ಭಾನುವಾರ ಬೆಳಗ್ಗೇ ಸರಿಸುಮಾರು ಹನ್ನೊಂದು ಗಂಟೆಗೆ ಡಾ. ರಾಜ್ ಮೋಹನ್ ನೇರವಾಗಿ ಲಿಂಕನ್ ಇರುವ ವಾರ್ಡ್ ಹೊಕ್ಕುತ್ತಾರೆ. ಇಂದು ಗುಣಮುಖನಾಗುತ್ತೇನೆ, ನಾಳೆ ಗುಣಮುಖನಾಗುತ್ತೇನೆ ಎಂಬ ಕನಸು ನಿಸ್ತೇಜವಾಗಿ ಮಲಗಿರುವ ಲಿಂಕನ್ ಕಣ್ಣುಗಳಲ್ಲಿ ಬಲೆ ನೇಯ್ದಿರುತ್ತದೆ. ಡಾಕ್ಟರ್ ಬಂದವರೇ ಆತನ ಹೆಸರನ್ನು ಕರೆಯುತ್ತಾ “ನೋಡು ಲಿಂಕನ್, ದೇವರು ನಿನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದಾನೆ. ಸಾವಿಗೆ ಹೆದರಬೇಡ. ಇಂದಲ್ಲ ನಾಳೆ ನಾವು ಪ್ರತಿಯೊಬ್ಬರೂ ಹೊರಡಲೇಬೇಕು. ನಿನಗಿನ್ನು ಎರಡು ದಿನಗಳು ಬಾಕಿ ಇವೆ. ಆಮೇಲೆ ನೀನು ಬದುಕೊ ಗ್ಯಾರಂಟಿ ಇಲ್ಲ” ಅಂದಾಗ ಲಿಂಕನ್ ಮುಖದಲ್ಲಿ ಒಂದು ರೀತಿಯ ನಗು ಮೂಡುತ್ತದೆ, ಕಣ್ಣುಗಳಲ್ಲಿ ಕಾಂತಿ ತುಂಬುತ್ತದೆ. ಲಿಂಕನ್ ಬದುಕಿನಲ್ಲಿ ಆರು ತಿಂಗಳಿನಿಂದೀಚೆಗೆ ಲಗ್ಗೆ ಇಟ್ಟ ‘ಲ್ಯುಕೇಮಿಯಾ’ ಆತನ ಕನಸುಗಳನ್ನು ನುಂಗಿ ನೀರು ಕುಡಿದಿದೆ, ಆಸೆಗಳಿಗೆ ಬೆಂಕಿ ಇಟ್ಟುಬಿಟ್ಟಿದೆ. ಇತ್ತೀಚೆಗೆ ಲಿಂಕನ್ ಎಲ್ಲವನ್ನೂ ಮರೆತು, ತನ್ನನ್ನೂ ತಾನೇ ಮರೆತು ನಿರಾಳವಾಗಿದ್ದಾನೆ, ಒಂದು ಸಣ್ಣ ಹಸುಳೆಯಂತೆ ಮುಗ್ಧವಾಗಿದ್ದಾನೆ. ಮನುಷ್ಯನಿಗೆ ಸಾವು ತನ್ನ ಹೆಗಲ ಮೇಲೆ ಕೂತಿದೆ ಎಂದು ಅರಿವಾದಾಗ ಬಹುಷ ಆತ ಸಂತನಾಗಿಬಿಡಬಹುದು. ಈ ಪ್ರಪಂಚಕ್ಕೆ ಎಟುಕದ, ಊಹಿಸಲಾಗದ ಎತ್ತರದಲ್ಲಿ ಆತ ಏಕಾಂತವಾಗಿ ವಿಹರಿಸಬಹುದು ಎನ್ನುವುದಕ್ಕೆ ದೊರೆ ಅಲೆಕ್ಸಾಂಡರ್ ಸಾಕ್ಷಿ.
ಮೆಡಿಕಲ್ ಶಾಪ್ ನಿಂದ ಔಷಧಿಯನ್ನು ತಂದು ಒಳಬಂದ ತಾಯಿಯ ಮುಖನೋಡಿದ ಲಿಂಕನ್ ಗೆ ತನ್ನ ನಗುವಿನ ಬಿಂಬ ತಾಯಿಯ ಮುಖದಲ್ಲಿ ಕಾಣುತ್ತದೆ. ತನ್ನೆಲ್ಲ ಆಯುಷ್ಯ ತಾಯಿಗೆ ಸಿಗುತ್ತಾ ಆಕೆ ನೂರ್ಕಾಲ ಈಗೇ ನಗುತಾ ಬಾಳಲಿ ಎಂದು ಮನದೊಳಗೆ ಹರಸಿಬಿಡುತ್ತಾನೆ. ಡಾಕ್ಟರ್ ಹೊರಹೋದ ನಂತರ ತನ್ನ ತಾಯಿಯ ಕಣ್ಣುಗಳನ್ನೇ ನೋಡುತ್ತಿದ್ದ ಲಿಂಕನ್ ಗೆ ತನಗಾಗಿ ಆಕೆ ತ್ಯಜಿಸಿದ ನಿದ್ದೆ, ಹಸಿವು, ತನ್ನತನ ಎಲ್ಲವೂ ಕಾಣಿಸಿ ‘ಮಮ್ಮಿ ನೀನು ಖುಶಿಯಾಗಿದ್ದೀಯಾ ತಾನೇ?’ ಎಂದು ಕೇಳುವಾಗ ತಾಯಿಯ ಹೃದಯ ಹಿಂಡಿದಂತಾಗಿ ಟೇಬಲ್ ಮೇಲೆ ಔಷಧಿಗಳನ್ನಿಟ್ಟು ‘ಒಂದು ನಿಮಿಷ, ಬಂದೆ ಮಗಾ’ ಎಂದು ಹೇಳಿ ಸ್ನಾನಗೃಹಕ್ಕೆ ಹೊಕ್ಕಿ, ಕನ್ನಡಿಯೆದುರು ನಿಂತು ಬಿಕ್ಕಿ ಬಿಕ್ಕಿ ಅಳತೊಡಗುತ್ತಾಳೆ. ತನ್ನ ಕರುಳಕುಡಿಯನ್ನು ಉಳಿಸಿಕೊಡು ತಂದೆ ಎಂದು ಕ್ರಿಸ್ತನಲ್ಲಿ ಮೊರೆಯಿಡುತ್ತಾಳೆ. ಆಮೇಲೆ ಮುಖವನ್ನು ತೊಳೆದು ಲಿಂಕನ್ ಗೆ ತಿಳಿಯಬಾರದೆಂದು ಕೃತಕವಾಗಿ ನಗುತ್ತಾ ಮಗನ ಬಳಿ ಬಂದು ಬೆಳಗಿನ ಉಪಹಾರವನ್ನು ತಿನಿಸುತ್ತಾ ಲಿಂಕನ್ ಸ್ನೇಹಿತರಾದ ಸುಶಾಂತ್ ಮತ್ತು ಪ್ರದೀಪನಿಗೆ ಕುಡಿದ ಮತ್ತಿನಲ್ಲಿ ಜಗಳವಾದದ್ದು, ಪಕ್ಕದ್ಮನೆ ಹುಡುಗಿ ಡೀಸೆಂಟ್ ಖ್ಯಾತಿಯ ಅನುರಾಧ, ಮೊಬೈಲ್ ಶಾಪ್ ಓನರ್ ಅಲ್ತಾಫ್ ಜೊತೆ ಓಡಿಹೋಗಿದ್ದು, ಬಡ್ಡಿ ರಿತೇಶ ಆಲದ ಮರದಲಿ ನೇಣುಹಾಕಿ ಸತ್ತಿದ್ದು, ಆಟೋವಿನ್ಸಿಗೆ ಕಿಡ್ನಿ ಫೇಲ್ಯೂರು ಆದದ್ದು ಹೇಳುತ್ತಿರುವಾಗ ಕೇಳಿಯೂ ಕೇಳದಂತೆ ಮಾಡಿ ‘ಮಮ್ಮಿ ನನಗೆ ಕಿಮೋಥೆರಪಿ ಬೇಕಾಗಿಲ್ಲ, ಒಂದೆರಡು ದಿನ ನಾನು ಹಾಯಾಗಿ ಸುತ್ತಾಡಬೇಕು ಪ್ಲೀಸ್’ ಅಂದಾಗ ಮಗನ ವಿಚಿತ್ರ ಕೋರಿಕೆಯನ್ನು ಕೇಳಿ ತಾಯಿಗೆ ತಲೆಸುತ್ತಿದಂತಾಗುತ್ತದೆ.
ಕಳೆದ 24 ವರುಷಗಳಿಂದ ಹೆತ್ತವರ ಪ್ರೀತಿಯ ಬಂಧನದಲ್ಲಿ ಒದ್ದಾಡುತ್ತಿದ್ದ ಲಿಂಕನ್ ಪಪ್ಪ-ಮಮ್ಮಿ ಹಾಕಿದ ಲಕ್ಷ್ಮಣ ರೇಖೆಯನ್ನು ದಾಟದೆ ಯೌವನವನ್ನು ತುಂಬಾ ಗಂಭೀರವಾಗಿ ಬದುಕಿದವನು. ಪ್ರಾಥಮಿಕ ಹಂತದಿಂದ ಡಿಗ್ರಿವರೆಗೂ ಓದಿನಲ್ಲಿ ನಿಪುಣನಿದ್ದ ಲಿಂಕನ್ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸುವ ವರ್ಗದವನು. ಗೆಳೆಯ ಸುಶಾಂತ್ ಬಿಯರು ಕುಡಿಯುತ್ತಿರುವಾಗ, ಒಂದು ಗುಟುಕಿಗೆ ಬಾಯಿ ಚಪ್ಪರಿಸುವ ಆಸೆಯಾದರೂ ನಿಯಂತ್ರಿಸಿದ್ದ. ತನಗಿಂತ ಒಂದು ವರುಷ ಕಿರಿಯವಳಾದ ತುಂಬುಚೆಲುವೆ, ಶ್ವೇತವರ್ಣೆ ಪ್ರಿನ್ಸಿಯಾ ಪ್ರೇಮನಿವೇದನೆ ಮಾಡಿದಾಗ, ದೇಹದಲ್ಲಿ ವಯೋಸಹಜ ಕಾಮನೆ ಸುಳಿದರೂ ತೋರಿಸಿಕೊಳ್ಳದೆ ತುಂಬಾ ಒಳ್ಳೆ ಹುಡುಗನಾಗಿಬಿಟ್ಟಿದ್ದ. ಸಿಗರೇಟು ಎಳೆಯುವ ಸಹಪಾಠಿಗಳಿಗೆ ಕ್ಯಾನ್ಸರ್ ಬಗ್ಗೆ ತಿಳಿಹೇಳಿ ಎಚ್ಚರಿಸಿ ತನ್ನ ವಯಸ್ಸಿನ ತುಂಟಾಟಗಳನ್ನೇ ಮರೆತು, ಹುಡುಗಾಟದ ಸ್ವಭಾವವನ್ನೇ ಕಳೆದುಕೊಂಡಿದ್ದ ಲಿಂಕನ್ ತನ್ನ ತಾಯಿ ಬೆಳಗ್ಗೇ ನೀಡುತ್ತಿದ್ದ ಚಪಾತಿ ಮತ್ತು ತತ್ತಿಯ ಬುರ್ಜಿಯನ್ನು ಮಧ್ಯಾಹ್ನಕ್ಕೆ ತಿಂದು, ಬುತ್ತಿಯನ್ನು ತೊಳೆದು ಬ್ಯಾಗಲ್ಲಿಟ್ಟು ಹೊರಗೆಲ್ಲೂ ಸುತ್ತಾಡದೇ ತರಗತಿಯಲ್ಲಿ ಕುಳಿತು ಗಣಿತದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ. ನಿರ್ಮಲವಾದ ಬದುಕನ್ನು ಸವೆಸಿದವನಿಗೆ ಲ್ಯುಕೇಮಿಯಾ ಯಾವ ಥರದ ಉಡುಗೊರೇ? ತನ್ನ ವಿಧಿಲಿಖಿತ ಹಣೆಬರವನ್ನೇ ನೆನೆದು ಮಮ್ಮಲ ಮರುಗಿದ ಲಿಂಕನ್, ತನ್ನನ್ನು ನುಂಗಲು ಹೊಂಚುಹಾಕಿರುವ ಕಳ್ಳಸಾವಿನ ಜೊತೆ ಗುದ್ದಾಡಲೇಬೇಕೆಂದು ನಿರ್ಣಯಿಸುತ್ತಾನೆ. ಆಮೇಲೆ ಹೆತ್ತವರ ಋಣ ತೀರಿಸಲಾದರೂ ತನ್ನನ್ನು ಉಳಿಸಿಬಿಡೆಂದು ದೇವರಲ್ಲಿ ಮೊರೆಯಿಡುತ್ತಾನೆ. ಕ್ರಮೇಣ ಖಾಯಿಲೆಯ ಗಂಭೀರತೆಯನ್ನು ಅರಿತ ಲಿಂಕನ್ ತನ್ನ ಪೂರ್ವಾರ್ಧ, ಉತ್ತರಾರ್ಧಗಳನ್ನು ಮರೆತು ಕ್ಷಣಕ್ಷಣದ ಬದುಕನ್ನು ಬದುಕಲು ತೊಡಗುತ್ತಾನೆ. ತನ್ನನ್ನು ನೋಡಲು ಹಣ್ಣುಹಂಪಲನ್ನು ತಂದು ಬರುವ ಹಿತೈಷಿಗಳನ್ನು ಮಾತಾನಾಡಿಸುವ ರೀತಿಗೆ, ಲಿಂಕನ್ ಗೆ ನಿಜವಾಗಿಯೂ ಕ್ಯಾನ್ಸರ್ ಇದೆಯಾ ಎಂಬ ಸಂಶಯ ವೈದ್ಯರಲ್ಲೂ ಮೂಡುತ್ತಿತ್ತು. ಇವನ ಈ ರೀತಿಯ ಸಂತನ ವರ್ತನೆ ತಾಯಿಯ ಮುಖದಲ್ಲಿ ಕಳೆಯನ್ನು ತರಿಸುತ್ತಿತ್ತು. ಈಗ ಆತನ ಕೊನೆಯಾಸೆಯನ್ನು ಈಡೇರಿಸಲು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ ವೈದ್ಯರು ಮತ್ತು ಹೆತ್ತವರು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದು ವೈದ್ಯರ ಸಲಹೆಯಂತೆ ಆತನ ಪಾಡಿಗೆ ಹಾಯಾಗಿರಲು, ಇಷ್ಟಪಟ್ಟಿದ್ದನ್ನು ಮಾಡಲು ಬಿಟ್ಟುಬಿಡುತ್ತಾರೆ. ಮನೆಗೆ ಬಂದವನೇ ಲಿಂಕನ್ ತಾನು ಯಾವುದೋ ಒಂದು ಹೊಸಗ್ರಹಕ್ಕೆ ಬಂದಂತೆ ಭ್ರಮಿಸತೊಡಗುತ್ತಾನೆ. ಮನೆಯ ಪ್ರವೇಶ ಕೋಣೆಯ ಗೋಡೆ ಮೇಲೆ ನೇತಾಡುವ ಗಡಿಯಾರವು ಕ್ಷಣಕ್ಷಣಕೂ ಲಿಂಕನ್ ಗೆ ಶತ್ರುವಾಗತೊಡಗುತ್ತದೆ. ಒಳಗೆ ಹೊಕ್ಕವನೇ ಕನ್ನಡಿಯಲ್ಲಿ ತನ್ನ ಬೋಳುತಲೆ, ಕೃಶವಾದ ಶರೀರ, ಬಿಳಚಿಕೊಂಡಿರುವ ಮುಖವನ್ನು ನೋಡುತ್ತಾ ತಾನು ಸ್ವರ್ಗಲೋಕದಲ್ಲಿ ದೇವದೂತನನ್ನು ಕಾಣುತ್ತಿರುವಂತೆ ತನ್ನೊಳಗೆ ಖುಶಿಪಡುತ್ತಾನೆ. ‘ಇನ್ನು 30 ಗಂಟೆಯೊಳಗೆ ತನಗೆ ಈ ಮನೆಯ, ಈ ಪರಿಸರದ 24 ವರುಷದ ನಂಟು ಕಳಚಿ ಬೀಳುವುದು’ ಎಂದು ತನ್ನ ತಂಗಿಯ ಬಳಿ ಹೇಳುತ್ತಿರುವಾಗ ಕೇಳಿಸಿಕೊಂಡ ಕಲ್ಲೆದೆಯ ತಂದೆ ಎದೆ ಬಡಿದು ಅಳತೊಡಗುತ್ತಾರೆ. ನೋವಿನಕಡಲು ಭೋರ್ಗರೆಯುವ ಸದ್ದು ಇಡೀ ಮನೆಯನ್ನು ಆವರಿಸಿ ಬಿಡುತ್ತದೆ.
ಲಿಂಕನ್ ತನಗರಿವಿಲ್ಲದೇ ಪ್ರತಿಕ್ಷಣನೂ, ಪ್ರತಿಸಂಗತಿಯಲ್ಲೂ ಸಂತಸವನ್ನು ಹುಡುಕತೊಡಗುತ್ತಾನೆ. ಸತ್ತಿರೋ ಜಿಗಣೆಯನ್ನು ಹೊತ್ತೊಯ್ಯುವ ಕೆಂಪಿರುವೆ ಸಾಲನ್ನು ನೋಡಿ ಖುಶಿಪಡುತ್ತಾನೆ, ಮನೆಯ ಮಾಡಿನ ಮೂಲೆಯಲ್ಲಿ ಗೂಡುಕಟ್ಟಿರುವ ಗುಬ್ಬಚ್ಚಿ ಸಂಸಾರದಲ್ಲಿ ಈವರೆಗೂ ಕಾಣದ ಹೊಸ ಶಾಸ್ತ್ರವನ್ನು ಕಾಣುತ್ತಾನೆ. ತನ್ನಿಷ್ಟದ 32 ಸೈಜಿನ ಕಪ್ಪು ಜೀನ್ಸ್ ಪ್ಯಾಂಟನ್ನು ತೊಟ್ಟು ಗೆಳೆಯ ಪ್ರಜ್ಜು ಮನೆಗೆ ಹೋಗಬೇಕೆಂದುಕೊಂಡಾಗ, ಕೃಶವಾಗಿರುವ ಸೊಂಟದಲ್ಲಿ ನಿಲ್ಲದ ಪ್ಯಾಂಟು ಜಾರಿ ನೆಲಕ್ಕೆ ಬಿದ್ದು ತನ್ನನ್ನು ಅಣಕಿಸುವಂತೆ ಕಾಣುತ್ತದೆ. ಉಟ್ಟ ಬಟ್ಟೆಯಲ್ಲೇ ಗೆಳೆಯನ ಮನೆಗೆ ಉಲ್ಲಾಸದಿಂದ ದೌಡಾಯಿಸಿದ ಲಿಂಕನ್, ಗಾಳಿಯಲ್ಲಿ ತೇಲುವ ಒಂದು ಆತ್ಮದಂತೆ ಕಾಣುತ್ತಾನೆ. ಪ್ರಜ್ಜುವನ್ನು ಖಾಸಗಿಯಾಗಿ ಮಾತಾನಾಡಲು ಇದೆ ಎಂದು ಹೇಳಿ ತೋಟದ ಮನೆಗೆ ಕರೆದುಕೊಂಡು ಹೋಗಿ ‘ತನಗೆ ಅರ್ಜೆಂಟಾಗಿ ಸುಶಾಂತ್ ಕುಡಿಯುತ್ತಿದ್ದ ಹಸಿರು ಬಣ್ಣದ ಬಾಟಲ್ ಬಿಯರು ಮತ್ತು ಅದೇ ಕಾಲೇಜಲ್ಲಿ ನೀನು ಸೇದುತ್ತಿದ್ದ ಸಿಗರೇಟು ತಂದುಕೊಡು, ನಾನು ಕ್ಯಾನ್ಸರ್ ಮೇಲೆ ಸೇಡು ತೀರಿಸಿಕೊಳ್ಳಬೇಕು’ ಎಂದು ಹೇಳುವಾಗ, ಲಿಂಕನ್ ಜೊತೆ ಕಳೆದ ಹಳೆ ನೆನಪುಗಳ ಬುತ್ತಿ ಭಾರವಾಗಿ, ಗಂಟಲು ಕಟ್ಟಿದಂತನ್ನಿಸಿ ಮಾತೇ ಹೊರಡದೇ ಮೌನವಾಗಿ ತಲೆಯಾಡಿಸಿದ ಪ್ರಜ್ಜು, ಹತ್ತು ನಿಮಿಷಗಳೊಳಗಾಗಿ ತನ್ನ ಸಂಗಡಿಗನೊಬ್ಬನನ್ನು ಬಾರಿಗೆ ಕಳುಹಿಸಿ ಬಿಯರ್, ಸಿಗರೇಟು ತರಿಸಿ ಲಿಂಕನ್ ಗೆ ಆಪ್ತಮಿತ್ರನಾಗುತ್ತಾನೆ. ಕುಡಿದು ಅಭ್ಯಾಸವಿಲ್ಲದ ಲಿಂಕನ್ ತಾನೀಗ ಕುಡಿಯುತ್ತಿರುವುದು ಅಮೃತವೆಂದು ನೆನೆದು ಗಟಗಟನೆ ಕುಡಿಯುತ್ತಿರುವಾಗ, ಹೆಗಲ ಮೇಲೆ ಕೂತ ಸಾವು ಆಸೆಯಿಂದ ಜೊಲ್ಲು ಸುರಿಸುತ್ತಿರುತ್ತದೆ. ತನ್ನ ಹಳೇ ಗೆಳತಿ ಪ್ರಿನ್ಸಿಯಾ ಬಗ್ಗೆ ಕೇಳುತ್ತಾ, ಆಕೆಗೆ ಮೊನ್ನೆ ತಾನೇ ಮದುವೆಯಾಯಿತೆಂದು ಪ್ರಜ್ಜು ಹೇಳುವಾಗ, ಅವಳನ್ನೊಮ್ಮೆ ಕಣ್ಣೆದುರು ಬಿಂಬಿಸಿ ಭಗ್ನಪ್ರೇಮಿಯಾಗುತ್ತಾನೆ. ಪ್ರಜ್ಜು ಫೋನಲ್ಲಿ ಅಡಗಿರುವ ಪೋಲಿಚಿತ್ರವನ್ನು ನೋಡುತ್ತಾ, ತಾನು ಇಷ್ಟುವರ್ಷ ಬದುಕೇ ಇರಲಿಲ್ಲವೆಂಬಂತೆ ಮೂಕವಿಸ್ಮಿತನಾಗಿ, ತನ್ನ ವಾಸ್ತವವನ್ನು ಮರೆತ್ತಿದ್ದ ಲಿಂಕನನ್ನು ಕಂಡು ಗೆಳೆಯ ಪ್ರಜ್ಜು ಕಣ್ಣಲ್ಲಿ ಕಣ್ಣೀರ ಝರಿಯೊಡೆಯುತ್ತದೆ.
ನಶೆಯೇರಿಸಿ ಹೊರಳಾಡುವ ನಾಲಗೆಯಲ್ಲಿ ತನ್ನ ಕಳೆದುಹೋದ ದಿನಗಳ ಬಗ್ಗೆ, ಹೆತ್ತವರ ಬಗ್ಗೆ, ಸಾವಿನ ಬಗ್ಗೆ, ಮದುವೆ-ಮುಂಜಿಯ ಬಗ್ಗೆ ಫಿಲಾಸಫಿಯನ್ನು ಮಾತಾಡಲು ಶುರುಮಾಡಿ, ಜೋರಾಗಿ ನಗುತ್ತಾ, ಕಷ್ಟಪಟ್ಟು ಗೆಳೆಯನನ್ನೂ ನಗಿಸುತ್ತಾನೆ. ಸಂಜೆಯ ಸೂರ್ಯನನ್ನು ಕಪ್ಪು ಮೋಡಗಳು ಬಂಧಿಸಿರುವುದನ್ನು ನೋಡುತ್ತಾ, ತನ್ನ ಬದುಕಲ್ಲಿ ಲ್ಯುಕೇಮಿಯಾನೂ ಇದೇ ರೀತಿ ಮಾಡಿತು ಅನ್ನುತ್ತಾನೆ. ಇನ್ನೇನು ಕತ್ತಲಾಗುವ ಮೊದಲು ಹೊರಡೋಣವೆಂದು ಸಿದ್ಧನಾಗಿ, ಪ್ರಜ್ಜುವಿನ ಭವಿಷ್ಯಕ್ಕೆ ಶುಭಹಾರೈಸುತ್ತಾ ‘ಗೆಳೆಯ ಮದುವೆ ಬೇಗ ಮಾಡಿಕೋ, ನಿಯಂತ್ರಣ ಮೀರದೆ ಎರಡು ಮಕ್ಕಳನ್ನು ಮಾತ್ರ ಹುಟ್ಟಿಸಿಬಿಡು’ ಎಂದು ಹಾಸ್ಯಚಟಾಕಿ ಹಾರಿಸಿ ಮತ್ತೆ ಮುಂದುವರೆಸುತ್ತಾ, ‘ ನಿನಗೆ ಹುಟ್ಟುವ ಗಂಡುಮಗುವಿಗೆ ಲಿಂಕನ್ ಹೆಸರನ್ನೇ ಇಟ್ಟುಬಿಡು’ ಎಂದು ಹೇಳುತ್ತಾ, ಮುಖ ಬಾಡಿಸಿಕೊಳ್ಳುತ್ತಾನೆ. ಗೆಳೆಯ ಪ್ರಜ್ಜು ದುಃಖ ತಡೆ ಹಿಡಿಯಲಾರದೇ ಗೊಳೋ ಎಂದು ಅಳುತ್ತಾ ಲಿಂಕನ್ ನನ್ನು ತಬ್ಬಿಕೊಳ್ಳುತ್ತಾನೆ.