News Kannada
Thursday, July 07 2022

ನುಡಿಚಿತ್ರ

ಗ್ಲೋಬಲ್ ಗಮನಸೆಳೆದ ಗೋಲ್ಡನ್ ಟೆಂಪಲ್ - 1 min read

Photo Credit :

ಗ್ಲೋಬಲ್ ಗಮನಸೆಳೆದ ಗೋಲ್ಡನ್ ಟೆಂಪಲ್

ಒಂದು ಕಾಲದಲ್ಲಿ ಚೀನಾದಿಂದ ನಿರಾಶ್ರಿತರಾಗಿ ಬಂದು ಕುಶಾಲನಗರ ಬಳಿಯ ಬೈಲುಕುಪ್ಪೆಯ ಬೆಂಗಾಡಿನಲ್ಲಿ ನೆಲೆ ನಿಂತ ಟಿಬೆಟಿಯನ್ನರು ಇವತ್ತು ಆ ಸ್ಥಳವನ್ನು ಅಭಿವೃದ್ಧಿಗೊಳಿಸಿ ವಿಶ್ವಮಟ್ಟದಲ್ಲಿ ಗಮನಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ಮೈಸೂರಿನಿಂದ ಸುಮಾರು 88ಕಿ.ಮೀ. ದೂರದಲ್ಲಿರುವ ಬೈಲುಕುಪ್ಪೆ ಪ್ರವಾಸಿತಾಣವಾಗಿ ಖ್ಯಾತಿಪಡೆಯಲು ಇಲ್ಲಿ ನಿರ್ಮಿಸಲ್ಪಟ್ಟಿರುವ ಸ್ವರ್ಣದೇಗುಲ(ಗೋಲ್ಡನ್ ಟೆಂಪಲ್)ವೇ ಮುಖ್ಯ ಕಾರಣವಾಗಿದೆ. ಸ್ವರ್ಣ ದೇಗುಲದೊಂದಿಗೆ ಸುಮಾರು ಹದಿನಾರಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ, ಸನ್ಯಾಸಿನಿಯರ ಬೌದ್ಧವಿಹಾರ, ಬೌದ್ಧ ಭಿಕ್ಷುಗಳ ಮಹಾವಿದ್ಯಾಲಯ, ಆಸ್ಪತ್ರೆ, ಬೌದ್ಧವಿಹಾರದ ಸುತ್ತ 1300 ಪ್ರಾರ್ಥನಾ ಚಕ್ರಗಳು, ಎಂಟು ಸ್ಥೂಪಗಳು ತನ್ನದೇ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ.

ಟಿಬೆಟ್ ದೇಶದ ಸಂಪ್ರದಾಯಗಳಿಗೆ ತಕ್ಕಂತೆ ನಿರ್ಮಾಣಗೊಂಡಿರುವುದು ಸ್ವರ್ಣ ದೇಗುಲದ ವಿಶೇಷತೆಯಾಗಿದೆ. ಪರಮ ಪೂಜ್ಯ ಪನೋರ್ ರಿನ್ ಪೋಚೆಯವರು ಇದರ ನಿರ್ಮಾಣವನ್ನು 1995ರಲ್ಲಿ ಆರಂಭಿಸಿ 1999ರಲ್ಲಿ ಪೂರ್ಣಗೊಳಿಸಿದರು. ನಾಲ್ಕು ವರ್ಷಗಳ ಸತತ ಪರಿಶ್ರಮದಿಂದ ನಿರ್ಮಾಣ ಕಾರ್ಯ ನಡೆದಿದ್ದು, ಈ ಸಂದರ್ಭ ದೇಗುಲವನ್ನು ಆಕರ್ಷಕವಾಗಿಯೂ, ವೈಶಿಷ್ಟ್ಯಪೂರ್ಣವಾಗಿಯೂ ನಿರ್ಮಿಸುವಲ್ಲಿ ಪೆನೋರ್ ರಿನ್ ಪೋಚೆಯವರ ಸಾಧನೆ ಸ್ಮರಣೀಯ.

ಬೈಲುಕುಪ್ಪೆಗೆ ತೆರಳುವ ಪ್ರವಾಸಿಗರನ್ನು ಸ್ವರ್ಣದೇಗುಲ ದೂರದಿಂದಲೇ ಕೈಬೀಸಿ ತನ್ನತ್ತ ಸೆಳೆಯತ್ತದೆ. ಇನ್ನು ದೇಗುಲವನ್ನು ಪ್ರವೇಶಿಸುತ್ತಿದ್ದಂತೆಯೇ ಮನಸ್ಸಿಗೆ ಹೊಸ ಅನುಭವವಾಗುತ್ತದೆ. ನಮ್ಮಲ್ಲಿದ್ದ ದುಃಖ, ದುಗುಡ, ದುಮ್ಮಾನಗಳು ಮಾಯವಾಗಿ ಮನಸ್ಸು ಉಲ್ಲಾಸದಿಂದ ತೇಲಾಡುತ್ತದೆ. ದೇವಾಲಯದ ಬಗ್ಗೆ ಹೇಳುವುದಾದರೆ ಇದೊಂದು ಉತ್ಕೃಷ್ಟ ಶಿಲ್ಪಕಲೆಯಿಂದ ಕೂಡಿದ ಮಂದಿರವಾಗಿದ್ದು, ಕಲೆಗೆ ಚಿನ್ನದ ಲೇಪನ ಮೆರುಗು ನೀಡಿದೆ.

ವಿಶಾಲ ಹಜಾರವನ್ನು ಹೊಂದಿರುವ ದೇವಾಲಯದ ಪೀಠದಿಂದಲೇ ಅರವತ್ತು ಅಡಿ ಎತ್ತರದ ಭಗವಾನ್  ಬುದ್ದನ ಮೂರ್ತಿ, ಐವತ್ತೆಂಟು ಅಡಿ ಎತ್ತರದ ಗುರು ಪದ್ಮಸಂಭವ ಹಾಗೂ ಬುದ್ದ ಅಮಿತಾಯುಸ್ನ ಮೂರು ಬೃಹತ್ ಪ್ರಧಾನ ಮೂರ್ತಿಗಳಿದ್ದು, ಇವುಗಳನ್ನು ಚಿನ್ನಲೇಪಿತ ತಾಮ್ರದ ಲೋಹದಿಂದ ನಿರ್ಮಿಸಲಾಗಿದೆ.

ಈ ಮೂರ್ತಿಗಳ ಒಳಗೆ ಧರ್ಮಗ್ರಂಥಗಳು, ಮಹಾತ್ಮರ ಭಗ್ನಾವಶೇಷಗಳು, ಜೇಡಿಮಣ್ಣಿನ ಸ್ಥೂಪಗಳು, ಎರಕದ ಅಚ್ಚುಗಳು ಮತ್ತು ಸಣ್ಣ ಮೂರ್ತಿಗಳಿವೆ. ಇವು ಭಗವಾನ್ ಬುದ್ದನ ದೇಹ ನುಡಿ ಮತ್ತು ಮನಸ್ಸಿನ ಸಂಕೇತಗಳಾಗಿವೆ. ಇವುಗಳನ್ನು ಪೂಜಿಸಿದ್ದೇ ಆದಲ್ಲಿ ಮನಸ್ಸಿನಲ್ಲಿ  ನಂಬಿಕೆ, ಶಾಂತಿ, ವಿವೇಕ, ಪ್ರೀತಿ, ದಯೆ ಮತ್ತು ಅನುಕಂಪಗಳು ಮೂಡಿ ನಮ್ಮ ಕಲ್ಮಶ ಮನಸ್ಸು ಶುದ್ಧಗೊಳ್ಳುತ್ತದೆ ಎಂಬ ನಂಬಿಕೆಯಿದೆ.

ದೇವಾಲಯದ ಗೋಡೆಗಳಲ್ಲಿ ಪ್ರಧಾನ ಮೂರ್ತಿಗಳ ಇಕ್ಕೆಲಗಳಲ್ಲಿ ಜೋಗ್ಬನ್ರವರ ಬೋಧನೆಗಳನ್ನು ಆಚರಿಸಿ ಮಹಾಸಿದ್ದಿ ಪಡೆದ ಗುರುಪದ್ಮ ಸಂಭವರವರ 25 ಶಿಷ್ಯಂದಿಯರನ್ನು ಅಲ್ಲದೆ, ಬೃಹತ್ ಮೂರ್ತಿಗಳ ಹಿಂದೆ ಕಾಣಿಕೆಯ ದೇವತೆಯನ್ನು ಕಾಣಬಹುದಾಗಿದೆ ಮೂರನೆಯ ಅಂತಸ್ತಿನ ಎರಡು ಕಡೆ ಜೋಗ್ಚಿನ್ ಅವರ 12 ಮಹಾ ಮಹಿಮ ಗುರುಗಳನ್ನು ಪ್ರತಿನಿಧಿಸಿದರೆ, ಎರಡನೆಯ ಅಂತಸ್ತಿನ ಚಿತ್ರಗಳು ಪಾಲ್ಯುಲ್ ಸಂಪ್ರದಾಯದ ಸಿಂಹಾಸನಾಧೀಶರನ್ನು ಮತ್ತು ಜ್ಞಂಗ್ಮ ಸಂಪ್ರದಾಯದ  ಮಹಾಮಹಿಮ ವಿದ್ವಾಂಸರನ್ನು ಮತ್ತು ಶ್ರೇಷ್ಠ ಬೋಧಕರನ್ನು ಪ್ರತಿನಿಧಿಸುತ್ತದೆ.

ಮೊದಲನೆ ಅಂತಸ್ತಿನ ಗೋಡೆಯಲ್ಲಿ ತಾಂತ್ರಿಕ ಬೌದ್ದ ಧರ್ಮದ ಪ್ರಭಾವದ ಚಿತ್ರಗಳಾದ ಲಾಮ, ಏಡಂ ಮತ್ತು ಡಾಕಿನಿ ಎಂಬ ಮೂರು ದೇವತೆಗಳನ್ನು ಕಾಣಬಹುದಾಗಿದೆ. ಅಲ್ಲದೆ ಇಲ್ಲಿ ದೇವತೆಗಳನ್ನು ಉಗ್ರ ರೂಪದಲ್ಲಿಯೂ ಹಾಗೂ ಸಂಗಮ ರೂಪದಲ್ಲಿಯೂ ಚಿತ್ರಿಸಲಾಗಿದ್ದು, ಶಾಂತದೇವತೆಗಳು ರೇಷ್ಮೆ ವಸ್ತ್ರಗಳನ್ನು ಮತ್ತು ಅಮೂಲ್ಯ ಲೋಹ, ಹರಳುಗಳನ್ನು ಧರಿಸಿದ್ದರೆ, ಉಗ್ರ ಸ್ವರೂಪದ ದೇವತೆಗಳು ಚರ್ಮ ಮತ್ತು ಮೂಳೆಯ ಆಭರಣಗಳನ್ನು ಧರಿಸಿರುವುದು ಕಂಡು ಬರುತ್ತದೆ. ಇಲ್ಲಿರುವ ದೇವತೆಗಳನ್ನು ರೂಪಿಸಿರುವ ರೀತಿಗಳು  ಮನುಷ್ಯನ ಮಾನಸಿಕ ಸ್ತರಗಳನ್ನು ತೋರಿಸುತ್ತದೆ.  ದೇವಾಲಯದ ಹೊರಭಾಗದಲ್ಲಿ ಎಂಟು ಸ್ಥೂಪಗಳನ್ನು ನಿರ್ಮಿಸಲಾಗಿದ್ದು,  ಅವುಗಳಲ್ಲಿ ಭಗವಾನ್ ಬುದ್ದನ ಜನ್ಮಸ್ಥಳ ಲುಂಬಿನಿ, ಜ್ಞಾನೋದಯವಾದ ಸ್ಥಳ ಬುದ್ದಗಯ, ನಾಲ್ಕು ಮಹತ್ತರ ಸತ್ಯಗಳನ್ನು ಬೋಧಿಸಿದ ಸ್ಥಳ (ಧರ್ಮಚಕ್ರ ಸ್ಥೂಪ) ವಾರಣಾಸಿ, ಪವಾಡಗಳನ್ನು ಪ್ರದರ್ಶಿಸಿದ ಸ್ಥಳ(ಅದ್ಭುತ ಪವಾಡ ಸ್ಥೂಪ) ಶ್ರಾವಸ್ಥಿ, ಬುದ್ದನು ಸ್ವರ್ಗದಲ್ಲಿರುವ ತಮ್ಮ ಮಾತೃಶ್ರೀ ಯವರಿಗೆ ಜ್ಞಾನ ಪ್ರದಾನ ಮಾಡಿ ಸ್ವರ್ಗದಿಂದ ಹಿಂತಿರುಗಿದ ಸ್ಥಳ ವೈಶಾಲಿ, ಬುದ್ದನು ಸಂಘದಲ್ಲಿ ದೇವದತ್ತ ಮತ್ತು ಅವನ ಸಂಬಂಧಿಗಳು ಮಾಡಿದ ಎರಡು ಗುಂಪುಗಳ ನಡುವೆ ಸಂಧಾನ ನಡೆಸಿ ಒಂದು ಗೂಡಿಸಿ ಮತ್ತೆ ಸಂಘಕ್ಕೆ ಸೇರಿಸಿದ ಸ್ಥಳ (ಮೈತ್ರಿ ಸ್ಥೂಪ) ರಾಜಗೃಹ, ಬುದ್ದನು ಭಕ್ತರ ಕೋರಿಕೆಯ ಮೇರೆಗೆ ತಮ್ಮ ಜೀವಾವಧಿಯನ್ನು ಮೂರು ತಿಂಗಳು ಮುಂದೂಡಿದ ಸ್ಥಳ (ವಿಜಯ ಸ್ಥೂಪ) ವೈಶಾಲಿ, ಬುದ್ದನು ನಿರ್ವಾಣ ಹೊಂದಿದ ಸ್ಥಳ (ಪರಿನಿರ್ವಾಣ ಸ್ಥೂಪ) ಕುಶಿನಗರವಾಗಿದೆ. ಈ ಎಂಟು ಸ್ಥೂಪಗಳು ನೋಡಲು ಆಕರ್ಷಕವಾಗಿವೆ.

See also  ಬಾಲಕರಿಂದ ಸೈಕಲ್ ಬೈಕ್ ನ ನೂತನ ಅವಿಷ್ಕಾರ

ಪ್ರವೇಶದ್ವಾರದಿಂದ  ಆರಂಭವಾಗಿ ದೇವಾಲಯಕ್ಕೆ ಸುತ್ತುವರಿದುಕೊಂಡು  ಸುಮಾರು ಸಾವಿರಕ್ಕೂ ಹೆಚ್ಚಿನ ಪ್ರಾರ್ಥನಾ ಚಕ್ರಗಳಿದ್ದು, ಈ ಪ್ರಾರ್ಥನಾ ಚಕ್ರಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿ ಅವುಗಳನ್ನು ಬಲಭಾಗದಿಂದ ತಿರುಗಿಸಿದರೆ ನಾವು ರೋಗ-ರುಜಿನಗಳಿಂದ  ಮುಕ್ತಗೊಂಡು ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ.

ದೇವಾಲಯದ ಬಳಿ ಸುಂದರ ಉದ್ಯಾನವನವನ್ನು ನಿರ್ಮಿಸಲಾಗಿದ್ದು, ಇಲ್ಲಿ ಕುಳಿತು ಪ್ರವಾಸಿಗರು ವಿಶ್ರಾಂತಿ ಪಡೆಯಬಹುದು. ಅಷ್ಟೇ ಅಲ್ಲ ಇಲ್ಲಿ ವಿವಿಧ ವಸ್ತುಗಳ ಖರೀದಿಗೂ ಅವಕಾಶವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು