News Kannada
Tuesday, September 27 2022

ನುಡಿಚಿತ್ರ

ಜಲಸಂರಕ್ಷಣೆ ಪಾಠ ಹೇಳುವ ಬಾಳಿಲ ಶಾಲೆ - 1 min read

Photo Credit :

ಜಲಸಂರಕ್ಷಣೆ ಪಾಠ ಹೇಳುವ ಬಾಳಿಲ ಶಾಲೆ

ಈ ಬಾರಿಯ ಬೇಸಿಗೆಯಲ್ಲಿ ನಮಗೆ ನೀರಿನ ಬೆಲೆ ಗೊತ್ತಾಗಿದೆ. ಮಳೆ ನೀರನ್ನು ಭೂಮಿಯಲ್ಲಿ ಇಂಗಿಸದೆ ವ್ಯರ್ಥ ಮಾಡಿದರೆ ಎಂತಹ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದು ಕೂಡ ಈಗ ಅರಿವಿಗೆ ಬಂದಿದೆ.

ಡಾಂಬರು, ಕಾಂಕ್ರಿಟ್ ನಿಂದ ಭೂಮಿಗೆ ಬಿದ್ದ ನೀರು ಇಂಗದೆ ಹರಿದು ಹೋಗುತ್ತಿದೆ. ನೀರನ್ನು ಇಂಗಿಸುವ ಕೆಲಸವಾಗುತ್ತಿಲ್ಲ ಹೀಗಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅದರ ಪರಿಣಾಮವನ್ನು ಈ ಬಾರಿಯ ಬೇಸಿಗೆಯಲ್ಲಿ ಎದುರಿಸುವಂತಾಗಿದೆ. ಇಂತಹ ಜಲಕ್ಷಾಮವನ್ನು ಎದುರಿಸುವ ದಿನ ಸನ್ನಿಹಿತವಾಗುತ್ತಿದೆ ಎಂಬುದು ಕಳೆದ ಕೆಲ ದಶಕಗಳ ಹಿಂದೆಯೇ ಗೊತ್ತಾಗಿತ್ತು. ಹೀಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆ ಶಿಕ್ಷಕರು ಮಳೆ ಕೊಯ್ಲುನೊಂದಿಗೆ ಜಲಸಂರಕ್ಷಣೆಯ ಪಾಠವನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಗೊಂಡರು.

ಬಹುಶಃ ಇದನ್ನು ಇತರ ಶಾಲೆಗಳು ಅನುಕರಿಸಿದ್ದರೆ ಅಲ್ಲಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದಿತ್ತೇನೋ? ಅದು ಆಚೆಗಿರಲಿ. ಪ್ರಸ್ತುತ ಪರಿಸ್ಥಿತಿಯಲ್ಲಿ ಬಾಳಿಲ ಶಾಲೆಯಲ್ಲಿ ಕೈಗೊಂಡ ಕ್ರಮಗಳು ನಿಜಕ್ಕೂ ಮಾದರಿ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿಗಳಲ್ಲಿ ಜಲಸಂರಕ್ಷಣೆಯ ಅರಿವು ಮೂಡಿಸಿದರೆ ಅದು ಮುಂದೆ ಪರಿಣಾಮಕಾರಿಯಾಗುತ್ತದೆ ಎಂಬುವುದನ್ನು ಅರಿತು ಜಲಸಂರಕ್ಷಣೆಯನ್ನು ಮಳೆ ಕೊಯ್ಲಿನಂತಹ ಪರಿಕಲ್ಪನೆಯೊಂದಿಗೆ ಕಲಿಕೆಯ ಒಂದು ವಿಷಯವಾಗಿ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ  ಮಾಡಲಾಗುತ್ತಿರುವುದು ಮೆಚ್ಚತಕ್ಕ ಕಾರ್ಯವೇ ಆಗಿದೆ.

ಕೇವಲ ಪಠ್ಯಪುಸ್ತಕಗಳಿಗಷ್ಟೇ ಸೀಮಿತವಾಗದೆ ಪಠ್ಯದೊಂದಿಗೆ ಜಲಸಂರಕ್ಷಣೆಯಂತಹ ಬೋಧನೆಯನ್ನು ನೀಡುವ ಮೂಲಕ ಜಲಜಾಗೃತಿಯನ್ನು ಸದ್ದಿಲ್ಲದೆ ಮಾಡುತ್ತಿರುವ ಬಾಳಿಲದ ವಿದ್ಯಾಬೋಧಿನಿ ಶಾಲೆಯು ಸುಳ್ಯ ತಾಲೂಕಿನ ಬೆಳ್ಳಾರೆ ಬಳಿಯಿದೆ. ಬೆಳ್ಳಾರೆಯಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 5ಕಿ.ಮೀ ತೆರಳಿದರೆ ಬಾಳಿಲ ಗ್ರಾಮ ಸಿಗುತ್ತದೆ. ಇಲ್ಲಿರುವ ವಿದ್ಯಾಬೋಧಿನಿ ಪ್ರೌಢಶಾಲೆಗೆ ಕಾಲಿಟ್ಟರೆ ನಮಗೆ ವಿಶಿಷ್ಟ ಅನುಭವವಾಗುತ್ತದೆ. ಶಾಲೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿ ಬರೆಯಲಾದ “ನೀರ ಹನಿಗೆ ನೂರು ಬೆಲೆ” ಎಂಬ ಸಂದೇಶ ನೀರಿಗಿರುವ ಪ್ರಾಮುಖ್ಯತೆಯನ್ನು  ಸಾರಿ ಹೇಳುತ್ತದೆ. ಶಾಲಾ ಕಾಂಪೌಂಡ್ ಒಳಗಿನ ಕಟ್ಟಡದ ಗೋಡೆಯಿಂದ ಪ್ರಾರಂಭವಾಗಿ ಗಿಡ, ಮರಗಳು, ಅಲಂಕಾರಿಕ ಹೂಗಿಡಗಳು ಕೂಡ ಮಾಹಿತಿಯ ಕಣಜಗಳಾಗಿವೆ. ಶಾಲಾ ಮುಂದಿರುವ ಅಲಂಕಾರಿಕ ಸಸ್ಯ ಕೇವಲ ಸಸ್ಯವಾಗಿರದೆ ಅದು ಗಣಿತದ ಸೂತ್ರ ಹೇಳುತ್ತದೆ. ಅಷ್ಟೇ ಅಲ್ಲ, ತ್ರಿಕೋನ, ಚೌಕ, ಆಯತ, ವಜ್ರಾಕೃತಿ, ವೃತ್ತ ಮೊದಲಾದವುಗಳೆಲ್ಲವೂ ಅಲಂಕಾರಿಕ ಸಸ್ಯಗಳಿಂದಲೇ ನಿರ್ಮಾಣವಾಗಿರುವುದು ವಿಸ್ಮಯ ಮೂಡಿಸುತ್ತದೆ.

ಗಣಿತದ ಮೂಲ ಕ್ರಿಯೆಗಳ ನಡುವೆ ಪರ್ಜನ್ಯ ಮಾಪಕವಿದ್ದು, ದಿನನಿತ್ಯದ ಮಳೆಯ ಪ್ರಮಾಣವನ್ನು ಅಳೆದು ವಿದ್ಯಾರ್ಥಿಗಳು ದಾಖಲಿಸುತ್ತಾರೆ. ಆಯಾಯ ರಾಶಿಗಳಿಗೆ ಸಂಬಂಧಪಟ್ಟ ಗಿಡಗಳನ್ನು ನೆಟ್ಟು ನಿರ್ಮಿಸಲಾದ ರಾಶಿವನ, ಗ್ರಹಗಳ ಸ್ಥಾನಕ್ಕನುಗುಣವಾಗಿ ನೆಡಲಾದ  ನವಗ್ರಹವನ ಗಮನಸೆಳೆಯುತ್ತದೆ. ಗೋಡೆಗಳಲ್ಲಿ ಕೈ ಗಡಿಯಾರಕ್ಕೆ ಸರಿಯಾಗಿ ವಿಶ್ವದ ಇತರೆ ರಾಷ್ಟ್ರದ  ಸಮಯವನ್ನು ತಿಳಿಸುವ ಜಾಗತಿಕ ಗಡಿಯಾರ ಹಾಗೂ ಗಣಿತದ ವಿವಿಧ ಸೂತ್ರಗಳನ್ನು ಪರಿಚಯಿಸುವ  ಸಂಖ್ಯಾ ಗಡಿಯಾರ, ಕ್ರಾಂತಿ ಚಕ್ರ, ಸೌರವ್ಯೂಹ, ಸಂಚಾರ ಸಂಕೇತ, ಮಳೆ ದಾಖಲೆಯ ವಿವರಗಳು ಸೇರಿದಂತೆ ವಿವಿಧ ಉಪಯುಕ್ತ ಮಾಹಿತಿಗಳನ್ನು ಬರೆಯಲಾಗಿದೆ. ಜ್ಞಾನಾರ್ಜನೆಗೆ ಉಪಯುಕ್ತ ಗ್ರಂಥಾಲಯ, ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ತಕ್ಕಂತೆ ವೈಜ್ಞಾನಿಕ ಪ್ರಯೋಗ ಮಾಡಲು ಪ್ರಯೋಗಾಲಯ, ವಿದ್ಯಾರ್ಥಿಗಳೇ ಸಂಗ್ರಹಿಸಿದ “ವಿದ್ಯಾ ಪರಂಪರಾ” ಎಂಬ ವಸ್ತು ಸಂಗ್ರಹಾಲಯವಿದ್ದು, ಇಲ್ಲಿ ಅಮೂಲ್ಯವಾದ ಅಳಿದು ಹೋದ, ಅಳಿವಿನಂಚಿನಲ್ಲಿರುವ ಮಣ್ಣಿನ ಇತರೆ ಲೋಹದ ಅಪರೂಪದ ಪರಿಕರಗಳನ್ನು ನಾವು ಕಾಣಬಹುದು.

See also  ಮಲ್ಯ ಮಾರುತ

ಶಾಲೆಯಲ್ಲಿ ಜಲಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ.  ಭೂಮಿಗೆ ಬೀಳುವ ಮಳೆಯ ಒಂದೊಂದು ಹನಿಯೂ ಅಮೂಲ್ಯವಾಗಿದ್ದು, ಅದನ್ನು ಇಂಗಿಸುವ ಮೂಲಕ ಅಂತರ್ಜಲವನ್ನು ವೃದ್ದಿಸುವ ಕಾರ್ಯವನ್ನು ಮಾಡಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಪಾಠವಾಗಿದೆ. ಶಾಲಾ ಸಂಕೀರ್ಣದಲ್ಲಿ ಬಿದ್ದ ಒಂದೊಂದು ನೀರಿನ ಹನಿಯೂ ಇಂಗುವಂತೆ ವಿದ್ಯಾರ್ಥಿಗಳು ಮಾಡುತ್ತಾರೆ. ಶಾಲೆಯ ಛಾವಣಿ ನೀರನ್ನು ಪೈಪ್ ಮೂಲಕ ಶುದ್ಧೀಕರಿಸಿ ಕೊಳವೆ ಬಾವಿಗೆ ಮರುಪೂರಣ ಮಾಡುವ ಕಾರ್ಯವೂ ನಡೆಯುತ್ತಿದೆ.

ಮತ್ತೊಂದೆಡೆ ಶಾಲೆಯ ಮುಂಭಾಗದಲ್ಲಿ ಕೃತಕ ಹೊಂಡವನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಆದ ನೀರಿನ ಮಟ್ಟದ ಸುಧಾರಣೆಯನ್ನು ವಿವರಿಸುವ ವಿವರಗಳು ಮತ್ತು ಪ್ರಾಯೋಗಿಕ ಮಾದರಿಗಳಿವೆ. ಸಂಗ್ರಹಿಸಿದ ಛಾವಣಿ ನೀರನ್ನು ಸೋಸಿ ಕೊಳವೆ ಬಾವಿಗೆ ನೇರವಾಗಿ ಹರಿಸುವ ಮೂಲಕ ನೀರಿನ ಮಟ್ಟವನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ಶಾಲೆಯ ಆವರಣದಲ್ಲಿ ನೆಡಲಾದ ಪ್ರತಿ ಗಿಡಕ್ಕೂ ಇಂಗು ಗುಂಡಿಗಳನ್ನು ತೆಗೆದು ನೆಟ್ಟ ಗಿಡಗಳ ಬುಡದಲ್ಲಿ ತೇವಾಂಶ ಉಳಿಯುವಂತೆ ನೊಡಿಕೊಳ್ಳಲಾಗುತ್ತಿದೆ.

ಪಾಠದೊಂದಿಗೆ ಗಿಡಮರ, ಮಣ್ಣು, ನೀರಿನೊಂದಿಗೆ ನಿರಂತರ ಸಂಪರ್ಕ ಹೊಂದಿರುವ ವಿದ್ಯಾರ್ಥಿಗಳು ಮಳೆಕೊಯ್ಲು, ಜಲಸಂರಕ್ಷಣೆ ಮುಂತಾದ ವಿಚಾರಗಳ ಬಗ್ಗೆ ಹೆಚ್ಚಿನ ಅರಿವು ಪಡೆದು ಜಲಸಾಕ್ಷರರಾಗುವುದರೊಂದಿಗೆ “ನಮ್ಮ ನೀರು ನಮಗೆ” ಎಂಬ ಶಾಲೆಯ ಧ್ಯೇಯವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವುದು ಶಾಲಾ ವೃಂದದವರ ಶ್ರಮಕ್ಕೆ  ಸಿಕ್ಕ ಪ್ರತಿಫಲ ಎಂದರೆ ಅತಿಶಯೋಕ್ತಿಯಾಗಲಾರದು.

ಈ ಶಾಲೆಗೊಮ್ಮೆ ಭೇಟಿ ನೀಡಿ ಇಲ್ಲಿ ಅನುಸರಿಸುತ್ತಿರುವ ಕ್ರಮವನ್ನು ಇತರೆ ಶಾಲೆಗಳು, ಸಂಘಸಂಸ್ಥೆಗಳು, ರೈತರು ಅನುಸರಿಸಿದರೆ ಮುಂದಿನ ದಿನಗಳಲ್ಲಾದರೂ ಅಂತರ್ಜಲವನ್ನು ಕಾಪಾಡಲು ಸಾಧ್ಯವಾಗಬಹುದೇನೋ?
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು