News Kannada
Tuesday, October 04 2022

ನುಡಿಚಿತ್ರ

ಬನ್ನಿ ‘ಮಾಂದಲಪಟ್ಟಿ’ಗೆ… ನಿಸರ್ಗದ ಸ್ವರ್ಗಕೆ… - 1 min read

Photo Credit :

ಬನ್ನಿ  'ಮಾಂದಲಪಟ್ಟಿ'ಗೆ... ನಿಸರ್ಗದ ಸ್ವರ್ಗಕೆ...

ಗಾಳಿಪಟ ಸಿನಿಮಾ ನೋಡಿದವರಿಗೆ  “ಮುಗಿಲುಪೇಟೆ”ಯ ನಿಸರ್ಗ ಸೌಂದರ್ಯ ಇನ್ನೂ ಕಣ್ಮುಂದೆ ಹಾಗೆಯೇ ಉಳಿದಿರಬಹುದು. ಅಷ್ಟೇ ಅಲ್ಲ ಇದ್ಯಾವುದಪ್ಪಾ ನಾವು ಕೇಳರಿಯದ “ಮುಗಿಲುಪೇಟೆ” ಎಂದು ತಲೆಕೆಡಿಸಿಕೊಂಡಿರಲೂಬಹುದು.  ಆದರೆ ನೀವು ಸಿನಿಮಾದಲ್ಲಿ ನೋಡಿದ ಮುಗಿಲುಪೇಟೆಯನ್ನು ಹತ್ತಿರದಿಂದ ನೋಡಿ ಕುಣಿದು ಕುಪ್ಪಳಿಸಬೇಕಾದರೆ ಕೊಡಗಿನತ್ತ ಹೆಜ್ಜೆಹಾಕಲೇ ಬೇಕು.
ಸೌಂದರ್ಯದ ನೆಲೆವೀಡು: ಕೊಡಗಿಗೆ ಆಗಮಿಸಿ ಇಲ್ಲಿ “ಮುಗಿಲುಪೇಟೆ” ಎಲ್ಲಿ ಬರುತ್ತೆ ಸ್ವಾಮಿ ಅಂತ ಯಾರನ್ನಾದರೂ ಕೇಳಿಬಿಟ್ಟೀರಾ? ಜೋಕೆ. ಏಕೆಂದರೆ ಅದು ಸಿನಿಮಾದಲ್ಲಿಟ್ಟ ಹೆಸರಷ್ಟೆ. ಕೊಡಗಿನವರು ಈ ಸುಂದರ ನಿಸರ್ಗ ತಾಣವನ್ನು “ಮಾಂದಲಪಟ್ಟಿ” ಎನ್ನುತ್ತಾರೆ. ಇಲ್ಲಿನವರಿಗೆ ಅದರಲ್ಲೇನು ವಿಶೇಷ ಕಾಣಿಸುವುದಿಲ್ಲ. ಎಲ್ಲಾ ಬೆಟ್ಟಗಳಂತೆ ಅದು ಕೂಡಾ. ಆದರೆ ಸದಾ ಪಟ್ಟಣದ ಜಂಜಾಟದಲ್ಲಿ ತೊಳಲಾಡುವವರು  ಇಲ್ಲಿಗೆ ಬಂದರೆ ಇಲ್ಲಿನ  ನಿಸರ್ಗ ಸಿರಿ ಎಲ್ಲಾ ಒತ್ತಡಗಳನ್ನು ಮರೆಸಿ ಮಾನಸಿಕ ನೆಮ್ಮದಿ ನೀಡುವುದಂತು ಖಂಡಿತಾ.

ನಿಸರ್ಗ ಸೌಂದರ್ಯದ ನೆಲೆವೀಡಾದ “ಮಾಂದಲಪಟ್ಟಿ” ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದ್ದು, ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ. ಅರಣ್ಯ ಇಲಾಖೆಯ ಅಧೀನದಲ್ಲಿರುವುದರಿಂದ ತೆರಳುವವರು ಅನುಮತಿ ಪಡೆಯುವುದು ಅಗತ್ಯ. ಅಲ್ಲಿಗೆ ತೆರಳಬೇಕಾದರೆ ಮಡಿಕೇರಿಯಿಂದ ಅಬ್ಬಿಫಾಲ್ಸ್ ರಸ್ತೆಯಲ್ಲಿ  ಹಾಗೂ ಮಡಿಕೇರಿಯಿಂದ ಸೋಮವಾರಪೇಟೆಗೆ ತೆರಳುವ ರಸ್ತೆಯಲ್ಲಿ ಸಾಗಿದರೆ ಎಂಟು ಕಿ.ಮೀ. ದೂರದಲ್ಲಿ ಮಕ್ಕಂದೂರು ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಎಡಕ್ಕಿರುವ ರಸ್ತೆಯಲ್ಲಿ ಸಾಗಿದರೆ ಮಾಂದಲಪಟ್ಟಿ ತಲುಪಬಹುದು. ಇನ್ನು ಒಂದು ವೇಳೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದವರು ಅಲ್ಲಿಂದ ಅರಣ್ಯದ ಮೂಲಕ ನಡೆದುಕೊಂಡು ಹೋಗಬಹುದು.

ರಸ್ತೆಯಲ್ಲಿ ಸಾಗೋದೇ ಥ್ರಿಲ್: ಮಡಿಕೇರಿಯಿಂದ ಅಬ್ಬಿಪಾಲ್ಸ್ನ ಕಡಿದಾದ ರಸ್ತೆಯಲ್ಲಿ ಸಾಗುವುದೇ ಒಂದು ರೀತಿಯ ಥ್ರಿಲ್. ಇನ್ನು ಸುತ್ತ ಮುತ್ತ ಕಾಣಸಿಗುವ ಕಾಫಿ, ಏಲಕ್ಕಿ ತೋಟಗಳು… ತೊರೆ ಝರಿಗಳು… ಒಂದನ್ನೊಂದು ಮುತ್ತಿಕ್ಕುತ್ತಾ ಸಾಲಾಗಿ ನಿಂತ ಪಶ್ಚಿಮಘಟ್ಟ ಶ್ರೇಣಿಗಳು… ಅವುಗಳ ನಡುವಿನ ಕಂದಕದಲ್ಲಿ ಬೆಳೆದು ನಿಂತ ಗಿಡಮರಗಳು… ನೋಡುತ್ತಾ ಹೋದಂತೆ ಪ್ರಕೃತಿಯ ವಿಹಂಗಮ ನೋಟ ಕಣ್ಣಿಗೆ ರಾಚುತ್ತಿರುತ್ತದೆ.
ಮೊದಲೆಲ್ಲಾ ಮಾಂದಲಪಟ್ಟಿಗೆ ದನಗಳನ್ನು ಮೇಯಿಸಲು ಅಥವಾ ಶಿಕಾರಿಗೆ ಗ್ರಾಮಸ್ಥರು ಹೋಗುತ್ತಿದ್ದರು. ಅಲ್ಲಿಗೆ ಯಾವುದೇ ರಸ್ತೆಗಳಿರಲಿಲ್ಲ. ಸಾಹಸಿಗಳು ಮಾತ್ರ ಗುಡ್ಡವನ್ನೇರುತ್ತಾ ಬೆಟ್ಟದ ತುತ್ತ ತುದಿಯೇರಿ ಅಲ್ಲಿಂದ ಕಾಣಸಿಗುವ ಸೌಂದರ್ಯವನ್ನು ನೋಡಿ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಮಾಂದಲಪಟ್ಟಿ ಕೂಡ ಜಿಲ್ಲೆಯಲ್ಲಿರುವ ಇತರೆ ಪ್ರವಾಸಿ ತಾಣಗಳಂತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಹಾಗಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಒಂದಷ್ಟು ದೂರ ಅಂದರೆ ಅರಣ್ಯ ಇಲಾಖೆ ವಸತಿ ಗೃಹದ ತನಕ ಡಾಂಬರು ರಸ್ತೆ ಮಾಡಲಾಗಿದೆ. ಆ ನಂತರ ಮಣ್ಣು ರಸ್ತೆಯಲ್ಲಿ ಸಾಗುವುದು ಅನಿವಾರ್ಯ.

ಸದಾ ನೀರವಮೌನ: ಸಮುದ್ರ ಮಟ್ಟದಿಂದ ಸುಮಾರು 4000 ಅಡಿ ಎತ್ತರದಲ್ಲಿರುವ ಮಾಂದಲಪಟ್ಟಿಗೆ  ಆಗೊಮ್ಮೆ ಈಗೊಮ್ಮೆ ಪ್ರವಾಸಿಗರು ಬರುತ್ತಾರೆಯಾದರೂ ವರ್ಷದ ಹೆಚ್ಚಿನ ದಿನಗಳು ಅಲ್ಲಿ ನೀರವ ಮೌನ ನೆಲೆಸಿರುತ್ತದೆ. ಕೊಡವ ಭಾಷೆಯಲ್ಲಿ “ಮಾಂದಲ್ ಪಟ್ಟ” ಎಂದರೆ ಎತ್ತರದ ಜಾಗ ಎಂದರ್ಥ. ಬಹುಶ: ಆಡು ಭಾಷೆಯಲ್ಲಿ ಅದು ಮಾಂದಲಪಟ್ಟಿ ಆಗಿರಬಹುದೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
ಮಾಂದಲಪಟ್ಟಿ ಪ್ರವಾಸಿಗರಿಗೆ ಸ್ವರ್ಗ ತಾಣ ಎಂದರೆ ತಪ್ಪಾಗಲಾರದು. ಏಕೆಂದರೆ ಏರು ರಸ್ತೆಯಲ್ಲಿ ಹರಸಾಹಸ ಮಾಡಿ ಬೆಟ್ಟವೇರಬೇಕು. ಇಲ್ಲಿ ಫೋರ್ವೀಲರ್ಗಳು ಮಾತ್ರ ಸಲೀಸಾಗಿ ಮುಂದೆ ಸಾಗುತ್ತವೆ.  ಉಳಿದಂತೆ ಕಾರುಗಳು ಇಲ್ಲಿನ ಮಣ್ಣು ರಸ್ತೆಯಲ್ಲಿ ಸಾಗುವುದು ಅಷ್ಟರಲ್ಲಿಯೇ ಇದೆ. ಸ್ಥಳೀಯರು ಈ ರಸ್ತೆಯಲ್ಲಿ ಸರ್ಕಸ್ ಮಾಡುತ್ತಾ ಜೀಪು ಚಾಲಿಸಿ ಒಂದು ರೀತಿಯ ಮಜಾ ಪಡೆಯುತ್ತಾರೆ.  ಹೆಚ್ಚಿನವರು  “ನಡೆದು ನೋಡು ಕೊಡಗಿನ ಬೆಡಗಾ” ಎಂಬ ಕವಿ ವಾಣಿಯಂತೆ ನಡೆದೇ ಬೆಟ್ಟದ ಮೇಲೆ ಸಾಗುತ್ತಾರೆ. ಕಲ್ಲು, ಮುಳ್ಳನ್ನು ಮೆಟ್ಟುತ್ತಾ ಏರು ರಸ್ತೆಯಲ್ಲಿ ಸಾಗುವಾಗ ಆಯಾಸವಾಗುವುದು ಸಹಜ ಆದರೆ ಬೆಟ್ಟದ ತುತ್ತ ತುದಿ (ವ್ಯೂಪಾಯಿಂಟ್) ತಲುಪಿದಾಗ  ಕೈಗೆ ಎಟುಕುತ್ತದೆಯೇನೋ ಎಂಬಂತೆ ಭಾಸವಾಗುವ ಮುಗಿಲು… ಪುಷ್ಪಗಿರಿ ಹಾಗೂ ಕೋಟೆಬೆಟ್ಟದ ಸುತ್ತಲೂ ಹರಡಿ ನಿಂತ ಪರ್ವತ ಶ್ರೇಣಿಗಳು… ಅಲೆಅಲೆಯಾಗಿ ತೇಲಿ ಬರುವ ಮಂಜು…  ಸುಂದರ ನಿಸರ್ಗ ಸೌಂದರ್ಯ ನಿಮ್ಮ ಆಯಾಸವನ್ನೆಲ್ಲಾ ಮಾಯ ಮಾಡಿಬಿಡುತ್ತದೆ. ನಡುಬೇಸಿಗೆಯಲ್ಲೂ ತಂಪು ಹವೆ… ಮುಂಜಾನೆ ಇಬ್ಬನಿಯ ಸಿಂಚನ… ಸಂಜೆ  ಮಂಜು ಮುಸುಕಿನಲ್ಲಿ ರಕ್ತದ ಚೆಂಡಿನಂತೆ ಹೊಳೆವ ಸೂರ್ಯ ಬೆಟ್ಟಗಳ ನಡುವೆ ಲೀನವಾಗುವ ದೃಶ್ಯ ಮನಮೋಹಕ ಅದು ವಣರ್ಿಸಲಸಾಧ್ಯ.

See also  ಕೊಡಗಿನ ಹೆಮ್ಮೆಯ ಪುತ್ರನಿಗೆ ಸೆಲ್ಯೂಟ್

ಅಭಿವೃದ್ಧಿ ಮರೀಚಿಕೆ: ಮಾಂದಲಪಟ್ಟಿಗೆ ದೂರದಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ನಿಸರ್ಗ ಸೌಂದರ್ಯ ಮುದನೀಡಬಹುದು. ಆದರೆ ಇದರ ಸುತ್ತಮುತ್ತ ಇರುವ ಗ್ರಾಮಗಳು ಇನ್ನೂ ಕುಗ್ರಾಮಗಳಾಗಿಯೇ ಉಳಿದಿವೆ. ಇಲ್ಲಿನವರು ಇದುವರೆಗೆ ವಿದ್ಯುತ್ ಮುಖ ನೋಡದೆ ಸೀಮೆಣ್ಣೆ ದೀಪದ ಬೆಳಕಿನಲ್ಲಿಯೇ ದಿನಕಳೆಯುತ್ತಿದ್ದಾರೆ.  ರಸ್ತೆ, ದೂರವಾಣಿ, ಬಸ್ ಸಂಪರ್ಕವೂ ಇಲ್ಲಿಗಿಲ್ಲ. ಆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ದಿನಕಳೆಯುತ್ತಾರೆ. ಕಷ್ಟ ಬಂದಾಗ ಒಗ್ಗಟ್ಟಿನಿಂದ ಹೋರಾಡಲು ಯಾವತ್ತೂ ಹಿಂಜರಿಯವುದಿಲ್ಲ. ಇವರ ಒಗ್ಗಟ್ಟಿನ ಹೋರಾಟದ ಫಲದಿಂದಲೇ ಇನ್ನೂ ‘ಮಾಂದಲಪಟ್ಟಿ’ ಸುಂದರ ತಾಣವಾಗಿ ಉಳಿದಿದೆ ಎಂದರೆ ತಪ್ಪಾಗಲಾರದು.

ನಾಣಯ್ಯ ರಸ್ತೆ: ಕೆಲವು ವರ್ಷಗಳ ಹಿಂದೆ ಮಾಂದಲಪಟ್ಟಿಯಲ್ಲಿ ನಾಗರಹೊಳೆ ಗಿರಿಜನ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯನ್ನು ಅರಣ್ಯ ಇಲಾಖೆ, ಟೀ ತೋಟ ನಿಮರ್ಾಣದ ಯೋಜನೆಯನ್ನು ಕಂದಾಯ ಇಲಾಖೆ ರೂಪಿಸಿತ್ತು. ಆದರೆ ಈ ಸುಂದರ ಪ್ರದೇಶದಲ್ಲಿ ಅಂತಹ ಯಾವುದೇ ಯೋಜನೆಗೆ ನಾವು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟಿಸಿದ್ದರು. ಇದರಿಂದ ಯೋಜನೆಯನ್ನು ಕೈಬಿಡಲಾಗಿತ್ತು.
ಮೊದಲೆಲ್ಲಾ ಮಾಂದಲಪಟ್ಟಿಯ ನಿಸರ್ಗ ಸೌಂದರ್ಯವನ್ನು ಸವಿಯಲು ತೆರಳುವವರಿಗೆ ಸರಿಯಾದ ರಸ್ತೆಯೇ ಇರಲಿಲ್ಲ ಈ ಸಂದರ್ಭ ಪ್ರವಾಸಿಗರ ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ ಕೆಲವು ವರ್ಷಗಳ ಹಿಂದೆ ಸಚಿವರಾಗಿದ್ದ ಸಂದರ್ಭ ಎಂ.ಸಿ.ನಾಣಯ್ಯರವರು 1.60 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿಮರ್ಿಸಿದ್ದು, ಈ ರಸ್ತೆಯನ್ನು ಗ್ರಾಮಸ್ಥರು ‘ನಾಣಯ್ಯ ರಸ್ತೆ’ ಎಂದೇ ಕರೆಯುತ್ತಿದ್ದಾರೆ.

ಪ್ರವಾಸಿಗರೇ ಎಚ್ಚರ: ಇತ್ತೀಚೆಗೆ ಮಾಂದಲಪಟ್ಟಿಯ ಸೌಂದರ್ಯಕ್ಕೆ ಮನಸೋತ ಚಿತ್ರತಂಡಗಳು ಶೂಟಿಂಗ್ಗಾಗಿ ಇತ್ತ ಬರುತ್ತಿವೆ. ಇದು ಸಂತೋಷದ ವಿಷಯವಾದರೂ ಇದರಿಂದ ಪ್ರಶಾಂತ ಪರಿಸರಕ್ಕೆ ಎಲ್ಲಿ ಧಕ್ಕೆ ಬರುತ್ತೋ ಎಂಬ ಭಯವೂ ನಿಸರ್ಗ ಪ್ರೇಮಿಗಳನ್ನು ಕಾಡತೊಡಗಿದೆ. ಇಲ್ಲಿಗೆ ಭೇಟಿ ನೀಡುವವರು ತಿಂಡಿ ತಿನಿಸುಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯುವುದು ಒಳ್ಳೆಯದು ಅಲ್ಲಿ ಏನೂ ಸಿಗಲಾರದು. ಆದರೆ  ಪ್ಲಾಸ್ಟಿಕ್ ಚೀಲ, ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗದಿದ್ದರೆ ಅದೇ ಮಾಂದಲಪಟ್ಟಿಯ ಸೌಂದರ್ಯದ ಉಳಿವಿಗೆ ಪ್ರವಾಸಿಗರು ನೀಡುವ ಕೊಡುಗೆಯಾಗುತ್ತದೆ. ಕೊನೆಯ ಎಚ್ಚರಿಕೆ ಏನೆಂದರೆ ಮೋಜು ಮಸ್ತಿಗಾಗಿ ಹೊತ್ತಲ್ಲದ ಹೊತ್ತಿನಲ್ಲಿ ಇಲ್ಲಿಗೆ ಭೇಟಿ ನೀಡುವ ಸಾಹಸ ಮಾಡಬೇಡಿ. ಆಗಾಗ್ಗೆ ಕಾಡಾನೆಗಳು ಅಡ್ಡಾಡುತ್ತಿರುವುದರಿಂದ ಅಪಾಯ ತಪ್ಪಿದಲ್ಲ. ಅಲ್ಲದೆ ಏನೇ ತೊಂದರೆಯಾದರೂ ನಿರ್ಜನ ಪ್ರದೇಶವಾದುದರಿಂದ ಯಾರೂ ನಿಮ್ಮ ಸಹಾಯಕ್ಕೆ ಬರಲಾರರು ಎಂಬುವುದು ನೆನಪಿರಲಿ.
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು