News Kannada
Thursday, September 29 2022

ನುಡಿಚಿತ್ರ

ನಿಸರ್ಗಪ್ರಿಯರ ಮನಸೆಳೆವ ತೊಣ್ಣೂರು ಕೆರೆ - 1 min read

Photo Credit :

ನಿಸರ್ಗಪ್ರಿಯರ ಮನಸೆಳೆವ ತೊಣ್ಣೂರು ಕೆರೆ

ಮೇಲುಕೋಟೆಯ ಚೆಲುವನಾರಾಯಣನ ದರ್ಶನಕ್ಕೆ ತೆರಳಿದವರು ಅಲ್ಲಿಂದ ಹಿಂತಿರುಗುವಾಗ ಮಾರ್ಗ ಮಧ್ಯೆ ಸಿಗುವ ನಿಸರ್ಗ ರಮಣೀಯ ತಾಣ ತೊಣ್ಣೂರು ಕೆರೆಯನ್ನು ವೀಕ್ಷಿಸದೆ ಬಂದದ್ದೇ ಆದರೆ  ಸುಂದರ ಪ್ರವಾಸಿ ತಾಣವೊಂದನ್ನು ನೋಡುವ ಭಾಗ್ಯದಿಂದ ವಂಚಿತರಾಗಿ ಒಂದು ಮಧುರ ಅನುಭವವನ್ನು ಕಳೆದುಕೊಂಡಂತಾಗುತ್ತದೆ. ಏಕೆಂದರೆ ಕೆರೆತೊಣ್ಣೂರಿನ ಸೌಂದರ್ಯವೇ ಹಾಗಿದೆ.


ಸುತ್ತಲೂ ಹರಡಿ ನಿಂತ ಬೃಹತ್ ಗಾತ್ರಗಳ ಹೆಬ್ಬಂಡೆಗಳನ್ನೊಳಗೊಂಡ ಬೆಟ್ಟಗುಡ್ಡಗಳು ಅವುಗಳ ನಡುವಿನ ಹಸಿರು ಹಚ್ಚಡ… ಕಣ್ಣು ಹಾಯಿಸಿದುದ್ದಕ್ಕೂ ಅಲೆಅಲೆಯಾಗಿ ತೇಲುತ್ತಾ ಸ್ಪಟಿಕದಂತೆ ಹೊಳೆಯುವ ವಿಶಾಲ ಕೆರೆ… ಕೆರೆಯಿಂದಾಚೆ ಧಾರೆಯಾಗಿ ಧುಮುಕುವ ಮದಗ… ಸುತ್ತಮುತ್ತ ನೆಲೆ ನಿಂತ ದೇವಾಲಯಗಳಿಂದ ತೂರಿ ಬಂದು ಕಿವಿಗೆ ಅಪ್ಪಳಿಸುವ ಗಂಟೆಗಳ ನಿನಾದ…  ದೂರದ ಕಣಿವೆಯಲ್ಲಿ ಹಸಿರಿನಿಂದ ಕಂಗೊಳಿಸುವ ತೆಂಗು, ಭತ್ತದ ಗದ್ದೆಗಳು… ಹೀಗೆ ವರ್ಣಿಸುತ್ತಾ ಹೋದರೆ ಪದಗಳೇ ಸಾಲದಾಗುತ್ತವೆ.

ಮಂಡ್ಯ ಜಿಲ್ಲೆಯ ಪಾಂಡವಪುರದಿಂದ ಸುಮಾರು ಒಂಬತ್ತು ಕಿ.ಮೀ. ದೂರದಲ್ಲಿರುವ ಕೆರೆತೊಣ್ಣೂರು ಕರ್ನಾಟಕದಲ್ಲಿರುವ ಕೆರೆಗಳ ಪೈಕಿ ಎರಡನೆಯ ದೊಡ್ಡಕೆರೆಯಾಗಿದೆ. ಗುಡ್ಡಗಳ ನಡುವೆ ನಿರ್ಮಾಣಗೊಂಡಿರುವ ಈ ಕೆರೆ ತನ್ನದೇ ಆದ ಕೆಲವು ವೈಶಿಷ್ಟ್ಯಗಳಿಂದಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ. ತಂಪಾದ ಹವೆ, ಕಣ್ಮನ ತಣಿಸುವ ನಿಸರ್ಗ, ಕಣ್ಣು ಹಾಯಿಸಿದುದ್ದಕ್ಕೂ ಸ್ಪಟಿಕದಂತೆ ಹೊಳೆಯುವ ಸಿಹಿ ನೀರು… ಇಂತಹ ನಿಸರ್ಗದತ್ತ ಸೌಂದರ್ಯವನ್ನು ಸವಿಯಬೇಕಾದರೆ ಅದು ಕೆರೆತೊಣ್ಣೂರಿನಲ್ಲಿ ಮಾತ್ರ ಸಾಧ್ಯ. ಹಾಗಾಗಿಯೇ ಸಾಮಾನ್ಯವಾಗಿ ಇಲ್ಲಿಗೆ ಆಗಾಗ್ಗೆ ಪ್ರವಾಸಿಗರ ದಂಡು ಲಗ್ಗೆ ಹಾಕುತ್ತಿರುತ್ತದೆ.

ಎರಡು ಗುಡ್ಡಗಳಿಗೆ ‘ಕಟ್ಟೆ’ ಕಟ್ಟಿ ನಿರ್ಮಿಸಲಾಗಿರುವ ಕೆರೆ ಆಳ, ಅಗಲವಿದ್ದು, ಇಲ್ಲಿರುವ ನೀರು ಯಾವುದೇ ಕಲ್ಮಶದಿಂದ ಕೂಡಿರದೆ ಸ್ಪಟಿಕದಂತೆ ಹೊಳೆಯುತ್ತದೆ. ಆದುದರಿಂದ ಈ ಕೆರೆಯನ್ನು ‘ಮುತ್ತಿನಕೆರೆ’ ಎಂದು ಕೂಡ ಕರೆಯಲಾಗುತ್ತಿದೆ. 1746ರಲ್ಲಿ ಸೈನ್ಯದಲ್ಲಿದ್ದ ಸುಬೇದಾರನ ಪುತ್ರ ನಾಸಿರ್ಸಿಂಗ್ ಎಂಬಾತ ಕೆರೆತೊಣ್ಣೂರಿನಲ್ಲಿ ನೆಲೆಸಿದ್ದಾಗ ಒಮ್ಮೆ ಅಂದಿನ ರಾಜ ಪರಿವಾರಕ್ಕೆ ಸೇರಿದ ಮಹಿಳೆಯೊಬ್ಬರ ಮುತ್ತಿನ ಆಭರಣ ಕೈಜಾರಿ ಈ ಕೆರೆಯೊಳಗೆ ಬಿತ್ತಂತೆ. ಆದರೆ ಅದು ಕೆರೆಯ ತಳ ಸೇರಿದರೂ ತಿಳಿ ನೀರಿನಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದುದರಿಂದ ಈಜುಗಾರರು ನೀರಿನಲ್ಲಿ ಮುಳುಗಿ ಹೊರತೆಗೆದರೆಂದು ಹೇಳಲಾಗುತ್ತಿದೆಯಲ್ಲದೆ, ಆ ಕಾರಣದಿಂದಲೇ ನಾಸಿರ್ಸಿಂಗ್ ಇದನ್ನು ಮೋತಿ ತಲಾಬ್(ಮುತ್ತಿನ ಕೆರೆ) ಎಂದು ಕರೆದನಂತೆ.

ಇನ್ನು ಈ ವಿಶಾಲ ಕೆರೆಯನ್ನು ಯಾವಾಗ ನಿರ್ಮಿಸಲಾಯಿತು ಎಂಬುವುದಕ್ಕೆ ಸೂಕ್ತ ದಾಖಲೆಗಳು ಸಿಗುತ್ತಿಲ್ಲವಾದರೂ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಯಾದವ ಸಮುದ್ರ ಇದಾಗಿರಬಹುದೆಂಬ ಅಭಿಪ್ರಾಯವೂ ಕೇಳಿಬರುತ್ತದೆ. ಇದಕ್ಕೆ  ಕ್ರಿ.ಶ. 1326ರಲ್ಲಿ ಹೊಯ್ಸಳರ ರಾಜಧಾನಿ ದ್ವಾರಸಮುದ್ರದ ಮೇಲೆ ಮುಸಲ್ಮಾನ ದೊರೆಗಳು ದಾಳಿ ಮಾಡಿದ ಸಂದರ್ಭ ತಮ್ಮ ರಕ್ಷಣೆಗೆ ಕೆರೆತೊಣ್ಣೂರನ್ನು ಆಶ್ರಯಿಸಿದರೆಂಬ ಇತಿಹಾಸದ ಕಥೆಯೂ ಪುಷ್ಠಿ ನೀಡುತ್ತದೆ. ಇವರ ಕಾಲದಲ್ಲಿ ಈ ಸ್ಥಳ ಪ್ರಸಿದ್ಧ ಅಗ್ರಹಾರವಾಗಿ ಬೆಳೆದಿತ್ತು. ಕೆರೆತೊಣ್ಣೂರನ್ನು ತೊಂಡನೂರು ಅಗ್ರಹಾರ, ಯಾದವಪುರ, ಯಾದವನಾರಾಯಣ ಚತುರ್ವೇದಿಮಂಗಲ,  ‘ತೊಂಡೂರು’ ಎಂಬ ಮತ್ತೊಂದು ಹೆಸರಿನಿಂದಲೂ ಕರೆಯಲಾಗುತ್ತದೆ.  ಈ ಊರಿನಲ್ಲಿ  ಭಕ್ತರಿದ್ದರೆಂದೂ ಅವರನ್ನು ತೊಂಡ(ಭಕ್ತ)ರೆಂದು ಕರೆಯಲಾಗುತ್ತಿತೆಂದೂ ಮುಂದೆ ತೊಂಡರಿದ್ದ ಊರು ತೊಂಡನೂರು ಆಯಿತೆಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಇದಕ್ಕೆ ಕೆರೆಯ ಸುತ್ತಮುತ್ತಲಿರುವ ಹಲವು ದೇವಾಲಯಗಳೇ ಸಾಕ್ಷಿಯಾಗಿವೆ.

See also  ಸ್ವಚ್ಛ ಧರ್ಮಸ್ಥಳಕ್ಕಾಗಿ 'ರಿಕ್ತ' ಕ್ರಾಂತಿ

ಕೆರೆಯ ಬಗ್ಗೆ ಹೇಳುವುದಾದರೆ ಶ್ರೀರಾಮಾನುಜಚಾರ್ಯರು ಮೇಲುಕೋಟೆಗೆ ತೆರಳುವ ಸಂದರ್ಭ  ಕೆಲ ಕಾಲ ಇಲ್ಲಿಯೇ ನೆಲೆಸಿದ್ದರೆಂದೂ ಅಲ್ಲದೆ ಇಲ್ಲಿನ ಕೆರೆಯನ್ನು ‘ತಿರುಮಲಸಾಗರ’ ಎಂಬ ಹೆಸರಿನಿಂದ ಕರೆದಿದ್ದರೆನ್ನಲಾಗಿದೆ.  ಟಿಪ್ಪು ಸುಲ್ತಾನನ ಕಾಲದಲ್ಲಿ ಕೆರೆಯ ಜೀರ್ಣೋದ್ಧಾರ ಮಾಡಲಾಯಿತೆಂದೂ ಆಗ ಇದರ ಕಟ್ಟೆಗೆ ದೇವಾಲಯಗಳ ಹಲವು ಶಿಲ್ಪಗಳನ್ನು ಸೇರಿಸಲಾಯಿತು ಎನ್ನಲಾಗುತ್ತಿದೆ.  ದೂರದಿಂದ ಬರುವ ಪ್ರವಾಸಿಗರು ಕೆರೆ ದಂಡೆಯಲ್ಲಿ ಕಾಲಿಡುತ್ತಿದ್ದಂತೆಯೇ ವಾವ್..! ಎಂದು ಸಂಭ್ರಮ ಪಡುತ್ತಾರೆ.

ಕೆರೆಯ ದಂಡೆಯನ್ನು ಮೆಟ್ಟಿಲಿನಿಂದ ನಿರ್ಮಿಸಲಾಗಿದ್ದು ಒಂದೊಂದೇ ಮೆಟ್ಟಿಲನ್ನು ಇಳಿಯುತ್ತಾ ನೀರಿನಲ್ಲಿ ಆಟವಾಡಬಹುದು. ಕೆರೆಯ ಒಂದು ದಡದಲ್ಲಿ ಸ್ನಾನಘಟ್ಟ ಹಾಗೂ ಮಂಟಪವಿದ್ದು ಇದು ಕೆರೆಗೆ ಕಳೆಗಟ್ಟಿದೆ. ಈ ಕೆರೆಯಲ್ಲಿ ದಿನನಿತ್ಯವೂ ನೂರಾರು ಮಂದಿ ಸ್ನಾನ ಮಾಡಿ ಖುಷಿ ಪಡುತ್ತಾರೆ. ಉರಿ ಬಿಸಿಲಿಗೆ ಈ ನೀರಿಗೆ ಮೈಯೊಡ್ಡುವುದೇ ಒಂದು  ರೀತಿಯ ಮಜಾ. ಆದರೆ ಸೌಂದರ್ಯಕ್ಕೆ ಮಣಿದು ಈಜಲು ಹೋಗೋದು ಮಾತ್ರ ಅಪಾಯ.

ಏಕೆಂದರೆ ಈಗಾಗಲೇ ಈಜಲು ಹೋಗಿ ಪ್ರಾಣ ಕಳೆದುಕೊಂಡವರ ದೊಡ್ಡ ಪಟ್ಟಿಯೇ ಇದೆ. ಹಾಗಾಗಿ ಪ್ರವಾಸಿಗರು ಸೂಚನಾ ಫಲಕದತ್ತ ಗಮನಹರಿಸುವುದು ಒಳಿತು. ಕೆರೆಯನ್ನು ವೀಕ್ಷಿಸುತ್ತಾ ಒಂದಷ್ಟು ಹೆಜ್ಜೆ ಹಾಕಿದ್ದೇ ಆದರೆ ಮೇಲಿನಿಂದ ಕೆಳಕ್ಕೆ ಧುಮುಕುವ ಮದಗ ಕಂಡುಬರುತ್ತದೆ. ಈ ಮದಗದಲ್ಲಿ ತಲೆಕೊಟ್ಟು ಸ್ನಾನ ಮಾಡಿದರೆ ಇಷ್ಟಾರ್ಥಗಳು ನೆರವೇರುವುದರೊಂದಿಗೆ ಜನ್ಮ ಪಾವನವಾಗುತ್ತದೆ. ಅಷ್ಟೇ ಅಲ್ಲ  ಚರ್ಮವ್ಯಾಧಿಗಳು ಮಾಯವಾಗುತ್ತವೆ ಎಂಬ ನಂಬಿಕೆಯೂ ಜನರಲ್ಲಿದೆ.

ಇಲ್ಲಿ ಹಲವಾರು ದೇವಾಲಯ ಮತ್ತು ಮಸೀದಿಯಿದ್ದು, ಇವುಗಳು ಇದೊಂದು ಪವಿತ್ರಕ್ಷೇತ್ರವಾಗಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ವಿಷ್ಣುವರ್ಧನನ ತಾಯಿ ಮೊದಲ ಮಹಾದೇವಿ ಇಲ್ಲಿ ತುಪ್ಪಲೇಶ್ವರ ಎಂಬ ಶಿವದೇವಾಲಯವೊಂದನ್ನು ಕಟ್ಟಿಸಿದಳೆಂದೂ ಅದಕ್ಕೆ ವಿಷ್ಣುವರ್ಧನ ದತ್ತಿ ಬಿಟ್ಟಿದ್ದನೆಂದೂ ಹೇಳಲಾಗಿದೆ. ಮತ್ತೊಂದೆಡೆ ವಿಷ್ಣುವರ್ಧನ ಯುವರಾಜನಾಗಿದ್ದ ಸಂದರ್ಭ ಕೆರೆತೊಣ್ಣೂರನ್ನು ಅಗ್ರಹಾರವನ್ನಾಗಿ ಪರಿವರ್ತಿಸಿದನೆಂದೂ ಈತ ನಿರ್ಮಿಸಿದ  ಐದು ದೇವಾಲಯಗಳಲ್ಲಿ ಇಲ್ಲಿರುವ ಲಕ್ಷ್ಮಿನಾರಾಯಣ ದೇವಾಲಯ ಒಂದಾಗಿರಬಹುದೆಂಬ ಅಭಿಪ್ರಾಯವೂ ಇದೆ. ಜೊತೆಗೆ ಇಲ್ಲಿಯೇ ರಾಮಾನುಜಚಾರ್ಯರು ವಿಷ್ಣುವರ್ಧನನ್ನು ಭೇಟಿ ಮಾಡಿ ಜೈನಮತದಿಂದ ವೈಷ್ಣವ ಮತದತ್ತ ಮನವೊಲಿಸಿದ್ದರು ಎಂದು ಇತಿಹಾಸ ಹೇಳುತ್ತದೆ.

ಇನ್ನು ಕೆರೆತೊಣ್ಣೂರಿನಲ್ಲಿ ನಿರ್ಮಾಣವಾಗಿರುವ ದೇವಾಲಯಗಳ ಬಗ್ಗೆಯೂ ಐಹಿತ್ಯಗಳು ಇರುವುದನ್ನು ನಾವು ಕಾಣಬಹುದು. ಒಂದನೆಯ ನರಸಿಂಹನ ಕಾಲದಲ್ಲಿ ಕೃಷ್ಣನ ದೇವಾಲಯವನ್ನೂ ಹಾಗೂ ಕೈಲಾಸೇಶ್ವರ ದೇವಾಲಯ, ನರಸಿಂಹನ ದೇವಾಲಯವನ್ನು ಕೂಡ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ ದೇವಾಲಯಗಳ ಅಭಿವೃದ್ಧಿಯಾಗಿದ್ದು, ಹೊಯ್ಸಳರ ಆಳ್ವಿಕೆಯ ಕೊನೆಗಾಲದಲ್ಲಿ ರಾಜ ಮುಮ್ಮಡಿ ಬಲ್ಲಾಳ ಕೆಲವು ಸಮಯ ಇಲ್ಲಿದ್ದನು ಎನ್ನಲಾಗುತ್ತಿದೆ. ಇಲ್ಲಿರುವ ದೇವಾಲಯಗಳ ಅಭಿವೃದ್ಧಿಯನ್ನು ವಿಜಯನಗರ ಮತ್ತು ಮೈಸೂರು ಅರಸರ ಕಾಲದಲ್ಲಿ ಮಾಡಲಾಯಿತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ಕೆರೆ ತೊಣ್ಣೂರಿನಲ್ಲಿರುವ ದೇವಾಲಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೊಯ್ಸಳರ ಕಾಲದಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ನಿರ್ಮಿತವಾದ ದ್ರಾವಿಡ ಶೈಲಿಯ ದೇವಾಲಯಗಳ ಮಾದರಿಯನ್ನು ಹೋಲುವುದನ್ನು ಕಾಣಬಹುದು. ಇಲ್ಲಿನ ಲಕ್ಷ್ಮಿನಾರಾಯಣ ದೇಗುಲದ ಗರ್ಭಗೃಹ, ಸುಕನಾಸಿ ಹಾಗೂ ನವರಂಗಗಳುಳ್ಳ  ಮೂಲಗುಡಿಯ ಗೋಡೆಗಳು ದಪ್ಪ ಗ್ರಾನೈಟ್ ಕಲ್ಲುಗಳಿಂದ ಕಟ್ಟಿದ್ದು, ಗೋಡೆಯಲ್ಲಿ ಚೌಕ ಅರೆಗಂಬಗಳು, ಆಳವಿಲ್ಲದ ಗೂಡುಗಳೂ ಮೇಲೆ ಪಿರಮಿಡ್ ಆಕೃತಿಯ ಅರೆಗೋಪುರಗಳಿದ್ದು, ಕೆಳಭಾಗದಲ್ಲಿ ಅಷ್ಟಕೋನಾಕೃತಿಯ ದುಂಡಾದ ದಿಂಡುಗಳು, ನವರಂಗದಲ್ಲಿ ತಿರುಗಣೆಯಿಂದ ಕಡಿದು ಹೊಳಪು ಮಾಡಿರುವ ಹೊಯ್ಸಳ ಮಾದರಿಯ ಬಳಪದ ಕಂಬಗಳಿದ್ದು, ಇವುಗಳು ಮೇಲ್ನೋಟಕ್ಕೆ ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗದ ಕಂಬಗಳಂತೆ ಕಾಣುತ್ತವೆ.

See also  ಕಾವೇರಿ ತೀರ್ಥರೂಪಿಣಿಯಾಗಿ ಹರಿದ ಕಥೆ...

ದೇಗುಲದ ಮುಂಭಾಗ ಬೃಹತ್ ಮುಖಮಂಟಪ ಹಾಗೂ ಪಾತಾಳಾಂಕಣವಿದ್ದು ಇದರ ಸುತ್ತಲೂ ವಿಜಯನಗರ ಮತ್ತು ಮೈಸೂರು ರಾಜರ ಕಾಲದಲ್ಲಿ ನಿರ್ಮಿಸಲಾದ ಎತ್ತರದ ಎರಡು ಸುತ್ತಿನ ಪ್ರಕಾರಗಳಿವೆ. ಶಾಸನವೊಂದರ ಪ್ರಕಾರ ಪಕ್ಕದಲ್ಲಿರುವ ಲಕ್ಷ್ಮಿದೇವಿಯ ಗುಡಿಯನ್ನು ವಿಷ್ಣುವರ್ಧನನ ಕಾಲದಲ್ಲಿ ಸುರಿಗೆಯ ನಾಗಯ್ಯನೆಂಬ ದಂಡನಾಯಕ ಕಟ್ಟಿಸಿದನೆಂದು ತಿಳಿದು ಬರುತ್ತದೆ. ಕೃಷ್ಣದೇವಾಲಯ ಕೂಡ ವೈಶಿಷ್ಟ್ಯಪೂರ್ಣವಾಗಿದ್ದು, ಇದಕ್ಕೆ ಬೃಹತ್ ಪ್ರವೇಶ ದ್ವಾರವಿದೆ. ಗೋಪುರವು ಬಲ್ಲಾಳರ ಕಾಲದಲ್ಲಿ ನಿರ್ಮಿಸಲಾಗಿರಬಹುದು ಎನ್ನಲಾಗುತ್ತಿದ್ದು ಗೋಪುರವನ್ನು ವೀರಬಲ್ಲಾಳನ ಗೋಪುರ ಎಂದು ಕರೆಯುತ್ತಿರುವುದು ಅದಕ್ಕೆ ಸಾಕ್ಷಿಯಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಕೃಷ್ಣನ ದೊಡ್ಡ ಮೂರ್ತಿ ಪಕ್ಕದಲ್ಲಿ ರುಕ್ಮಿಣಿ ಸತ್ಯಭಾಮೆಯರ ಚಿಕ್ಕಮೂರ್ತಿಗಳಿವೆ. ವೇಣುಗೋಪಾಲ, ರುಕ್ಮಿಣಿ, ಸತ್ಯಭಾಮೆಯರ ಲೋಹದ ಉತ್ಸವ ಮೂರ್ತತಿಗಳೂ ಕೂಡ ಗಮನಸೆಳೆಯುತ್ತವೆ.
ಪ್ರಾಚೀನ ಕಾಲದ ಕೈಲಾಸೇಶ್ವರ ದೇವಾಲಯವು ಶಿಥಿಲಾವಸ್ಥೆಗೊಳಗಾಗಿದ್ದು, ಈ ದೇವಾಲಯಗಳ ಗೋಡೆಗಳ ಮೇಲೆ ದಿಂಡು ಕಲ್ಲುಗಳ ಹಲವು ಶಾಸನಗಳು ಕಾಣಸಿಗುತ್ತವೆ. ಪಕ್ಕದ ನರಸಿಂಹ ದೇವಾಲಯದಲ್ಲಿ ಯೋಗನರಸಿಂಹನ ಮೂರ್ತಿಯಿದೆ. ಈ ದೇವಾಲಯದ ನವರಂಗದ ಮೂಲೆಯಲ್ಲಿ ರಾಮಾನುಜಚಾರ್ಯರ ಗಚ್ಚಿನ ಮೂರ್ತಿಯಿದೆ. ಇಲ್ಲಿ ರಾಮಾನುಜಚಾರ್ಯರು ಜೈನರೊಂದಿಗೆ ವಾದ ಮಾಡಿದರೆಂಬುದಾಗಿ ಹಿರಿಯರು ಹೇಳುತ್ತಾರೆ.

ಕೆರೆಯದಂಡೆಯಲ್ಲಿ ‘ನಿಕುಂಬಿನಿ’ ಎಂಬ ದೇವಿಯ ದೇವಾಲಯವಿದ್ದು, ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಶಾಹ ಸಲಾ ಮಸೂದ್ ಘಾಸಿಯ ದರ್ಗಾವೂ ಇಲ್ಲಿದೆ. ಇದನ್ನು 1358ರಲ್ಲಿ ನಿರ್ಮಿಸಿದ್ದು, ಈ ದರ್ಗಾದ ಕಟ್ಟಡಕ್ಕೆ ದೇವಾಲಯದ ಕಂಬಗಳನ್ನು ಬಳಸಿರುವುದು ಗಮನಾರ್ಹವಾಗಿದೆ. ಕೆರೆ ಬಳಿಯ ಬೆಟ್ಟಗಳು ಚಾರಣಪ್ರಿಯರಿಗೆ ಹೇಳಿಮಾಡಿಸಿದಂತಿದೆ. ಬೆಟ್ಟದ ಮೇಲ್ಭಾಗದಿಂದ ಕಾಣಸಿಗುವ ಕಾಣಸಿಗುವ ನಿಸರ್ಗದ ಸುಂದರ ಚಿತ್ತಾರ ಮೂಕಸ್ಮಿತರನ್ನಾಗಿ ಮಾಡಿಬಿಡುತ್ತದೆ.

ಕೆರೆ ತೊಣ್ಣೂರನ್ನು ಇನ್ನಷ್ಟು ಅಭಿವೃದ್ಧಿಪಡಿಸಿದ್ದೇ ಆದರೆ ಪ್ರವಾಸಿಗರ ಸ್ವರ್ಗವಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿಗೆ ಸ್ವಂತ ವಾಹನದಲ್ಲಿ ಅಥವಾ ಪಾಂಡವಪುರದಿಂದ ಆಟೋ, ಟೆಂಪೋ, ಬಸ್ಸುಗಳಲ್ಲಿ ತೆರಳಬಹುದಾಗಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು