ಇತಿಹಾಸದುದ್ದಕ್ಕೂ ಹತ್ತಾರು ಹಳ್ಳಿಗಳಿಗೆ ನೀರುಣಿಸೋ ಜಲಧಾತೆ ಕೆರೆ. ರೈತರ ಜೀವನಾಡಿಯಾಗಿ ಕೃಷಿ ಚಟುವಟಿಕೆಗೆ ವರದಾನವಾಗಿದ್ದ ಜೀವಸೆಲೆ. ಕಾಫಿನಾಡಿಗೆ ಆಗಮಿಸೋ ಪ್ರವಾಸಿಗರಿಗೆ ಮಲೆನಾಡಿನ ನೈಜ ಸೌಂದರ್ಯವನ್ನ ಉಣಬಡಿಸೋ ಮಹಾನದಿ. ಮೈಸೂರು ಮಹಾರಾಜರು ರೈತರ ಅನುಕೂಲಕ್ಕಾಗಿ ಕಟ್ಟಿಸಿದ್ದ ಆ ನೂರಾ ವರ್ಷಗಳ ಬಳಿಕ ಇದೀಗ ಬತ್ತಿ ಹೋಗಿದೆ. ನೀರಿಲ್ಲದೇ ಕೆರೆಯಲ್ಲಿರೋ ಮೀನು ಹಾಗೂ ನೀರಿನಲ್ಲಿ ವಾಸಿಸೋ ಜಲಚರಗಳು ಸಾವನ್ನಪ್ಪಿವೆ. ಇದು ಮಲೆನಾಡಿನ ಭೀಕರ ಬರಗಾಲದ ಮುನ್ಸೂಚನೆ ಅಂತಿದ್ದಾರೆ ಸ್ಥಳೀಯರು.
ನೀರಿಲ್ಲದೇ ಬರಿದಾಗಿರೋ ಭಾರಿ ಗಾತ್ರದ ಕೆರೆ. ಕೆರೆಯಲ್ಲಿ ನೀರಿಲ್ಲದೇ ಸತ್ತು ಬಿದ್ದಿರೋ ಮೀನುಗಳು ಹಾಗೂ ವಿದೇಶಿ ಹಕ್ಕಿಗಳು. ನೀರಿಗಾಗಿ ಬಾಯ್ಬಿಟ್ಟಿರೋ ಭೂತಾಯಿ. ಮಳೆಗಾಲದಲ್ಲೂ ಮಳೆಗಾಗಿ ಆಕಾಶ ನೋಡ್ತಿರೋ ರೈತ. ಇದೆಲ್ಲ ಕಂಡು ಬಂದದ್ದು ವರ್ಷದಲ್ಲಿ ಅತೀ ಹೆಚ್ಚು ಮಳೆ ಬೀಳೋ ಜಿಲ್ಲೆ, ಮಲೆನಾಡ ಹೆಬ್ಬಾಗಿಲು ಕಾಫಿನಾಡು ಚಿಕ್ಕಮಗಳೂರಲ್ಲಿ. ಚಿಕ್ಕಮಗಳೂರು ತಾಲೂಕಿನ ಮಾಗಡಿ ಕೆರೆ ಎಂದೂ ಬತ್ತಿರಲಿಲ್ಲ. ಎರಡ್ಮೂರು ವರ್ಷ ಮಳೆ ಬಾರದಿದ್ದರೂ ಕೆರೆಯಲ್ಲಿ ನೀರಿರ್ತಿತ್ತು. ಈ ಕೆರೆ ಬತ್ತಿದ್ದನ್ನ ಇಲ್ಲಿನ ರೈತರು ನೋಡೇ ಇಲ್ಲ. ಚಿಕ್ಕಮಗಳೂರಿಗೆ ಬರೋ ಪ್ರವಾಸಿಗರಿಗೆ ಸ್ವಾಗತ ಕೋರ್ತಿದ್ದೇ ಈ ಮಾಗಡಿ ಕೆರೆ. ಅದರಲ್ಲೂ ವಿದೇಶಿ ಹಕ್ಕಿಗಳು ಈ ಕೆರೆಗೆ ಸಂತಾನೋತ್ಪತ್ತಿಗಾಗಿ ಬರುತ್ತಿದ್ದವು. ಆದರೆ ಬೇಸಿಗೆಗಾಲವಿರಲಿ ಮಳೆಗಾಲ ಮುಗಿಯೋ ಮುನ್ನವೇ ಕೆರೆ ಬತ್ತಿರೋದ್ರಿಂದ ಸುತ್ತಮುತ್ತಲ ರೈತರು ಆತಂಕಕ್ಕೀಡಾಗಿದ್ದಾರೆ. ಕೆರೆಯಲ್ಲಿ ನೀರಿಲ್ಲದೇ ನೂರಾರು ಮೀನುಗಳು ಸತ್ತಿರೋ ದೃಶ್ಯ ನೋಡುಗರ ಮನಕಲುಕುವಂತಿದೆ.
ನೀರಿನಲ್ಲಿರೋ ಜಲಚರಗಳನ್ನೇ ಆಹಾರವನ್ನಾಗಿಸಿಕೊಂಡು ಸಂತಾನೋತ್ಪತ್ತಿಗಾಗಿ ವಿದೇಶದಿಂದ ಬರೋ ವಿದೇಶಿ ಹಕ್ಕಿಗಳು ಕೂಡಾ ಸಾಯ್ತಿವೆ. ಇತಿಹಾಸದಲ್ಲೇ ಎಂದೂ ಬತ್ತದ ಮಾಗಡಿ ಕೆರೆಯಲ್ಲಿ ಭೂಮಿತಾಯಿ ಕೂಡ ನೀರಿಗಾಗಿ ಬಾಯ್ತೆರೆದು ಕಾಯ್ತಿದ್ದಾಳೆ. ಕೆರೆಯ ಸುತ್ತಲಿನ ಗ್ರಾಮಸ್ಥರ ಬದುಕು ಮತ್ತಷ್ಟು ಶೋಚನೀಯವಾಗೋದ್ರಲ್ಲಿ ಎರಡು ಮಾತಿಲ್ಲ. ಮಲೆನಾಡಿನಲ್ಲಿ ಈ ಬಾರಿ ಜಿಲ್ಲಾದ್ಯಂತ ಶೇಕಡಾ 30 ರಿಂದ 40 ರಷ್ಟು ಮಳೆಯಾಗಿದ್ದು, ಮಲೆನಾಡಿಗರು ಹಾಗೂ ಬಯಲುಸೀಮೆ ಮಂದಿ ಈ ಬಾರಿ ಭೀಕರ ಬರಗಾಲವನ್ನು ಎದುರಿಸೋ ಲಕ್ಷಣಗಳೇ ಹೆಚ್ಚಾಗಿವೆ. ಕೆರೆ ಹೀಗೆ ಮಳೆಗಾಲದಲ್ಲೇ ಖಾಲಿಯಾಗಿರೋದು ಮಲೆನಾಡಲ್ಲಿ ಭೀಕರ ಬರಗಾಲದ ಮುನ್ಸೂಚನೆ ಎಂದು ರೈತರು ಹಾಗೂ ಕಾಫಿಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಇತಿಹಾಸದಲ್ಲೆಂದು ಬತ್ತದ ಕೆರೆ ಈ ವರ್ಷ ಖಾಲಿಯಾಗಿರೋದು ಚಿಕ್ಕಮಗಳೂರಲ್ಲಿ ಇನ್ನೆಂತ ಭೀಕರ ಬರಗಾಲ ಬರಬಹುದೆಂದು ಆತಂಕಕ್ಕೀಡಾಗಿದ್ದಾರೆ. ಇದು ಇದೊಂದೇ ಕೆರೆಯ ಪರಿಸ್ಥಿತಿಯಲ್ಲ. ಜಿಲ್ಲೆಯ ಏಳೂ ತಾಲೂಕುಗಳ ಸ್ಥಿತಿ. ಜಿಲ್ಲೆಯಲ್ಲಿ ಸುರಿಯೋ ವಾರ್ಷಿಕ ಮಳೆಯ ಅರ್ಧದಷ್ಟು ಮಳೆ ಈ ಬಾರಿ ಬಿದ್ದಿಲ್ಲ. ಈ ಸ್ಥಿತಿ ಹೀಗೆ ಮುಂದುವರಿದರೆ ಕಾಫಿನಾಡಿನ ಜನರ ಸ್ಥಿತಿ ಹೇಳತೀರದ್ದಾಗೋದ್ರಲ್ಲಿ ಎರಡು ಮಾತಿಲ್ಲ.