ಹೊಸ ವರ್ಷದ ಆಗಮನವಾಗುತ್ತಿದ್ದಂತೆಯೇ ನಮ್ಮಲ್ಲೂ ಹೊಸ ಹೊಸ ಕನಸುಗಳು ಚಿಗುರುತ್ತಿವೆ. ಕಳೆದು ಹೋದ ವರ್ಷದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳೆಲ್ಲಾ ಕೊನೆಯಾಗಿ ಹೊಸ ವರ್ಷದಲ್ಲಿ ಎಲ್ಲವೂ ಸುಖಕರವಾಗಿರಲಿ ಎನ್ನುವ ಬಯಕೆ ನಮ್ಮದಾಗಿರುತ್ತದೆ.
ಇನ್ನು ನಾವು ಹೊಸ ವರ್ಷದಲ್ಲಿ ಹೊಸದಾದ ಯೋಜನೆಗಳನ್ನು ಹಾಕಿ ಕೊಂಡು ಕಾರ್ಯರೂಪಕ್ಕೆ ತರಲು ಪ್ರಯತ್ನ ಪಡುತ್ತೇವೆ. ಹೊಸ ವರ್ಷದ ಕನಸುಗಳು ಕೂಡ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಹೊಸವರ್ಷವನ್ನು ನಾವು ಕೇವಲ ಹೊಸ ವಸ್ತುಗಳ ಖರೀದಿಗೆ ಮಾತ್ರ ಸೀಮಿತ ಮಾಡಿಕೊಳ್ಳದೆ ನಾವು ನಮಗಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಕೂಡ ಅಗತ್ಯವೇ… ಹೊಸ ವರ್ಷದಿಂದ ನಾನು ಹೊಸ ಮನುಷ್ಯನಾಗುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬರಬೇಕು. ಇನ್ನು ಮುಂದೆ ಮದ್ಯಪಾನ, ಧೂಮಪಾನ ಸೇರಿದಂತೆ ಯಾವುದೇ ದುಶ್ಚಟಗಳನ್ನು ಮಾಡುವುದಿಲ್ಲ ಎಂಬ ಸಂಕಲ್ಪ ಮಾಡಿದ್ದೇ ಆದರೆ ಹೊಸವರ್ಷದಲ್ಲಿ ನಾವು ಕೂಡ ಹೊಸ ಮನುಷ್ಯರಾಗುವುದರೊಂದಿಗೆ ಕುಟುಂಬಕ್ಕೆ, ಸಮಾಜಕ್ಕೆ ಕೊಡುಗೆಯಾಗುತ್ತೇವೆ.
ಆದರೆ ನಾವು ತುಂಬಾ ಸಾರಿ ಅದನ್ನೆಲ್ಲಾ ಯೋಚಿಸುವುದೇ ಇಲ್ಲ. ಇವತ್ತು ನಮ್ಮಲ್ಲಿ ಬಡತನದ ತಾಂಡವ ಕಂಡು ಬರುತ್ತಿದ್ದರೆ ಅದಕ್ಕೆ ಕುಡಿತವೂ ಕಾರಣವಾಗಿದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಹಳ್ಳಿಗಳಲ್ಲಿ ವಾರವಿಡೀ ಕಷ್ಟಪಟ್ಟು ದುಡಿದ ಸಂಪಾದನೆಯಲ್ಲಿ ಹೆಚ್ಚಿನ ಪಾಲು ಕುಡಿತಕ್ಕೆ ಹಾಕಿ ಮನೆಗೆ ಹೋಗುವ ಗಂಡಸರಿದ್ದಾರೆ. ಇಂತಹವರಿಂದ ಆ ಕುಟುಂಬ ನೆಮ್ಮದಿಯಿಂದ ಬಾಳಲು ಸಾಧ್ಯನಾ ಎಂಬುವುದನ್ನು ನಾವು ಯೋಚಿಸಬೇಕಾಗಿದೆ.ಹೊಸ ವರ್ಷದಲ್ಲಿ ಅಂತಹ ಉತ್ತಮವಾದ ಆಲೋಚನೆಗಳು ನಮ್ಮಲ್ಲಿ ಹುಟ್ಟುವುದೇ ಇಲ್ಲ ಕಾರಣ ನಾವು ಹೊಸವರ್ಷವನ್ನು ಬರಮಾಡಿಕೊಳ್ಳುವುದು ಕೂಡ ಗುಂಡು ಪಾರ್ಟಿಯಿಂದಲೇ ಹಾಗಾಗಿ ಹೆಂಡ ಕುಡಿದು… ಬಾಡೂಟ ತಿಂದು ಕುಣಿದು ಕುಪ್ಪಳಿಸುವುದರೊಂದಿಗೆ ನೂತನ ವರ್ಷಕ್ಕೆ ಮುನ್ನುಡಿ ಬರೆಯುತ್ತಿದ್ದೇವೆ.
ಪಾಶ್ಚಿಮಾತ್ಯರ ಸಂಸ್ಕೃತಿಗೆ ಮಾರುಹೋಗುತ್ತಿರುವ ನಾವು ಹೊಸವರ್ಷವನ್ನು ಗುಂಡು ತುಂಡಿನೊಂದಿಗೆ ಆಚರಿಸುತ್ತಿದ್ದೇವೆ. ಹೊಸವರ್ಷ ಆಚರಣೆ ಎಂದರೆ ಮಜಾ ಉಡಾಯಿಸುವುದು ಎಂಬಂತೆ ಬಿಂಬಿತವಾಗತೊಡಗಿದೆ. ನಗರ ಪ್ರದೇಶಗಳು ಮಾತ್ರವಲ್ಲದೆ, ಹಳ್ಳಿಗಳಲ್ಲಿ ಕೂಡ ಅಂತಹದ್ದೇ ಮನೋಭಾವನೆ ಬೆಳೆಯತೊಡಗಿದೆ. ಹೀಗಾಗಿ ಆಚರಣೆ ಕೂಡ ಎಲ್ಲೋ ಒಂದು ಕಡೆ ಹಳಿ ತಪ್ಪುತ್ತಿದೆ ಎಂಬಂತೆ ಭಾಸವಾಗತೊಡಗಿದೆ.ಈಗಾಗಲೇ ಹೋಟೆಲ್ ಗಳು, ರೆಸಾರ್ಟ್ ಗಳು ಹೊಸವರ್ಷದ ಆಚರಣೆಗೆ ಸಜ್ಜಾಗುತ್ತಿವೆ. ಗಿರಾಕಿಗಳನ್ನು ಸೆಳೆಯಲು ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡತೊಡಗಿವೆ. ಇಂತಹ ಹೋಟೆಲ್ ಗಳಿಗೆ ಬರುವ ಶ್ರೀಮಂತರು ಸಹಸ್ರಾರು ರೂಪಾಯಿ ಖರ್ಚು ಮಾಡಿ ಪಾರ್ಟಿ ಮಾಡುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಅದನ್ನು ನೋಡಿ ಹೊಸವರ್ಷ ಆಚರಣೆ ಅಂದ್ರೆ ಅದೇ ಎಂಬ ಭ್ರಮೆಗೊಳಗಾಗುತ್ತಿದ್ದೇವೆ ಇದು ಮಾತ್ರ ದುರಂತ.
ನಾವು ಆಚರಣೆ ಮಾಡಿದರೂ ಮಾಡದೆ ಇದ್ದರೂ ದಿನಗಳು ನಿಲ್ಲುವುದಿಲ್ಲ ಅವು ಉರುಳುತ್ತಲೇ ಇರುತ್ತವೆ. ನಾವು ನಮ್ಮ ಸಂತೊಷಕ್ಕೆ ಆಚರಣೆ ಮಾಡುತ್ತೇವೆ. ಆ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ವರ್ಷಾಚರಣೆಯ ಭರದಲ್ಲಿ ಮತ್ತೊಬ್ಬರಿಗೆ ತೊಂದರೆ ಕೊಡುವ ಕೆಲಸವನ್ನು ಮಾಡಬಾರದಷ್ಟೆ. ಹೊಸವರ್ಷದಲ್ಲಿ ಒಳ್ಳೆಯ ಆಲೋಚನೆಗಳು ನಮ್ಮಲ್ಲಿ ಮೂಡಿ ಅದರಿಂದ ಒಂದಷ್ಟು ಒಳ್ಳೆಯದಾದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಎಲ್ಲರ ಬಾಳಲ್ಲಿ ಹೊಸ ವರ್ಷ ಹರ್ಷದಾಯಕವಾಗಿರಲಿ.