ಅಡ್ಡಾಡುತ್ತವೆ ನೂರಾರು ತಲೆಗಳು,
ಬದುಕ ಬೆಂಕಿಯನು ಆರಿಸಲು.
ಉದ್ರಿಕ್ತಗೊಳ್ಳುತ್ತವೆ ಥರ ಥರ ಬಯಕೆಗಳು,
ಬೀದಿಯುದ್ದಕ್ಕೂ ಎದ್ದುನಿಂತ ಡೇರೆಗಳ ಸಂಗದಲಿ.
ಬಂದು ಹೋಗುವ ಎಲ್ಲಾ ಪಾತ್ರಗಳು,
ಜೀವಂತಿಕೆಯನು ಸಾರಲು ಬೆವರು ಬಿಡುತ್ತಿವೆ.
ಆಂಟಿಯರ ಮುಸುಡಿಯಲ್ಲಿ ಮೆತ್ತಿರುವ,
ಪೌಡರ್, ಕ್ರೀಂಗಳು ಉರಿಬಿಸಿಲಿಗೆ ಕರಗಿ,
ಬೀದಿಯ ಕಣಕಣದಲ್ಲಿ ವಿಲೀನವಾಗುತ್ತವೆ.
ಪ್ರೇಮಿಗಳಿಬ್ಬರು ಕಳಚಿ ಇಟ್ಟ ಮುಖವಾಡಗಳು,
ಬೀದಿಯ ಬದಿಯಲ್ಲಿ ಕೊಳೆತು ನಾರುತ್ತಿವೆ.
ಹಸುಗೂಸುಗಳ ಡಯಾಪರ್ ನಿಂದ,
ಹೊಸ ಯುವಕರ ಕಾಂಡೋಂಗಳಿಗೂ,
ಈ ಹಾಳಾದ ಬೀದಿಯೊಂದೇ ಸಭ್ಯ ವೇದಿಕೆ.
ಕನಸುಕಂಗಳ ಚೆಲುವೆಯರು,
ತಡೆಯಲಾಗದ ಕಾಮನೆಗಳನು ವಿಸರ್ಜಿಸುವ,
ಬಣ್ಣದ ಬಟ್ಟಲಾಗುತ್ತದೆ ಅನಾಥ ಬೀದಿ.
ಕರೆಂಟು ದೀಪಗಳಿಲ್ಲದ ಬೀದಿಯಲ್ಲಿ,
ಹೊಸ ವೇಶ್ಯೆಯರನು ಕಂಡರೆ,
ತುಂಡು ಚಂದಿರನು ವ್ಯವಹಾರ ಕುದುರಿಸಿ,
ಕೇಕೆಹಾಕಿ ಕುಣಿಯುತ್ತಾನೆ.
ಇಲ್ಲಿ, ಮುಂಜಾನೆ ಉದಯಿಸೋ ರವಿಯು,
ವೇಶ್ಯೆಯೊಬ್ಬಳ ಒಳ್ಳೆಯ ಗಂಡನಂತೆ,
ಅತ್ಯಾಚಾರವಾದ ಬೀದಿಯನು,
ಸರಿ ಮಾಡುವುದೊಂದೇ ಕೆಲಸ.
ಒಂದು ಬೀದಿ - 1 min read
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.