ನಾವು ಮಾಡಿದ ಪಾಪದ ಕಾರ್ಯಕ್ಕೆ ಭಗವಂತ ನಮಗೆ ತಕ್ಕ ಪ್ರತಿಫಲ ನೀಡುತ್ತಾನೆ. ಕಷ್ಟ ಅನುಭವಿಸುವಾಗ ನಾವು ಮಾಡಿದ ಪಾಪದ ಕಾರ್ಯಗಳು ನೆನಪಿಗೆ ಬರುತ್ತವೆ. ನಾನು ಅವನ ಸಹವಾಸ ಮಾಡಿ ಹಾಳಾದೆ ಎಂಬುವುದು ಅರಿವಿಗೆ ಬರುತ್ತದೆ. ಆದರೆ ಏನು ಪ್ರಯೋಜನ ಕಾಲ ಮಿಂಚಿ ಹೋಗಿರುತ್ತದೆ.
ಕೆಟ್ಟವರ ಸಹವಾಸದಲ್ಲಿರುವವರಿಗೆ ನಾವು ಪರಿಶುದ್ಧರಾಗಿರಲು ಸಾಧ್ಯವಿಲ್ಲ.ದಾನ ಶೂರ ಕರ್ಣನೇ ದುರ್ಜನರ ಸಹವಾಸದಿಂದ ಹಾಳಾದನು. ದೈಹಿಕ ಬಲ ಮತ್ತು ಬುದ್ದಿಬಲ ಇದ್ದರೂ ಏನು ಪ್ರಯೋಜನವಾಯಿತು? ದುರ್ಯೋದನ, ದುಶ್ಯಾಸನ, ಶಕುನಿಯರ ಸಹವಾಸದಲ್ಲಿ ಬೆರೆತು ದುಷ್ಟ ಚತುಷ್ಟಯ ಎಂದು ಕುಖ್ಯಾತಿ ಪಡೆದನು. ದುಷ್ಟರ ಸಹವಾಸದಿಂದ ಸಜ್ಜನರು ಹೇಗೆ ಹಾಳಾಗುತ್ತಾರೆ ಎಂಬುದಕ್ಕೆ ಕರ್ಣ ಒಳ್ಳೆಯ ಉದಾಹರಣೆಯಾಗುತ್ತಾನೆ. ದುಷ್ಟರ ಸಂಗದಿಂದ ಸಜ್ಜನರ ಮೇಲೆ ಪರಿಣಾಮ ಬೀರುತ್ತದೆ. ಅವರ ಸಂಗದಿಂದಾಗಿ ಸದ್ಗುಣಗಳು ನಾಶವಾಗಿ ದುರ್ಗುಣಗಳು ಹುಟ್ಟುತ್ತವೆ. ಆದುದರಿಂದ ನಾವು ಅಂತಹವರಿಂದ ಆದಷ್ಟು ದೂರವಿರುವಂತೆ ಎಚ್ಚರವಹಿಸಬೇಕು.
ಸರ್ಪ ಒಮ್ಮೆ ಕಚ್ಚಿ ತೃಪ್ತಿಪಟ್ಟುಕೊಳ್ಳುತ್ತದೆ. ಆದರೆ ದುರ್ಜನರು ಆಹೋರಾತ್ರಿ ಮಾತು ಕೃತಿಯಿಂದ ಚುಚ್ಚಿ ನೋವು ನೀಡುತ್ತಾರೆ. ವಿಶ್ರಾಂತಿಯಿಲ್ಲದೆ, ವಿರಾಮವಿಲ್ಲದೆ, ತೊಂದರೆ ನೀಡುತ್ತಾರೆ. ನಾವು ನೆಮ್ಮದಿಯಿಂದ ಬದುಕಬೇಕಾದರೆ ದುರ್ಜನರಿಂದ ದೂರ ಇರುವುದನ್ನು ಕಲಿಯಬೇಕು. ಭಜ ಸಾಧು ಸಮಾಗಮಂ ಅಂದರೆ ಸಜ್ಜನರ ಸಹವಾಸದಲಿರು ಎಂದರ್ಥ. ನಾವು ದುಷ್ಟರಿಂದ ದೂರವಿದ್ದರೆ ಸಾಲದು, ಸಜ್ಜನರ ಸಂಗ ಮಾಡಬೇಕು. ಸತ್ಸಂಗದಲ್ಲಿರಬೇಕು ಎಂದು ವೇದವ್ಯಾಸರು ಹೇಳಿದ್ದಾರೆ. ಪರೋಪಕಾರವೇ ಪುಣ್ಯ. ಪರಪೀಡನೆಯೇ ಪಾಪ ಎಂಬುದನ್ನು ಮರೆಯಬಾರದು.
ದುಷ್ಟ ಜನರ ಸಂಗವನ್ನು ತ್ಯಜಿಸುವುದು ಒಂದೆಡೆಯಾದರೆ, ಮತ್ತೊಂದೆಡೆ ನಮ್ಮಲ್ಲಿ ಒಳ್ಳೆತನ ಬೆಳೆಸಿಕೊಳ್ಳುವುದು, ಜತೆಗೆ ಇಂದ್ರಿಯಗಳನ್ನು ಹಿತಮಿತವಾಗಿ ಬಳಸಿ ಜೀವನ ನರಕದೃಶ್ಯವಾಗದಂತೆ ನೋಡಿಕೊಳ್ಳಬೇಕು. ಬಾಹ್ಯದಿಂದ ದೃಷ್ಟಿಯನ್ನು ಕಿತ್ತು ಅಂತರ್ಮುಖ ಮಾಡಿಕೊಳ್ಳಬೇಕು. ಇದಕ್ಕಿಂತ ಮಿಗಿಲಾದ ಸಾಧನೆ ಬೇರೊಂದಿಲ್ಲ. ಪಶುಪಕ್ಷಿಗಳು ತಮ್ಮ ರೀತಿ ನೀತಿ ಪಾಲಿಸುತ್ತವೆ. ದುರದೃಷ್ಟವೆಂದರೆ ಮಾನವನು ಮಾನವ ಧರ್ಮದಿಂದ ದೂರ ಸರಿಯುತ್ತಾನೆ. ಪಶುಪಕ್ಷಿಗಳಿಗೆ ಕಾಲ ಹಾಗೂ ಕಾರಣವಿದೆ. ಅವುಗಳನ್ನು ಅನುಸರಿಸಿ ವರ್ತಿಸುತ್ತವೆ. ಆದರೆ ಮನುಷ್ಯ ಹಾಗಲ್ಲ ಅವನಿಗೆ ಬುದ್ದಿಯಿದೆ. ಅದನ್ನು ಆತ್ಮತತ್ವ ಅರಿಯಲು ಬಳಸಬೇಕು. ಹಾಗಾದಾಗ ನಮ್ಮಿಂದ ಮತ್ತೊಬ್ಬರಿಗೆ ಕೆಡಕಾಗುವುದಿಲ್ಲ. ನಮ್ಮಿಂದ ಬೇರೆಯವರಿಗೆ ಕೆಡಕು ಉಂಟಾಗದಿದ್ದರೆ ಅದಕ್ಕಿಂತ ಒಳ್ಳೆಯದು ಇನ್ನೇನಿದೆ?
ನಾವು ನಮ್ಮ ಬದುಕಿನಲ್ಲಿ ಆದಷ್ಟು ಸಜ್ಜನರ ಸಹವಾಸದಲ್ಲಿ ಇರುವುದನ್ನು ಕಲಿಯಬೇಕು. ನಮಗೆ ಯಾರು ಹಿಡಿಸುವುದಿಲ್ಲವೋ ಅವರಿಂದ ದೂರವಿರುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ನಾವು ನಾವಾಗಿ ಉಳಿದು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.