News Kannada
Sunday, September 25 2022

ನುಡಿಚಿತ್ರ

ರೋಚಕ ಬದುಕಿನ ಉರಗಪ್ರೇಮಿ: ಗುರುರಾಜ್ ಸನಿಲ್ - 1 min read

Photo Credit :

ರೋಚಕ ಬದುಕಿನ ಉರಗಪ್ರೇಮಿ: ಗುರುರಾಜ್ ಸನಿಲ್

ಹಾವುಗಳೆಂದರೆ ನಮಗೆ ಬಹುತೇಕರಿಗೆ ಭಯೋತ್ಪಾಕ ಜೀವಿ. ಬಹುತೇಕರು ಹಾವುಗಳಿಂದ ಮಾರುದೂರ ಹೋಗಲು ಅವುಗಳಲ್ಲಿನ ಮಾರಾಣಾಂತಿಕ ವಿಷ ಮಾತ್ರ ಕಾರಣವಲ್ಲದೆ ಅವುಗಳ ದೇಹ ರಚನೆಯೂ ಒಂದು ಪ್ರಮುಖ ಕಾರಣ. ಆದರೆ ನಮ್ಮಗಳ ನಡುವಲ್ಲಿನ ಬೆರಳೆಣಿಕೆಯಷ್ಟು ಮಂದಿಗೆ ಹಾವಿನ ಮೇಲೆ ಎಲ್ಲಿಲ್ಲದ ಮೋಹ. ಅಂತಹ ವ್ಯಕ್ತಿಗಳ ನಡುವೆ ಗುರುರಾಜ್ ಸನಿಲ್ ಕೂಡಾ ಒಬ್ಬರು.

1968ರ ಜೂನ್ 14ರಂದು ಉಡುಪಿಯ ತೆಂಕುಪೇಟೆಯಲ್ಲಿ ಶೇಷಪ್ಪ ಮತ್ತು ಸುಂದರಿ ಪೂಜಾರಿಯವರ ಜ್ಯೇಷ್ಠ ಪುತ್ರನಾಗಿ ಜನಿಸಿದ ಗುರುರಾಜ್ ಅವರು ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ ಕುಂಜಿಬೆಟ್ಟು ಮತ್ತು ಮುಂಬೈ ಫೋಟ್ ಹೈಸ್ಕೂಲ್ ನಲ್ಲಿ ಶಿಕ್ಷಣವನ್ನು ಪೂರೈಸಿದರು. ತೀವ್ರ ಬಡತನದಿಂದಾಗಿ ಹೈಸ್ಕೂಲ್ ಶಿಕ್ಷಣವನ್ನು ಮೊಟಕುಗೊಳಿಸಿ ಆಟೋ ಚಾಲಕನಾಗಿ ವೃತ್ತಿ ಆರಂಭಿಸಿದ ಗುರುರಾಜ್ ಅವರು ಪತ್ನಿ ಮತ್ತು ಪುತ್ರ ಅಕ್ಷಯ್ ನೊಂದಿಗೆ ಉಡುಪಿ ಪುತ್ತೂರಿನ ಕೊಳಂಬೆಯಲ್ಲಿ ವಾಸಿಸುತ್ತಿದ್ದಾರೆ. ತಮ್ಮ 5ನೇ ವಯಸ್ಸಿನಿಂದಲೇ ಹಾವುಗಳ ಬಗ್ಗೆ ವಿಪರೀತ ಕುತೂಹಲ ಮೂಡಿತ್ತು. ತಮ್ಮ ವಿಜ್ಞಾನ ಶಿಕ್ಷಕ ದಾಮೋದರ ಆಚಾರ್ಯರು ಶಾಲೆಯಲ್ಲಿ ಸಾಕುತ್ತಿದ್ದ ಹೆಬ್ಬಾವೊಂದರ ಜೀವನಕ್ರಮವನ್ನು ವೀಕ್ಷಿಸುತ್ತ ಬೆಳೆದ ಗುರುರಾಜ್ ಅವರು ತಮ್ಮ ಹತ್ತನೇ ವಯಸ್ಸಿನಲ್ಲಿ ಹೆಬ್ಬಾವಿನ ಮರಿಯೊಂದನ್ನು ಹಿಡಿಯುವುದರ ಮೂಲಕ ಹಾವುಗಳ ಒಡನಾಟಕ್ಕೆ ಮುನ್ನುಡಿ ಬರೆಯುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ 30 ವರುಷಗಳಲ್ಲಿ ಹಲವು ಬಗೆಯೆ ಸಾವಿರಾರು ವಿಷಪೂರಿತ ಹಾವುಗಳನ್ನು ಹೂವಿನಷ್ಟೇ ಸಲೀಸಾಗಿ ಹಿಡಿದಿರುವ ಗುರುರಾಜ್ ಅವರು ಹಾವುಗಳ ಸಂಗದಿಂದ ಸಾವಿನ ಬಾಗಿಲನ್ನೂ ತಟ್ಟಿ ಬಂದವರು.

ಅಧಿಕೃತ ದಾಖಲೆಗಳ ಪ್ರಕಾರ 16,000 ಕ್ಕೂ ಅಧಿಕ ಹಾವುಗಳನ್ನು, 54 ಕಾಳಿಂಗಸರ್ಪಗಳನ್ನೂ ರಕ್ಷಿಸಿರುವ ಅನುಭವಿ ಗುರುರಾಜ್ 13 ಬಾರಿ ಮೂರು ಪ್ರಭೇದದ ವಿಷಪೂರಿತ ಹಾವುಗಳಿಂದ ಕಚ್ಚಿಸಿಕೊಂಡಿದ್ದಾರೆ. ಒಂದು ಬಾರಿ ನಾಗರಹಾವಿನ ಮಾರಣಾಂತಿಕ ಕಡಿತದಿಂದ ಮೂರು ದಿನಗಳ ಕಾಲ ಕೋಮ ಸ್ಥಿತಿಯಲ್ಲಿದ್ದು, ನಾಲ್ಕೂವರೆ ತಿಂಗಳು ಆಸ್ಪತ್ರೆ ವಾಸವನ್ನು ಅನುಭವಿಸಿದ್ದಾರೆ. ಹಲವು ವರ್ಷಗಳಿಂದ ನಗರೀಕರಣಕ್ಕೆ ಸಿಲುಕುತ್ತಿರುವ ನಾನಾ ಜಾತಿಯ ಹಾವುಗಳ ಮೊಟ್ಟೆಗಳನ್ನು ರಕ್ಷಿಸಿ, ಕೃತಕ ಕಾವು ನೀಡಿ ಮರಿಗಳು ಜನಿಸುವಂತೆ ಮಾಡುವ ಮತ್ತು ಘಾಸಿಗೊಳ್ಳುವ ಹಾವುಗಳಿಗೆ ಶುಶ್ರೂಷೆ ನೀಡಿ ಸಂರಕ್ಷಿಸುವ ಇವರ ಸೇವೆಯನ್ನು ಗುರುತಿಸಿ ಬೆಂಗಳೂರಿನ ‘ಕರುಣಾ ಪ್ರಾಣಿ ದಯಾ ಸಂಸ್ಥೆ’ಯು 2004ರಲ್ಲಿ ‘ಕರುಣಾ ಎನಿಮಲ್ ವೆಲ್ ಫೇರ್ ಅವಾರ್ಡ್’, ಕರ್ನಾಟಕ ಅರಣ್ಯ ಇಲಾಖೆಯು 2013ರಲ್ಲಿ ಮಾನ್ಯ ಅರಣ್ಯ ಮಂತ್ರಿಗಳ ಸಮ್ಮುಖದಲ್ಲಿ ‘ಅರಣ್ಯಮಿತ್ರ’ ಪ್ರಶಸ್ತಿ ನೀಡುವುದರೊಂದಿಗೆ ‘ಅಧಿಕೃತ ಅನುಮತಿ ಪತ್ರ’ವನ್ನೂ ನೀಡಿದೆ. ಇತ್ತೀಚೆಗೆ ನವೆಂಬರ್ 29, 2015ರಂದು ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಇವುಗಳ ಜೊತೆಯಲ್ಲೇ ಲಯನ್ಸ್, ರೋಟರಿ ಮತ್ತು ಜೇಸಿಸ್ ನಂಥ ಅನೇಕ ಸಮಾಜ ಸೇವಾ ಸಂಸ್ಥೆಗಳು ನೂರಾರು ಬಾರಿ ಸನ್ಮಾನಿಸಿವೆ.

ಗುರುರಾಜ್ ಅವರು ಸಾರ್ವಜನಿಕರಿಗೆ ಪ್ರಾಣಭಯವಾಗಿರುವ ಹಾವುಗಳನ್ನು ಹಿಡಿದಿರುವುದು ಮಾತ್ರವಲ್ಲದೆ ಅವುಗಳ ಬಗ್ಗೆ ಅಧ್ಯಯನ ಮಾಡಿ, ಕರ್ನಾಟಕದಾದ್ಯಂತ ಸುಮಾರು 250ಕ್ಕೂ ಹೆಚ್ಚು ಉರಗಪ್ರಾತ್ಯಕ್ಷಿಕೆ, ಉಪನ್ಯಾಸಗಳನ್ನು ನೀಡುತ್ತಾ ಜನರಲ್ಲಿ ಉರಗಗಳ ಬಗ್ಗೆ ಅಡಗಿರುವ ಕೀಳರಿಮೆಯನ್ನು ಹೋಗಲಾಡಿಸಿ ಹಾವು ಮತ್ತು ಪರಿಸರದ ಕುರಿತು ವಿಶೇಷ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಒಬ್ಬ ಪರಿಸರ ಲೇಖಕರಾಗಿಯೂ ಕಾರ್ಯಪ್ರವೃತ್ತರಾಗಿರುವ ಇವರು 2010ರಲ್ಲಿ ‘ಹಾವು ನಾವು’  2012ರಲ್ಲಿ ‘ದೇವರ ಹಾವು ನಂಬಿಕೆ-ವಾಸ್ತವ’, 2013ರಲ್ಲಿ ‘ಹಾವು ನಾವು ಪರಿಷ್ಕೃತ ಆವೃತ್ತಿ’ ಹಾಗೂ 2016 ರಲ್ಲಿ ‘ಹುತ್ತದ ಸುತ್ತಮುತ್ತ’ ಕೃತಿಗಳನ್ನು ರಚಿಸಿದ್ದಾರೆ. ‘ಹಾವು ನಾವು’ ಕೃತಿಗೆ 2014ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತವಿಧಿ ಪ್ರಶಸ್ತಿಯೂ ದೊರಕಿದೆ. ಹಲವಾರು ಪ್ರಖ್ಯಾತ ಪತ್ರಿಕೆಗಳಿಗೆ ಪರಿಸರ ಮತ್ತು ವನ್ಯಜೀವಿ ಸಂಬಂಧ ಲೇಖನಗಳನ್ನು ಬರೆಯುತ್ತಿರುವ ಗುರುರಾಜ್ ಸನಿಲ್ ಅವರಿಗೆ ಪರಿಸರದ ಬಗ್ಗೆಯೂ ಎಲ್ಲಿಲ್ಲದ ಕಾಳಜಿ. ಸುಮಾರು ಹದಿನಾಲ್ಕು ವರುಷಗಳಿಂದ ನೂರಾರು ಜಾತಿಯ ಗಿಡಗಳನ್ನು ಕುಂಡಗಳಲ್ಲಿ ನೆಟ್ಟು ‘ಕುಬ್ಜವೃಕ್ಷ’ಗಳ ಮಾದರಿಯಲ್ಲಿ ಬೆಳೆಸುವ ಹವ್ಯಾಸದೊಂದಿಗೆ ನಾಡನ್ನು ಸದಾ ಹಸಿರಾಗಿಡುವ ಸಂಕಲ್ಪದಿಂದ ಹುಟ್ಟಿಕೊಂಡ ‘ನಮ್ಮ ಮನೆ ನಮ್ಮ ಮರ’ ಎಂಬ ಹಸಿರು ಅಭಿಯಾನ ತಂಡದ ಮುಖ್ಯ ಸದಸ್ಯರೂ ಆಗಿದ್ದಾರೆ.

See also  ಮೈಸೂರೇಕೆ ಇಷ್ಟವಾಗುತ್ತದೆ ಗೊತ್ತಾ?

ಛಾಯಾಚಿತ್ರಗ್ರಹಣದಲ್ಲೂ ಅಪಾರ ಆಸಕ್ತಿ ಹೊಂದಿರುವ ಗುರುರಾಜ್ ಅವರು ರಾಜ್ಯಾದಾದ್ಯಂತ ಸಂಚರಿಸಿ ವಿವಿಧ ಪ್ರದೇಶಗಳ ಜನಜೀವನ, ಕಲೆ ಮತ್ತು ಸಂಸ್ಕೃತಿಯ ಕುರಿತು ಕ್ಲಿಕ್ಕಿಸಿದ ಬಹುತೇಕ ಚಿತ್ರಗಳು ‘ಆಳ್ವಾಸ್ ವಿಶ್ವ ನುಡಿಸಿರಿ-ಆಳ್ವಾಸ್ ವಿರಾಸತ್ 2013’ರ ‘ಸಿರಿಗನ್ನಡ’ ಮತ್ತು ಕರಾವಳಿ ಕರ್ನಾಟಕ ಹಾಗೂ ಇತರ ಕೆಲವು ಕೃತಿಗಳಲ್ಲಿ ಪ್ರಕಟಗೊಂಡಿವೆ.

ಹಾವುಗಳು ಮತ್ತು ಪರಿಸರದ ಬಗ್ಗೆ ವಿಶೇಷವಾದ ಕಾಳಜಿ ಹೊಂದಿರುವ ಉರಗಪ್ರೇಮಿ, ಪರಿಸರ ಸ್ನೇಹಿ, ಜನಮೆಚ್ಚಿನ ಗುರುರಾಜ್ ಸನಿಲ್ ಅವರ ಪುಣ್ಯದ ಕೆಲಸವು ಸುದೀರ್ಘವಾಗಿ ವಿಸ್ತರಿಸಲಿ. ಫಲಾಪೇಕ್ಷೆ ಬಯಸದ ಅವರ ಕಾರ್ಯಗಳಿಗೆ ಸರಕಾರ ಮತ್ತು ಜನರಿಂದ ಉತ್ತಮ ಬೆಂಬಲ ದೊರೆಯಲಿ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ಇವರನ್ನು ಹುಡುಕಿ ಬರಲಿ ಎಂಬುದು ನ್ಯೂಸ್ ಕನ್ನಡದ ಆಶಯ. ಮುಂದಿನ ದಿನಗಳಲ್ಲಿ ನ್ಯೂಸ್ ಕನ್ನಡ.ಕಾಮ್ ಅಂತರ್ಜಾಲದಲ್ಲಿ ‘ಗುರುರಾಜ್ ಸನಿಲ್’ ರವರ ಹಾವು, ಪರಿಸರ ಹಾಗೂ ವನ್ಯ ಜೀವಿಗಳ ಕುರಿತು ‘ಹುತ್ತದ ಸುತ್ತಮುತ್ತ’ ಎಂಬ ಶೀರ್ಷಿಕೆಯಡಿಯಲ್ಲಿ ಓದುಗರಿಗಾಗಿ ಅಂಕಣ ಬರಹ ಮೂಡಿ ಬರಲಿದೆ. ಸನಿಲ್ ರವರ ಬರವಣಿಗೆಗೆ ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು