News Kannada
Thursday, September 29 2022

ನುಡಿಚಿತ್ರ

ಕರಿಮೆಣಸು ಬೆಳೆಗಾರನ ಕಂಗೆಡಿಸಿದ ಸೊರಗು ರೋಗ - 1 min read

Photo Credit :

ಕರಿಮೆಣಸು ಬೆಳೆಗಾರನ ಕಂಗೆಡಿಸಿದ ಸೊರಗು ರೋಗ

ಕಳೆದ ಕೆಲ ವರ್ಷಗಳಿಂದ ಕರಿಮೆಣಸಿಗೆ ಉತ್ತಮ ದರ ದೊರೆಯುತ್ತಿದೆ. ಹೀಗಾಗಿ ಕರಿಮೆಣಸು ಬೆಳೆಯುವ ಬೆಳೆಗಾರನ ಮೊಗದಲ್ಲಿ ಮಂದಹಾಸ ಮಿನುಗುತ್ತಿದೆ. ಬೇರೆ ಕೃಷಿಗಳಿಗೆ ಹೋಲಿಸಿದರೆ ಈ ಬೆಳೆಯಲ್ಲಿ ಖರ್ಚು ಕಡಿಮೆ ಲಾಭ ಜಾಸ್ತಿ.


ಮಲೆನಾಡು ಪ್ರದೇಶದಲ್ಲಿ ಕಾಫಿ ಮತ್ತು ಅಡಿಕೆ ತೋಟದ ನಡುವೆ ಮಿಶ್ರಬೆಳೆಯಾಗಿ ಬೆಳೆಯುವುದರಿಂದ ಅದರಲ್ಲಿ ಎಷ್ಟೇ ಆದಾಯ ಬಂದರೂ ಅದು ಲಾಭವೇ.. ಹಾಗೆ ನೋಡಿದರೆ ಕರಿಮೆಣಸು ಎಲ್ಲ ಸಮಯದಲ್ಲೂ ಬೆಳೆಗಾರನಿಗೆ ಲಾಭ ತಂದುಕೊಟ್ಟಿದೆ ಎನ್ನಲಾಗುವುದಿಲ್ಲ. ಇಲ್ಲೂ ಏರಿಳಿತವಾಗಿದೆ. ಆದರೆ ನಷ್ಟವಾಯಿತು ಎಂದು ಬೆಳೆಗಾರ ಕಂಗಾಲಾಗುವಂತೆ ಮಾಡಿಲ್ಲ. ಕಾರಣ ಕರಿಮೆಣಸನ್ನೇ ಪ್ರತ್ಯೇಕವಾಗಿ ಯಾರೂ ಬೆಳೆಯುತ್ತಿಲ್ಲ. ಅದನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಿರುವುದರಿಂದ ಅದರ ಲಾಭ ನಷ್ಟದ ಲೆಕ್ಕಚಾರಗಳು ಬೆಳೆಗಾರನ ತಲೆಕೆಡಿಸುವಂತೆ ಮಾಡುವುದಿಲ್ಲ.

ವಾಣಿಜ್ಯ ಬೆಳೆಗಳಿಂದ ಪ್ರತಿ ವರ್ಷವೂ ಏಕರೀತಿಯ ಇಳುವರಿ ಪಡೆಯುವುದು ಅಸಾಧ್ಯವೇ. ಆದರೂ ಒಂದು ವರ್ಷ ಕಡಿಮೆಯಾದರೂ ಮತ್ತೊಂದು ವರ್ಷ ಇಳುವರಿ ಸಿಗುತ್ತೆ ಎಂಬ ಆಶಾಭಾವನೆ ಬೆಳೆಗಾರರಿಗೆ ಇದ್ದೇ ಇರುತ್ತದೆ. ಇದೀಗ ಕರಿಮೆಣಸು ಕೊಯ್ಲಿಗೆ ಬಂದಿದ್ದು ಎಲ್ಲೆಡೆ ಕರಿಮೆಣಸು ಕೊಯ್ಲು ಮಾಡೋದು, ಒಣಗಿಸೋದು, ಮಾರಾಟ ಮಾಡೋದು ಮುಂತಾದ ಚಟುವಟಿಕೆಗಳು ಮಲೆನಾಡಿನಲ್ಲಿ ಕಂಡು ಬರುತ್ತದೆ. ಇದರ ನಡುವೆ ಫಸಲು ಇರುವ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತಿರುವುದು ಕೆಲವು ತೋಟಗಳಲ್ಲಿ ಕಂಡು ಬರುತ್ತಿದೆ. ಇನ್ನು ಕೆಲವೆಡೆ ಬಳ್ಳಿ ಒಣಗಿ ಫಸಲು ಉದುರುತ್ತಿದೆ.

ಕಳೆದ ಕೆಲವು ದಶಕಗಳಿಂದ ಕರಿಮೆಣಸು ಬೆಳೆಗಾರ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾನೆ. ಫಸಲಿಗೆ ಬಂದು ಇನ್ನೇನು ಉತ್ತಮ ಇಳುವರಿ ಪಡೆಯಬಹುದು ಎಂದು ಯೋಚಿಸುವಾಗಲೇ ಕರಿಮೆಣಸು ಬಳ್ಳಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬಳ್ಳಿ ಬೋರಲಾಗಿ ಸತ್ತು ಹೋಗುತ್ತದೆ. ಇದೊಂದು ಕರಿಮೆಣಸಿಗೆ ತಗಲುವ ರೋಗವಾಗಿದ್ದು, ಇದನ್ನು  ಸೊರಗು ರೋಗ ಎಂದು ಕರೆಯಲಾಗುತ್ತದೆ. ಈ ರೋಗದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಬಹಳಷ್ಟು ಬೆಳೆಗಾರರದ್ದಾಗಿದೆ.

ಹಿಂದಿನ ಕಾಲದಿಂದಲೂ ಕಾಫಿ, ಅಡಿಕೆ ತೋಟದ ನಡುವೆ ಮಿಶ್ರ ಬೆಳೆಯಾಗಿ ಕರಿಮೆಣಸನ್ನು ಬೆಳೆಯುತ್ತಾ ಬಂದಿದ್ದಾರೆ.  ಇದಕ್ಕೆ ಯಾವುದೇ ರೋಗಗಳು ತಗುಲದೆ ಇದ್ದುದರಿಂದ ಕರಿಮೆಣಸನ್ನು ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಬಹುದು ಎಂಬುವುದು ಬೆಳೆಗಾರನ ಆಶಾಭಾವನೆಯಾಗಿತ್ತು. ಅವತ್ತಿನ ದಿನಗಳಲ್ಲಿ ಮರವೊಂದರ ಬುಡಕ್ಕೆ ಬಳ್ಳಿನೆಟ್ಟು ಒಂದಿಷ್ಟು ಗೊಬ್ಬರ ಹಾಕಿದ್ದೇ ಆದರೆ ಶೀಘ್ರವೇ ಬೆಳೆದು ಫಸಲು ನೀಡುತ್ತಿತ್ತು. ಇದಕ್ಕೆ ರೋಗ ತಗಲುವ ಭಯವೂ ಇರಲಿಲ್ಲ. ಆದರೆ ಕಳೆದ ಮೂರು ದಶಕಗಳಲ್ಲಿ ಎಲ್ಲವೂ ಬದಲಾಗಿದೆ ಎಂದರೆ ತಪ್ಪಾಗಲಾರದು.

ಈಗ ಕರಿಮೆಣಸು ಬೆಳೆಗಾರನಿಗೆ ಯಾವ ಸಂದರ್ಭದಲ್ಲೂ ಬೇಕಾದರೂ ಕೈಕೊಡಬಹುದು. ಏಕೆಂದರೆ ಅದಕ್ಕೆ ರೋಗಗಳು ಶೀಘ್ರಗತಿಯಲ್ಲಿ ಹರಡುತ್ತಿವೆ. ಬಳ್ಳಿಯನ್ನು ನೆಟ್ಟು ಗೊಬ್ಬರ ಹಾಕಿ ಬೆಳೆಸಿದರೂ ಫಸಲು ಬರುವ ವೇಳೆಗೆ ಅಥವಾ ಫಸಲು ಬಂದ ಬಳಿಕ ರೋಗಕ್ಕೆ ತುತ್ತಾಗಿ ನಾಶವಾಗಿಬಿಡುತ್ತದೆ.

See also  ಖುಷಿಯನ್ನು ಕಳೆದುಕೊಂಡು ಬದಲಾಗಬೇಕೇ???

ಇವತ್ತು ಕರಿಮೆಣಸಿಗೆ ಕಂಠಕವಾಗಿರುವ ಸೊರಗು ರೋಗ ಮೊದಲಿಗೆ ಕೇರಳದ ವೈನಾಡಿನಲ್ಲಿ  1920ರಲ್ಲಿ ಕಾಣಿಸಿಕೊಂಡಿತು ಎನ್ನಲಾಗಿದೆ. ಆದರೆ ಅದು ಕರ್ನಾಟಕದಲ್ಲಿ ನಿಧಾನಗತಿಯಲ್ಲಿಯೇ ಹರಡಿದೆ ಎನ್ನಬಹುದು. ಮೊದಲಿಗೆ ಅಲ್ಲೊಂದು ಇಲ್ಲೊಂದು ಬಳ್ಳಿಗಳು ಸಾವನ್ನಪ್ಪುತ್ತಿದ್ದಾಗ ಬೆಳೆಗಾರರು ಕೂಡ ತಲೆಕೆಡಿಸಿಕೊಂಡಿರಲಿಲ್ಲ. ಆದರೆ 1991ರ ನಂತರ ಕರ್ನಾಟಕದಲ್ಲಿ ಇದು ತೀವ್ರಗತಿಯಲ್ಲಿ ಹರಡಿದ್ದು, ಇಲ್ಲಿಯವರೆಗೂ ರೋಗವನ್ನು ಸಮರ್ಪಕವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಹಾಗಾಗಿ ಸೊರಗು ರೋಗ ಕರಿಮೆಣಸನ್ನು ಬಲಿತೆಗೆದುಕೊಳ್ಳುತ್ತಲೇ ಇದೆ.

ಕರಿಮೆಣಸು ಬಳ್ಳಿಗೆ ಸೊರಗು ರೋಗ ತಗುಲಿರುವುದನ್ನು ನಾವು ಸುಲಭವಾಗಿ ಗುರುತಿಸಬಹುದಾಗಿದೆ. ರೋಗಕ್ಕೆ ತುತ್ತಾದ ಬಳ್ಳಿಯ ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಾ ಬಳ್ಳಿ ಒಣಗಿ ಸಾಯುತ್ತವೆ. ಇನ್ನು  ರೋಗ ಬರಲು ಕಾರಣ ಮತ್ತು ಹೇಗೆ ಬರುತ್ತದೆ? ಎಂಬುವುದರ ಬಗ್ಗೆ ಹೇಳುವುದಾದರೆ ಈ ರೋಗ ಫೈಟೋಫೋರಾ ಕ್ಯಾಪ್ಸಿಸಿ ಎಂಬ ಶಿಲೀಂದ್ರದಿಂದ ಬರುತ್ತದೆ. ಈ ಶಿಲೀಂದ್ರವು ಮೊದಲು ಬಳ್ಳಿಯ ಬೇರಿಗೆ ಆಕ್ರಮಣ ಮಾಡುತ್ತದೆ. ಇದರಿಂದ ನೀರು, ಆಹಾರಗಳ ಚಲನೆಗೆ ಅಡ್ಡಿಯಾಗಿ ಬೇರು ಸಾಯುತ್ತದೆ. ನಂತರ ಬಳ್ಳಿ ಎಲೆಗಳನ್ನು ಆಕ್ರಮಿಸುತ್ತದೆ. ಮುಖ್ಯವಾಗಿ ಸೊರಗು ರೋಗವು ಮಳೆಗಾಲದಲ್ಲಿ ಹರಡುತ್ತದೆ. ಏಕೆಂದರೆ ಮಳೆಗಾಲದಲ್ಲಿ ಮಳೆಹನಿ ಬಿದ್ದು ಚಿಮ್ಮುವಾಗ ಬಳ್ಳಿ ಹಾಗೂ ಎಲೆಗಳಲ್ಲಿರುವ ಶಿಲೀಂದ್ರದ ಬೀಜಾಣುಗಳು  ಸುಲಭವಾಗಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತವೆ. ಇನ್ನು ಮೆಲೋಯ್ಡೋಗೈನ್ ಇಂಕಾಗ್ನಿಟ ಎಂಬ ಜಂತು ಹುಳದಿಂದಲೂ ಸೊರಗು ರೋಗ ಹರಡುತ್ತದೆ ಎಂದು ಹೇಳಲಾಗುತ್ತಿದೆ.

ಸೊರಗುರೋಗದಲ್ಲಿ ಎರಡು ವಿಧವಿದೆ. ಒಂದು ಶೀಘ್ರಗತಿಯಲ್ಲಿ ಹರಡಿದರೆ ಮತ್ತೊಂದು ನಿಧಾನಗತಿಯ ಸೊರಗುರೋಗ. ನಿಧಾನಗತಿಯ ಸೊರಗುರೋಗಕ್ಕೆ ತುತ್ತಾದ ಬಳ್ಳಿಯ ಶಾಖೆ ಬೇರುಗಳಿಗೆ ಶಿಲೀಂದ್ರಗಳು ದಾಳಿ ಮಾಡುವುದರಿಂದ ಬೇರು ಸಾಯುವುದರಿಂದ ನೀರು, ಗೊಬ್ಬರ ಬಳ್ಳಿಗೆ ದೊರೆಯದೆ  ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಬಳಿಕ ಉದುರುತ್ತದೆ. ಆದರೆ ಕೆಲವೊಮ್ಮೆ ಮಳೆಗಾಲದಲ್ಲಿ ಮತ್ತೆ ಚೇತರಿಸಿದಂತೆ ಕಂಡು ಬಂದರೂ ಬಳಿಕ ಅದು ಸಾಯುತ್ತದೆ.

ಈಗಾಗಲೇ ಸೊರಗುರೋಗವನ್ನು ತಡೆಗಟ್ಟುವಲ್ಲಿ ಹಲವು ಸಂಶೋಧನೆ ನಡೆದಿದ್ದು, ಕೆಲವು ಸುಧಾರಿತ ತಳಿಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ. ಕಲ್ಲಿಕೋಟೆಯ ನ್ಯಾಷನಲ್ ರೀಸರ್ಚ್ ಸೆಂಟರ್ ಫಾರ್ ಸ್ಪೈಷಸ್ ಜೈವಿಕ ನಿಯಂತ್ರಣದಿಂದ ಟ್ರೈಕೋಡಮರ್್ ಹಾಗೂ ಗ್ಲಿಯೋಕ್ಲಾಡಿಯಂನ ಕೆಲವು ಪ್ರಭೇದಗಳನ್ನು ಉಪಯೋಗಿಸಿ ಸಂಶೋಧನೆ ನಡೆಸಿ ಒಂದಷ್ಟು ಯಶಸ್ಸು ಕಂಡಿದೆ. ಅವರ ಸಂಶೋಧನೆಯ ಪ್ರಕಾರ ರೋಗವನ್ನು ಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲವಾದರೂ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ರೋಗವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದೆ.

ತೋಟದೊಳಗೆ ಬಸಿಲು ಕಾಲುವೆಯನ್ನು ತೋಡುವುದರ ಮೂಲಕ ಮಣ್ಣಿನ ತೇವಾಂಶ ಕಡಿಮೆಗೊಳಿಸಿ, ಭೂಮಿಯ ಮೇಲೆ ಕೊಳೆತ ಎಲೆ, ಹುಲ್ಲಿನ ಕಡ್ಡಿಯ ಪದರವಿರುವಂತೆ ಮಾಡಬೇಕು. ಬಳ್ಳಿಯ ಬುಡದಿಂದ ಚಿಗುರಿ ನೆಲದಲ್ಲಿ ಹರಡುವ ಮರಿ ಬಳ್ಳಿಗಳನ್ನು ಕತ್ತರಿಸಿ ಅಥವಾ ಮೇಲೆ ಹಬ್ಬುವಂತೆ ಮಾಡುವುದರಿಂದ ಬಳ್ಳಿಯಿಂದ ಬಳ್ಳಿಗೆ ಹರಡುವ ರೋಗವನ್ನು ತಡೆಗಟ್ಟಬಹುದಾಗಿದೆ.

See also  ಚುಂಚನಕಟ್ಟೆ ಜಾತ್ರೆಯಲ್ಲಿ ಎತ್ತುಗಳದ್ದೇ ದರ್ಬಾರ್!  

ತೋಟದಲ್ಲಿ ಬಿಸಿಲು ಹಾಯಲು ಸೂಕ್ತವಾಗುವಂತೆ ಮರದ ನೆರಳನ್ನು ತೆಗೆಯಬೇಕು. ರೋಗರಹಿತ ಪಾತಿಯಿಂದಲೇ ಆಯ್ದು ಆರೋಗ್ಯವಂತ ಬಳ್ಳಿಯ ತುಂಡುಗಳನ್ನು ಸಸ್ಯಾಭಿವೃದ್ಧಿಗೆ ಉಪಯೋಗಿಸಬೇಕು. ತೋಟದಲ್ಲಿ ರೋಗವಿದೆ ಎಂದಾದಲ್ಲಿ ನೆಡುವ ಜಾಗವನ್ನು ಮೆಟಲಕ್ಸಿಲ್ ಎಂಬ ಶಿಲೀಂದ್ರ ನಾಶಕದ ಶೇ. 0.3 ದ್ರಾವಣದಿಂದ ತೋಯಿಸಬೇಕು. ಮಳೆಗಾಲವು ಪ್ರಾರಂಭವಾಗುವ ಮುನ್ನ ಮೇ, ಜೂನ್ ತಿಂಗಳಲ್ಲಿ ಶೇಕಡ ಒಂದರ ಬೋರ್ಡ್ ಮಿಶ್ರಣವನ್ನು ಬಳ್ಳಿಗೆ ಮೊದಲು ಸಿಂಪಡಿಸಬೇಕು. ಈ ರೀತಿಯ ಕೆಲವು ಕ್ರಮಗಳನ್ನು ಮಾಡುವುದರಿಂದ ರೋಗವನ್ನು ಸ್ವಲ್ಪ ಮಟ್ಟಿಗೆ ಹತೋಟಿಗೆ ತರಬಹುದಾಗಿದೆ.

ದೂರದ ಥಾಯ್ಲೆಂಡ್ನಲ್ಲಿ ಹೆಕ್ಟೇರಿಗೆ 4200 ಕಿ.ಗ್ರಾಂ.ನಷ್ಟು ಇಳುವರಿ ದೊರೆತರೆ,  ನಮ್ಮ ದೇಶದಲ್ಲಿ ಕೇವಲ 240 ಕಿ.ಗ್ರಾಂ.ನಷ್ಟು ಮಾತ್ರ ಇಳುವರಿ ಪಡೆಯುತ್ತಿದ್ದೇವೆ ಎಂದರೆ ಅಚ್ಚರಿಯಾಗಬಹುದು. ಆಗಿಂದಾಗ್ಗೆ ತಗುಲುವ ರೋಗಗಳಿಂದ ಬಳ್ಳಿಯನ್ನು ರಕ್ಷಿಸಿಕೊಂಡು ಬೆಳೆಯುವುದು ಕೂಡ ಬೆಳೆಗಾರರಿಗೆ ಸವಾಲ್ ಆಗಿ ಪರಿಣಮಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು