News Kannada
Saturday, October 01 2022

ನುಡಿಚಿತ್ರ

ಭರದಿಂದ ಸಾಗಿದೆ ಗಾದಿ, ನಮ್ದಾ ತಯಾರಿ - 1 min read

Photo Credit :

ಭರದಿಂದ ಸಾಗಿದೆ ಗಾದಿ, ನಮ್ದಾ ತಯಾರಿ

ಮೈಸೂರು: ಐತಿಹಾಸಿಕ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತು ಸಾಗುವ ಅರ್ಜುನ ಸೇರಿದಂತೆ ಇತರೆ ಭಾರ ಹೊರುವ ಗಜಪಡೆಗಳ ಬೆನ್ನ ಮೇಲೆ ಹೊದಿಸಲು ಮೆತ್ತನೆಯ ಹೊದಿಕೆಯಾದ ನಮ್ದಾ ಮತ್ತು ಗಾದಿಯ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ.

ಮೈಸೂರು ದಸರಾ ಅಂದರೆ ಬರೀ ಆನೆಗಳ ಮೆರವಣಿಗೆಯಲ್ಲ. ಇಲ್ಲಿ ಪ್ರತಿಯೊಂದು ಕೂಡಾ ವಿಶಿಷ್ಟ, ವಿಶೇಷವಾದುದ್ದಾಗಿದೆ. ನಮಗೆ ಸರ್ವ ಅಲಂಕಾರಗಳಿಂದ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕುವ ಗಜಪಡೆಗಳ ಜಂಬೂ ಸವಾರಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಆದರೆ ಗಜಪಡೆಗೆ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಸಿದ್ಧತೆ ಮಾಡುವುದು ಸುಲಭದ ಕೆಲಸವಲ್ಲ. ಅದರ ಹಿಂದೆ ಶ್ರಮ ಜೀವಿಗಳ ದೊಡ್ಡದಂಡೇ ಇರುವುದನ್ನು ನಾವು ಕಾಣಬಹುದು.

ದಸರಾ ಜಂಬೂ ಸವಾರಿಯಲ್ಲಿ ಅರ್ಜುನ ಚಿನ್ನದ ಅಂಬಾರಿ ಹೊತ್ತು ಸಾಗುವ ದೃಶ್ಯ ನಮ್ಮ ಕಣ್ಸೆಳೆಯುತ್ತದೆ. ಅದನ್ನು ಹೊರಲು ಅನುಕೂಲವಾಗುವಂತೆ ಬೆನ್ನ ಮೇಲೆ ಹೊದಿಸಲಾಗುವ ಹೊದಿಕೆಯಾದ ಗಾದಿ, ನಮ್ದಾ, ಛಾಪು ಯಾವುದೂ ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ ಆದರೆ ಇವುಗಳೆಲ್ಲವನ್ನೂ ಹೊಲಿಯುವುದು ಸುಲಭದ ಕೆಲಸವಲ್ಲ. ಇದನ್ನು ಎಲ್ಲರಿಂದ ತಯಾರು ಮಾಡಲು ಸಾಧ್ಯವಿಲ್ಲ.

ಆನೆ ಬೆನ್ನಿನ ಮೇಲೆ ಅದಕ್ಕೆ ಚುಚ್ಚದಂತೆ, ನೋವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ  ಗಾದಿ, ನಮ್ದಾ, ಛಾಪುನ್ನು ಬಳಸಲಾಗುತ್ತಿದ್ದು, ಇದನ್ನು ಕಳೆದ ಹಲವು ವರ್ಷಗಳಿಂದ ಪಾಷ ಮತ್ತು ಜಕಾವುಲ್ಲ ಎಂಬುವರೇ ತಯಾರು ಮಾಡುತ್ತಾರೆ. ಇವರನ್ನು ಒಂದು ರೀತಿಯಲ್ಲಿ  ಆನೆಗಳ ಟೈಲರ್ ಎಂದು ಕರೆದರೂ ತಪ್ಪಾಗಲಾರದು.  ಆನೆ ಬೆನ್ನಿನ ಮೇಲೆ ಹಾಕುವ ಗಾದಿ, ನಮ್ದಾ, ಛಾಪು ಎನ್ನುವ ವಿಶೇಷ ತೊಡುಗೆಯನ್ನು ದಬ್ಬಳ ಸೂಜಿಯಿಂದ  ಹೊಲಿದು ತಯಾರು ಮಾಡಲಾಗುತ್ತದೆ. ಆನೆಗೆ  ನೋವಾಗದಂತೆ ಮೆತ್ತನೆ ಹೊದಿಕೆಯನ್ನು   ಅದರ  ಬೆನ್ನಿನ ಅಳತೆಗೆ  ತಕ್ಕಂತೆ ಅಳೆದು ತಯಾರು ಮಾಡುವುದು ಒಂದು ಜಾಣ್ಮೆಯ ಕೆಲಸ.  ನಿವೃತ್ತಿಯಾದರೂ ತಮ್ಮ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇವರ ಕಾರ್ಯಕ್ಕೆ ಶಹಬ್ಬಾಸ್ ಎನ್ನಲೇ ಬೇಕು.

ಈಗಾಗಲೇ ಗಾದಿ, ನಮ್ದಾ ತಯಾರಿಕೆಯ ಕಾರ್ಯ ನಡೆಯುತ್ತಿದ್ದು, 12ಆನೆಗಳಿಗೆ ನಮ್ದಾ ಮತ್ತು ಗಾದಿಯನ್ನು ತಯಾರಿಸಲಾಗುತ್ತಿದೆ. ಆನೆಗಳ ಬೆನ್ನ ಮೇಲೆ  ಗಾದಿಯನ್ನಿಟ್ಟು ಕಟ್ಟಿ ಅದರ ಮೇಲೆ ಹೊದಿಕೆಯಾದ ನಮ್ದಾ ಹಾಕಲಾಗುತ್ತದೆ. ಇದರಿಂದ ಆನೆಗಳು ಸುಂದರವಾಗಿ ಕಾಣುತ್ತವೆ. ಗಾದಿಯು ಸುಮಾರು ಆರು ಅಡಿ ಉದ್ದ ಮತ್ತು ಐದು ಅಡಿ ಅಗಲವಿದ್ದು ದಪ್ಪ ಸುಮಾರು ಒಂದೂವರೆ ಅಡಿಯಿರುತ್ತದೆ.

ಭಾರ ಮಾಮೂಲಿ ಆನೆಗಳಿಗಾದರೆ ಅಂದಾಜು ಇನ್ನೂರೈವತ್ತರಿಂದ ಮುನ್ನೂರಾದರೆ ಅಂಬಾರಿ ಹೊರುವ ಅರ್ಜುನನಿಗೆ ಐನೂರಕ್ಕಿಂತ ಹೆಚ್ಚು ತೂಕ ಇರುತ್ತದೆ. ಗಾದಿಯನ್ನು ಬೆನ್ನು ಮೇಲೆ ಕಟ್ಟಿ ಅದರ ಮೇಲೆ ಅಂಬಾರಿಯನ್ನು ಇಡಲಾಗುತ್ತದೆ. ಗಾದಿಯು ಅಂಬಾರಿ ಬೆನ್ನಿಗೆ ಒತ್ತುವುದನ್ನು ತಡೆಯುವುದಲ್ಲದೆ, ಬೆನ್ನ ಮೇಲೆ ಸಮರ್ಪಕವಾಗಿ ನಿಲ್ಲಲು ಸಹಾಯ ಮಾಡುತ್ತದೆ.

ಇನ್ನು ಗಾದಿಯ ತಯಾರಿಯೂ ಅಷ್ಟೇ ಕುತೂಹಲಕಾರಿಯಾಗಿದೆ. ಇದಕ್ಕೆ ಉಪಯೋಗಿಸುವ ಒಡಕೆ ಹುಲ್ಲನ್ನು ಕೆರೆಯ ಬದುಗಳಿಂದ ತರಲಾಗುತ್ತದೆ. ಕೆರೆಯ ಬದುಗಳಲ್ಲಿ ಒಡಕೆ ಹುಲ್ಲು ಕಬ್ಬಿನಂತೆ ದಷ್ಠಪುಷ್ಠವಾಗಿ ಬೆಳೆದಿರುತ್ತದೆ.  ಈ ಹುಲ್ಲನ್ನು ತಂದು ಒಣಗಿಸಿ ಇದರೊಂದಿಗೆ ಭತ್ತದ ಹುಲ್ಲನ್ನು ಸೇರಿಸಿ ಗೋಣಿ ಚೀಲದಿಂದ ಹೊಲಿದು ಗಾದಿಯನ್ನು ತಯಾರಿಸಲಾಗುತ್ತದೆ.

See also  ಮಡಿಕೇರಿಯಲ್ಲಿ ವೀರಸೇನಾನಿಯ ನೆನಪು: ಸೇನಾ ಶಸ್ತ್ರಾಸ್ತ್ರಗಳ ಸೇರ್ಪಡೆ

ಗಾದಿ ಮತ್ತು ನಮ್ದಾ ತಯಾರಿಕೆ ಎಲ್ಲ ಮಾವುತರಿಂದ ಸಾಧ್ಯವಿಲ್ಲ. ಕಳೆದ ಹಲವು ದಶಕಗಳಿಂದ ಪಾಷಾ ಮತ್ತು ಜಕಾವುಲ್ಲಾ ಅವರು ಈ ಕಾರ್ಯವನ್ನು ಮಾಡುತ್ತಿದ್ದಾರೆ. ಅದರಲ್ಲೂ ಪಾಷಾ ಅವರಿಗೆ ಇದು ಕರಗತವಾಗಿದೆ. ಪಾಷಾರವರು  1971 ರಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದು, 2006 ರಲ್ಲಿ ನಿವೃತ್ತಿಯಾದರೂ ತಮ್ಮ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇವರು ಸರಳ ಆನೆಯ ಮಾವುತರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದವರು. ಆನೆಗಳಿಗೆ ಗಾದಿ, ನಮ್ದಾ ತಯಾರು ಮಾಡುವುದನ್ನು  ಚಿಕ್ಕ ಹುಡುಗರಾಗಿದ್ದಾಗಲೇ ಕಲಿತಿದ್ದು, ಈ ಹಿಂದೆ ಅಂಬಾರಿ ಹೊರುತ್ತಿದ್ದ ಬಿಳಿಗಿರಿರಂಗ ಆನೆಯ ಮಾವುತರಾಗಿ ಕೆಲಸ ಮಾಡುತ್ತಿದ್ದ ಸುಲ್ತಾನ್ ಸಾಬ್ ಅವರಿಂದ ಕಲಿತಿದ್ದು ಎಂದು ಹೇಳುವ ಅವರು ಇದುವರೆಗೆ  ಇದುವರೆಗೆ ರಾಜೇಂದ್ರ, ದ್ರೋಣ, ಬಲರಾಮ, ಗಜೇಂದ್ರ ಹೀಗೆ ಎಲ್ಲಾ ಆನೆಗಳಿಗೆ ಗಾದಿ ಮತ್ತು ನಮ್ದಾ ಹೊಲಿಯುತ್ತಾ ಬಂದಿದ್ದಾರೆ. ಇನ್ನು ಮುಂದೆ ಈ ಕಾಯಕವನ್ನು ಬೇರೆಯವರು ಮುಂದುವರೆಸಿಕೊಂಡು ಹೋಗುವುದು ಅನಿವಾರ್ಯವಾಗಿರುವುದರಿಂದ ಜಕಾವುಲ್ಲ ಅವರಿಗೂ ಕಲಿಸಿದ್ದಾರೆ.

ಮೂಲತಃ ಗುಂಡ್ಲುಪೇಟೆಯವರಾದ ಜಕಾವುಲ್ಲ ಅವರು ಕೂಡ ಹತ್ತು ವರ್ಷದ ಹಿಂದೆಯೇ ನಿವೃತ್ತರಾಗಿದ್ದಾರೆ. ರಾಧಿಕಾ, ರಮಣಿ, ಜಯಪ್ರಕಾಶ, ಚೈತ್ರ ಮೊದಲಾದ ಆನೆಗಳಿಗೆ ಮಾವುತರಾಗಿ ಕೆಲಸ ಮಾಡಿದ್ದರು. ಇದೀಗ ಪಾಷಾರವರೊಂದಿಗೆ ಕೈಜೋಡಿಸಿ ನಮ್ದಾ, ಗಾದಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ದಸರಾದ ಜಂಬೂಸವಾರಿಗೆ ಗಜಪಡೆಗಳನ್ನು ತಯಾರಿ ಮಾಡುವ ಕೆಲಸ ಸುಲಭದಲ್ಲ. ಅದರ ಹಿಂದೆ ಶ್ರಮ ಮತ್ತು ಜಾಣ್ಮೆಯ ಕೆಲಸಗಳಿವೆ. ಅವುಗಳನ್ನು ಕಲಿತವರು ಮುಂದಿನ ತಲೆಮಾರಿಗೆ ಕಳುಹಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಪ್ರತಿವರ್ಷವೂ ಜಂಬೂಸವಾರಿ ಯಾವುದೇ ತೊಂದರೆಯಿಲ್ಲದೆ ಸಾಂಗವಾಗಿ ಸಾಗಲು ಸಾಧ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು