News Kannada
Tuesday, September 27 2022

ನುಡಿಚಿತ್ರ

ಫೋಟೋಗ್ರಾಫರ್ಸ್ ಡೇ.. ಡಾಗೈರ್ ನೆನಪಾಗುತ್ತಾರೆ - 1 min read

Photo Credit :

ಫೋಟೋಗ್ರಾಫರ್ಸ್ ಡೇ.. ಡಾಗೈರ್ ನೆನಪಾಗುತ್ತಾರೆ

ಎಲ್ಲರಿಗೂ ಒಂದು ದಿನವಿರುವಂತೆ ಆಗಸ್ಟ್ 19ನ್ನು ವಿಶ್ವ ಛಾಯಾಗ್ರಾಹಕರ ದಿನವನ್ನಾಗಿ ವಿಶ್ವದ ಎಲ್ಲಡೆ ಆಚರಿಸಲಾಗುತ್ತಿದೆ. ಅಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಛಾಯಾಗ್ರಾಹಕರು ಸಂತಸ, ಸಂಭ್ರಮಪಡುತ್ತಾರೆ. ಜೊತೆಗೆ  ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆಗೈದ ಛಾಯಾಗ್ರಾಹಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ.

ಇವತ್ತು ಛಾಯಾಗ್ರಹಣ ಕ್ಷೇತ್ರ ಎಲ್ಲಾ ವಿಧದ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಯಾಗಿದೆ. ಆದರೆ ಇಷ್ಟೊಂದು ಅಭಿವೃದ್ಧಿ ಒಮ್ಮೆಲೇ ಆಗಿಲ್ಲ ಬದಲಿಗೆ ಹಂತಹಂತವಾಗಿ  ಅಭಿವೃದ್ಧಿಯಾಗಿರುವುದನ್ನು ನಾವು ಒಪ್ಪಲೇ ಬೇಕಾಗುತ್ತದೆ. ಛಾಯಾಗ್ರಹಣ ಕ್ಷೇತ್ರದ ಅಭಿವೃದ್ಧಿಯಾಗಲು ಹಲವರು ತಮ್ಮದೇ ಆದ ತಂತ್ರಜ್ಞಾನವನ್ನು ಬಳಸಿ ಹೊಸ ಪ್ರಯೋಗಗಳನ್ನು  ಮಾಡಿದ್ದಾರೆ. ಅಂತಹವರ ಸಾಲಿಗೆ ಫ್ರಾನ್ಸ್ ದೇಶದ ಎಲ್.ಜೆ.ಎಂ.ಡಾಗೈರ್ ಸೇರುತ್ತಾರೆ. ಅವರನ್ನು ಛಾಯಾಗ್ರಹಣದ ಪಿತಾಮಹ ಎಂದು ಕೂಡ ಕರೆಯಲಾಗುತ್ತದೆ. ವಿಶ್ವ ಛಾಯಾಗ್ರಾಹಕರ ದಿನದಂದು ಪ್ರತಿಯೊಬ್ಬರು ಡಾಗೈರ್ ಅನ್ನು ನೆನಪಿಸಿಕೊಳ್ಳಲೇ ಬೇಕು. ಏಕೆಂದರೆ ಅವರು ಛಾಯಾಗ್ರಹಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.

ಫ್ರಾನ್ಸ್ ನ ಕುಗ್ರಾಮವಾದ ಕಾರ್ಮೆಲ್ಲೀಸ್ ಎಂಬಲ್ಲಿ 18ನೇ ನವೆಂಬರ್ 1787ರಲ್ಲಿ ಡಾಗೈರ್ ಜನಿಸಿದರು. ವಿದ್ಯಾಭ್ಯಾಸದ ಬಳಿಕ ಹೊಟ್ಟೆಪಾಡಿಗಾಗಿ ಬೇರ ಬೇರೆ ವೃತ್ತಿಗಳನ್ನು ಮಾಡಿದರಾದರೂ ಕೊನೆಗೆ 1829ರಲ್ಲಿ ಛಾಯಾಗ್ರಹಣದ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಶ್ರಮವಹಿಸಿ ದುಡಿದ ಅವರು ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಆಸಕ್ತಿಯಿಂದ ತಿಳಿದುಕೊಂಡರು. ಅಷ್ಟೇ ಅಲ್ಲ ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಅಂದರೆ 1833ರ ವೇಳೆಗೆ ಇಡೀ ಕಂಪೆನಿಯ ಚುಕ್ಕಾಣಿಯನ್ನು ತಮ್ಮ ಕೈಗೆ ಪಡೆದುಕೊಂಡರು. ಆ ನಂತರ ಹೆಚ್ಚಿನ ಶ್ರಮವಹಿಸಿ ದುಡಿದ ಅವರು ಕೆಲವೇ ವರ್ಷಗಳಲ್ಲಿ ಎಲ್ಲೆಡೆ ಡಾಗೈರ್ ಕಂಪೆನಿ ಎಂದೇ ಕರೆಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆದು ನಿಂತರು.

ಛಾಯಾಗ್ರಹಣ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ತುಡಿತದಲ್ಲಿದ್ದ ಅವರು ಬೆಳ್ಳಿ ಲೇಪನದ ಫಲಕಗಳನ್ನು ಬಳಸಿ ಅವುಗಳ ಮೇಲೆ ಅಯೋಡೈಡ್ ಅನ್ನು ಲೇಪಿಸಿ ನಂತರ ಅದನ್ನು ಅಯೋಡಿನ್ ಹಬೆಯೊಂದಿಗೆ ವರ್ತಿಸುವಂತೆ ಮಾಡಿ ಚಿತ್ರಗ್ರಹಣದ ಕಾಲವನ್ನು ಎಂಟು ಗಂಟೆಯಿಂದ ಮೂವತ್ತು ನಿಮಿಷಕ್ಕೆ ಸೀಮಿತಗೊಳಿಸಿ ಒಮ್ಮೆಲೆ ಪಾಸಿಟಿವ್ (ಧನ) ಪ್ರಿಂಟನ್ನು ಪಡೆಯುವ ತಂತ್ರವನ್ನು ಕಂಡು ಹಿಡಿದರು. 1837ರ ಸುಮಾರಿಗೆ ಲವಣಜಲದಲ್ಲಿ ಈ ಚಿತ್ರವನ್ನು ಮುಳುಗಿಸಿ ಅದರ ಶಾಶ್ವತ ಚಿತ್ರವನ್ನು ಪಡೆದು ಸಫಲರಾದರು. ಈ ವಿಧಾನದಿಂದ ಒಮ್ಮೆಲೆ ಒಂದೇ ಪಾಸಿಟಿವ್ ಚಿತ್ರವನ್ನು ಪಡೆಯಲು ಸಾಧ್ಯವೇ ವಿನಃ ಅದಕ್ಕಿಂತ ಹೆಚ್ಚಿನ ಚಿತ್ರಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬುವುದನ್ನು ಮನದಟ್ಟು ಮಾಡಿಕೊಂಡರು.

ಡಾಗೈರ್ ರವರು ಬರೆದ ಕಿರುಪುಸ್ತಕ ಡಾಗೈರ್ವಿಧಾನವೆಂದು ವಿಶ್ವದ  ಹನ್ನೆರಡು ಭಾಷೆಯಲ್ಲಿ ಪ್ರಕಟವಾಗಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೆ ಈ ವಿಧಾನ ವಿಶ್ವದ ಎಲ್ಲಾ ಸ್ಟುಡಿಯೋಗಳಲ್ಲಿ ಆರಂಭವಾಗಲು ಕೂಡ ಕಾರಣವಾಯಿತು.  ಹೀಗೆ ಛಾಯಾಗ್ರಹಣ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ಡಾಗೈರ್ 10ನೇ ಜುಲೈ 1851ರಲ್ಲಿ ತಮ್ಮ 66ನೇ ವಯಸ್ಸಿಗೆ ನಿಧನರಾದರು. ಅಂತಹ ಸಾಧಕನ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 19ನ್ನು ವಿಶ್ವ ಛಾಯಾಗ್ರಾಹಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಇಂದು ಛಾಯಾಗ್ರಹಣ ಕ್ಷೇತ್ರ ವ್ಯಾಪ್ತಿಗೂ ಮೀರಿ ಬೆಳೆದಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ವಿವಿಧ ನಮೂನೆಯ ಕ್ಯಾಮರಾಗಳು ಬರುವ ಮೂಲಕ ಛಾಯಾಗ್ರಹಣ ಕ್ಷೇತ್ರದಲ್ಲಿ ಕ್ರಾಂತಿಗಳಾಗಿವೆ. ಆದರೂ ಇಷ್ಟೆಲ್ಲಾ ಅಭಿವೃದ್ಧಿಯ  ಹಿಂದೆ ಡಾಗೈರ್ ರಂತಹ ಸಾಧಕರ ಶ್ರಮವಿರುವುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ ಛಾಯಾಗ್ರಹಣ ಕ್ಷೇತ್ರಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟಂತಹ ಡಾಗೈರ್ ಅನ್ನು ವಿಶ್ವ ಛಾಯಾಗ್ರಾಹಕರ ದಿನಾಚರಣೆ ಸಂದರ್ಭ ನೆನಪಿಸಿಕೊಳ್ಳಲೇ ಬೇಕಾಗುತ್ತದೆ.

See also  ಬ್ರಿಟೀಷರು ಜೆಸ್ಸಿ ಎಂದು ಕರೆದರೂ ಬದಲಾಗದ ಅಬ್ಬಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು