News Kannada
Saturday, October 01 2022

ನುಡಿಚಿತ್ರ

ಭಾರತದ ಹೆಬ್ಬಾವು ಮನುಷ್ಯನನ್ನು ನುಂಗಿದ್ದನ್ನುಕಂಡವರಿದ್ದಾರೆಯೇ? - 1 min read

Photo Credit :

ಭಾರತದ ಹೆಬ್ಬಾವು ಮನುಷ್ಯನನ್ನು ನುಂಗಿದ್ದನ್ನುಕಂಡವರಿದ್ದಾರೆಯೇ?

ಒಂದು ರಾತ್ರಿ ಉಡುಪಿಯ ಪತ್ರಿಕಾ ಸಂಪಾದಕರೊಬ್ಬರಿಂದ ಕರೆ ಬಂತು’ಪೆರ್ಡೂರಿನ ಒಂದು ಕಡೆ ಹೆಬ್ಬಾವೊಂದು ಐದು ವರ್ಷದ ಬಾಲಕನನ್ನು ಹಿಡಿದು ನುಂಗಲು ಪ್ರಯತ್ನಿಸಿತು. ಅವನ ತಾಯಿಯ ಸಮಯ ಪ್ರಜ್ಞೆಯಿಂದಾಗಿ ಆತ ಪಾರಾದ ಎಂಬ ಸುದ್ದಿ ಬಂದಿದೆ. ಆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹೆಬ್ಬಾವಿಗೆ ಹಲ್ಲಿದೆಯೇ? ವಿಷಕಾರಿಯೇ? ಕಚ್ಚಿದರೆ ಮುಂಜಾಗ್ರತೆ ಏನು? ಮನುಷ್ಯರನ್ನು ನುಂಗುತ್ತದೆ ಎನ್ನುವ ನಂಬಿಕೆ ಸತ್ಯವೇ?’ ಎಂದು ಪ್ರಶ್ನಿಸಿದರು. ಅವರ ಆ ಪ್ರಶ್ನೆಗಳಿಂದಲೇ ಏನೋ ಘಟಿಸಿದೆ ಎಂದೆನಿಸಿ ಹೆಬ್ಬಾವಿನ ಕುರಿತು ಸಾಕಷ್ಟು ನೈಜ ಮಾಹಿತಿ ನೀಡಿ ಫೋನಿಟ್ಟಿದ್ದೆ.


ಮರುದಿನ ಬೆಳಿಗ್ಗೆ ಟಿವಿ ವರದಿಗಾರರೂ, ಕೆಲವು ಪತ್ರಕರ್ತರೂ ಒಬ್ಬರ ಮೇಲೊಬ್ಬರಂತೆ ಕರೆ ಮಾಡಿ,’ಇಂಥ ಪತ್ರಿಕೆ ಓದಿದ್ರಾ? ಅದರಲ್ಲಿ ಬಂದಿರುವ ಹೆಬ್ಬಾವಿನ ಕಥೆ ಎಷ್ಟು ನಿಜ?ನೀವು ಯಾಕೆ ಆ ಸುದ್ದಿಯನ್ನು ತಿಳಿಯಲಿಲ್ಲ ಎಂದು ನಮ್ಮ ಮುಖ್ಯಸ್ಥರು ಕೇಳುತ್ತಿದ್ದಾರೆ’ಎನ್ನತೊಡಗಿದರು. ಕುತೂಹಲವಾಗಿ ಪತ್ರಿಕೆ ತೆರೆದೆ ಮತ್ತು ಅದರ ಶೀರ್ಷಿಕೆ ಓದಿ ಆಶ್ಚರ್ಯ, ಆತಂಕದಿಂದ ಬೆಚ್ಚಿ ಬಿದ್ದೆ!ಅದರಲ್ಲಿ ‘ಹೆಬ್ಬಾವಿನ ಬಾಯಿಯಿಂದ ಪಾರಾದ ಐದರ ಬಾಲಕ’ ಎಂದಿದ್ದರೊಂದಿಗೆ ಭಯದಿಂದ ಅಳುಮೋರೆ ಹಾಕಿ ನಿಂತ ಬಾಲಕ ಮತ್ತು ಹೆಬ್ಬಾವು ಕಚ್ಚಿದ ಕಾಲಿನ ಗಾಯದ ಚಿತ್ರ ಸಮೇತ ವಿಚಿತ್ರ ಸುದ್ದಿ ಪ್ರಕಟವಾಗಿತ್ತು. ಆ ಸುದ್ದಿಯ ಇಡೀ ಸಾರಾಂಶವನ್ನು ಗ್ರಹಿಸಿದಾಗ’ಹೆಬ್ಬಾವುಗಳು ಮನುಷ್ಯರನ್ನು ನುಂಗುತ್ತವೆ’ ಎಂಬ ಮಿಥ್ಯೆಯನ್ನು ಅದು ಪುಷ್ಟೀಕರಿಸುತ್ತಿತ್ತು.

ಕೂಡಲೇ ಸಂಪಾದಕರಿಗೆ ಫೋನ್ ಮಾಡಿದೆ. ಹೆಬ್ಬಾವಿನ ಬಗ್ಗೆ ನೀವು ಪ್ರಕಟಿಸಿರುವ ಸುದ್ದಿಯಲ್ಲಿ ತಿರುಳಿಲ್ಲ. ಭಾರತದ ಹೆಬ್ಬಾವು ಮನುಷ್ಯ ಅಥವಾ ಮಕ್ಕಳನ್ನು ಈವರೆಗೆ ನುಂಗಿದ ದಾಖಲೆ, ಪುರಾವೆಗಳು ಎಲ್ಲೂ ಇಲ್ಲ. ಅಂತಹ ತಪ್ಪು ಸುದ್ದಿಯನ್ನು ಪ್ರಕಟಿಸಬಾರದಿತ್ತು. ಕೂಡಲೇ ಅದಕ್ಕೊಂದು ಸಮಜಾಯಿಸಿ ಕೊಟ್ಟು ಜನಸಾಮಾನ್ಯರ ಆತಂಕ ನಿವಾರಿಸಿ ಎಂದರೆ, ಅದನ್ನು ಸುದ್ದಿ ಮಾಡಿದ ವರದಿಗಾರನಿಗೆ ತಿಳಿಸಿ ಎಂದರವರು. ಅಷ್ಟರಲ್ಲಿ ಇನ್ನಷ್ಟು ಕರೆಗಳು ಸಾರ್ವಜನಿಕರಿಂದ ಹರಿದು ಬರತೊಡಗಿದವು. ಕೆಲವರಂತೂ ತುಸು ಖಾರವಾಗಿಯೇಏನ್ಸಾರ್ ನೀವು ನಿಮ್ಮೆಲ್ಲಾ ಪ್ರಾತ್ಯಾಕ್ಷಿಕೆ, ಕಾರ್ಯಕ್ರಮಗಳಲ್ಲಿ ಹೇಳುತ್ತಲೇ ಇರುತ್ತೀರಿ’ಹೆಬ್ಬಾವು ಮನುಷ್ಯರನ್ನು ತಿನ್ನುವುದಿಲ್ಲ’ ಎಂದು. ಹಾಗಾದರೆ ಈವತ್ತು ಪತ್ರಿಕೆಯಲ್ಲಿ ಬಂದ ಸುದ್ದಿಯ ಅರ್ಥವೇನು? ಕಣ್ಣಾರೆ ಕಂಡ ತಾಯಿಯ ಹೇಳಿಕೆ ಸುಳ್ಳಾ? ಅದಕ್ಕೇನು ಹೇಳುವಿರಿ ನೀವು?’ ಎಂದು ಪ್ರಶ್ನಿಸಿದಾಗ ನಾನು  ನಿಜಕ್ಕೂ ಹೈರಾಣು! ಹಾಗಾಗಿ ಆ ಸುದ್ದಿ ಮಾಡಿದ ವರದಿಗಾರನನ್ನು ದೂರವಾಣಿಯ ಮೂಲಕ ಸಂಪರ್ಕಿಸಿದೆ. ಆದರೆ ಆತ’ಬಾಲಕನ ಮನೆಮಂದಿ ಮತ್ತು ಪ್ರತ್ಯಕ್ಷದರ್ಶಿಗಳೇನು ಹೇಳಿಕೆ ನೀಡಿದ್ದಾರೋ ಅದನ್ನೇ ನಾವು ಪ್ರಕಟಿಸಿರುವುದು. ಬೇಕಿದ್ದರೆ ನೀವೇ ಅದಕ್ಕೊಂದು ಪ್ರತಿಕ್ರಿಯೆ ಬರೆಯಿರಿ’ ಎಂದುತ್ತರಿಸಿ ಸುಮ್ಮನಾದ.

ಹಾಗಾಗಿ ನಾನೂ, ನನ್ನವಳು ಪತ್ರಿಕೆಯನ್ನು ಬಗಲಿಗೇರಿಸಿಕೊಂಡು ಹೆಬ್ಬಾವಿನ ಬಾಯಿಯಿಂದ ಪಾರಾದ ಬಾಲಕನನ್ನು ಸಂದರ್ಶಿಸಿ ಸತ್ಯಾಂಶ  ತಿಳಿಯಲು ಹೊರಟೆವು. ಉಡುಪಿಯಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದ ಪೆರ್ಡೂರು ತಾಲೂಕಿನ ಪಕ್ಕಾಲು, ಕೋಳಿಬೆಟ್ಟು ಗ್ರಾಮದಲ್ಲಿದೆ ಆ ಮನೆ ಎಂಬುದನ್ನು ಪತ್ತೆ ಹಚ್ಚಿದೆವು. ಅಲ್ಲಿಗೆ ಹೋದ ನಂತರ ಮನೆ ಹುಡುಕುವುದೇನೂ ಕಷ್ಟವಾಗಲಿಲ್ಲ. ಕಾರಣ ಪತ್ರಿಕೆ ಆ ರೇಂಜಲ್ಲಿ ಸುದ್ದಿ ಮಾಡಿತ್ತು!

ಹೆಬ್ರಿಗೆ ಹೋಗುವ ಮುಖ್ಯ ರಸ್ತೆಯಿಂದ ಪಕ್ಕಾಲು ಗ್ರಾಮಕ್ಕೆ ತಿರುಗಿ ಅರ್ಧ ಕಾಂಕ್ರೀಟ್, ಇನ್ನರ್ಧ ಕಿತ್ತು ಹೋದ ಡಾಂಬರು ಮತ್ತರ್ಧ ಮಣ್ಣಿನ ರಸ್ತೆಯಿಂದಾಗಿ ಸುಮಾರು ಎರಡು ಫರ್ಲಾಂಗು ಸಾಗಿದರೆ ಬಲಬದಿಯ ಚಿಕ್ಕಹಾಡಿ ಮತ್ತು ತೋಟದ ಮಧ್ಯೆ ಗೋಚರಿಸಿತು ಬಾಲಕನ  ಮನೆ. ಆ ಪ್ರದೇಶವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋದ ನಮಗೆ ಕೆಲವು ಸಂಗತಿಗಳು ಅರ್ಥವಾದವು. ಆ ಇಡೀ ಪ್ರದೇಶ ಕುರುಚಲು ಹಾಡಿಗಳಿಂದ ಆವೃತ್ತವಾಗಿತ್ತು. ಮನೆಗೆ ತಿರುಗಿಕೊಳ್ಳುವ ರಸ್ತೆಯ ಬದಿಯಲ್ಲಿ ಒಂದು ಕೊಳವೂ ಇತ್ತು. ಯಾರದ್ದೋ ಮನೆ, ಕಟ್ಟಡ ಅಥವಾ ಇತರ ಕಾಮಗಾರಿಗಳಿಗಾಗಿ ಮಣ್ಣನ್ನು ಬಗೆದು ಸಾಗಿಸಿದ್ದರಿಂದ ಆದ ಕೊಳವದು. ಅದರಿಂದ ಸುತ್ತಮುತ್ತ ವಾಸಿಸುವ ಸಣ್ಣಪುಟ್ಟ ವನ್ಯಪ್ರಾಣಿ ಹಾಗೂ ಮುಖ್ಯವಾಗಿ ಹೆಬ್ಬಾವು ಮತ್ತಿತರ ಸರೀಸೃಪಗಳಿಗೆ ಬಾಯಾರಿಕೆ ನೀಗಿಸುವ ಮೂಲತಾಣವಾಗಿತ್ತದು.

See also  ಮಧುವನ ಸ್ಮಶಾನವಲ್ಲ.. ಮೈಸೂರು ರಾಜವೈಭವದ ಕನ್ನಡಿ

ಮನೆಯ ಹಿಂಬದಿಯಿಂದ ಸಾಗಿ ಅಡುಗೆಕೋಣೆ ದಾಟಿಯೇ ವರಾಂಡಕ್ಕೆ ಹೋಗಬೇಕಿತ್ತು. ದಿಕ್ಕು ತಪ್ಪಿ ಅಡುಗೆಕೋಣೆಯ ಕಿಂಡಿಯಿಂದಲೇ ಇಣುಕು ಹಾಕಿದೆ. ಕಟ್ಟಿಗೆ ಒಲೆಯ ಧೂಮದಿಂದ ಕರ್ರಗೆ ಮಸಿ ಮೆತ್ತಿಸಿಕೊಂಡ ಕೋಣೆಯೊಳಗೆ, ಚಿಮಿಣಿ ದೀಪದಂತೆ ಕೆಂಪಗಾಗಿದ್ದ ಲೈಟ್ ನ ಬೆಳಕಿನಲ್ಲಿ ಆ ಮನೆಯಷ್ಟೇ ವಯಸ್ಸಿನ  ಅಜ್ಜಿಯೊಬ್ಬರು ಹಳೇಕಾಲದ ಕೃಷಿಕ ಮನೆತನವನ್ನು ನೆನಪಿಸುವಂತೆ ಕಂಡರು. ಜೋರಾಗಿ ಎರಡು ಬಾರಿ ‘ಓ…ಅಜ್ಜೀ…ಹಲೋ’ ಎಂದೆ. ತಕ್ಷಣ ಕಿಟಕಿಯ ಸಮೀಪ ಬಂದರು. ಹೆಬ್ಬಾವು ಕಚ್ಚಿದ ಬಾಲಕನ ಮನೆ ಇದೇ ತಾನೇ…ಎಂದೆನ್ನುತ್ತಲೇ’ಹೌದೌದು. ಆದ್ರೆ ಅದನ್ನು ಇನ್ನೊಮ್ಮೆ ಸುದ್ದಿ ಮಾಡಬೇಡಿ ನೀವು. ನಿನ್ನೆ ಯಾವ್ಯಾವುದೋ ಪೇಪರಿನವರು ಬಂದು ಏನೇನೋ ವಿಚಾರಿಸಿ ಬರೆದುಕೊಂಡು ಹೋಗಿದ್ದಾರೆ. ಮತ್ತೊಮ್ಮೆ ಬೇಡ.’ ಎಂದು ಮುಖಕ್ಕೆ ರಾಚುವಂತೆ ಹೇಳಿದಾಗ ಪಿಚ್ಚೆನಿಸಿತು.

ನಾವು ಬಂದಿರೋದು ಸುದ್ದಿ ಮಾಡೋದಕ್ಕಲ್ಲ ಅಜ್ಜಿ, ಈವತ್ತಿನ ಪತ್ರಿಕೆಯಲ್ಲಿ ಬಂದ ಆ ಸುದ್ದಿಯ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲಷ್ಟೆ. ಏಕೆಂದರೆ ಅದು ತಪ್ಪು ಸುದ್ದಿ. ಹೆಬ್ಬಾವು ಕಚ್ಚಿದ ಹುಡುಗನನ್ನು ನೋಡಬಹುದಾ? ಎಂದು ನನ್ನ ಪರಿಚಯವನ್ನೂ ಹೇಳಿಕೊಂಡಾಗ ಅಜ್ಜಿ ಕೊಂಚ ತಣ್ಣಗಾದರು.’ನೋಡಬಹುದಿತ್ತು ಆದರೆ ಅಪ್ಪ ಮಗ ಈಗಷ್ಟೇ ಹೊರಗೆ ಹೋದರು’ ಎಂದರು. ಯಾವಾಗ ಬರುತ್ತಾರೆ? ಎಂದದ್ದಕ್ಕೆ’ಯಾರಿಗೆ ಗೊತ್ತು?’ಎಂದರು ಉದಾಸೀನದಿಂದ. ಹೆಬ್ಬಾವಿನ ಪ್ರಕರಣದಿಂದ ಅವರಿಗೆ ಸಾಕಷ್ಟು ಕಿರಿಕಿರಿಯಾಗಿರುವುದು ಅವರ ಧೋರಣೆಯಿಂದಲೇ ತಿಳಿಯಿತು. ಸರಿ ಅಜ್ಜಿ, ಸ್ವಲ್ಪ ಹೊತ್ತು ಕಾಯುತ್ತೇವೆ. ಎಂದಾಗ ಅವರಿಗೆ ಅಸಮಾಧಾನವೆನಿಸಿದ್ದು ಮುಖಭಾವ ಸೂಚಿಸಿತು. ಬೇಸರವಾದರೂ ಸತ್ಯ ತಿಳಿದುಕೊಳ್ಳಬೇಕೆಂದಲ್ಲವೇ ಇಷ್ಟು ದೂರ ಬಂದಿದ್ದು! ಅಷ್ಟೊತ್ತಿಗೆ ಪಕ್ಕದ ಮನೆಯ ಹೆಂಗಸೊಬ್ಬರು ಬಂದು ಅದೇ ವಿಷಯವನ್ನು ಉಪ್ಪುಖಾರ  ಬೆರೆಸಿ ಭೀತಿಯಿಂದ ವಿವರಿಸಿದಾಗ ಸ್ಥಳೀಯರೂ ಹೆದರಿಬಿಟ್ಟಿರುವುದು ಸ್ಪಷ್ಟವಾಯಿತು. ತುಸು ಹೊತ್ತಲ್ಲಿ ಒಂದು ಕಡೆಯಿಂದ ಬಾಲಕನ ತಾಯಿ ಮತ್ತೊಂದು ದಿಕ್ಕಿನಿಂದ ತಂದೆ ಮಗನ ಆಗಮನವಾಯಿತು. ಹೊರಗೆ ನಿಂತಿದ್ದ ನಮ್ಮನ್ನು ಗುರುತಿಸಿ ಒಳಗೆ ಕರೆದೊಯ್ದು ಘಟನೆ ವಿವರಿಸಿದರು.

ಅಂದು ಸಮೀಪದ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮವಿದ್ದುದರಿಂದ ತಾಯಿ ಮಗ ಊಟ ಮುಗಿಸಿ ಹಿಂದಿರುಗುತ್ತಿದ್ದರು. ಇತರ ಹೆಂಗಸರೊಡನೆ ತಾಯಿ ಹರಟುತ್ತಾ ಸಾಗುತ್ತಿದ್ದರೆ, ಬಾಲಕ ಕಾಡುಹಣ್ಣು ಕಿತ್ತು ತಿನ್ನುತ್ತಾ, ಚಿಟ್ಟೆ, ಪತಂಗಗಳನ್ನು ಅಟ್ಟಾಡಿಸಿ ಕೀಟಲೆ ಮಾಡುತ್ತ ಪೊದೆಗಳಿಗೆ ನುಗ್ಗುತ್ತಾ ಸಾಗುತ್ತಿದ್ದ. ಹಾಗೇ ಒಂದು ಪೊದೆಯ ಹತ್ತಿರ ಹೋದವನು ಕಿಟಾರ್ರನೇ ಕಿರುಚಿದ. ತಾಯಿ ಅತ್ತ ಧಾವಿಸುವುದಕ್ಕೂ ಪೊದೆಯ ತರಗೆಲೆ ರಾಶಿಯಡಿಯಲ್ಲಿದ್ದ ಹೆಬ್ಬಾವೊಂದು ಬಾಲಕನ ಕಾಲಿನ ಮೀನಖಂಡಕ್ಕೆ ಕಚ್ಚಿ ತೆರೆದ ಬಾಯನ್ನು ಹಾಗೆಯೇ ಹಿಂದಕ್ಕೆಳೆದುಕೊಳ್ಳುವುದಕ್ಕೂ ಸರಿಹೋಗಿತ್ತು. ಆ ದೃಶ್ಯವನ್ನು ಕಂಡ ಆಕೆ ಮರುಕ್ಷಣ ರಪ್ಪನೇ ಬಾಲಕನನ್ನೆಳೆದುಕೊಂಡು ಬೊಬ್ಬಿಡುತ್ತಾ ಮನೆಯತ್ತ ಧಾವಿಸಿದವರು ಹೆಬ್ಬಾವು ಮಗನನ್ನುನುಂಗಲೆಂದೇ ಹಿಡಿಯಿತು ಎಂದು ವಠಾರ ವಿಡೀ  ಟಾಂ ಟಾಂ ಮಾಡಿಬಿಟ್ಟರು. ಬಾಲಕನ ತಂದೆ ಹೆಬ್ಬಾವನ್ನು ಹುಡುಕಾಡಿ ಕೊಲ್ಲಲು ಪ್ರಯತ್ನಿಸುವುದರೊಳಗೆ ಅದು ಪರಾರಿಯಾಗಿತ್ತಂತೆ.

ಅವರ ವಿವರಣೆಯಿಂದ ನಡೆದುದೇನೆಂದು ಅರ್ಥವಾಯಿತು. ಅದನ್ನವರಿಗೆ ವಿವರಿಸಿದೆ. ಹೆಬ್ಬಾವುಗಳು ರಾತ್ರಿ ಸಂಚಾರಿಗಳು. ಹಗಲು ಹೊತ್ತಲ್ಲಿ ದಟ್ಟ ಪೊದೆ, ತರಗೆಲೆ ರಾಶಿ ಅಥವಾ ಕಲ್ಲಿನ ಕೋರೆಗಳ ತಂಪಾಡೆಗಳಲ್ಲಿ ವಿರಮಿಸಿರುತ್ತವೆ. ನಿಮ್ಮ ಹುಡುಗ ಹೋಗಿ ಮಲಗಿದ್ದ ಹೆಬ್ಬಾವನ್ನು ತುಳಿದಿದ್ದಾನೆ. ಅದು ನೋವಿನಿಂದ ಕಚ್ಚಿದೆ ಅಷ್ಟೆ. ಆ ದೃಶ್ಯವನ್ನು ಕಂಡ ನಿಮ್ಮಲ್ಲಿ ಹೆಬ್ಬಾವು ಮನುಷ್ಯರನ್ನು ನುಂಗುತ್ತದೆ ಎಂಬ ಮೂಢನಂಬಿಕೆ ಮೊದಲೇ ಇದ್ದುದರಿಂದ ಅಪಾರ್ಥಿಸಿಕೊಂಡಿರುವಿರಷ್ಟೆ. ಆದರೆ ನಮ್ಮ ದೇಶದ ಹೆಬ್ಬಾವುಗಳ ಆಹಾರದ ಪಟ್ಟಿಯಲ್ಲಿ ಮನುಷ್ಯಜೀವಿ ಈವರೆಗೆ ಸೇರ್ಪಡೆಯಾಗಿಲ್ಲ. ಅನಾವಶ್ಯಕ ಭ್ರಮೆಗೆ ಬಲಿಯಾಗಬೇಡಿ ಎಂದು ಮನವರಿಕೆ ಮಾಡಲೆತ್ನಿಸಿದ್ದರಿಂದ ಮನೆಮಂದಿಯೇನೋ ನಿರಾಳರಾದರು. ಆದರೆ ಈ ಸುದ್ದಿಯನ್ನು ಓದಿದ ಇತರ ಶ್ರೀಸಾಮಾನ್ಯರ ಸ್ಥಿತಿ ಏನಾಗಿರಬಹುದು!? ಅಂಥವರು ಮುಂದೆ ತಮ್ಮ ಸುತ್ತಮುತ್ತ ಕಂಡುಬರುವ ಹೆಬ್ಬಾವುಗಳನ್ನು ಬದುಕಲು ಬಿಟ್ಟಾರೆ? ಒಂದು ವೇಳೆ ಹಾಗಾದರೆ ನೈಜ ಪರಿಸರ ಸ್ನೇಹಿಗಳಾಗಿ ಬದುಕುತ್ತಿರುವ ಮೂಕಜೀವಿಗಳ ಪಾಡೇನಾದೀತು ಎಂಬ ಚಿಂತೆ ನನ್ನನ್ನು ಆಗಾಗ ಕಾಡುತ್ತದೆ.

See also  ದೀಪಾವಳಿ ಬೆಳಕು ತರಲಿ... ಪಟಾಕಿ ಹಚ್ಚಿ ಕತ್ತಲು ಮಾಡಿಕೊಳ್ಳದಿರಿ..

ಗುರುರಾಜ್ ಸನಿಲ್ ‘ಅಕ್ಷಯಮನೆ’ ಕೊಳಂಬೆ, ಪುತ್ತೂರು. ಅಂಚೆ ಸಂತೆಕಟ್ಟೆ, ಉಡುಪಿ-576105 ಮೊಬೈಲ್: 9845083869, 8494948844. E-mail- sanilgururaj@gmail.com

ಲೇಖಕರ ಪರಿಚಯ: 1968ರ ಜೂನ್ 14ರಂದು ಉಡುಪಿಯ ತೆಂಕುಪೇಟೆಯಲ್ಲಿ ಶೇಷಪ್ಪ ಮತ್ತು ಸುಂದರಿ ಪೂಜಾರಿಯವರ ಜ್ಯೇಷ್ಠ ಪುತ್ರನಾಗಿ ಜನಿಸಿದ ‘ಗುರುರಾಜ್ ಸನಿಲ್’ ಅವರು ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ ಕುಂಜಿಬೆಟ್ಟು ಮತ್ತು ಮುಂಬೈ ಫೋಟ್ ಹೈಸ್ಕೂಲ್ ನಲ್ಲಿ ಶಿಕ್ಷಣವನ್ನು ಪೂರೈಸಿದರು. ತೀವ್ರ ಬಡತನದಿಂದಾಗಿ ಹೈಸ್ಕೂಲ್ ಶಿಕ್ಷಣವನ್ನು ಮೊಟಕುಗೊಳಿಸಿ ಆಟೋ ಚಾಲಕನಾಗಿ ವೃತ್ತಿ ಆರಂಭಿಸಿದ ಗುರುರಾಜ್ ಅವರು ಪತ್ನಿ ಮತ್ತು ಪುತ್ರ ಅಕ್ಷಯ್ ನೊಂದಿಗೆ ಉಡುಪಿ ಪುತ್ತೂರಿನ ಕೊಳಂಬೆಯಲ್ಲಿ ವಾಸಿಸುತ್ತಿದ್ದಾರೆ. ತಮ್ಮ 5ನೇ ವಯಸ್ಸಿನಿಂದಲೇ ಹಾವುಗಳ ಬಗ್ಗೆ ವಿಪರೀತ ಕುತೂಹಲ ಮೂಡಿತ್ತು. ತಮ್ಮ ವಿಜ್ಞಾನ ಶಿಕ್ಷಕ ದಾಮೋದರ ಆಚಾರ್ಯರು ಶಾಲೆಯಲ್ಲಿ ಸಾಕುತ್ತಿದ್ದ ಹೆಬ್ಬಾವೊಂದರ ಜೀವನಕ್ರಮವನ್ನು ವೀಕ್ಷಿಸುತ್ತ ಬೆಳೆದ ಗುರುರಾಜ್ ಅವರು ತಮ್ಮ ಹತ್ತನೇ ವಯಸ್ಸಿನಲ್ಲಿ ಹೆಬ್ಬಾವಿನ ಮರಿಯೊಂದನ್ನು ಹಿಡಿಯುವುದರ ಮೂಲಕ ಹಾವುಗಳ ಒಡನಾಟಕ್ಕೆ ಮುನ್ನುಡಿ ಬರೆಯುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ 30 ವರುಷಗಳಲ್ಲಿ ಹಲವು ಬಗೆಯೆ ಸಾವಿರಾರು ವಿಷಪೂರಿತ ಹಾವುಗಳನ್ನು ಹೂವಿನಷ್ಟೇ ಸಲೀಸಾಗಿ ಹಿಡಿದಿರುವ ಗುರುರಾಜ್ ಅವರು ಹಾವುಗಳ ಸಂಗದಿಂದ ಸಾವಿನ ಬಾಗಿಲನ್ನೂ ತಟ್ಟಿ ಬಂದವರು. ಇವರ ಸೇವೆಯನ್ನು ಗುರುತಿಸಿ ಬೆಂಗಳೂರಿನ ‘ಕರುಣಾ ಪ್ರಾಣಿ ದಯಾ ಸಂಸ್ಥೆ’ಯು 2004ರಲ್ಲಿ ‘ಕರುಣಾ ಎನಿಮಲ್ ವೆಲ್ ಫೇರ್ ಅವಾರ್ಡ್’, ಕರ್ನಾಟಕ ಅರಣ್ಯ ಇಲಾಖೆಯು 2013ರಲ್ಲಿ ಮಾನ್ಯ ಅರಣ್ಯ ಮಂತ್ರಿಗಳ ಸಮ್ಮುಖದಲ್ಲಿ ‘ಅರಣ್ಯಮಿತ್ರ’ ಪ್ರಶಸ್ತಿ ನೀಡುವುದರೊಂದಿಗೆ ‘ಅಧಿಕೃತ ಅನುಮತಿ ಪತ್ರ’ವನ್ನೂ ನೀಡಿದೆ. ಇತ್ತೀಚೆಗೆ ನವೆಂಬರ್ 29, 2015ರಂದು ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ.ಒಬ್ಬ ಪರಿಸರ ಲೇಖಕರಾಗಿಯೂ ಕಾರ್ಯಪ್ರವೃತ್ತರಾಗಿರುವ ಇವರು 2010ರಲ್ಲಿ ‘ಹಾವು ನಾವು’  2012ರಲ್ಲಿ ‘ದೇವರ ಹಾವು ನಂಬಿಕೆ-ವಾಸ್ತವ’, 2013ರಲ್ಲಿ ‘ಹಾವು ನಾವು ಪರಿಷ್ಕೃತ ಆವೃತ್ತಿ’ ಹಾಗೂ 2016 ರಲ್ಲಿ ‘ಹುತ್ತದ ಸುತ್ತಮುತ್ತ’ ಕೃತಿಗಳನ್ನು ರಚಿಸಿದ್ದಾರೆ. ‘ಹಾವು ನಾವು’ ಕೃತಿಗೆ 2014ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತವಿಧಿ ಪ್ರಶಸ್ತಿಯೂ ದೊರಕಿದೆ. ಹಲವಾರು ಪ್ರಖ್ಯಾತ ಪತ್ರಿಕೆಗಳಿಗೆ ಪರಿಸರ ಮತ್ತು ವನ್ಯಜೀವಿ ಸಂಬಂಧ ಲೇಖನಗಳನ್ನು ಬರೆಯುತ್ತಿರುವ ಗುರುರಾಜ್ ಸನಿಲ್ ಅವರಿಗೆ ಪರಿಸರದ ಬಗ್ಗೆಯೂ ಎಲ್ಲಿಲ್ಲದ ಕಾಳಜಿ. ಸುಮಾರು ಹದಿನಾಲ್ಕು ವರುಷಗಳಿಂದ ನೂರಾರು ಜಾತಿಯ ಗಿಡಗಳನ್ನು ಕುಂಡಗಳಲ್ಲಿ ನೆಟ್ಟು ‘ಕುಬ್ಜವೃಕ್ಷ’ಗಳ ಮಾದರಿಯಲ್ಲಿ ಬೆಳೆಸುವ ಹವ್ಯಾಸದೊಂದಿಗೆ ನಾಡನ್ನು ಸದಾ ಹಸಿರಾಗಿಡುವ ಸಂಕಲ್ಪದಿಂದ ಹುಟ್ಟಿಕೊಂಡ ‘ನಮ್ಮ ಮನೆ ನಮ್ಮ ಮರ’ ಎಂಬ ಹಸಿರು ಅಭಿಯಾನ ತಂಡದ ಮುಖ್ಯ ಸದಸ್ಯರೂ ಆಗಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು