News Kannada
Friday, September 30 2022

ನುಡಿಚಿತ್ರ

ಹಾಸನದ ಹಾಸನಾಂಭೆಗೆ ನಮೋ ಎನ್ನಿ… - 1 min read

Photo Credit :

ಹಾಸನದ ಹಾಸನಾಂಭೆಗೆ ನಮೋ ಎನ್ನಿ...

ವರುಷಕ್ಕೊಮ್ಮೆಯಷ್ಟೆ ಭಕ್ತರಿಗೆ ದರ್ಶನ ನೀಡಲಿರುವ ಹಾಸನದ ಹಾಸನಾಂಭೆಯ ದರ್ಶನಕ್ಕೆ ಭಕ್ತರು ಮುಗಿ ಬೀಳುತ್ತಿದ್ದಾರೆ. ಅ.20 ರಿಂದ ನವೆಂಬರ್ 1ರವರೆಗೆ ಅಂದರೆ ದೀಪಾವಳಿ ಹಬ್ಬದ ಬಲಿಪಾಡ್ಯಮಿಯ ಮಾರನೆಯ ದಿನದವರೆಗೆ ಹಾಸನಾಂಭೆ ಭಕ್ತರಿಗೆ ದರ್ಶನ ನೀಡಿ ಹರಸಲಿರುವುದರಿಂದ ಜನ ಭಕ್ತಿಯಿಂದ ತಾಯಿಯ ದರ್ಶನ ಮಾಡಿ ಪಾವನರಾಗಲು ಹಾತೊರೆಯುತ್ತಿದ್ದಾರೆ.

ಪ್ರತಿ ವರ್ಷವೂ   ಅಶ್ವೀಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಹೀಗೆ ಬಾಗಿಲು ತೆರೆದ ಬಳಿಕ ದೇವಾಲಯದಲ್ಲಿ ದೇವಿಗೆ ಪ್ರತಿನಿತ್ಯ ಪೂಜೆ ನಡೆಯುವುದಲ್ಲದೆ, ಭಕ್ತರಿಗೆ ದರ್ಶನಕ್ಕೂ ಅವಕಾಶ ಮಾಡಿಕೊಡಲಾಗುತ್ತದೆ. ಬಳಿಕ ಬಲಿಪಾಡ್ಯಮಿಯ ಮಾರನೇ ದಿನ ಪೂಜಾ ಕೈಂಕರ್ಯವನ್ನು ನೆರವೇರಿಸಿ ದೇವರಿಗೆ ದೀಪ ಹಚ್ಚಿ ದೇವಾಲಯದ ಬಾಗಿಲನ್ನು ಹಾಕಲಾಗುತ್ತದೆ. ಹೀಗೆ ಹಾಕಿದ ಬಾಗಿಲನ್ನು ತೆರೆಯುವುದು ಮುಂದಿನ ವರ್ಷವೇ ಅಲ್ಲಿವರೆಗೂ ಗರ್ಭಗುಡಿಯಲ್ಲಿ ಹಚ್ಚಿದ ದೀಪ ಆರದೆ ಉರಿಯುತ್ತಿರುತ್ತದೆ ಎಂಬ ನಂಬಿಕೆ ಜನವಲಯದಲ್ಲಿದೆ. ಹಾಸನಾಂಬೆಯನ್ನು ಕುಂಭಗಳ ರೂಪದಲ್ಲಿ ಪ್ರತಿಷ್ಠಾಪಿಸಿ ಈ ಕುಂಭಗಳಿಗೆ ಹೆಣ್ಣು ದೇವತೆಯರೆ ಮುಖವಾಡಗಳಿಂದ ಅಲಂಕರಿಸಿ ಪೂಜಿಸುವುದನ್ನು ಕಾಣ ಬಹುದು. ಇನ್ನು ದೇವಸ್ಥಾನದ ಬಾಗಿಲು ತೆರೆಯಬೇಕಾದರೆ ತಳವಾರ ಮನೆತನದವರು ಹಾಜರಿರಲೇ ಬೇಕು. ಅಲ್ಲದೆ ದೇವಾಲಯದ ಮುಂದೆ ನೆಟ್ಟ ಬಾಳೆಕಂದನ್ನು ಅರಸು ಮನೆತನದವರು ಕಡಿಯುವ ಮೂಲಕ ಬಾಗಿಲನ್ನು ತೆರೆಯಲಾಗುತ್ತದೆ.
ಹೀಗೆ ಬಾಗಿಲು ತೆರೆದ ಬಳಿಕ ಎರಡನೆ ದಿನದಂದು ಖಜಾನೆಯಿಂದ ಪಲ್ಲಕ್ಕಿಯೊಂದಿಗೆ ತಂದಿರುವ ದೇವಿಯ ಆಭರಣಗಳನ್ನು ತೊಡಿಸಿ ಪೂಜಿಸಲಾಗುತ್ತದೆ.

ಇನ್ನು ಹಾಸನದಲ್ಲಿ ನಿರ್ಮಾಣಗೊಂಡಿರುವ ದೇಗುಲ ಮತ್ತು ದೇಗುಲದಲ್ಲಿ ವೀರಾಜಮಾನಳಾಗಿರುವ ತಾಯಿ ಹಾಸನಾಂಭೆ ಹೇಗೆ ಪ್ರತಿಷ್ಠಾಪನೆಗೊಂಡಳು ಎಂಬುದನ್ನು ಇತಿಹಾಸದ ಪುಟಗಳಲ್ಲಿ ತಿರುವಿ ಹಾಕಿದರೆ 12ನೇ ಶತಮಾನದಲ್ಲಿ ದೇವಾಲಯ ನಿರ್ಮಾಣವಾಗಿದ್ದೆಂದು ಹೇಳಲಾಗಿದೆ. ಸಂಜೀವ ಕೃಷ್ಣಪ್ಪನಾಯಕ ಎಂಬ ಪಾಳೆಯಗಾರ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಒಮ್ಮೆ ಆತ ತೆರಳುತ್ತಿದ್ದಾಗ ದಾರಿಗೆ ಅಡ್ಡಲಾಗಿ ಮೊಲವೊಂದು ಬಂದು ಪಟ್ಟಣ ಪ್ರವೇಶಿಸಿತಂತೆ.
ಮೊಲ ಅಡ್ಡ ಬಂದಿದ್ದರಿಂದ ಇದು ಅಪಶಕುನವಿರಬಹುದೇ ಎಂಬ ಖಿನ್ನತೆ ಕಾಡತೊಡಗಿತು. ಆಗ ಆತನ ಕನಸಲ್ಲಿ ದೇವಿ ಕಾಣಿಸಿಕೊಂಡು ಮೊಲ ಕಾಣಿಸಿದ ಜಾಗದಲ್ಲಿ ಕೋಟೆ ಕಟ್ಟುವಂತೆ ಆಜ್ಞೆ ಮಾಡಿದಳೆಂದೂ ಅದರಂತೆ ಕೃಷ್ಣಪ್ಪನಾಯಕ ಅಲ್ಲಿ ಒಂದು ಕೋಟೆಯನ್ನು ಕಟ್ಟಿ ಹಾಸನಾಂಭೆ ಎಂದು ಕರೆದು ದೇವಿಯನ್ನು ಪ್ರತಿಷ್ಠಾಪಿಸಿದನೆಂದೂ ಹೇಳಲಾಗುತ್ತದೆ.

ದಂತಕಥೆಯ ಪ್ರಕಾರ ದೈವಿಭಕ್ತೆಯಾಗಿದ್ದ ಸೊಸೆ ಧ್ಯಾನದಲ್ಲಿ ಮಗ್ನಳಾಗಿದ್ದ ಸಂದರ್ಭದಲ್ಲಿ ಅತ್ತೆ ಆಕೆಯ ತಲೆಗೆ ಚಂದ್ರಬಟ್ಟಲಿನಿಂದ ಕುಕ್ಕಿದ ಸಂದರ್ಭ ನೋವು ತಡೆಯಲಾರದ ಸೊಸೆ ತಾಯಿ ಹಾಸನಾಂಭೆ ಎಂದು ಕೂಗಿದಳೆಂದೂ ಆಕೆಯ ಭಕ್ತಿಗೆ ಮೆಚ್ಚಿದ ತಾಯಿ ಪ್ರತ್ಯಕ್ಷಳಾಗಿ ನಿನ್ನ ಕಾವಲಿಗಾಗಿ ಈ ಸನ್ನಿಧಾನದಲ್ಲಿ ಕಾವಲಿರುತ್ತೇನೆ ಕಲ್ಲಾಗಿ ನೆಲೆಸುವ ಮೂಲಕ ಅಭಯ ನೀಡಿದಳೆಂದೂ ಹೇಳಲಾಗುತ್ತದೆ. ದೇವಸ್ಥಾನದ ಬಾಗಿಲು ತೆರೆದ ಬಳಿಕ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ರೀತಿಯ ಒಗ್ಗರಣೆ ಹಾಕುವಂತಿಲ್ಲ. ಇನ್ನು ಹಾಸನಾಂಭೆಯ ಸನ್ನಿಧಾನದಲ್ಲಿ ಸಪ್ತಮಾತೃಕೆಯರ ಪೈಕಿ ಕೌಮಾರಿ, ಮಹೇಶ್ವರಿಯರು ಹುತ್ತದ ರೂಪದಲ್ಲಿ ನೆಲೆಸಿದ್ದಾರೆ ಎಂಬ ಪ್ರತೀತಿಯೂ ಇದೆ.
ಹಾಸನಾಂಭ ದೇವಾಲಯದ ಆವರಣದಲ್ಲಿ ಸಿದ್ದೇಶ್ವರ ದೇವಾಲಯವಿದೆ. ದೇವಾಲಯದ ಪ್ರಾಂಗಣದಲ್ಲಿ ಕಳ್ಳಪ್ಪನ ಗುಡಿಯಿದೆ. ದೇವಿಯ ಒಡವೆ ಕದಿಯಲು ಬಂದ ಕಳ್ಳರು ಇಲ್ಲಿ ಕಲ್ಲಾದರಂತೆ. ಕಳ್ಳಪ್ಪನ ಗುಡಿಯ ಬಳಿ ಐದು ಅಡಿ ಉದ್ದದ ಕಂಬವಿದ್ದು ಇದು ಹಾಲಪ್ಪನವರ ಗದ್ದುಗೆಯಾಗಿದೆ. ಹಾಸನಾಂಭೆ ದೇಗುಲದ ಸುತ್ತಲೂ ಹಲವು ದೇಗುಲಗಳಿದ್ದು, ಎಲ್ಲವೂ ತನ್ನದೇ ಮಹಿಮೆಯನ್ನು ಹೊಂದಿವೆ. ಇವುಗಳ ನಡುವೆ ಹಾಸನಾಂಭೆ ವಿಭಿನ್ನ ಮತ್ತು ವಿಶಿಷ್ಟವಾಗಿದ್ದು, ವರ್ಷಕ್ಕೊಮ್ಮೆ ದರ್ಶನ ನೀಡಿ ಹರಸುತ್ತಿದ್ದಾಳೆ

See also  ನೇಪಥ್ಯಕ್ಕೆ ಸರಿದ ಕಾಡುಮಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು