News Kannada
Thursday, September 29 2022

ನುಡಿಚಿತ್ರ

ವಿಶ್ವವನ್ನು ಸೆಳೆಯಲಿರುವ ಉಕ್ಕಿನ ಮನುಷ್ಯನ ಉತ್ಕೃಷ್ಟ ಪ್ರತಿಮೆ! - 1 min read

Photo Credit :

ವಿಶ್ವವನ್ನು ಸೆಳೆಯಲಿರುವ ಉಕ್ಕಿನ ಮನುಷ್ಯನ ಉತ್ಕೃಷ್ಟ ಪ್ರತಿಮೆ!

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ, ತದನಂತರ ಹರಿದು ಹಂಚಿಹೋಗಿದ್ದ ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಿದ ಮಹಾನ್ ದೇಶಭಕ್ತ  ಉಕ್ಕಿನ ಮನುಷ್ಯ ಎಂದೇ ಜನಜನಿತರಾದ ಸರ್ದಾರ್ ವಲಭಭಾಯಿ ಪಟೇಲ್ ಅವರ ಉತ್ಕೃಷ್ಟ ಪ್ರತಿಮೆ ಗುಜರಾತಿನ ನರ್ಮದಾ ಜಿಲ್ಲೆಯ ಕೇವಡಿಯಾದ ಸಾಧು ದ್ವೀಪದಲ್ಲಿ ತಲೆ ಎತ್ತಲಿದೆ. ಅಂದುಕೊಂಡಿದ್ದೆಲ್ಲವೂ ಸಕಾಲದಲ್ಲಿ ನೆರವೇರಿದರೆ ಇಡೀ ವಿಶ್ವ ಈ ಪ್ರತಿಮೆಯತ್ತ ಬೆರಗು ಕಣ್ಣಿನಿಂದ ನೋಡಲಿದೆ.

ಈಗ ರಾಷ್ಟ್ರದಾದ್ಯಂತ ಸ್ಟ್ಯಾಚ್ಯೂ ಆಫ್ ಯುನಿಟಿ ಭಾರೀ ಸುದ್ದಿ ಮಾಡುತ್ತಿದೆ. ಏಕೆಂದರೆ ಗುಜರಾತ್ನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಲ್ಪನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಕೇವಲ ಪ್ರತಿಮೆಯಾಗಿರದೆ ಶೈಕ್ಷಣಿಕ, ಐತಿಹಾಸಿಕ, ರಾಷ್ಟ್ರೀಯ, ಆಧ್ಯಾತ್ಮ ಮೌಲ್ಯಗಳೊಂದಿಗೆ ಪ್ರವಾಸಿ ತಾಣವಾಗಿ ಜಗತ್ಪ್ರ್ರಸಿದ್ಧ ಕೆಲವೇ ಸ್ಮಾರಕಗಳ ನಡುವೆ ಒಂದಾಗಿ ಗಮನಸೆಳೆಯಲಿದೆ.

ಗುಜರಾತಿನ ನರ್ಮದಾ ಜಿಲ್ಲೆಯ ಕೇವಡಿಯಾದ ಸರ್ದಾರ ಸರೋವರ ಅಣೆಕಟ್ಟೆಯ ದಕ್ಷಿಣದಲ್ಲಿ  ಸುಮಾರು 3.5 ಕಿ.ಮೀ. ದೂರದ ಸಾಧು ದ್ವೀಪದಲ್ಲಿ ನಿರ್ಮಿಸಲುದ್ದೇಶಿಸಿರುವ ಸರ್ದಾರ್ ವಲಭಭಾಯಿ ಪಟೇಲರ ಸುಮಾರು 182 ಮೀಟರ್ ಎತ್ತರದ ಪ್ರತಿಮೆ ನಿರ್ಮಾಣದ ಕಾಮಗಾರಿಗೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಗಿಲೆತ್ತರಕ್ಕೆ ನಿಂತ ವಿಂದ್ಯಾಚಲ ಮತ್ತು ಸತ್ಪುದ ಬೆಟ್ಟ ಶ್ರೇಣಿಗಳ ನಡುವೆ ಉಕ್ಕಿ ಹರಿವ ನರ್ಮದಾ ನದಿ, ವಿಶಾಲಾಗಿ ಹರಡಿಕೊಂಡಿರುವ  ಗರುಡೇಶ್ವರ ಸರ್ದಾರ ಸರೋವರ ಅಣೆಕಟ್ಟು… ಹೀಗೆ  ನಿಸರ್ಗ ಸೌಂದರ್ಯದ ನೆಲೆವೀಡಾಗಿರುವ ಪ್ರದೇಶವನ್ನೇ ಪ್ರತಿಮೆ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಸುಮಾರು 12ಕಿ.ಮೀ. ಉದ್ದಗಲದ ಮಾನವ ನಿರ್ಮಿತ ಸರೋವರದ ನಡುವೆ 20ಸಾವಿರ ಚದರ ಮೀಟರ್ ಪ್ರದೇಶದಲ್ಲಿ ಪ್ರತಿಮೆ  ನಿರ್ಮಾಣಗೊಳ್ಳಲಿದೆ. ಇನ್ನು ಈ ಪ್ರತಿಮೆ ಸುತ್ತಮುತ್ತ  ಭಾರತದ ರಾಷ್ಟ್ರೀಯ ಚಳುವಳಿಯನ್ನು ನೆನಪಿಸುವ ಹಾಗೂ ಭಾರತ ಏಕೀರಣದ ಅಲ್ಲದೆ, ಸರ್ದಾರ್ ವಲ್ಲಭಭಾಯಿ ಅವರ ಕೊಡುಗೆಗಳನ್ನು ತಿಳಿಸುವ ಅತ್ಯಮೂಲ್ಯ ಮಾಹಿತಿಗಳನ್ನು ಪ್ರದರ್ಶಿಸಲಾಗುತ್ತದೆ. ಜೊತೆಗೆ ಸಾಧು ದ್ವೀಪದ ನಡುವಿನ ಪ್ರತಿಮೆಗೆ ಸಂಪರ್ಕ ಕಲ್ಪಿಸಲು ಸುಂದರ ಸೇತುವೆ ಹಾಗೂ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರೇಕ್ಷಕರ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತದೆ.

ಪ್ರತಿಮೆ ನಿರ್ಮಾಣ ಪ್ರದೇಶದ ಸನಿಹವಿರುವ ಕೇವಾಡಿಯಾ ನಗರದ ಅಭಿವೃದ್ದಿಗೂ ಕ್ರಮಕೈಗೊಳ್ಳಲಾಗುತ್ತಿದ್ದು, ಸುಧಾರಿತ ರಸ್ತೆ ನಿರ್ಮಾಣ, ಪ್ರವಾಸಿಗರಿಗೆ ಅನುಕೂಲವಾಗುವಂತೆ ವಾಹನ ನಿಲ್ದಾಣ, ಹೋಟೆಲ್ ನಿರ್ಮಾಣವನ್ನು ಮೊದಲ ಹಂತದಲ್ಲಿ ಮಾಡಿದರೆ, ಎರಡನೇ ಹಂತದಲ್ಲಿ  ಭರೂಚ ನಗರದವರೆಗೆ ನರ್ಮದಾ ನದಿಯ ಎರಡು ಬದಿಯ ದಂಡೆಗಳ ಅಭಿವೃದ್ಧಿ, ರಸ್ತೆ, ರೈಲು, ಹೆಲಿಪ್ಯಾಡ್ ನಿರ್ಮಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು, ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ನಿರ್ಮಿಸುವುದು, ಗರುಡೇಶ್ವರದಿಂದ ಬಾಡಬೂತ್ವರೆಗೆ ಪ್ರವಾಸ ಮಾರ್ಗ, ಸ್ವಚ್ಛ ತಾಂತ್ರಿಕ ಸಂಶೋಧನಾ ಸಂಕೀರ್ಣ ಮತ್ತು ಕೃಷಿ ತರಬೇತಿ ಕೇಂದ್ರಗಳನ್ನು ನಿರ್ಮಾಣ ಮಾಡುವುದರೊಂದಿಗೆ ಪ್ರತಿಮೆ ತಲೆ ಎತ್ತಲಿರುವ ಸ್ಥಳ ಕೇವಲ ಪ್ರವಾಸಿ ತಾಣ ಮಾತ್ರವಾಗಿರದೆ, ಸಕಲ ರೀತಿಯಲ್ಲೂ ಅಭಿವೃದ್ಧಿ ಹೊಂದಿದ ಪ್ರದೇಶವಾಗ ಬೇಕೆಂಬುದು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ನೇತೃತ್ವದ ಸರದಾರ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಏಕತಾ ಟ್ರಸ್ಟ್ ನ  ಉದ್ದೇಶವಾಗಿದೆ.

See also  ಚಾರಣಪ್ರಿಯರಿಗೆ ಮುದ ನೀಡುವ ಕೈಲಾಸ ಬೆಟ್ಟ...

ಹೇಗಿರಲಿದೆ ಉತ್ಕೃಷ್ಟ ಪ್ರತಿಮೆ?
ಸರದಾರ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಏಕತಾ ಟ್ರಸ್ಟ್ ಹೇಳುವಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಸಹಜ ಕೊಡುಗೆಯೊಂದಿಗೆ ನಡೆಯುವ ಭಂಗಿಯಲ್ಲಿ ಪ್ರತಿಮೆ ನಿರ್ಮಾಣವಾಗಲಿದ್ದು, ಸಹಜ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆಯಂತೆ. ಕಂಚಿನ ಲೇಪನ ಮೂರ್ತಿಗೆ ಮೆರಗು ನೀಡಲಿದೆ. ಇನ್ನು ಪ್ರತಿಮೆಯು ಮೂರು ಅಂತಸ್ತಿನಿಂದ ಕೂಡಿದ್ದು, ತಳಭಾಗ ಪ್ರದರ್ಶನ ಮಹಡಿ, ಪ್ರದರ್ಶನ ತಳಮನೆ, ನಡುಮನೆ ಮತ್ತು ಮೇಲ್ಮಹಡಿಗಳನ್ನು ಹೊಂದಿರುತ್ತದೆ. ಇದರಲ್ಲಿ ಸ್ಮಾರಕ, ಉದ್ಯಾನ ಮತ್ತು ಅದ್ಬುತ ಪ್ರದರ್ಶನದ ಸಭಾಂಗಣವಿರುತ್ತದೆ.

ಸುಮಾರು 200 ಜನ ಏಕಕಾಲದಲ್ಲಿ ನಿಂತು ವೀಕ್ಷಿಸಲು ಅನುಕೂಲವಾಗುವಂತೆ ವೀಕ್ಷಣಾ ಮಹಡಿ(ಪ್ರೇಕ್ಷಕರ ಗ್ಯಾಲರಿ)ಯನ್ನು ನಿರ್ಮಿಸಲಾಗುತ್ತದೆ. ಇಲ್ಲಿಂದ ನಿಂತು ಪ್ರವಾಸಿಗರು ಸತ್ಪುದ ಮತ್ತು ವಿಂದ್ಯಾಚಲ ಪರ್ವತ ಶ್ರೇಣಿ ಸರೋವರಗಳನ್ನೊಳಗೊಂಡ  ನಿಸರ್ಗ ಸೌಂದರ್ಯವಲ್ಲದೆ, ಅರಬ್ಬಿ ಸಮುದ್ರವನ್ನು ವೀಕ್ಷಿಸಲು ಸಾಧ್ಯವಾಗಲಿದೆ.

ಇದೆಲ್ಲದರ ಜೊತೆಗೆ ಅತ್ಯಾಧುನಿಕ ಶೈಲಿಯ ನೀರಡಿಯ ಮತ್ಸಾಲಯ ನಿರ್ಮಿಸುವ  ಉದ್ದೇಶವಿದೆ. ಇದರೊಂದಿಗೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾದ ಹಾಗೂ ಜನರ ಜೀವನಾಧಾರಕ್ಕೆ ಅನುಕೂಲವಾಗುವಂತೆ ಮಳಿಗೆಗಳ ಸಂಕೀರ್ಣವನ್ನು ನಿರ್ಮಾಣ ಮಾಡಿ ಅಲ್ಲಿ ಹೋಟೆಲ್, ಅಂಗಡಿ ಹಾಗೂ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಪ್ರತಿಮೆ ನಿರ್ಮಾಣದ ನಂತರ ಪ್ರತಿದಿನವೂ 15 ಸಾವಿರ ಪ್ರೇಕ್ಷಕರು ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆಯಿದ್ದು, ಅದನ್ನು ಹೆಚ್ಚಿಸುವ ಹಾಗೂ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಮಾರ್ಗದ ನಿರ್ದಿಷ್ಟ ಸ್ಥಳಗಳಲ್ಲಿ ಚಾಕ್ಷುಕ ಮತ್ತು ಶ್ರವ್ಯ ಪ್ರಾದರ್ಶಿಕೆಗಳನ್ನು ನಿರ್ಮಿಸಲು ಯೋಜಿಸಲಾಗುತ್ತಿದೆ. ಸುಮಾರು 3ಸಾವಿರ ಜನ ಪ್ರತಿಮೆಯನ್ನೇರಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತಿದ್ದು, ಆ ಮೂಲಕ ವೀಕ್ಷಣಾ ಸ್ಥಳವನ್ನು ತಲುಪಲು ಸಾಧ್ಯವಾಗಲಿದೆ.

ವಿಶ್ವದ ಅತಿ ಎತ್ತರದ ಪ್ರತಿಮೆ!
ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ನೆರವೇರಿದರೆ ಸ್ಟ್ಯಾಚ್ಯೂ ಆಫ್ ಯೂನಿಟಿ ನ್ಯೂಯಾರ್ಕ್ ನಲ್ಲಿರುವ ಸ್ವಾತಂತ್ರ್ಯ ಮೂರ್ತಿಗಿಂತ ಎರಡುಪಟ್ಟು ಹಾಗೂ ರಿಯೊ-ಡಿ-ಜನೈರೋದಲ್ಲಿರುವ ವಿಮೋಚಕ ಕ್ರಿಸ್ತನ ಮೂರ್ತಿಯ ಎತ್ತರಕ್ಕಿಂತ ಐದು ಪಟ್ಟು ಎತ್ತರವನ್ನು ಹೊಂದಲಿದೆಯಲ್ಲದೆ, ಆ ಮೂಲಕ ವಿಶ್ವದಲ್ಲಿರುವ ಎಲ್ಲಾ ಪ್ರತಿಮೆಗಳಿಗಿಂತ  ಅತಿ ಹೆಚ್ಚು ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು