News Kannada
Monday, September 26 2022

ನುಡಿಚಿತ್ರ

ಕೊಡಗಿನವರಿಗೆ ಕಹಿಯಾದ ಸವಿಜೇನು - 1 min read

Photo Credit :

ಕೊಡಗಿನವರಿಗೆ ಕಹಿಯಾದ ಸವಿಜೇನು

ಮನೆ ಬಳಿಯಿಟ್ಟ ಜೇನುಪೆಟ್ಟಿಗೆಯಿಂದ ಆರಂಭವಾಗಿ ಕಾಡು, ತೋಟಗಳಲ್ಲಿ ಹೂಬಿಟ್ಟ ಮರ ಬಳ್ಳಿಗಳಲ್ಲಿ ಗುಂಯ್ಯಿನ್ನೆತ್ತಾ ಝೇಂಕರಿಸುತ್ತಿದ್ದ ಜೇನು ನೊಣಗಳು ಕೊಡಗಿನಲ್ಲಿ ಕಡಿಮೆಯಾಗಿವೆ. ತೋಟದ ಮರದ ಬುಡದಲ್ಲಿ ಖಾಲಿ ಪೆಟ್ಟಿಗೆಯಿಟ್ಟರೆ ಅದಕ್ಕೆ ಬಂದು ಸೇರಿಕೊಳ್ಳುತ್ತಿದ್ದ ಜೇನು ಕುಟುಂಬಗಳು ಮರೆಯಾಗಿವೆ.

ಮನೆಗಳಿಂದ ಹಿಡಿದು ಸೊಸೈಟಿವರೆಗೆ ಸಿಗುತ್ತಿದ್ದ ಶುದ್ಧ ಜೇನುಗಳು ಈಗ ಕಲಬೆರಕೆಯಾಗಿವೆ. ಪ್ರತಿ ಮನೆಗಳಲ್ಲಿ ಜೇನು ಸಾಕಣೆ ಮೂಲಕ ಜೇನು ಸಂಗ್ರಹಿಸುತ್ತಿದ್ದವರು ಈಗ ಜೇನುಕುಟುಂಬಗಳು ಸಿಗದ ಕಾರಣ ಜೇನು ಪೆಟ್ಟಿಗೆಗಳನ್ನು ಮೂಲೆಗೆ ಹಾಕಿದ್ದಾರೆ.

ಇನ್ನು ಕಾಡಿನ, ಕಾಫಿ ತೋಟಗಳ ಮರದ ಪೊಟರೆಗಳಲ್ಲಿ.. ಹುತ್ತಗಳ ಸಂದಿನಲ್ಲಿ.. ಹೀಗೆ ಎಲ್ಲೆಂದರಲ್ಲಿ ಆಶ್ರಯ ಪಡೆದು ಜೇನುಕಟ್ಟುತ್ತಿದ್ದವಾದರೂ ಈಗ ಅವು ಕಾಣುವುದೇ ಅಪರೂಪವಾಗುತ್ತಿದೆ. ಉಪಕಸುಬಾಗಿದ್ದ ಜೇನು ಸಾಕಣೆ ಬಹುತೇಕ ಕೊಡಗಿನಿಂದ ಕಣ್ಮರೆಯಾಗಿದೆ ಎಂದರೂ ತಪ್ಪಾಗಲಾರದು.  ಏಲಕ್ಕಿ ಕೃಷಿಯೇ ಪ್ರಧಾನವಾಗಿದ್ದ ಕಾಲದಲ್ಲಿ ಕಾಡು ಜಾಸ್ತಿಯಿತ್ತಲ್ಲದೆ ಜೇನಿಗೆ ಬೇಕಾದ ಮಕರಂದವೂ ಹೇರಳವಾಗಿ  ದೊರೆಯುತ್ತಿತ್ತು. ಈಗಿನಂತೆ ರಾಸಾಯನಿಕದ ಬಳಕೆಯೂ ಹೆಚ್ಚಿನ ಪ್ರಮಾಣದಲ್ಲಿ ಇರಲಿಲ್ಲ ಇದರಿಂದಾಗಿ ಜೇನು ಸಮೃದ್ಧವಾಗಿತ್ತು.

ಆದರೆ ಕಳೆದ ಎರಡು ದಶಕಗಳಿಂದ ಜೇನು ಸಾಕಾಣಿಕೆ ಅವನಾಶದ ಅಂಚಿಗೆ ತಲುಪಿದೆ. ಇದಕ್ಕೆ ಕೊಡಗಿನ ನಿಸರ್ಗದಲ್ಲಾದ ಬದಲಾವಣೆ, ಪರಿಸರ ನಾಶ, ಹೇರಳವಾಗಿ ಉಪಯೋಗಿಸುತ್ತಿರುವ ಕ್ರಿಮಿನಾಶಕಗಳು ಕಾರಣವಾಗಿದೆ.

ಹಿಂದೆ ಕೊಡಗಿನಾದ್ಯಂತ ಜೇನು ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಸಹಕಾರ ಸಂಘ ಸೇರಿದಂತೆ ಮಾಹಿತಿ, ತರಬೇತಿ ಕೇಂದ್ರಗಳು ಹುಟ್ಟಿಕೊಂಡಿದ್ದವು. ಆದರೆ ಯಾವಾಗ ಜೇನು ಹುಳುಗಳಿಗೆ ರೋಗ ಬಂದು ಅವುಗಳ ಸಂತತಿ ಕಡಿಮೆಯಾಯಿತೋ ಜನರಲ್ಲಿ ಜೇನು ಸಾಕಣೆಯ ಆಸಕ್ತಿಯೂ ಕಡಿಮೆಯಾಯಿತು. ಪರಿಣಾಮ ಜೇನು ಮಾಹಿತಿ ಕೇಂದ್ರಗಳು ಮೂಲೆಗುಂಪಾದರೆ, ಜೇನುಪೆಟ್ಟಿಗೆಗಳು ಗೆದ್ದಲು ಹಿಡಿದಿವೆ.

ಕೊಡಗಿನ ಬಿರುನಾಣಿ, ತಲಕಾವೇರಿ, ಶಾಂತಳ್ಳಿ ಹೀಗೆ ಹಲವು ಪ್ರದೇಶಗಳ ವ್ಯಾಪ್ತಿ ಜೇನು ಕೃಷಿಗೆ ಉತ್ತಮ ಪ್ರದೇಶವಾಗಿತ್ತು. ಆದರೆ ಜೇನು ಹುಳುಗಳಿಗೂ ಕೆಲವು ರೋಗಗಳು ಬಂದಿದ್ದರಿಂದ ಕುಟುಂಬಗಳು ನಾಶವಾಗಿವೆ. ಜೇನು ಕೃಷಿಯ ಬಗ್ಗೆ ಆಸಕ್ತಿ ವಹಿಸದೆ ಹೋದರೆ ಮುಂದಿನ ದಿನಗಳಲ್ಲಿ ಕೊಡಗಿನ ಸವಿಜೇನು ನಾಪತ್ತೆಯಾಗಿ ಕಲಬೆರಕೆ ಜೇನುಗಳು ರಾರಾಜಿಸುವ ಕಾಲ ಬಂದರೂ ಅಚ್ಚರಿಪಡಬೇಕಾಗಿಲ್ಲ.

 

See also  ಆಗುಂಬೆಯ ಸೂರ್ಯಸ್ತದ ಸೊಬಗು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು