News Kannada

ನುಡಿಚಿತ್ರ

ಮಂಜಿನ ಮಡಿಕೇರಿಯಲ್ಲಿ ಮುದ ನೀಡುವ ತಾಣಗಳು - 1 min read

ಮಂಜಿನ ಮಡಿಕೇರಿಯಲ್ಲಿ ಮುದ ನೀಡುವ ತಾಣಗಳು

ಕೊಡಗಿನ ವಾತಾವರಣ ಆಹ್ಲಾದಕರವಾಗಿದೆ. ಮಳೆ ದೂರವಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು ಕಂಗೊಳಿಸುತ್ತಿದೆ. ಮಂಜಿನ ಪರದೆ… ಅದರೊಳಗೆ ಸಣ್ಣಗೆ ನಡುಕ ಹುಟ್ಟಿಸುವ ಚಳಿ… ದೂರದಿಂದ ಬರುವ ಪ್ರವಾಸಿಗರಿಗೆ ಮುದನೀಡುತ್ತದೆ.

ಇನ್ನು ಮಡಿಕೇರಿಗೊಂದು ಸುತ್ತು ಹೊಡೆದರೆ ಇತಿಹಾಸದ ಕಥೆ ಹೇಳುವ ಕೋಟೆ, ಅರಮನೆ, ಗದ್ದುಗೆ, ಭಕ್ತರ ಸೆಳೆಯುವ ಓಂಕಾರೇಶ್ವರ ದೇಗುಲ, ನಿಸರ್ಗ ಸೌಂದರ್ಯದ ರಾಜಾಸೀಟ್, ನೆಹರು ಮಂಟಪ, ಭೋರ್ಗರೆದು ಧುಮುಕುವ ಅಬ್ಬಿ ಜಲಪಾತ ಎಲ್ಲವೂ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಡಿಕೇರಿ ಅರಮನೆ: ಸುಮಾರು ಮುನ್ನೂರ ಮೂವತ್ತು ವರ್ಷಗಳ ಹಿಂದೆ ಬೆಟ್ಟವೊಂದನ್ನು ಸಮತಟ್ಟು ಮಾಡಿ ಕೋಟೆಯನ್ನೂ ಹಾಗೂ ಅರಮನೆಯನ್ನು ನಿರ್ಮಿಸಿದ್ದು ಹಾಲೇರಿ ವಂಶದ ರಾಜ ಮುದ್ದುರಾಜ. ಹಾಗಾಗಿ ಮುದ್ದುರಾಜ ನಿರ್ಮಿಸಿದ ಊರು ಮುದ್ದುರಾಜಕೇರಿಯಾಗಿ ಆಮೇಲೆ ಮಡಿಕೇರಿಯಾಯಿತು. ಬ್ರಿಟಿಷರು ಮರ್ಕೆರಾ ಎಂದು ಕರೆದರೂ ಮಡಿಕೇರಿಯಾಗಿಯೇ ಉಳಿದಿದೆ.  1681ರಲ್ಲಿ ನಿರ್ಮಾಣವಾದಾಗ ಬರೀ ಮಣ್ಣಿನಿಂದ ನಿರ್ಮಿಸಿದ ಕೋಟೆಯಾಗಿತ್ತು. ಮುದ್ದುರಾಜ ನಿರ್ಮಿಸಿದ  ಕೋಟೆಯನ್ನು ನಂತರ ವಶಪಡಿಸಿಕೊಂಡ ಟಿಪ್ಪು ಸುಲ್ತಾನ್ ಮಣ್ಣಿನಕೋಟೆಯನ್ನು ಕಲ್ಲಿನ ಕೋಟೆಯಾಗಿ ಮಾರ್ಪಡಿಸಿದನಲ್ಲದೆ, ಜಾಫರಾಬಾದ್ ಎಂಬ ಹೆಸರಿಟ್ಟನು. ಆ ಬಳಿಕ 1734ರಲ್ಲಿ ಇದು ಬ್ರಿಟಿಷರ ವಶವಾಯಿತು.

ಮಡಿಕೇರಿ ನಗರದ ನಡುವೆ ಸ್ವಲ್ಪ ಎತ್ತರ ಪ್ರದೇಶದಲ್ಲಿ ಕೋಟೆ ಹಾಗೂ ಅರಮನೆ ನಿರ್ಮಾಣಗೊಂಡಿದೆ. ಕೋಟೆಯು ಅಂಕುಡೊಂಕಾದ ಷಡ್ಕೋನಾಕಾರದ ಸ್ಥಳ ವಿನ್ಯಾಸವನ್ನು ಹೊಂದಿದ್ದು, ಆರು ವಿವಿಧ ಮೂಲೆಗಳಲ್ಲಿ ಬುರುಜನ್ನು ಹೊಂದಿದೆ. ಈ ಬುರುಜುಗಳಿಂದ ನಿಂತು ನೋಡಿದರೆ ನಗರದ ವಿಹಂಗಮ ನೋಟ ಲಭ್ಯವಾಗುತ್ತದೆ. ಕೋಟೆಯ ಮಹಾದ್ವಾರವು ಪೂರ್ವಾಭಿಮುಖವಾಗಿದ್ದು, ಈ ದ್ವಾರದಿಂದ ಪ್ರವೇಶಿಸಿ ಮೊದಲ ದ್ವಾರ ದಾಟುತ್ತಿದ್ದಂತೆಯೇ ಗಣಪತಿ ದೇಗುಲ ಸಿಗುತ್ತದೆ. ಅಲ್ಲಿಂದ ಮುಂದೆ ಸಿಗುವ ದ್ವಾರ  ಪ್ರವೇಶಿಸಿ ಮುನ್ನಡೆದರೆ ಅರಮನೆ ಎದುರಾಗುತ್ತದೆ. ಅರಮನೆಯು 1814ರ ನಂತರದ ವರ್ಷಗಳಲ್ಲಿ ಪುನರ್ರಚನೆಗೊಂಡಿದ್ದು, ಎರಡನೆಯ ಲಿಂಗರಾಜನ ಕಾಲದಲ್ಲಿದ್ದ ಹುಲ್ಲಿನ ಛಾವಣಿಯನ್ನು ತೆಗೆದು ಬ್ರಿಟಿಷರು ಹೆಂಚು ಹಾಕಿದರು. ಅರಮನೆಯ ಆರಂಭ ಮತ್ತು ಮುಕ್ತಾಯದ ಬಗೆಗೆ ಇಲ್ಲಿನ ಹಿತ್ತಾಳೆಯ ಫಲಕ ಮಾಹಿತಿ ನೀಡುತ್ತದೆ.

ಎರಡು ಅಂತಸ್ತನ್ನು ಹೊಂದಿರುವ ಅರಮನೆಯು ಚೌರಸ್ ಸ್ಥಳ  ವಿನ್ಯಾಸವನ್ನು ಹೊಂದಿದೆ. ವಿಶಾಲ ಹಜಾರಗಳನ್ನು ಸಭಾ ಭವನವನ್ನು ಹೊಂದಿರುವ ಅರಮನೆಯ ಭಿತ್ತಿಗಳಲ್ಲಿ  ವಿವಿಧ ಚಿತ್ರಗಳು ಮೂಡಿವೆ. ವಾಸ್ತುಶಿಲ್ಪ ವಿನ್ಯಾಸದಲ್ಲಿ ಹೊಸತನವಿದ್ದು, ಆಕರ್ಷಣೀಯವಾಗಿದೆ. ಸುಮಾರು 110 ಅಡಿಯಷ್ಟು ಅಗಲವಿರುವ ಕಟ್ಟಡದಲ್ಲಿ ಕಮಾನು ಹಾಗೂ ಎತ್ತರವಾದ ಚೌಕಾಕಾರದ ಕಿಟಕಿಗಳು ಬಣ್ಣದ ಗಾಜುಗಳಿಂದ ಕೂಡಿದ್ದು ಗಮನಸೆಳೆಯುತ್ತವೆ.

ಅರಮನೆಯ ಒಳ ಪ್ರವೇಶಿಸಿದರೆ ಕೆರೆಯೇನೋ ಎಂಬಂತಹ ವಿಶಾಲ ಪ್ರಾಂಗಣವಿದ್ದು, ಅದರ ಮಧ್ಯೆ ಆಮೆಯೊಂದು ಕಾಣಿಸುತ್ತದೆ. ಕಲ್ಲಿನ ಆಮೆಯ ಆಕೃತಿಯು ರಾಜರ ಕಾಲದಲ್ಲಿ  ರಹಸ್ಯ ಮಾರ್ಗದ ಪ್ರವೇಶ ದ್ವಾರವಾಗಿತ್ತೆಂದು ಹೇಳಲಾಗಿದೆ.  ಮುಂಭಾಗದ ಪ್ರವೇಶ ದ್ವಾರದಲ್ಲಿ  ಎರಡು ಕುದುರೆಗಳು ನೆಗೆಯುತ್ತಿರುವ ಕೆತ್ತನೆಯ ವೀಕ್ಷಕ ಮಂಟಪ ಕಾಣಸಿಗುತ್ತದೆ. ಅರಮನೆಯ ಎಡ ಪಾಶ್ರ್ವದ ಮುಂಭಾಗದಲ್ಲಿ ಕಲ್ಲಿನಿಂದ ಕೆತ್ತಲಾದ ಎರಡು ಆನೆಗಳು ಆಕರ್ಷಕವಾಗಿವೆ. ಅರಮನೆಯ ಒಂದು ಪಾಶ್ರ್ವದಲ್ಲಿ ಗಡಿಯಾರ ಗೋಪುರ ಕಂಡು ಬರುತ್ತದೆ.

ಅರಮನೆ ಆವರಣದಲ್ಲಿ ವಸ್ತು ಸಂಗ್ರಹಾಲಯವಿದ್ದು, ಈ ಸಂಗ್ರಹಾಲಯದ ಕಟ್ಟಡ ಹಿಂದೆ ಚರ್ಚ್ ಆಗಿತ್ತಂತೆ. ಕೋನಾಕಾರದ ಗಾಥಿಕ್ ಶೈಲಿಯ ಗೋಪುರವನ್ನು ಹೊಂದಿರುವ ಈ ಕಟ್ಟಡ ಕೋನಾಕಾರದ ಕಮಾನುಗಳ ಕಿಟಿಕಿಯೊಂದಿಗೆ ಸುಂದರವಾಗಿದೆ.  ಪಕ್ಕದಲ್ಲಿಯೇ ಮಹಾತ್ಮಗಾಂಧಿ ಕೇಂದ್ರ ಗ್ರಂಥಾಲಯವಿದೆ. ಹಿಂದೆ ತಪ್ಪಿತಸ್ಥರನ್ನು ಗಲ್ಲಿಗೇರಿಸುತ್ತಿದ್ದರೆನ್ನಲಾದ ಬಾವಿಯಿದ್ದು, ಇದರತ್ತ ತೆರಳುವ ಪ್ರವಾಸಿಗರು ಕುತೂಹಲದ ನೋಟ ಬೀರುತ್ತಾರೆ.

ಗಮನಸೆಳೆಯುವ ಗದ್ದುಗೆಗಳು: ಇದು ಕೊಡಗನ್ನು ಸುಮಾರು ಎರಡು ಶತಮಾನಗಳ ಕಾಲ ಆಳಿದ ಹಾಲೇರಿ ವಂಶದ ರಾಜರ ಸಮಾಧಿಯಾಗಿದೆ. ಮಡಿಕೇರಿ ಪಟ್ಟಣದ ಎತ್ತರವಾದ ಗುಡ್ಡಪ್ರದೇಶದಲ್ಲಿ ನೆಲೆ ನಿಂತಿರುವ ಗದ್ದಿಗೆ ಒಂದು ಐತಿಹಾಸಿಕ ಸ್ಮಾರಕವಾಗಿದೆ. ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರ ಪೈಕಿ ರಾಜ ವೀರರಾಜೇಂದ್ರ ಅವರ ಪತ್ನಿ ಮಹದೇವಮ್ಮ ಅವರ ಗದ್ದಿಗೆ ಮಧ್ಯದಲ್ಲಿದ್ದು, ಲಿಂಗರಾಜೇಂದ್ರ ಮತ್ತು ದೇವಮ್ಮಾಜಿ ದಂಪತಿಗಳ ಗದ್ದಿಗೆ ಬಲಭಾಗದಲ್ಲಿದೆ. ಇನ್ನು ಎಡಭಾಗದಲ್ಲಿ 1834ರಲ್ಲಿ ನಿರ್ಮಿಸಿರುವ ರಾಜಪುರೋಹಿತಮುನಿಗಳ ಗದ್ದಿಗೆಯಿದೆ. ಇದಲ್ಲದೆ ಟಿಪ್ಪುಸುಲ್ತಾನ್ನೊಂದಿಗೆ ನಡೆದ ಯುದ್ದದಲ್ಲಿ ವೀರಮರಣವನ್ನಪ್ಪಿದ ಸೇನಾಪತಿ ಬಿದ್ದಂಡ ಬೋಪು ಹಾಗೂ ಅವರ ಪುತ್ರ ಬಿದ್ದಂಡ ಸೋಮಯ್ಯ ಅವರ ಸಮಾಧಿಗಳನ್ನು ಕೂಡ ಕಾಣಬಹುದು.

See also  ಹೆಣ್ಮಕ್ಕಳ ಮುಡಿಯೇರದಿದ್ದರೂ ದಾಸವಾಳ ಅಚ್ಚುಮೆಚ್ಚು

ಇಂಡೋಸಾಸರ್ನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಗದ್ದಿಗೆಗಳು ಅಪರೂಪದ ವಾಸ್ತುಶಿಲ್ಪವನ್ನು ಹೊಂದಿವೆ. ಇಲ್ಲಿ ಕೆತ್ತಲಾಗಿರುವ ಕಲ್ಲಿನ ಕೆತ್ತನೆಗಳು ಕೂಡ ಆಕರ್ಷಕವಾಗಿದೆ. ಕಟ್ಟಡವು ಪ್ರಧಾನ ಗುಮ್ಮಟ ಹಾಗೂ ನಾಲ್ಕು ಮೂಲೆಯಲ್ಲಿ ಚಿಕ್ಕದಾದ ಗುಮ್ಮಟವನ್ನು ಹೊಂದಿ ಗಮನಸೆಳೆಯುತ್ತದೆ. ಕಿಟಕಿಗೆ ಪಂಚಲೋಹದ  ಸರಳುಗಳನ್ನು ಅಳವಡಿಸಲಾಗಿದೆ.

ಓಂಕಾರೇಶ್ವರ ದೇವಸ್ಥಾನ: 1820 ರಲ್ಲಿ ಎರಡನೇ ಲಿಂಗರಾಜೇಂದ್ರನು ಕಟ್ಟಿಸಿದ ಓಂಕಾರೇಶ್ವರ ದೇಗುಲ ಇಂಡೋಸಾರ್ಸನಿಕ್  ಶೈಲಿಯಲ್ಲಿರುವುದು ವಿಶೇಷ. ಇದು ನಾಲ್ಕೂ ಮೂಲೆಗಳಲ್ಲೂ ಉದ್ದನೆಯ ಗೋಪುರಗಳನ್ನು ಹೊಂದಿದ್ದು ನಡುವೆ ಬೃಹತ್ ಗುಮ್ಮಟವಿದ್ದು ಆಕರ್ಷಣೀಯವಾಗಿದೆ. ಲಿಂಗರಾಜೇಂದ್ರನು ಪರಮ ದೈವ ಭಕ್ತನಾಗಿದ್ದ ಸುಬ್ಬನರಸಯ್ಯ ಎಂಬ ಬ್ರಾಹ್ಮಣನನ್ನು ಅನ್ಯಾಯವಾಗಿ ಶಿಕ್ಷಿಸಿದ್ದರಿಂದ ಆತ ಸಾವಿಗೀಡಾದನೆಂದೂ.

ಇದರಿಂದಾಗಿ ಬ್ರಹ್ಮಹತ್ಯಾ ದೋಷದಿಂದ ಮುಕ್ತನಾಗಲು ಜ್ಯೋತಿಷಿಗಳ, ಮಂತ್ರವಾದಿಗಳ ಹಾಗೂ ನೀಲೇಶ್ವರ ತಂತ್ರಿಗಳ ಸಲಹೆಯಂತೆ ಈ ಶಿವನ ದೇವಸ್ಥಾನವನ್ನು ನಿರ್ಮಿಸಿದನೆಂಬ ಐತಿಹ್ಯ ಇಲ್ಲುಂಟು.ಲಿಂಗರಾಜೇಂದ್ರನು ಪರಮ ಪಾವನೆ ಗಂಗೆ ಹರಿಯುವ ಮಹಾಪುಣ್ಯ ಕ್ಷೇತ್ರವಾದ ಕಾಶಿವಿಶ್ವನಾಥನ ಪುಣ್ಯ ಸ್ಥಳದಿಂದ ಶಿವಲಿಂಗವನ್ನು ಸಕಲ ಸಂಪ್ರದಾಯ ಸಹಿತ ವಿಧಿ ವತ್ತಾಗಿ ಇಲ್ಲಿಗೆ ತಂದು ಶಾಸ್ತ್ರೋಕ್ತವಾಗಿ ವ್ರತಾದಿ ಪೂಜೆ ಪುನಸ್ಕಾರಗಳ ಪ್ರಕಾರ 1820 ಮಾರ್ಚ್ 26 ರಂದು ಚೈತ್ರಶುದ್ಧ ದ್ವಾದಶಿಯ ದಿನ ಈ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಂದು ನೀಲೇಶ್ವರ ತಂತ್ರಿಗಳು ಕಾಶಿಯಿಂದ ತಂದ ಈ ಶಿವಲಿಂಗವನ್ನು ಓಂಕಾರೇಶ್ವರ ಲಿಂಗವೆಂದು ಕರೆದಿದ್ದರಿಂದ ಇದು ಓಂಕಾರೇಶ್ವರ ದೇವಸ್ಥಾನವೆಂದೇ ಹೆಸರಾಗಿದೆ. ನೋಡಲು ಮುಸಲ್ಮಾನರ ದರ್ಗಾದಂತಿರುವ ಈ ದೇಗುಲದ ಪ್ರವೇಶದ್ವಾರದ ಸಮೀಪದಲ್ಲೇ ಶಿವಲಿಂಗವಿದ್ದು ಇದರ ಇತಿಹಾಸವನ್ನು ಹೇಳುವ ತಾಮ್ರ ಪತ್ರವೊಂದನ್ನು ಇಲ್ಲಿ ಕಾಣಬಹುದಾಗಿದೆ. ದೇವಸ್ಥಾನದ ಮುಂದೆ ಸುಂದರವಾದ ಕೊಳವಿದ್ದು ಇದರ ಮಧ್ಯೆ ಚೆಂದದ ಮಂಟಪ ವಿದ್ದು ಅದನ್ನು ತಲುಪಲು ಕಿರುದಾರಿಯೂ ಇದೆ. ಈ ಪುಷ್ಕರಣಿಯೊಳಗಿನ ಮೀನುಗಳ ಹಿಂಡು ವಿಶೇಷವಾಗಿ ಮಕ್ಕಳನ್ನೂ ಆಕರ್ಷಿಸುತ್ತದೆ.

ಗಾಂಧಿ ಮಂಟಪ: ರಾಜಾಸೀಟ್ ಬಳಿಯಿರುವ ಗಾಂಧಿ ಮಂಟಪ ಗಾಂಧಿ ಮಡಿಕೇರಿಗೆ ಆಗಮಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ನೆನಪುಗಳ ಸ್ಮಾರಕವಾಗಿದೆ. ಇದರೊಳಗೆ ಆಕರ್ಷಣೀಯವಾದ ಗಾಂಧೀಜಿಯ ಸುಂದರ ಪ್ರತಿಮೆ ಇದೆ. ಪ್ರತಿ ವರ್ಷವೂ ಗಾಂಧಿಜಯಂತಿಯಂದು ಗಾಂಧಿಯ ಚಿತಾಭಸ್ಮವನ್ನಿರಿಸಿ ಪ್ರಾರ್ಥನೆ ಮಾಡಲಾಗುತ್ತದೆ.

ನಿಸರ್ಗ ರಮಣೀಯ ರಾಜಾಸೀಟ್: ಇವತ್ತು ಸುಂದರ ಉದ್ಯಾನವನವಾಗಿ ಕಂಗೊಳಿಸುವ ರಾಜಾಸೀಟ್ ಒಂದು ಕಾಲದಲ್ಲಿ ಬ್ರಿಟೀಷರ ಮಸಣವಾಗಿತ್ತು. ಕಾಲಕ್ರಮೇಣ ಇಲ್ಲಿದ್ದ ಬ್ರಿಟೀಷರ ಶವಪೆಟ್ಟಿಗೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಉದ್ಯಾನವನ್ನು ಅಭಿವೃದ್ಧಿಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ.

ಈ ಉದ್ಯಾನಕ್ಕೆ ರಾಜಾಸೀಟ್ ಎಂಬ ಹೆಸರು ಹೇಗೆ ಬಂತೆಂಬುವುದರ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿದರೆ ಒಂದಷ್ಟು ಮಾಹಿತಿ ದೊರೆಯುತ್ತದೆ. ಹಿಂದೆ ಚಿಕ್ಕವೀರರಾಜನ ಕಾಲದಲ್ಲಿ ರಾಜ ಸಂಜೆಯ ಸಮಯದಲ್ಲಿ ಅರಮನೆಯಿಂದ ರಾಣಿಯೊಂದಿಗೆ ವಿಹಾರ ಹೊರಟು ನಗರದಂಚಿಗೆ ಬಂದು ಕುಳಿತು ದಿನನಿತ್ಯ ಸೂಯರ್ಾಸ್ತಮಾನದ ಸುಂದರ ದೃಶ್ಯಗಳನ್ನು ನೋಡುತ್ತಿದ್ದಂತೆ. ರಾಜ ಕುಳಿತು ನೋಡುತ್ತಿದ್ದ ಸ್ಥಳವೇ ಮುಂದೆ ರಾಜಾಸೀಟ್ ಆಯಿತು. ಬ್ರಿಟೀಷರ ಆಡಳಿತಾವಧಿಯಲ್ಲಿ  ಇಲ್ಲೊಂದು ಸಿಮೆಂಟ್ ಹಾಗೂ ಹೆಂಚು ಬಳಸಿ ನಾಲ್ಕು ಕಮಾನುಗಳುಳ್ಳ ಭವ್ಯ ಮಂಟಪವನ್ನು ನಿರ್ಮಿಸಲಾಯಿತು. ಈ ಮಂಟಪ ಅಂದಿನಿಂದ ಇಂದಿನವರೆಗೆ ರಾಜಾಸೀಟಿನ ಪ್ರಮುಖ ಆಕರ್ಷಣೆಯಾಗಿದೆ.

ತೋಟಗಾರಿಕಾ ಇಲಾಖೆಯ ಅಧೀನದಲ್ಲಿರುವ ರಾಜಾಸೀಟ್ನಲ್ಲಿ ಕಾರಂಜಿ, ಕೃತಕ ಜಲಪಾತಗಳನ್ನು ಕೂಡ ನಿರ್ಮಿಸಿ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ರಾಜಾಸೀಟಿನ ಬಳಿಯಲ್ಲಿಯೇ ಪುಟಾಣಿ ರೈಲು ಕೂಡ ಇದೆ. ರೈಲು ಸಂಪರ್ಕವನ್ನೇ ಕಾಣದ ಕೊಡಗಿಗೆ ಇದೇ ಏಕೈಕ ರೈಲು. ಈ ರೈಲನ್ನು ನೋಡಿ ಇಲ್ಲಿನ ಮಕ್ಕಳು ರೈಲಿನ ಕಲ್ಪನೆ ಮಾಡಿಕೊಳ್ಳುತ್ತಾರೆ. ಕಾವೇರಿ ಪಟ್ಟಣದಿಂದ ಹೊರಡುವ ರೈಲು ಬ್ರಹ್ಮಗಿರಿ ಕಣಿವೆಗಾಗಿ ಸಾಗುತ್ತದೆ. ಈ ರೈಲು ಕೊಡಗಿಗೆ ಬಂದು ಎರಡು ದಶಕಗಳು ಕಳೆದಿವೆ. ಮೊದಲಿಗೆ ಗಾಲ್ಫ್ಗ್ರೌಂಡ್ ಬಳಿ ಸ್ಥಾಪನೆ ಮಾಡಲಾಗಿತ್ತಾದರೂ ಮಡಿಕೇರಿ ಪಟ್ಟಣದಿಂದ ಹೊರವಲಯದಲ್ಲಿದ್ದುದರಿಂದ ಅಲ್ಲಿಗೆ ಜನರು ತೆರಳದ ಕಾರಣ
ರಾಜಾಸೀಟ್ ಬಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಇಲ್ಲಿಯ ತನಕ ಇದು ರಾಜಾಸೀಟ್ನ ಪ್ರಮುಖ ಆಕರ್ಷಣೆಯಾಗಿದೆ. ಇದರ ಉಸ್ತುವಾರಿಯನ್ನು ನಗರಸಭೆಯೇ ನೋಡಿಕೊಳ್ಳುತ್ತಿದೆ.ರಾಜಾಸೀಟ್ ಉದ್ಯಾನದ ಒಂದು ಭಾಗದಲ್ಲಿ ಶಕ್ತಿದೇವತೆ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮನ ದೇಗುಲವಿದೆ. ದೇವಾಲಯವನ್ನು ದಾಟಿ ಮುನ್ನಡೆದರೆ ಆಕಾಶವಾಣಿ ಕೇಂದ್ರ, ನೆಹರು ಮಂಟಪವಿದೆ.

See also  ಕೆರೆಗಳ ಪುನಃಶ್ಚೇತನ – ಧರ್ಮಸ್ಥಳದ ಕೊಡುಗೆ

ನೆಹರುಮಂಟಪ: ರಾಜಾಸೀಟಿನ ಮೇಲ್ಭಾಗದ ಗುಡ್ಡದ ಮೇಲೆ ನಿಸರ್ಗದ ಸುಂದರ ದೃಶ್ಯವನ್ನು ಆಸ್ವಾದಿಸಲೆಂದು ನಿರ್ಮಿಸಿದ ಸುಂದರ ಮಂಟಪವೇ ನೆಹರು ಮಂಟಪವಾಗಿದೆ. ಈ ಮಂಟಪವನ್ನು 1957ರಲ್ಲಿ ಕೊಡಗಿಗೆ ಭೇಟಿ ನೀಡಿದ ಪ್ರಧಾನಿ ಜವಾಹರಲಾಲ್ ನೆಹರುರವರ ಸವಿನೆನಪಿಗಾಗಿ ಆಗಿನ ರಾಜ್ಯಪಾಲ ಧರ್ಮವೀರ ಎಂಬುವರು ಮಂಟಪವೊಂದನ್ನು ನಿರ್ಮಿಸಿ ನೆಹರು ಮಂಟಪ ಎಂದು ಹೆಸರಿಟ್ಟರು ಎಂದು ಹೇಳಲಾಗುತ್ತಿದೆ. ನೆಹರು ಮಂಟಪ ನಿರ್ಮಾಣವಾದ ಮೊದಲ ದಿನಗಳಲ್ಲಿ ರಾಜಾಸೀಟಿನಷ್ಟೇ ವೈಭವವನ್ನು ಇದು ಸಂಪಾದಿಸಿತ್ತು. ಗುಡ್ಡದ ಮೇಲಿದ್ದರಿಂದ ಎಲ್ಲರ ಕಣ್ಣಿಗೆ ಬೀಳುವಂತಿತ್ತು. ಹಾಗಾಗಿ ವೀಕ್ಷಕರ ದಂಡು ಇಲ್ಲಿಗೆ ಸದಾ ಸುಳಿಯುತ್ತಿತ್ತು. ಈಗ ಸುತ್ತಮುತ್ತ ಮರ, ಮನೆ, ಕಟ್ಟಡಗಳು ತಲೆ ಎತ್ತರುವುದರಿಂದ ಮೇಲ್ನೋಟಕ್ಕೆ ಇದು ಅದೃಶ್ಯವಾಗಿದೆ. ಆದರೂ ಇದರ ವೈಭವ ಹಾಗೆಯೇ ಉಳಿದಿದೆ.

ನಿಶಾನೆಬೆಟ್ಟ: ಮಡಿಕೇರಿಯಿಂದ ಹತ್ತು ಕಿ.ಮೀ. ದೂರದಲ್ಲಿರುವ ನಿಶಾನೆಮೊಟ್ಟೆಯತ್ತ ತೆರಳಬೇಕಾದರೆ ಸ್ಟೀವರ್ಟ್ ಹಿಲ್ ಮಾರ್ಗವಾಗಿ ತೆರಳಬೇಕು. ಮಡಿಕೇರಿಯಿಂದ ಹೊರಟು ನಿಶಾನೆಮೊಟ್ಟೆಯ ತಪ್ಪಲು ತಲುಪಬೇಕಾದರೆ  ಕನಿಷ್ಠ ಒಂದು ಗಂಟೆಯಾದರು ಬೇಕಾಗುತ್ತದೆ. ಅಲ್ಲಿಂದ ಸುಮಾರು ಮುನ್ನೂರು ಹೆಜ್ಜೆ ಹಾಕಿದರೆ ಸಾಕು ನಿಶಾನೆಮೊಟ್ಟೆಯ ತುತ್ತತುದಿ ತಲುಪಬಹುದು. ಬೀಸಿಬರುವ ತಂಗಾಳಿಗೆ ಮೈಯೊಡ್ಡಿ ನಿಂತು ಒಂದು ಸುತ್ತು ಕಣ್ಣು ಹಾಯಿಸಿದ್ದೇ ಆದರೆ ಅಲ್ಲಿಂದ ಕಂಡುಬರುವ ನಿಸರ್ಗದ ಸುಂದರನೋಟ ಕಣ್ಣಿಗೆ ರಸದೂಟವಾಗುತ್ತದೆ. ಹಿಂದೆ ಕೊಡಗನ್ನು ಆಳುತ್ತಿದ್ದ ರಾಜರ ಕಾಲದಲ್ಲಿ ಶತ್ರುಗಳು ದಂಡೆತ್ತಿ ಬರುವುದನ್ನು ಅರಿಯಲು ಈ ಗುಡ್ಡದ ಮೇಲೆ ಸೈನಿಕರನ್ನಿರಿಸಲಾಗುತ್ತಿತ್ತಂತೆ ಈ ಸೈನಿಕರು ಇಲ್ಲಿ ಪಹರೆ ಕಾಯುತ್ತಿದ್ದರಂತೆ. ಈ ಗುಡ್ಡದಿಂದ ನಿಂತು ನೋಡಿದರೆ ದೂರದಿಂದ ಬರುವ ಶತ್ರು ಸೈನ್ಯ ಕಾಣುತ್ತಿತ್ತಂತೆ. ತಕ್ಷಣ ರಾಜನಿಗೆ ಸುದ್ದಿ ಮುಟ್ಟಿಸಿ ಸೈನ್ಯವನ್ನು ಸಜ್ಜುಗೊಳಿಸಿ ಶತ್ರುಗಳನ್ನು ಹಿಮ್ಮೆಟ್ಟಿಸುತ್ತಿದ್ದರಂತೆ. ಘಟ್ಟವನ್ನೇರಿ ಬರುವ ಶತ್ರು ಸೈನಿಕರ ಮೇಲೆ ನಿಶಾನೆ ಇಡಲು  ಈ ಗುಡ್ಡ ಯೋಗ್ಯವಾಗಿದ್ದರಿಂದ ನಿಶಾನೆ ಮೊಟ್ಟೆ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ.

ಅಬ್ಬಿಜಲಪಾತ: ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತ ನಿಜಕ್ಕೂ ಒಂದು ಮೋಹಕ ಜಲಪಾತವೇ… ಈ ಜಲಪಾತವನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು. ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲಿಯೂ ಮಳೆಗಾಲದಲ್ಲಿ ಇದರ ರೌದ್ರಾವತಾರವನ್ನು ಹತ್ತಿರದಿಂದ ನೋಡಿದರೆ ಆ ಸುಂದರ ಕ್ಷಣಗಳನ್ನು ಖಂಡಿತಾ ಮರೆಯಲಾರರು. ಜಲಪಾತದ ಸೊಬಗನ್ನು ಹತ್ತಿರದಿಂದ ಸವಿಯಲೆಂದೇ ಇತ್ತೀಚೆಗೆ ಅಡ್ಡಲಾಗಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಮನದಣಿಯೆ ಸವಿಯಬಹುದು.

ಈ ಜಲಪಾತ ನೆರವಂಡ ನಾಣಯ್ಯ ಎಂಬುವರ ಕಾಫಿ, ಏಲಕ್ಕಿ ತೋಟಗಳ ನಡುವೆ ನಿರ್ಮಿತಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ ಬ್ರಿಟೀಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನು ಈ ಫಾಲ್ಸ್ಗೆ ಇಟ್ಟು ಜೆಸ್ಸಿ ಫಾಲ್ಸ್ ಎಂದು ಕರೆದಿದ್ದರು. ಆದರೆ ಸ್ಥಳೀಯರು ಹಿಂದೆ ಇದನ್ನು ಮಡಿಕೇರಿ ತೊರೆ, ಮುತ್ತಾರ್ಮುಟ್ಟು ತೊರೆ ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ಕೊಡವ ಭಾಷೆಯಲ್ಲಿ ಅಬ್ಬಿ ಎಂದರೆ ತೊರೆ ಎಂದರ್ಥ ಕೊಡವ ಭಾಷೆಯ ಅಬ್ಬಿ ಇಂದು ಅಬ್ಬಿ ಫಾಲ್ಸ್ ಆಗಿದೆ. ಮಳೆಗಾಲದಲ್ಲಿ ಕುಂಬದ್ರೋಣ ಮಳೆ ಸುರಿದು ನದಿ ಉಕ್ಕಿಹರಿದಾಗ ಜಲಪಾತ ರೌದ್ರಾವತಾರ ತಾಳುತ್ತದೆ. ಈ ಸಂದರ್ಭ ಅತ್ತ ತೆರಳುವುದು ಅಪಾಯಕಾರಿ. ಅಲ್ಲದೆ ರಕ್ತ ಹೀರುವ ಜಿಗಣೆಗಳು ಜಲಪಾತವನ್ನು ನೋಡುವ ಪ್ರವಾಸಿಗರ ಉತ್ಸಾಹಕ್ಕೆ ತಣ್ಣೀರು ಎರಚಿಬಿಡುತ್ತವೆ. ಹಾಗಾಗಿ ಈಗ ಜಲಪಾತ ವೀಕ್ಷಣೆಗೆ ಅನುಕೂಲವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು