News Kannada
Saturday, October 01 2022

ನುಡಿಚಿತ್ರ

ನಾಗರ ಮಿಲನವೂ, ಕಾಗೆಯ ಪುಕ್ಕಗಳೂ ಸೃಷ್ಟಿಸಿದ ಅವಾಂತರ, ಬಲಿಯಾದ ನಾಗಬನ! - 1 min read

Photo Credit :

ನಾಗರ ಮಿಲನವೂ, ಕಾಗೆಯ ಪುಕ್ಕಗಳೂ ಸೃಷ್ಟಿಸಿದ ಅವಾಂತರ, ಬಲಿಯಾದ ನಾಗಬನ!

ಈವತ್ತು ಹೊರಟಿದ್ದು ಹೆಬ್ರಿ ಸಮೀಪದ ಶಿವಪುರವೆಂಬ ಪಶ್ಚಿಮಘಟ್ಟದ ತಪ್ಪಲಿಗೆ. ಪಶ್ಚಿಮಘಟ್ಟದತ್ತ ಪಯಣಿಸುವುದೆಂದರೆ ಅದೆಂತಹದ್ದೋ ಆನಂದ. ಅಲ್ಲಿನ ಅಗಾಧ ಹಸಿರರಾಶಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ಸಾಗುತ್ತಿದ್ದಷ್ಟು ಹೊತ್ತು ಮನಸ್ಸು ಪುಳಕಿತವಾಗಿರುತ್ತದೆ. ಕೆಲವು ದಿನಗಳಿಂದ ಅಲ್ಲಿನ ವಠಾರವೊಂದರಲ್ಲಿ ದೊಡ್ಡ ನಾಗರಹಾವೊಂದು ಸೃಷ್ಟಿಸುತ್ತಿದ್ದ ವಿಚಿತ್ರ ಘಟನೆಯಿಂದಾಗಿ ಮನೆಮಂದಿಯೊಂದಿಗೆ ವಠಾರದವರೂ ಬೆದರಿ ಬೆಂಬಿಡದೆ ಕರೆ ಮಾಡಿದ್ದರಿಂದ ಹೋಗಲೇಬೇಕಾದ ಅನಿವಾರ್ಯವಿತ್ತು.

ಹಿರಿಯಡ್ಕದಿಂದ ಹೆಬ್ರಿಯವರೆಗೆ ದಾರಿಯುದ್ದಕ್ಕೂ ದೈತ್ಯ ವೃಕ್ಷರಾಶಿಯನ್ನು ಕಾಣುತ್ತಾ, ಸಮುದ್ರ ಸೇರ ಹೊರಟ ಒಂದೆರಡು ಹೊಳೆಗಳನ್ನು ಆಸ್ವಾದಿಸುತ್ತಾ ಸಾಗುವುದು ಮುದ ನೀಡುತ್ತದೆ. ಶಿವಪುರಕ್ಕೆ ತಲುಪಿ ಒಂದು ಕಡೆ ಎಡಕ್ಕೆ ತಿರುಗಿ ಕಚ್ಚಾ ಕಾಡು ಹಾದಿ ಹಿಡಿದೆ. ಸುಮಾರು ಒಂದು ಕಿಲೋಮೀಟರ್ವರೆಗೆ ತಂಗಾಳಿ ಬೀಸುತ್ತಾ ಸಹಜಾರಣ್ಯವು ಸ್ವಾಗತಿಸಿದರೂ ಮುಂದೆ ಸಾಗಿದಂತೆಲ್ಲಾ ಭಾರತದ ಜೀವಜಾಲಗಳಿಗೂ ಪರಿಸರಕ್ಕೂ ನಿಷ್ಪ್ರಯೋಜಕವಾಗಿ, ಕೇವಲ ಮಾನವ ಐಷಾರಾಮಕ್ಕೆ ಮಾತ್ರ ಉಪಯುಕ್ತವೆನಿಸುವ ಅಕೇಶಿಯಾವೆಂಬ ವಾಣಿಜ್ಯ ನೆಡುತೋಪು ನಾಲ್ಕೈದು ಕಿಲೋಮೀಟರ್ ಆವರಿಸಿಕೊಂಡಿದ್ದನ್ನು ಕಾಣುವಾಗ ಜಿಗುಪ್ಸೆ ಮೂಡುತ್ತದೆ. ಅದನ್ನೂ ದಾಟಿ ಒಂದಷ್ಟು ದೂರದ ಭೋಗಿ ಮರಗಳಿಂದಾವೃತ್ತವಾದ ಪುಟ್ಟ ಹಾಡಿಯೊಂದರೊಳಗೆ ಪ್ರವೇಶಿಸಿ ಹಂಚಿನ ಮನೆಯೆದುರು ಬಂದು ನಿಲ್ಲುವ ಹೊತ್ತಿಗೆ ರಾತ್ರಿ ಏಳು ಘಂಟೆ. ಎದುರುಗೊಂಡ ಮಧ್ಯಮವರ್ಗದ ಕೆಲವು ಜನರು ವಿಶಾಲ ಅಂಗಳದ ಒಂದು ಮೂಲೆಯಲ್ಲಿ ಹೆಡೆಯೆತ್ತಿ ಬುಸುಗುಡುತ್ತಾ ನಿಂತು ತರತರಾ ನಡುಗುತ್ತಿದ್ದ ದೈತ್ಯ ಗಂಡು ನಾಗರಹಾವೊಂದನ್ನು ತೋರಿಸಿ, ವಿಲಕ್ಷಣ ಕತೆಯೊಂದನ್ನು ಬಿಚ್ಚಿಟ್ಟರು.

ಈ ಮನೆಯ ಮುಂದೆ ಸುಮಾರು ನೂರು ಗಜ ದೂರದಲ್ಲೊಂದು ನಾಗಬನವಿದೆ. ಮೂರು ವರ್ಷದ ಹಿಂದೆ ಹಸಿರು ಮರಮಟ್ಟುಗಳಿಂದ ತುಂಬಿದ್ದ ಅದು ಇತ್ತೀಚೆಗೆ ಜೀರ್ಣೋದ್ಧಾರಗೊಂಡು ಕಾಂಕ್ರೀಟ್ ‘ನಾಗಭವನ’ವಾಗಿದೆ. ಮೂರು ವರ್ಷದ ಹಿಂದೊಮ್ಮೆ ಎಲ್ಲಿಂದಲೋ ಆಕಸ್ಮತ್ತಾಗಿ ಬಂದ ನಾಗರಹಾವೊಂದು ಇವರ ಮನೆಯಂಗಳದಲ್ಲಿ ಸುತ್ತಾಡಲು ಶುರುವಿಟ್ಟುಕೊಂಡಿತಂತೆ. ಮೊದಲಿಗೆ ಇವರು ತಲೆಕೆಡಿಸಿಕೊಳ್ಳದಿದ್ದರೂ ಒಂದೆರಡು ದಿನದ ನಂತರ ಹಾವು ಮನೆಯೊಳಗೇ ಹೊಕ್ಕಲು ಪ್ರಯತ್ನಿಸಿದ್ದನ್ನು ಕಂಡು ಗಾಬರಿಯಾಗಿ ಓಡಿಸಲೆತ್ನಿಸಿದರು. ಮನೆಯೊಳಗೆ ಹೇರಳ ಇಲಿಗಳಿರುವುದನ್ನು ತಿಳಿದಿದ್ದ ಹಾವು ಒಂದೆರಡನ್ನಾದರೂ ಹಿಡಿದು ತಿನ್ನದೆ ಅಲ್ಲಿಂದ ಹೋಗದು ಎಂಬ ಸಂಗತಿ ಇವರಿಗೆ ಗೊತ್ತಿಲ್ಲ. ಹಾಗಾಗಿ ಇವರು ಓಡಿಸಿದಷ್ಟೂ ಹಾವು ಬರುತ್ತಲೇ ಇತ್ತು. ಹಾವಿನ ವರ್ತನೆಯಿಂದ ಕಂಗೆಟ್ಟ ಕಲ್ಲನಾಗನ ಈ ಭಕ್ತರು ದಿಕ್ಕು ತೋಚದೆ ಬನದ ಅರ್ಚಕರ ಮನೆಗೆ ಧಾವಿಸಿ ವಿಷಯ ವಿವರಿಸಿ ಪರಿಹಾರಕ್ಕೆ ಮೊರೆಯಿಟ್ಟರು. ನೈಜ ನಾಗನ ಬಗ್ಗೆ ಇವರಷ್ಟೇ ಅವರೂ ಜ್ಞಾನವಂತರಿರಬೇಕು, ಹಾಗಾಗಿ ‘ನಿಮ್ಮ ನಾಗಬನ ಶಿಥಿಲಾವಸ್ಥೆಯಲ್ಲಿದೆ. ಜೀರ್ಣೋದ್ಧಾರವಾಗಬೇಕೆಂಬ ಸಂಕಲ್ಪ ನಾಗನಿಗಾಗಿದೆ. ಅದನ್ನು ತಿಳಿಸಲು ನಾಗದೂತನು ಆಗಮಿಸಿದ್ದಾನೆ. ಆದಷ್ಟು ಬೇಗ ಹಳೇಬನವನ್ನು ಕೆಡವಿಬಿಡಿ’ ಎಂಬ ಭಯಂಕರ ಸಲಹೆ ನೀಡಿದರಂತೆ. ಇದಾದ ಒಂದು ವಾರದ ನಂತರ ಆ ಹಾವು ಇವರ ಕಣ್ಣು ತಪ್ಪಿಸಿ ಮನೆಯೊಳಗೆ ಹೊಕ್ಕು ಒಂದೆರಡು ಇಲಿಗಳನ್ನು ನುಂಗಿ ಇವರ ಸಮ್ಮುಖದಲ್ಲೇ ಹೊರಗೆ ಹೋಗಿದ್ದು ಮತ್ತೆ ಕಾಣಿಸಲಿಲ್ಲವಾದ್ದರಿಂದ ಜೀರ್ಣೋದ್ಧಾರದ ಕತೆಯನ್ನೂ ಹಾವಿನೊಂದಿಗೇ ಮರೆತು ಬಿಟ್ಟರಿವರು.    

ಮೂರು ವರ್ಷದ ನಂತರ ಇನ್ನೊಂದು ವಿಚಿತ್ರ ಘಟನೆ ನಡೆಯಿತು. ಸಾಮಾನ್ಯ ಗಾತ್ರದ ಮತ್ತೊಂದು ನಾಗರಹಾವು ಮನೆಯೆದುರು ಸುತ್ತಾಡಲು ಶುರುವಾಯಿತು. ಆಗ ಇವರಿಗೆ ಜೀರ್ಣೋದ್ಧಾರದ ನೆನಪಾಯಿತು. ಆದರೂ ಲಕ್ಷಾಂತರ ರೂಪಾಯಿ ಹೊಂದಿಸುವುದೆಲ್ಲಿಂದ? ಎಂಬ ಕೊರಗು ಕಾಡಿದ್ದರಿಂದ ಮೊದಲು ಬಂದ ಹಾವಿನಂತೆಯೇ ಇದೂ ಇಲಿ, ಕೋಳಿ ತಿಂದು ಹೋದೀತೆಂದುಕೊಂಡು ಸುಮ್ಮನಾದರು. ಆ ಹಾವು ಬಂದಿರುವುದು ಇಲಿಗಾಗಿ ಅಲ್ಲ, ‘ಬೆದೆ’ ಸೇರಲು ಎಂಬುದು ಇವರಿಗೆ ಹೇಗೆ ತಿಳಿದೀತು! ಮರುದಿನ ಸಂಜೆ ಹೊತ್ತಿಗೆ ಇನ್ನೆರಡು ದೊಡ್ಡ ಹಾವುಗಳು ಬಂದು ಮೊದಲ ಹಾವು ಸುತ್ತಾಡಿದ ಜಾಗವನ್ನೆಲ್ಲಾ ಸೀಳು ನಾಲಗೆಯಿಂದ ಆಘ್ರಾಣಿಸುತ್ತಾ ರಾಜಾರೋಷವಾಗಿ ಹರಿದಾಡುವುದನ್ನು ಕಂಡ ಮನೆ ಮಂದಿ ಅಧೀರರಾದರು.

See also  ಕೊಡಗಿನವರಿಗೆ ಕಹಿಯಾದ ಸವಿಜೇನು

ಮೂರು ವಿಷಸರ್ಪಗಳು ಕಣ್ಣೆದುರೇ ಸುತ್ತಾಡುವುದನ್ನು ಯಾರು ತಾನೇ ನೋಡುತ್ತಾ ಕುಳಿತಾರು! ದಿಕ್ಕು ತೋಚದೆ ಮತ್ತೆ ಅರ್ಚಕರಲ್ಲಿಗೇ ಓಡಿದರು. ಅವರು ಒಂದಷ್ಟು ಗಂಧಪ್ರಸಾದ ಮಂತ್ರಿಸಿಕೊಟ್ಟು ಹಾವುಗಳ ಮೇಲೆ ಚೆಲ್ಲಿ ಪ್ರಾರ್ಥಿಸಿಕೊಳ್ಳಲು ಹೇಳಿ, ಸಾಧ್ಯವಾದಷ್ಟು ಬೇಗ ಬನ ಜೀರ್ಣೋದ್ಧಾರ ಮಾಡಲು ತಾಕೀತು ಮಾಡಿದರಂತೆ. ತಲೆಗೆ ಕೈಹೊತ್ತು ಹಿಂದಿರುಗಿದ ಮನೆಮಂದಿ ನಾಗರಹಾವುಗಳೆದುರು ಭಯಭಕ್ತಿಯಿಂದ ಪ್ರಾರ್ಥಿಸಿಕೊಂಡ ತುಸು ಹೊತ್ತಿನಲ್ಲಿ ಸಣ್ಣ ಹಾವು ಸಮೀಪದ ಹಾಡಿಯೊಳಗೆ ಹರಿದರೆ ದೊಡ್ಡ ಹಾವುಗಳೆರಡೂ ಅದನ್ನು ಹಿಂಬಾಲಿಸುತ್ತಾ ಕಣ್ಮರೆಯಾದದ್ದು ಇವರಿಗೆಲ್ಲಾ ಆಶ್ಚರ್ಯ ತರಿಸಿತ್ತಂತೆ!( ಮನುಷ್ಯ ಅಥವಾ ಶತ್ರುವೆನಿಸಿದ ಯಾವ ಜೀವಿಯೇ ಆಗಲಿ, ಹಾವಿನ ಸಮೀಪ ಸುಳಿದರೆ ಭಯಗೊಳ್ಳುವ ಅದು ಮತ್ತಲ್ಲಿ ನಿಲ್ಲದು) ಆದ್ದರಿಂದ ತಕ್ಷಣ ಸಾಲ ಸೋಲ ಮಾಡಿ ಬನದ ಒಂದು ಪಾಶ್ರ್ವದ ಇನ್ನೂರು ಮುನ್ನೂರು ವರ್ಷ ಪುರಾತನವಾದ ಮರಗಳನ್ನೆಲ್ಲಾ ಕಡಿದು ಮಾರಿ ಅಂತೂ ನಾಗಭವನ ನಿರ್ಮಿಸಿಯೇ ಬಿಟ್ಟರು.
 
ಕತೆ ಹೇಳುತ್ತಿದ್ದ ನಡುವಯಸ್ಸಿನ ಹೆಂಗಸು ಮುಗಿಸುವ ಹೊತ್ತಿಗೆ ಭಯ, ಭಕ್ತಿಯಿಂದ ರೋಮಾಂಚಿತರಾಗಿ ಕಣ್ಣಾಲಿಗಳು ತುಂಬಿ ಬಂದಿದ್ದವು. ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಗಂಡಸೊಬ್ಬ ‘ಮೂರು ಹಾವುಗಳು ಎರಡು ದಿನ ಒಟ್ಟೊಟ್ಟಿಗಿರಲು ಕಾರಣವೇನಿರಬಹುದು ಸಾರ್’ ಎಂದು ಬಹಳ ಕುತೂಹಲದಿಂದ ಕೇಳಿದ. ‘ಯಾವ ತಿಂಗಳಲ್ಲಿ ಅವು ಕಾಣಿಸಿಕೊಂಡಿದ್ದು?’ ಎಂಬುದಕ್ಕೆ  ‘ಡಿಸೆಂಬರ್ ನಲ್ಲಿ’ ಎಂದು ತಕ್ಷಣ ಉತ್ತರ ಬಂತು. ‘ಮೊದಲು ಕಾಣಿಸಿಕೊಂಡ ಹಾವು ಹೆಣ್ಣು. ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ನಾಗರಹಾವುಗಳ ಮಿಲನಕಾಲ. ಆ ಕಾಲದಲ್ಲಿ ಹೆಣ್ಣುಹಾವು ಎಲ್ಲಿ ಬೆದೆಗೆ ತಯಾರಾಗಿ ‘ಫೆರೋಮೊನ್’ ಎಂಬ ವಾಸನಾದ್ರವ್ಯವನ್ನು ಸ್ರವಿಸುತ್ತದೋ ಅಲ್ಲಿಗೆ ಅನೇಕ ಗಂಡುಹಾವುಗಳು ಬರುತ್ತವೆ. ನಿಮ್ಮಲ್ಲೂ ನಡೆದಿದ್ದು ಅದೇ. ಆದರೆ ಅದನ್ನು ಅಪಾರ್ಥಿಸಿಕೊಂಡು ಸುಂದರವಾದ ಹಸಿರುಬನವನ್ನು ನಾಶ ಮಾಡಿದಿರಿ’ ಎಂದು ತುಸು ಖಾರವಾಗಿಯೇ ಹೇಳಿದಾಗ ಅವರಲ್ಲಿ ಕೆಲವರಿಗೆ ವಿಸ್ಮಯವಾದರೆ ಇನ್ನು ಕೆಲವರಿಗೆ ಪಿಚ್ಚೆನಿಸಿದ್ದನ್ನೂ ಗಮನಿಸಿದೆ.

ಇನ್ನೀಗ ‘ಅಂಗಳದಲ್ಲಿರುವ ಹಾವೇಕೆ ವಿಚಿತ್ರವಾಗಿ ವರ್ತಿಸುತ್ತಿದೆ’ ಎಂಬುದನ್ನೂ ತಿಳಿಸಬೇಕಿತ್ತು. ಏಕೆಂದರೆ ಅದರಿಂದಲೂ ಕಂಗಾಲಾಗಿದ್ದರವರು. ಹಾವನ್ನು ಸರಿಯಾಗಿ ಪರೀಕ್ಷಿಸಿದೆ. ಸುಮಾರು ಹದಿನೈದು ವರ್ಷ ವಯಸ್ಸಿನ ಆ ಮುದಿ ಹಾವು ಮನುಷ್ಯ ಹತ್ತಿರ ಹೋದಾಗಲೆಲ್ಲಾ ಸರಸರನೇ ತುಸು ದೂರ ಹರಿದು ಹೋಗಿ ಗಕ್ಕನೇ ನಿಂತು, ಯಾರೋ ಹಿಡಿದು ಹಿಂಸಿಸಿದಂತೆ, ತನ್ನ ದೇಹಕ್ಕೆ ಯಾರೋ ತಿವಿಯುತ್ತಿದ್ದಂತೆ ನೋವಿನಿಂದ ಬೆಚ್ಚಿ ಬೀಳುತ್ತಾ ಉಗ್ರವಾಗಿ ಬುಸುಗುಟ್ಟಿ ರಪರಪನೇ ಹೆಡೆಯನ್ನು ನೆಲಕ್ಕಪ್ಪಳಿಸುತ್ತಿತ್ತು. ಅದಕ್ಕೆ ದೃಷ್ಟಿದೋಷವಿರಬಹುದೆಂದು ಮೊದಲಿಗೆ ಅನಿಸಿದರೂ ಸೂಕ್ಷ್ಮವಾಗಿ ಗಮನಿಸಿದಾಗ ಆರೋಗ್ಯದ ತೊಂದರೆ ಇರುವಂತೆ ತೋರಿತು. ಆದರೆ ಎರಡು ದಿನಗಳಿಂದಲೂ ಅಂಗಳದಲ್ಲೇ ಇದ್ದು ನೆಲಕ್ಕೆ ಹೆಡೆಯನ್ನಪ್ಪಳಿಸುವ ಹಾವಿನ ಪರಿಯನ್ನು ಕಂಡು ನಾಗದೇವನೇ ಕುಪಿತಗೊಂಡಿದ್ದಾನೆಂದು ಭ್ರಮಿಸಿದ ಮನೆಮಂದಿ ನಿನ್ನೆಯೇ ಪ್ರಶ್ನೆಯಿಡಲು ಹೋಗಿ ಬಂದಾಗಿತ್ತು. ಅಲ್ಲಿ ‘ಹಿಂದೆ ಮಾಡಿದ್ದ ಜೀರ್ಣೋದ್ಧಾರ ಸಂಪನ್ನವಾಗಿಲ್ಲ. ಅದಕ್ಕೊಂದು ಶಾಂತಿ ಮಾಡಿಸಿದರೆ ಹಾವು ಹೊರಟು ಹೋಗುತ್ತದೆ’ ಎಂಬ ಉತ್ತರ ಧಾರ್ಮಿಕ ವಕ್ತಾರರಿಂದ ದೊರಕಿಯೂ ಆಗಿತ್ತು! ‘ಹಾವಿಗೆ ಏನಾಗಿದೆ’ ಎಂಬುದನ್ನು ಮನೆಗೆ ಕೊಂಡೊಯ್ದು ಪರೀಕ್ಷಿಸಿ ನಾಳೆ ತಿಳಿಸುತ್ತೇನೆಂದು ಹೇಳಿ ಹಿಂದಿರುಗಿದೆ.
 
ಮನೆಗೆ ಬಂದು ಹಾವನ್ನು ಹಿಡಿದು ಒತ್ತಾಯಪೂರ್ವಕ ಹೊಟ್ಟೆ ತುಂಬ ನೀರು ಕುಡಿಸಿ ಪಂಜರದೊಳಗೆ ಬಿಟ್ಟು ಮರುದಿನ ನೋಡುತ್ತೇನೆ ಮಲಮೂತ್ರದೊಂದಿಗೆ ಜೀರ್ಣವಾಗದ ಕಾಗೆಯ ರೆಕ್ಕೆಯ ಉದ್ದುದ್ದದ ಒಂದಷ್ಟು ಗರಿಗಳನ್ನೂ ಇಡಿಇಡಿಯಾಗಿ ವಿಸರ್ಜಿಸಿ ಹಾಯಾಗಿ ಮಲಗಿತ್ತದು. ನಡೆದ್ದದೇನೆಂದರೆ, ಕಾಗೆಯನ್ನು ನುಂಗಿದ್ದ ಹಾವದು. ಕಾಗೆಯ ರಕ್ತಮಾಂಸವೆಲ್ಲಾ ಜೀರ್ಣವಾಗಿದ್ದರೂ ರೆಕ್ಕೆಂ ಗರಿಗಳು ಜೀರ್ಣವಾಗದ ಉಳಿದಿದ್ದರಿಂದ ಹಾವು ಸಂಚರಿಸುವಾಗಲೆಲ್ಲಾ ಅವು ಈಟಿಯಂತೆ ತಿವಿಯುತ್ತಿದ್ದವು.  ಅದನ್ನು ತಿಳಿಯದ ಹಾವು ಹೊರಗಿನಿಂದಲೇ ಯಾರೋ ಹಿಂಸಿಸುತ್ತಿದ್ದಾರೆಂದು ಹಾಗೆ ವರ್ತಿಸುತ್ತಿತ್ತು. ಮನೆಮಂದಿಗೆ ಕರೆ ಮಾಡಿದೆ ‘ನಾಗಬನ ಜೀರ್ಣೋದ್ಧಾರ ಅಸಂಪನ್ನವಾಗಿದ್ದರಿಂದ ಹಾವು ಹಾಗೆ ವರ್ತಿಸುತ್ತಿದ್ದುದಲ್ಲ’ ಎಂದು ನಡೆದ ವಿಷಯವನ್ನು ತುಸು ಹೊತ್ತು ಮನ ಮುಟ್ಟುವಂತೆ ವಿವರಿಸಿದೆ. ಅದರಿಂದ ಅವರು ನಿರಾಳರಾಗಿದ್ದು ಬನದ ಅರ್ಚಕರ ಮೇಲೆ ಮಾತಿನ ಮೂಲಕ ಅವರು ತೋರಿಸಿದ ಅಸಮಾಧಾನದಿಂದಲೇ ಅರಿವಾಯಿತು.

See also  ಬತ್ತಿ ಹೋಗಿದೆ ಮಲೆನಾಡಿನ ಜಲಧಾತೆ ಕೆರೆ

ಗುರುರಾಜ್ ಸನಿಲ್ ‘ಅಕ್ಷಯಮನೆ’ ಕೊಳಂಬೆ, ಪುತ್ತೂರು. ಅಂಚೆ ಸಂತೆಕಟ್ಟೆ, ಉಡುಪಿ-576105 ಮೊಬೈಲ್: 9845083869, 8494948844. E-mail- sanilgururaj@gmail.com

ಲೇಖಕರ ಪರಿಚಯ: 1968ರ ಜೂನ್ 14ರಂದು ಉಡುಪಿಯ ತೆಂಕುಪೇಟೆಯಲ್ಲಿ ಶೇಷಪ್ಪ ಮತ್ತು ಸುಂದರಿ ಪೂಜಾರಿಯವರ ಜ್ಯೇಷ್ಠ ಪುತ್ರನಾಗಿ ಜನಿಸಿದ ‘ಗುರುರಾಜ್ ಸನಿಲ್’ ಅವರು ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ ಕುಂಜಿಬೆಟ್ಟು ಮತ್ತು ಮುಂಬೈ ಫೋಟ್ ಹೈಸ್ಕೂಲ್ ನಲ್ಲಿ ಶಿಕ್ಷಣವನ್ನು ಪೂರೈಸಿದರು. ತೀವ್ರ ಬಡತನದಿಂದಾಗಿ ಹೈಸ್ಕೂಲ್ ಶಿಕ್ಷಣವನ್ನು ಮೊಟಕುಗೊಳಿಸಿ ಆಟೋ ಚಾಲಕನಾಗಿ ವೃತ್ತಿ ಆರಂಭಿಸಿದ ಗುರುರಾಜ್ ಅವರು ಪತ್ನಿ ಮತ್ತು ಪುತ್ರ ಅಕ್ಷಯ್ ನೊಂದಿಗೆ ಉಡುಪಿ ಪುತ್ತೂರಿನ ಕೊಳಂಬೆಯಲ್ಲಿ ವಾಸಿಸುತ್ತಿದ್ದಾರೆ. ತಮ್ಮ 5ನೇ ವಯಸ್ಸಿನಿಂದಲೇ ಹಾವುಗಳ ಬಗ್ಗೆ ವಿಪರೀತ ಕುತೂಹಲ ಮೂಡಿತ್ತು. ತಮ್ಮ ವಿಜ್ಞಾನ ಶಿಕ್ಷಕ ದಾಮೋದರ ಆಚಾರ್ಯರು ಶಾಲೆಯಲ್ಲಿ ಸಾಕುತ್ತಿದ್ದ ಹೆಬ್ಬಾವೊಂದರ ಜೀವನಕ್ರಮವನ್ನು ವೀಕ್ಷಿಸುತ್ತ ಬೆಳೆದ ಗುರುರಾಜ್ ಅವರು ತಮ್ಮ ಹತ್ತನೇ ವಯಸ್ಸಿನಲ್ಲಿ ಹೆಬ್ಬಾವಿನ ಮರಿಯೊಂದನ್ನು ಹಿಡಿಯುವುದರ ಮೂಲಕ ಹಾವುಗಳ ಒಡನಾಟಕ್ಕೆ ಮುನ್ನುಡಿ ಬರೆಯುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ 30 ವರುಷಗಳಲ್ಲಿ ಹಲವು ಬಗೆಯೆ ಸಾವಿರಾರು ವಿಷಪೂರಿತ ಹಾವುಗಳನ್ನು ಹೂವಿನಷ್ಟೇ ಸಲೀಸಾಗಿ ಹಿಡಿದಿರುವ ಗುರುರಾಜ್ ಅವರು ಹಾವುಗಳ ಸಂಗದಿಂದ ಸಾವಿನ ಬಾಗಿಲನ್ನೂ ತಟ್ಟಿ ಬಂದವರು. ಇವರ ಸೇವೆಯನ್ನು ಗುರುತಿಸಿ ಬೆಂಗಳೂರಿನ ‘ಕರುಣಾ ಪ್ರಾಣಿ ದಯಾ ಸಂಸ್ಥೆ’ಯು 2004ರಲ್ಲಿ ‘ಕರುಣಾ ಎನಿಮಲ್ ವೆಲ್ ಫೇರ್ ಅವಾರ್ಡ್’, ಕರ್ನಾಟಕ ಅರಣ್ಯ ಇಲಾಖೆಯು 2013ರಲ್ಲಿ ಮಾನ್ಯ ಅರಣ್ಯ ಮಂತ್ರಿಗಳ ಸಮ್ಮುಖದಲ್ಲಿ ‘ಅರಣ್ಯಮಿತ್ರ’ ಪ್ರಶಸ್ತಿ ನೀಡುವುದರೊಂದಿಗೆ ‘ಅಧಿಕೃತ ಅನುಮತಿ ಪತ್ರ’ವನ್ನೂ ನೀಡಿದೆ. ಇತ್ತೀಚೆಗೆ ನವೆಂಬರ್ 29, 2015ರಂದು ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ.ಒಬ್ಬ ಪರಿಸರ ಲೇಖಕರಾಗಿಯೂ ಕಾರ್ಯಪ್ರವೃತ್ತರಾಗಿರುವ ಇವರು 2010ರಲ್ಲಿ ‘ಹಾವು ನಾವು’  2012ರಲ್ಲಿ ‘ದೇವರ ಹಾವು ನಂಬಿಕೆ-ವಾಸ್ತವ’, 2013ರಲ್ಲಿ ‘ಹಾವು ನಾವು ಪರಿಷ್ಕೃತ ಆವೃತ್ತಿ’ ಹಾಗೂ 2016 ರಲ್ಲಿ ‘ಹುತ್ತದ ಸುತ್ತಮುತ್ತ’ ಕೃತಿಗಳನ್ನು ರಚಿಸಿದ್ದಾರೆ. ‘ಹಾವು ನಾವು’ ಕೃತಿಗೆ 2014ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತವಿಧಿ ಪ್ರಶಸ್ತಿಯೂ ದೊರಕಿದೆ. ಹಲವಾರು ಪ್ರಖ್ಯಾತ ಪತ್ರಿಕೆಗಳಿಗೆ ಪರಿಸರ ಮತ್ತು ವನ್ಯಜೀವಿ ಸಂಬಂಧ ಲೇಖನಗಳನ್ನು ಬರೆಯುತ್ತಿರುವ ಗುರುರಾಜ್ ಸನಿಲ್ ಅವರಿಗೆ ಪರಿಸರದ ಬಗ್ಗೆಯೂ ಎಲ್ಲಿಲ್ಲದ ಕಾಳಜಿ. ಸುಮಾರು ಹದಿನಾಲ್ಕು ವರುಷಗಳಿಂದ ನೂರಾರು ಜಾತಿಯ ಗಿಡಗಳನ್ನು ಕುಂಡಗಳಲ್ಲಿ ನೆಟ್ಟು ‘ಕುಬ್ಜವೃಕ್ಷ’ಗಳ ಮಾದರಿಯಲ್ಲಿ ಬೆಳೆಸುವ ಹವ್ಯಾಸದೊಂದಿಗೆ ನಾಡನ್ನು ಸದಾ ಹಸಿರಾಗಿಡುವ ಸಂಕಲ್ಪದಿಂದ ಹುಟ್ಟಿಕೊಂಡ ‘ನಮ್ಮ ಮನೆ ನಮ್ಮ ಮರ’ ಎಂಬ ಹಸಿರು ಅಭಿಯಾನ ತಂಡದ ಮುಖ್ಯ ಸದಸ್ಯರೂ ಆಗಿದ್ದಾರೆ.

   

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು