ವರುಣನ ಆರ್ಭಟಕ್ಕೆ ತಮಿಳುನಾಡು ತತ್ತರಿಸಿ ಹೋಗುತ್ತಿದೆ.. ಜನರ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ. ಎತ್ತ ನೋಡಿದರೂ ನೀರೇ ನೀರು… ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದಾಗಿ ಚೆನ್ನೈ ಸಂಪೂರ್ಣ ಜಲಾವೃತಗೊಳ್ಳುತ್ತಿದೆ.
ಜಲಪ್ರಳಯದಿಂದ ಹಲವು ಅನಾಹುತಗಳಿಗೆ ಸಾಕ್ಷಿಯಾಗಿರುವ ತಮಿಳುನಾಡು ರಾಜಧಾನಿ ಚೆನ್ನೈ ಹಾಗೂ ರಾಜ್ಯದ ಕೆಲವು ಜಿಲ್ಲೆಗಳ ಪರಿಸ್ಥಿತಿ ಗಂಭೀರವಾಗಿದೆ. ಈಗಾಗಲೇ ಕಂಗಾಲಾಗಿರುವ ಜನರು ಮತ್ತಷ್ಟು ಭಯಭೀತರಾಗಿದ್ದಾರೆ. 24 ತಾಸುಗಳನ್ನು ದೂಡುವುದು ತಮಿಳುನಾಡಿಗೆ ಕಷ್ಟಕರಕರವಾಗಿದೆ. ಚೆನ್ನೈಯ ಬೀದಿ ಬೀದಿಗಳು ನದಿಯಂತಾಗಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಲಕ್ಷಣಗಳಿರುವುದರಿಂದ ಜನರ ಭೀತಿ ಮತ್ತಷ್ಟು ಹೆಚ್ಚುತ್ತಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮೃತಪಟ್ಟವರ ಸಂಖ್ಯೆ 269ಕ್ಕೇರಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಸಂಖ್ಯೆಯನ್ನು ದ್ವಿಗುಣಗೊಳಿಸಿ 1200ಕ್ಕೆ ಹೆಚ್ಚಿಸಿದೆ. ಈ ಸಿಬ್ಬಂದಿ ಈವರೆಗೆ ಸಂಕಷ್ಟದಲ್ಲಿದ್ದ 5 ಸಾವಿರ ಮಂದಿಯನ್ನು ರಕ್ಷಿಸಿದ್ದಾರೆ. 110 ದೋಣಿಗಳನ್ನು ಬಳಸಿಕೊಂಡು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಎರಡು ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದರೂ ರಕ್ಷಣಾ ತಂಡಗಳು ತಮ್ಮತ್ತ ಧಾವಿಸಿಲ್ಲ ಎಂದು ಆಕ್ರೋಶಗೊಂಡಿರುವ ಉತ್ತರ ಚೆನ್ನೈನ ಕೆಲವು ಬಡಾವಣೆಗಳ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿ ಸರ್ಕಾರ ಚೆನ್ನೈನಲ್ಲಿ ಶುರುವಾಗಿ ಪೊಯೆಸ್ ಗಾರ್ಡನ್ (ಜಯಲಲಿತಾ ಮನೆ) ಹಾಗೂ ಗೋಪಾಲಪುರಂ (ಕರುಣಾನಿಧಿ ನಿವಾಸ)ನಲ್ಲಿ ಅಂತ್ಯವಾಗುತ್ತದೆ. ನಮ್ಮನ್ನು ಯಾರೂ ಇಲ್ಲಿ ನಿವಾಸಿಗಳೆಂದು ಪರಿಗಣಿಸಿಲ್ಲಎಂದು ಕಿಡಿಕಾರಿದ್ದಾರೆ. ಈ ನಡುವೆ, ಸಾವಿರಾರು ಮಂದಿ ಜೀವ ಉಳಿಸಿಕೊಳ್ಳಲು ಮನೆ ಮಠ ಬಿಟ್ಟು ತಮ್ಮ ಊರು ಅಥವಾ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.
ಚೆಂಬರಂಬಕ್ಕಂ ಜಲಾಶಯ ಭರ್ತಿಯಾದ ಕಾರಣ 30 ಸಾವಿರ ಕ್ಯುಸೆಕ್ನಷ್ಟು ನೀರು ಬಿಡುಗಡೆ ಮಾಡಿದ್ದರಿಂದ ಚೆನ್ನೈನ ಹೃದಯ ಭಾಗದಲ್ಲಿರುವ ಕೋಡಂಬಾಕ್ಕಂ, ಟಿ. ನಗರ್ ಹಾಗೂ ಅಶೋಕ್ನಗರ ಪ್ರದೇಶಗಳು ಮುಳುಗಡೆಯಾಗಿವೆ. ಚೆಂಬರಂಬಕ್ಕಂ ಜಲಾಶಯ ಚೆನ್ನೈನ ಕುಡಿಯುವ ನೀರಿನ ಮೂಲವಾಗಿದೆ. ಅದರ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ ಕಾರಣ ಡ್ಯಾಂ ಭರ್ತಿಯಾಗಿದೆ. ಆದ ಕಾರಣ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದೆ. ಇದು ಹಲವಾರು ಪ್ರದೇಶಗಳಿಗೆ ನುಗ್ಗಿದೆ.
ಚೆನ್ನೈನ ಅಶೋಕ್ ನಗರದಲ್ಲಿ ತಾಯಿಯ ಶವದೊಂದಿಗೆ 20 ಗಂಟೆಗಳನ್ನು ಕಳೆದಿದ್ದಾಳೆ. ಮನೆಯಿಂದ ಹೊರ ಬಂದರೆ ಬರೀ ನೀರೋ ನೀರು. ಇದರಿಂದಾಗಿ, ತಾಯಿಯ ಅಂತ್ಯಸಂಸ್ಕಾರ ನಡೆಸಬೇಕಿದ್ದ ಪುತ್ರಿ ದಿಕ್ಕೇ ತೋಚದೇ ಶವದ ಪಕ್ಕ ಒಬ್ಬಳೇ ಕೂತಿದ್ದಾಳೆ. ಡಯಾಲಿಸಿಸ್ ರೋಗಿಯಾಗಿದ್ದ ಮಹಿಳೆ ಬುಧವಾರ ಸಾವನ್ನಪ್ಪಿದ್ದು, 20 ಗಂಟೆಗಳ ಬಳಿಕ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಯಿತು.
ಈ ಮಳೆಯ ಅವಾಂತರಕ್ಕೆ ಚೆನ್ನೈನಲ್ಲಿರುವ ಐಟಿ, ಬಿಟಿ ಮತ್ತಿತರ ಕಂಪೆನಿಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ವಿಪ್ರೋ, ಟಿಸಿಎಸ್, ಇನ್ಫೋಸಿಸ್, ಐಬಿಎಂ, ಆ್ಯಕ್ಸೆಂಚರ್ನಂತಹ ಕಂಪನಿಗಳು ಲಕ್ಷಾಂತರ ಸಿಬ್ಬಂದಿಯನ್ನು ಚೆನ್ನೈನಲ್ಲಿ ಹೊಂದಿದ್ದು, ಮಳೆಯಿಂದ ಕೆಲಸ ನಿಂತಿದೆ.
ಒಂದು ಕಡೆಯಿಂದ ತಮಿಳುನಾಡಿನ ಜನತೆ ಜಲಪ್ರಳಯದಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಇನ್ನೊಂದು ಕಡೆಯಿಂದ ಆಹಾರಕ್ಕಾಗಿ ಹಾತೊರೆಯುತ್ತಿರುವ ಜನರಿಗೆ ಮಾನವೀಯತೆ ತೋರಿಸುವ ಬದಲು ಹಣ ಮಾಡುವ ಯೋಚನೆಯಲ್ಲಿ ಮುಳುಗಿದ್ದಾರೆ. 1 ಲೀಟರ್ ಬಾಟಲಿ ನೀರಿಗೆ 150 ರೂಪಾಯಿ. ಲೀಟರ್ ಹಾಲಿಗೆ 100 ರೂಪಾಯಿ. ಕೆ.ಜಿ. ಬೀನ್ಸ್ಗೆ 90 ರೂಪಾಯಿ. ಟೊಮೆಟೋಗೆ 80 ರೂಪಾಯಿ! ಸತತ ಮಳೆ ಹಾಗೂ ಪ್ರವಾಹದಿಂದ ಕಂಗೆಟ್ಟಿರುವ ಚೆನ್ನೈನಲ್ಲಿ ನಡೆಯುತ್ತಿರುವ ಸುಲಿಗೆ ಇದು. ತಮಿಳುನಾಡಿನ ಸಂತ್ರಸ್ಥ ಜನರಿಗೆ ರಾಜ್ಯದಿಂದ ಆಹಾರ ಸರಬರಾಜು ಮಾಡುತ್ತಿದ್ದಾರೆ. ಮೈಸೂರಿನ ಕೇಂದ್ರೀಯ ಸಂಸ್ಥೆಯಾದ ರಕ್ಷಣಾ ಆಹಾರ ಸಂಶೋದನಾ ಪ್ರಯೋಗಲಯ ಹಾಗೂ ಸಿಎಫ್ ಟಿಆರ್ ಐ ಆಹಾರವನ್ನು ನೀಡಿ ಮಾನವೀಯತೆ ಮೆರೆದಿದೆ.