ಎದೆಯಾಳದ ಬೇರುಗಳಲಿ
ಗಂಟುಹಾಕಿರುವ ನೋವುಗಳನು,
ಪರರ ನರಳಾಟದಲಿ,
ಮರೆತು ದೇವರಾಗುವ ನೀನು,
ಮನುಜನಂತ ಮನುಜನೇ ಅಲ್ಲ.
ನೀನೊಬ್ಬ ವಿಜ್ಞಾನ ಲೋಕದ ಸಂತ.
ಅದೆಂತ ತಾಳ್ಮೆ ನಿನಗೊಲಿದಿರುವುದು?
ಅದೆಂತ ಪ್ರೀತಿ ನಿನ್ನಲ್ಲಿ ಅಡಗಿರುವುದು?
ಕೊಳೆತ ಅಂಗವನ್ನೂ,
ಆಯತಪ್ಪಿದ ಅವಯವಗಳನ್ನೂ,
ಸೃಷ್ಟಿಕರ್ತನಿಗೂ ಸಂದೇಹ ಬರದಂತೆ
ಗುಣಪಡಿಸುವ ನಿನ್ನ ಕಲೆಗೆ,
ಭೂಲೋಕದಲಿ ಸಮನಾದ ಉಡುಗೊರೆ ಎಲ್ಲಿ?
ನಿನ್ನದೇ ಕೈಯಲ್ಲಿ ಅದೆಷ್ಟೋ ಜನನ,
ನಿನ್ನದೇ ಕೈಯಲ್ಲಿ ಅದೆಷ್ಟೋ ಮರಣ…
ನಿನ್ನಂತಹ ಜೀವವೇ, ನಿನ್ನೆದುರು ಕೊನೆಯಾಗುವಾಗ
ನಿನ್ನೊಳಗಿನ ಭಾವನೆಗಳ ತಾಕಲಾಟ ನಾ ನೋಡಬೇಕು.
ಹೊಸಜೀವ ನಿನ್ನ ಅಂಗೈಯಲ್ಲಿ ಕಣ್ತೆರೆಯುವಾಗ,
ನಿನ್ನೊಳಗಿನ ಸಂತಸದ ಮಿತಿ ನಾ ನೋಡಬೇಕು.
ರಕ್ತಕ್ಕೆ ರಕ್ತವೇ ಸೋಲುವ ಗಳಿಗೆಯಲಿ,
ನಿನ್ನ ತರ್ಕವೇ ಗೆಲ್ಲುವುದು ವೈದ್ಯ.
ನೀ ಸಾವಿಗೂ ಸವಾಲೊಡ್ಡುವ, ಮನುಕುಲದ ಆರಾಧ್ಯದೈವ.