News Kannada
Saturday, October 01 2022

ನುಡಿಚಿತ್ರ

ದಸರಾ ಬೆಳಕಿನಲ್ಲಿ ಕಂಗೊಳಿಸುತ್ತಿದೆ ಮೈಸೂರು - 1 min read

Photo Credit :

ದಸರಾ ಬೆಳಕಿನಲ್ಲಿ ಕಂಗೊಳಿಸುತ್ತಿದೆ ಮೈಸೂರು

ನಾಡ ಹಬ್ಬ ದಸರಾ ಹಿನ್ನಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ದೇವೇಂದ್ರನ ಅಮರಾವತಿಯೇ ಧರೆಗಿಳಿದು ಬಂದಂತೆ ಗೋಚರಿಸುತ್ತಿದೆ. ವಿದ್ಯುತ್ ದೀಪದ ಬೆಳಕಿನಲ್ಲಿ ಮಿಂದೇಳುತ್ತಿರುವ ನಗರಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗುತ್ತಿದ್ದು, ಎಲ್ಲರ ಮೈಮನವನ್ನು ಪುಳಕಗೊಳಿಸುತ್ತಿದೆ. ಸಾಮಾನ್ಯವಾಗಿ ಹಬ್ಬಹರಿದಿನಗಳು ಬರುತ್ತಿದ್ದಂತೆಯೇ ಮೈಸೂರಿಗೆ ಮೈಸೂರೇ ಬದಲಾಗಿಬಿಡುತ್ತದೆ. ಇನ್ನು ದಸರಾದಲ್ಲಿ ಹೇಳಬೇಕೆ ಅದರ ಸಡಗರವೇ ಬೇರೆ ವರ್ಣಿಸಲು ಅಸಾಧ್ಯವಾಗಿ ಬಿಡುತ್ತದೆ.

ಈಗಾಗಲೇ ಐತಿಹಾಸಿಕ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ಕಾವೇರಿ ಕಾರ್ಮೋಡ, ಬರದ ಆತಂಕ ಎಲ್ಲವನ್ನೂ ಮರೆತು ನಗರದ ಜನ ದಸರಾ ಸಡಗರದಲ್ಲಿ ಮೀಯುತ್ತಿದ್ದಾರೆ. ರೈತರು, ಮಹಿಳೆಯರು, ಯುವಕರು, ಯುವತಿಯರು ಹೀಗೆ ಎಲ್ಲರಿಗೂ ದಸರಾದಲ್ಲಿ ಪಾಲ್ಗೊಳ್ಳುವ, ಮಿಂಚುವ ಮಹಾಸಡಗರ. ಒಂದು ಕಡೆ ಯುವ ಮನಸ್ಸುಗಳಿಗೆ ಲಗ್ಗೆಯಿಡುವ ಯುವ ದಸರಾ ಮನ ತಣಿಸುತ್ತಿದ್ದರೆ, ಮತ್ತೊಂದೆಡೆ ಬೋಜನ ಪ್ರಿಯರಿಗೆ ವಿವಿಧ ಖಾದ್ಯಗಳನ್ನು ಉಣಬಡಿಸುತ್ತಾ ಬಾಯಿ ಚಪ್ಪರಿಸುವಂತೆ ಅಹಾರ ಮೇಳ ಮಾಡುತ್ತಿದೆ. ಇನ್ನು ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಮಾಡುತ್ತಿದೆ. ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆಯುತ್ತಿವೆ. ಹಿಂದಿನ ರಾಜ ವೈಭವ ಮತ್ತೆ ಮರುಕಳಿಸಿದಂತೆ ಭಾಸವಾಗುತ್ತದೆ. ಜತೆಗೆ ನಿತ್ಯದ ಜಂಜಡವನ್ನು ಮರೆಯಿಸಿ ಒಂದು ಕ್ಷಣ ಮೈಮನ ಪುಳಕಿತವಾಗುವಂತೆ ಮಾಡುತ್ತಿದೆ.

ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರುತ್ತಿರುವ ಜನ ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಂಡು ಹೋಗುತ್ತಿದ್ದಾರೆ. ನಗರದ ಅಲ್ಲಲ್ಲಿ ವೃತ್ತಗಳು, ರಸ್ತೆಗಳು, ಮರಗಳು, ಕಟ್ಟಡಗಳು ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಅವು ಮಿನುಗುವಾಗ ಕಾಣುವ ದೃಶ್ಯ ಅದ್ಭುತ. ರಾಮಸ್ವಾಮಿ ವೃತ್ತದಲ್ಲಿ ಅರಮನೆ ಸೃಷ್ಟಿಯಾಗಿದ್ದರೆ, ರೈಲ್ವೆ ನಿಲ್ದಾಣ ಬಳಿ ವಿಧಾನಸೌಧ, ಸಂಸತ್ತು ಎದ್ದು ನಿಂತಿದೆ. ಇದೆಲ್ಲವೂ ಮೈಸೂರು ದಸರಾ ಎಷ್ಟೊಂದು ಸುಂದರಾ ಎಂಬ ಪದಕ್ಕೆ ಅರ್ಥ ನೀಡುತ್ತಿದೆ. ಇನ್ನು ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆಗಳು ಸ್ವರ್ಗದ ಹಾದಿಯಂತಿದೆ ಒಟ್ಟಾರೆ ಮೈಸೂರಿಗೆ ಮೈಸೂರೇ ಸಾಟಿ ಎನ್ನುವುದನ್ನು ಸಾರಿ ಹೇಳುತ್ತಿದೆ.

See also  ಭರದಿಂದ ಸಾಗಿದೆ ಗಾದಿ, ನಮ್ದಾ ತಯಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು