News Kannada
Friday, July 01 2022

ನುಡಿಚಿತ್ರ

ಗ್ರಾಮಚೇತನ ಇದು ಹಳ್ಳಿ ಕಟ್ಟುವ ಕನಸು - 1 min read

Photo Credit :

ಗ್ರಾಮಚೇತನ ಇದು ಹಳ್ಳಿ ಕಟ್ಟುವ ಕನಸು

ಬಹುಶಃ ಹುಬ್ಬಳ್ಳಿ ಸಮೀಪದ ಸೂರಶೆಟ್ಟಿಕೊಪ್ಪ ಗ್ರಾಮಕ್ಕೆ ನೀವೊಮ್ಮೆ ಭೇಟಿ ನೀಡಿದರೆ ಅಲ್ಲಿನ “ಗ್ರಾಮಚೇತನ” ಖಂಡಿತಾ ನಿಮ್ಮ ಗಮನಸೆಳೆಯುತ್ತದೆ. ಹಳ್ಳಿಯಲ್ಲಿ ಹುಟ್ಟಿ  ಬದುಕು ನಿರ್ವಹಣೆ ಮಾಡಲಾಗದೆ ಪಟ್ಟಣ ಸೇರುವ ಮಂದಿಗೆ ಇದು ಅಧ್ಯಯನ ಕೇಂದ್ರವಾಗುತ್ತದೆ.


ಏಕೆಂದರೆ ಒಂದು ಕಾಲದಲ್ಲಿ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿನ ರೈತರು ಕೂಡ ಉದ್ಯೋಗ ಅರಸಿಕೊಂಡು ಪಟ್ಟಣಕ್ಕೆ ಗುಳೆ ಹೋಗುತ್ತಿದ್ದರು. ಆದರೆ  ಇದೀಗ ತಮ್ಮ ಗ್ರಾಮದಲ್ಲಿಯೇ ನೆಲೆ ನಿಂತು  ಬೆಂಗಾಡಾಗಿದ್ದ  ಭೂಮಿಯಲ್ಲಿಯೇ ಬೆಳೆ ಬೆಳೆದು ಬದುಕು ಹಸನು ಮಾಡಿಕೊಳ್ಳುವುದರೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಗ್ರಾಮಕ್ಕೆ ಅಧ್ಯಯನಕ್ಕೆಂದು ಬರುವವರಿಗೆ ಪಾಠ ಹೇಳುವಷ್ಟರ ಮಟ್ಟಿಗೆ ಅಭಿವೃದ್ಧಿ ಕಂಡಿದ್ದಾರೆ.

ಹಳ್ಳಿಯ ರೈತರು ಒಟ್ಟಾಗಿ ಕಲೆತು ಕಾರ್ಯನಿರ್ವಹಿಸಿದರೆ, ಆ ಹಳ್ಳಿಯ ಅಭಿವೃದ್ಧಿ ಮತ್ತು ರೈತರ ಜೀವನ ಮಟ್ಟ ಹೇಗೆ ಸುಧಾರಿಸಬಹುದು ಎಂಬುದಕ್ಕೆ ಸೂರಶೆಟ್ಟಿಕೊಪ್ಪ ಗ್ರಾಮ ಒಂದು ಒಳ್ಳೆಯ ಉದಾಹರಣೆಯಾಗುತ್ತದೆ. ಇಲ್ಲಿನ ರೈತರು ಗ್ರಾಮೀಣಾಭಿವೃದ್ಧಿ  ಸಂಸ್ಥೆಯೊಂದಿಗೆ ಸೇರಿ ಅಸ್ಥಿತ್ವಕ್ಕೆ ತಂದ “ಗ್ರಾಮಚೇತನ” ದೇಶ ವಿದೇಶಗಳ  ರೈತರಿಗೆ ಹಾಗೂ ತಜ್ಞರಿಗೆ ಅಧ್ಯಯನ ಕೇಂದ್ರವಾಗುವುದರೊಂದಿಗೆ ಸೂರಶೆಟ್ಟಿಕೊಪ್ಪ ಗ್ರಾಮದ ಹಿರಿಮೆಯನ್ನು  ಎಲ್ಲೆಡೆಗೆ ಪಸರಿಸುವಂತೆ ಮಾಡಿದೆ.

ಸೂರಶೆಟ್ಟಿಕೊಪ್ಪದ “ಗ್ರಾಮಚೇತನ” ಹುಬ್ಬಳ್ಳಿಯಿಂದ 22 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ 15 ಕಿ.ಮೀ. ದೂರದಲ್ಲಿ  ವರೂರು ಸಿಗುತ್ತದೆ. ಅಲ್ಲಿಂದ ಬಲಭಾಗಕ್ಕೆ 5 ಕಿ.ಮೀ. ಸಾಗಿದರೆ ಸಿಗುವುದೇ ಸೂರಶೆಟ್ಟಿಕೊಪ್ಪ ಗ್ರಾಮ. ಗ್ರಾಮವನ್ನು  ಪ್ರವೇಶಿಸುತ್ತಿದ್ದಂತೆಯೇ ಎಡಭಾಗದಲ್ಲಿ “ಗ್ರಾಮಚೇತನ” ಕೇಂದ್ರ ಸ್ವಾಗತಿಸುತ್ತದೆ.

ಹಾಗೆ ನೋಡಿದರೆ ಇವತ್ತು ಸೂರಶೆಟ್ಟಿಕೊಪ್ಪ ಗ್ರಾಮದ ಸುತ್ತಮುತ್ತಲಿರುವ ಎಲ್ಲಾ ಗ್ರಾಮಗಳು ಅಭಿವೃದ್ಧಿ ಕಂಡಿವೆ. ಇಲ್ಲಿನ ರೈತರು ಸ್ವಾವಲಂಬಿಯಾಗಿದ್ದಾರೆ. ಹಿಂದೆ ಮರ ಕಾಡು ಬೆಳೆಯದೆ ಬೆಂಗಾಡಾಗಿದ್ದ ಭೂಮಿ ಹಸಿರಿನಿಂದ ನಳನಳಿಸುತ್ತಿದೆ. ನೀರಿನ ಕ್ಷಾಮಕ್ಕೆ ವಿರಾಮ ಬಿದ್ದಿದೆ. ಕೆಲಸ ಹುಡುಕುತ್ತಾ ವಲಸೆ ಹೋಗುತ್ತಿದ್ದ ಮಂದಿ ಇದೀಗ ತಮ್ಮ ಜಮೀನಿನಲ್ಲಿಯೇ ವರ್ಷ ಪೂರ್ತಿ ವ್ಯವಸಾಯ ಮಾಡುವಂತಾಗಿದೆ. ಹಾಗಾದರೆ ಬೆಂಗಾಡಾಗಿದ್ದ ಭೂಮಿಯಲ್ಲಿ ಇದೆಲ್ಲಾ ಹೇಗಾಯಿತು ಎಂಬ ಕುತೂಹಲ ಕಾಡದಿರದು. ಇದನ್ನು ಹುಡುಕುತ್ತಾ ಹೋದರೆ ಹಳ್ಳಿಯ ಯಶೋಗಾಥೆಯ ಹಿಂದೆ ಬೈಪ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರ ಹಾಗೂ ಶ್ರಮವಿರುವುದು ಕಂಡು ಬರುತ್ತದೆ.

ಸುಸ್ಥಿರ ಅಭಿವೃದ್ಧಿಗೆ ಸ್ವಾವಲಂಬನೆಯ ಹಾದಿ ಎಂಬ ಯೋಜನೆಯನ್ನು ಮುಂದಿಟ್ಟುಕೊಂಡು 1996ರಲ್ಲಿ  ಹುಬ್ಬಳ್ಳಿ ತಾಲೂಕಿನ ಸುಮಾರು 22 ಹಳ್ಳಿಗಳನ್ನು  ಆಯ್ದುಕೊಂಡು ಗ್ರಾಮೀಣ ಪುನರುಜ್ಜೀವನಕ್ಕೆ  ಮುಂದಾದ ಬೈಪ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ  ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳಾದ ಭೂಮಿ, ನೀರು, ಗಿಡಮರ, ಜಾನುವಾರು ಹಾಗೂ ಮಾನವಶಕ್ತಿಗಳನ್ನು  ಸೂಕ್ತ ವಿಧಾನ ಹಾಗೂ  ತಂತ್ರಜ್ಞಾನ ಬಳಸಿ ಪುನಶ್ಚೇತನಗೊಳಿಸುವ ಮೂಲಕ ಹಳ್ಳಿ ಜನರ ಜೀವನ ಮಟ್ಟ ಸುಧಾರಿಸುವ ಕಾರ್ಯಕ್ಕೆ ಮುಂದಾಯಿತು. ಸಂಸ್ಥೆಯ ಹನ್ನೆರಡು ಮಂದಿ ಕಾರ್ಯಕರ್ತರು ಹಳ್ಳಿಗಳಲ್ಲಿ ವಾಸ್ತವ್ಯ ಹೂಡಿ  ಗ್ರಾಮಾಭಿವೃದ್ಧಿಯ ಕಾರ್ಯಕ್ಕೆ ಟೊಂಕ ಕಟ್ಟಿ ನಿಂತರು. ಮೊದಲ ಬಾರಿಗೆ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಅನುಮಾನದಿಂದ ನೋಡಲಾರಂಭಿಸಿದ ರೈತರು ಕ್ರಮೇಣ ಸಂಸ್ಥೆಯೊಂದಿಗೆ ಕೈಜೋಡಿಸಿ ತಮ್ಮ ಜಮೀನಿನಲ್ಲಿ ಸಂಸ್ಥೆಯ ಸಹಕಾರ ಪಡೆದು ಕೃಷಿಯನ್ನು ಅಭಿವೃದ್ಧಿಪಡಿಸಲು ಮುಂದಾದರು. ಅಷ್ಟೇ ಅಲ್ಲ ಮಹಿಳಾ, ಪುರುಷರಲ್ಲದೆ, ಮಿಶ್ರ ಸ್ವಸಹಾಯ ಸಂಘಗಳು ಅಸ್ತಿತ್ವಕ್ಕೆ ಬಂದವು. ಹಳ್ಳಿಗಳಲ್ಲಿರುವ ಸ್ವಸಹಾಯ ಸಂಘಗಳಿಂದ ಇಬ್ಬರು ಸದಸ್ಯರಂತೆ ಆರಿಸಿ “ಗ್ರಾಮ ವಿಕಾಸ ಸಮಿತಿ” ರಚಿಸಲಾಯಿತು.  

See also  ಆಕೆಯನ್ನು ಅಭಲೇ ಎನ್ನುವ ಮುನ್ನ ಒಮ್ಮೆ ಯೋಚಿಸಿ

ಈ ಗ್ರಾಮ ವಿಕಾಸ ಸಮಿತಿಯಿಂದ ಓರ್ವ ಪುರುಷ, ಓರ್ವ ಮಹಿಳಾ ಪ್ರತಿನಿಧಿಯಂತೆ ನೇಮಕಗೊಂಡು ಸರ್ವೋದಯ ಮಹಾಸಂಘವನ್ನು ಅಸ್ತಿತ್ವಕ್ಕೆ ತರಲಾಯಿತು. ಈ ಸರ್ವೋದಯ ಮಹಾಸಂಘ ಹಾಗೂ  ಬೈಪ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಅಸ್ತಿತ್ವಕ್ಕೆ ಬಂದಿರುವುದೇ ಸೂರಶೆಟ್ಟಿಕೊಪ್ಪದ ಗ್ರಾಮಚೇತನವಾಗಿದೆ. ಕೃಷಿ  ಗ್ರಾಮೀಣ ವಿಚಾರಗಳ ವಿಶಿಷ್ಟ ತರಬೇತಿ ಕೇಂದ್ರವಾಗಿರುವ “ಗ್ರಾಮಚೇತನ” ಇವತ್ತು ಸುತ್ತಮುತ್ತಲಿನ  ಸುಮರು 22ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಆದ ಪ್ರಗತಿಯ  ಸಂಕೇತ ಎಂದರೆ ಅತಿಶಯೋಕ್ತಿಯಲ್ಲ.

ಒಂದು ಎಕರೆ ಪ್ರದೇಶದಲ್ಲಿ ಸ್ಥಾಪನೆಗೊಂಡಿರುವ “ಗ್ರಾಮಚೇತನ” ನಿಜಕ್ಕೂ ಅದ್ಭುತವಾಗಿದೆ.  ಹೊಲ, ತೋಟಗಳ ಹಚ್ಚ ಹಸುರಿನ ಪ್ರಶಾಂತ ವಾತಾವರಣದಲ್ಲಿ ನೆಲೆ ನಿಂತಿರುವ ಈ ಕೇಂದ್ರ ವಿಶಿಷ್ಟವೂ, ವಿಭಿನ್ನವೂ ಆಗಿದೆ. ಇಲ್ಲಿನ ಕಟ್ಟಡಗಳು ಗ್ರಾಮೀಣ ಬದುಕಿನ ಸೊಗಡನ್ನು ಬಿಂಬಿಸುತ್ತವೆ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಕೇಂದ್ರಕ್ಕೆ ಭೇಟಿ ನೀಡುವವರು ಎತ್ತಿನ ಬಂಡಿ ಚಕ್ರದ ಗೇಟನ್ನು ಸರಿಸಿ (ಉರುಳಿಸಿ) ಒಳಕ್ಕೆ ಹೆಜ್ಜೆಯಿಟ್ಟರೆ ಹೊಸ ಅನುಭವವಾಗುತ್ತದೆ.

ಗ್ರಾಮೀಣ ಪರಿಕರಗಳಿಂದ ಪರಿಸರಕ್ಕೆ ಪೂರಕವಾಗಿ ನಿರ್ಮಿಸಲಾದ ಕುಟೀರದಂತಹ  ಕಟ್ಟಡಗಳು, ಒಂದು ಕಚೇರಿ ಕುಟೀರ, ಒಂದು ತರಬೇತಿ ಕೊಠಡಿ, ತಲಾ 25 ಹಾಸಿಗೆ ಸಾಮಥ್ರ್ಯದ  ಎರಡು ಪ್ರತ್ಯೇಕ ಮಲಗುವ ಹಾಲ್ ಗಳು,  ಊಟದ ಮನೆ, ಅತಿಥಿ ಗೃಹ ಹಾಗೂ ರೈತ ಮನೆಗಳು. ಇವುಗಳ ನಡುವೆ ಹುಲ್ಲು ಹಾಸುಗಳು, ಹೂವಿನ ತೋಟಗಳು, ಹಣ್ಣಿನ ಗಿಡಗಳು ಗಮನಸೆಳೆಯುತ್ತವೆ. ಗ್ರಾಮ ಚೇತನದಲ್ಲಿ ಒಂದಲ್ಲ ಒಂದು ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ದೇಶ ವಿದೇಶಗಳಿಂದ ತಜ್ಞರು ಬರುತ್ತಲೇ ಇರುತ್ತಾರೆ. ರೈತರಿಗೆ ಹಾಗೂ ಉದ್ಯಮ ಸ್ಥಾಪಿಸುವವರಿಗೆ ಇಲ್ಲಿನ ರೈತ ಮನೆಯಲ್ಲಿಯೇ ತರಬೇತಿ. ಪಾಠ ನಡೆಯುತ್ತದೆ.  ಈ ಸಂದರ್ಭ ಎಲ್ಸಿಡಿ ಪ್ರೊಜೆಕ್ಟರ್  ಮೂಲಕ ಮಾಹಿತಿ ನೀಡುವುದಲ್ಲದೆ, ಕ್ಷೇತ್ರ ಭೇಟಿಗೂ ಅವಕಾಶವಿದ್ದು, ಕೇಳಿದ್ದನ್ನು ರೈತರ ಹೊಲಕ್ಕೆ ಹೋಗಿ ಕಣ್ಣಾರೆ ನೋಡಬಹುದು. ರೈತರ ಅನುಭವವನ್ನು ಕೇಳಿ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ, ಇಲ್ಲಿನ ಒಂದು ಕೊಠಡಿಯಲ್ಲಿ ಗ್ರಾಮೀಣ ಉತ್ಪನ್ನಗಳನ್ನು ಇಡಲಾಗಿದ್ದು, ಅದನ್ನು ಖರೀದಿಸಬಹುದಾಗಿದೆ. ಒಟ್ಟಾರೆ ಹೇಳಬೇಕೆಂದರೆ ಗ್ರಾಮಚೇತನ ಬರೀ ತರಬೇತಿ ಕೇಂದ್ರವಲ್ಲ ಹಳ್ಳಿಗಳನ್ನು ಕಟ್ಟುವ ಕನಸು. ಎರಡು ಸಾವಿರಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳು ಸೇರಿ ಇದನ್ನು ಕಟ್ಟಿವೆ. ಹಾಗೆಂದು ಇಲ್ಲಿ ಬರೆಯಲಾದ ನಾಮಫಲಕದ ಮೇಲಿನ ಬರಹ ಇಲ್ಲಿಗೆ ಭೇಟಿ ನೀಡಿದವರನ್ನು ಸದಾ ನೆನಪಿಸುವಂತೆ ಮಾಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು