ಕ್ರಿಸ್ಮಸ್ ಬಂದಿದೆ.. ಈ ಮಹತ್ವಪೂರ್ಣ ದಿನಕ್ಕಾಗಿ ಕಾಯುತ್ತಿದ್ದ ಜನರ ಮುಖದಲ್ಲಿ ಸಡಗರ ಮೂಡಿದೆ. ಮನೆ ಮುಂದೆ ನಕ್ಷತ್ರ ಮಿನುಗತ್ತದೆ.. ಮನೆಯೊಳಗೆ ಕೇಕ್ ಘಮ್ಮೆನ್ನುತ್ತದೆ.. ಸಾಂತಕ್ಲಾಸ್ ಮನೆ ಮನೆಗೆ ಸಿಹಿ ನೀಡಿ ಸಂತಸ ಪಸರಿಸುತ್ತಾನೆ.. ನಿಸರ್ಗ ಸೇರಿದಂತೆ ಮನೆಮನಗಳಲ್ಲಿ ಹೊಸತನ ಚಿಗುರೊಡೆಯುತ್ತದೆ. ಚರ್ಚ್ ಸೇರಿದಂತೆ ಎಲ್ಲೆಡೆ ಯೇಸುವಿನ ಸ್ಮರಣೆ ನಡೆಯುತ್ತದೆ.
ಡಿಸೆಂಬರ್ 25 ಕ್ರಿಸ್ತ ಯೇಸುವಿನ ಜನನೋತ್ಸವವು ಕ್ರಿಸ್ಮಸ್ ಹಬ್ಬವಾಗಿ ಆಚರಣೆಯಾಗುತ್ತಿದೆ. ಹಾಗೆ ನೋಡಿದರೆ ಕ್ರಿಸ್ಮಸ್ ಹಬ್ಬ ಕ್ರೈಸ್ತರು ಆಚರಣೆ ಮಾಡಿದರೂ ಆ ಸಂಭ್ರಮದಲ್ಲಿ ಇತರ ಎಲ್ಲ ಜನರೂ ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ. ಡಿಸೆಂಬರ್ ತಿಂಗಳ ಮೈ ಕೊರೆಯುವ ಚಳಿಯಲ್ಲಿ ದನಗಳ ಕೊಟ್ಟಿಗೆಯಲ್ಲಿ ಸಾಕು ತಂದೆ ಜೋಸೆಫರ ಆಶ್ರಯದಲ್ಲಿ ಮಾತೆ ಮರಿಯಮ್ಮನವರ ಉದರದಲ್ಲಿ ಜನಿಸಿದ ಏಸು 33ವರ್ಷಗಳ ಕಾಲ ಮಾತ್ರ ಭೂಮಿ ಮೇಲೆ ಬಾಳಿದರೂ ಅದ್ಭುತ ಪವಾಡಗಳನ್ನು ಮಾಡಿ ಸಮಸ್ತ ಜನರ ಪಾಪಗಳ ಪರಿಹಾರಕ್ಕಾಗಿ ಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಿದರು. ಆದರೆ ಈ ಪ್ರಪಂಚದಲ್ಲಿ ಸತ್ತ ಮೇಲೆ ಯಾರು ಜೀವಂತವಾಗಿ ಎದ್ದು ಬರುವುದಿಲ್ಲ್ಲ. ಮೃತ್ಯುಂಜಯ ಕ್ರಿಸ್ತ ಯೇಸು ಸ್ವಾಮಿ ತಾವು ನುಡಿದಂತೆ ಸತ್ತು ಮೂರೇ ದಿನದಲ್ಲಿ ಜೀವಂತವಾಗಿ ಎದ್ದು ಪುನರುತ್ಥಾನಗೊಂಡಿದ್ದು ಲೋಕ ರಕ್ಷಣೆಗೆ ಎಂದು ನಂಬಿದ್ದಾರೆ ಕ್ರೈಸ್ತಬಾಂಧವರು.
ಕ್ರಿಸ್ಮಸ್ ಸಂದರ್ಭ ಎಲ್ಲರನ್ನು ಆಕರ್ಷಿಸುವ ಗೋದಲಿ(ಕ್ರಿಬ್) ಹಬ್ಬಕ್ಕೊಂದು ಮೆರಗು ಎಂದರೂ ತಪ್ಪಾಗಲಾರದು. ಮನೆ, ಚರ್ಚ್ ಗಳಲ್ಲಿ ಸುಂದರ ಆಕರ್ಷಕ ಗೋದಲಿಗಳು ಕಂಡು ಬರುತ್ತವೆ. ವಿಭಿನ್ನ ವಿನ್ಯಾಸ ಮತ್ತು ಮೆತ್ತನೆಯ ಹುಲ್ಲಿನಿಂದ ತಯಾರಾಗುವ ದನದ ಕೊಟ್ಟಿಗೆಯಲ್ಲಿ ಪವಡಿಸುವ ಕಂದ ಏಸು ಎಲ್ಲರ ಗಮನ ಸೆಳೆಯುತ್ತದೆ.
ಗೋದಲಿ ನಿರ್ಮಾಣದಲ್ಲೂ ವಿಭಿನ್ನತೆ, ಅದ್ಧೂರಿತನ ಕಂಡು ಬರುತ್ತದೆ. ಮೊದಲೆಲ್ಲ ಮನೆ, ಚರ್ಚ್ ಗಳಿಗೆ ಮಾತ್ರ ಸೀಮಿತವಾಗಿದ್ದ ಗೋದಲಿಗಳು ಈಗ ಶಾಪಿಂಗ್ ಕಾಂಪ್ಲೆಕ್ಸ್ ಗಳಿಗೂ ಬಂದಿವೆ. ಗೋದಲಿ ನಿರ್ಮಿಸಿ ಸ್ಟಾರ್ ಗಳನ್ನು ಹಾಕಿ ಕ್ರಿಸ್ಮಸ್ ಆಚರಿಸಲಾಗುತ್ತದೆ. ಕ್ರಿಸ್ಮಸ್ ಸಂದರ್ಭ ಏಸುವನ್ನು ಸ್ತುತಿಸುವ ಕರೋಲ್ ಗಾಯನ ಮತ್ತೊಂದು ವಿಶೇಷ. ಎಲ್ಲರೂ ಒಟ್ಟಾಗಿ ಸೇರಿ ಏಸುವನ್ನು ಸ್ಮರಣೆ ಮಾಡುತ್ತಾ ಹಾಡುವ ಹಾಡುಗಳು ನಿಜಕ್ಕೂ ಅದ್ಭುತ.
ಕರೋಲ್ ಎಂಬ ಪದವು ಫ್ರೆಂಚ್ ನಿಂದ ಬಂದಿದ್ದು. ಕರೋಲ್ ಎಂಬ ಪದದ ಅರ್ಥ ನರ್ತನ ಅಥವಾ ಹರ್ಷೋದ್ಘಾರದಿಂದ ಸ್ತುತಿಸುವುದು. ಸಾವಿರಾರು ವರ್ಷಗಳ ಹಿಂದೆಯೇ ಯೂರೋಪ್ ಖಂಡದಲ್ಲಿ ಕರೋಲ್ ಗೀತೆಗಳನ್ನು ಹಾಡುವ ಪದ್ಧತಿಯಿದ್ದರೂ ಅವು ಕ್ರಿಸ್ಮಸ್ ಕರೋಲ್ ಗಳಾಗಿರಲಿಲ್ಲ. ಚಳಿಗಾಲದಲ್ಲಿ ಶನಿಗ್ರಹ ದೇವತೆಯನ್ನು ಪೂಜಿಸುವ ಆರಾಧನೆಗಳು ವಿಜೃಂಭಣೆಯಿಂದ ಜರುಗುತ್ತಿದ್ದವು. ಆಗ ಜನರು ಕರೋಲ್ ಗೀತೆಗಳಿಗೆ ಲಯಬದ್ದವಾಗಿ ನರ್ತಿಸುತ್ತಿದರು. ಆ ಋತುಮಾನದಲ್ಲಿ ಜರುಗುತ್ತಿದ್ದ ಕರೋಲ್ ಗಾನಗಳು ಕ್ರಮೇಣ ಅಳಿದು ಇಂದು ಕ್ರಿಸ್ಮಸ್ ಕರೋಲ್ ಗಳಾಗಿ ಅವುಗಳ ಜಾಗವನ್ನು ತುಂಬಿವೆ ಎನ್ನಲಾಗುತ್ತಿದೆ.
ಕೆಲವೆಡೆ ಕ್ರಿಸ್ಮಸ್ ಸಂದರ್ಭ ಪ್ರಕೃತಿಯಲ್ಲೂ ಕ್ರಿಸ್ಮಸ್ ಹೂ ಅರಳುತ್ತದೆ. ನಕ್ಷತ್ರ ಆಕಾರದ ಈ ಹೂಗಳನ್ನು ಅಲಂಕಾರಕ್ಕೆ ಉಪಯೋಗಿಸುತ್ತಾರೆ. ಇನ್ನು ಹಬ್ಬದ ಸಂದರ್ಭ ಕೋನಾಕಾರದಲ್ಲಿ ವಿದ್ಯುದ್ದೀಪಗಳಿಂದ ಕಂಗೊಳಿಸುವ ಕ್ರಿಸ್ಮಸ್ ಟ್ರೀಗೂ ಇತಿಹಾಸವಿದೆ.
1510 ರಲ್ಲಿ ರೀಗ್ ಎಂಬ ಪಟ್ಟಣದಲ್ಲಿ ಪ್ರಪ್ರಥಮವಾಗಿ ಕ್ರಿಸ್ಮಸ್ ಟ್ರೀ ಆಚರಣೆಗೆ ಬಂತು. ಇಂದಿಗೂ ಮುಂದುವರೆಯುತ್ತಾ ಸಾಗುತ್ತಿದೆ. ಇನ್ನು ಕ್ರಿಸ್ಮಸ್ ಸಂದರ್ಭ ಕೇಕ್ ಮತ್ತು ವೈನ್ ಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಕೇಕ್ ಕತ್ತರಿಸಿ, ತಿನ್ನಿಸಿ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಇದೇ ಸಂದರ್ಭ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಅದು ಏನೇ ಇರಲಿ ಇಡೀ ಜಗತ್ತು ಕ್ರಿಸ್ಮಸ್ ಆಚರಣೆಯಲ್ಲಿ ತಲ್ಲೀನಗೊಂಡಿದೆ. ಪ್ರತಿ ಮನೆ, ಮನಗಳಲ್ಲೂ ಸಂಭ್ರಮ, ಸಡಗರವಿರಲಿ..