ಕೊಡಗಿನಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು ಅವುಗಳನ್ನು ಅಭಿವೃದ್ಧಿ ಪಡಿಸಿದ್ದೇ ಆದರೆ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಆದರೆ ಇಲ್ಲಿ ಐತಿಹಾಸಿಕ, ನಿಸರ್ಗ ರಮಣೀಯ ತಾಣಗಳಿದ್ದರೂ ಅವು ತನ್ನ ಮಹತ್ವ ಕಳೆದುಕೊಂಡು ಸೊರಗುತ್ತಿದೆ.
ಇವತ್ತು ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಲ್ಲಿರುವ ಪ್ರವಾಸಿ ತಾಣಗಳೇ ಮಂಕಾಗಿವೆ. ಅವು ತನ್ನತನ ಕಳೆದುಕೊಳ್ಳುತ್ತಿವೆ. ದೂರದಿಂದ ಬರುವ ಪ್ರವಾಸಿಗರು ಇಲ್ಲಿನ ತಾಣಗಳ ಬಗ್ಗೆ ತಮ್ಮದೇ ಆದ ಕಲ್ಪನೆ ಹೊತ್ತು ಬರುತ್ತಾರೆ. ಆದರೆ ಇಲ್ಲಿನ ತಾಣಗಳ ದುಸ್ಥಿತಿಯನ್ನು ಕಂಡು ನಿರಾಸರಾಗಿ ತಮ್ಮ ಹಾದಿ ಹಿಡಿಯುತ್ತಾರೆ. ಮಡಿಕೇರಿ ಪಟ್ಟಣದಲ್ಲಿರುವ ರಾಜಾಸೀಟು ಹೊರತು ಪಡಿಸಿದರೆ ನಿಸರ್ಗ ಸೌಂದರ್ಯವನ್ನು ಆಸ್ವಾದಿಸಬೇಕಾದರೆ ಪಟ್ಟಣದ ಗುಡ್ಡದ ಮೇಲಿರುವ ಗದ್ದಿಗೆಗೆ ಹೋಗಬೇಕು. ಅಲ್ಲಿಂದ ನಿಂತು ನೋಡಿದರೆ ನಗರದ ವಿಹಂಗಮ ನೋಟ ಕಣ್ಮನ ಸೆಳೆಯುತ್ತದೆ. ಇದು ಕೊಡಗನ್ನು ಸುಮಾರು ಎರಡು ಶತಮಾನಗಳ ಕಾಲ ಆಳಿದ ಹಾಲೇರಿ ವಂಶದ ರಾಜರ ಸಮಾಧಿಯಾಗಿದೆ.
ಮಡಿಕೇರಿ ಪಟ್ಟಣದ ಎತ್ತರವಾದ ಗುಡ್ಡಪ್ರದೇಶದಲ್ಲಿ ನೆಲೆ ನಿಂತಿರುವ ಗದ್ದಿಗೆ ಒಂದು ಐತಿಹಾಸಿಕ ಸ್ಮಾರಕವಾಗಿದೆ. ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರ ಪೈಕಿ ರಾಜ ವೀರರಾಜೇಂದ್ರ ಅವರ ಪತ್ನಿ ಮಹದೇವಮ್ಮ ಅವರ ಗದ್ದಿಗೆ ಮಧ್ಯದಲ್ಲಿದ್ದು, ಲಿಂಗರಾಜೇಂದ್ರ ಮತ್ತು ದೇವಮ್ಮಾಜಿ ದಂಪತಿಗಳ ಗದ್ದಿಗೆ ಬಲಭಾಗದಲ್ಲಿದೆ. ಇನ್ನು ಎಡಭಾಗದಲ್ಲಿ 1834ರಲ್ಲಿ ನಿರ್ಮಿಸಿರುವ ರಾಜಪುರೋಹಿತಮುನಿಗಳ ಗದ್ದಿಗೆಯಿದೆ. ಇದಲ್ಲದೆ ಟಿಪ್ಪುಸುಲ್ತಾನ್ನೊಂದಿಗೆ ನಡೆದ ಯುದ್ದದಲ್ಲಿ ವೀರಮರಣವನ್ನಪ್ಪಿದ ಸೇನಾಪತಿ ಬಿದ್ದಂಡ ಬೋಪು ಹಾಗೂ ಅವರ ಪುತ್ರ ಬಿದ್ದಂಡ ಸೋಮಯ್ಯ ಅವರ ಸಮಾಧಿಗಳನ್ನು ಕೂಡ ಕಾಣಬಹುದು.
ಆಕರ್ಷಕ ವಾಸ್ತುಶಿಲ್ಪ: ಇಂಡೋಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಗದ್ದಿಗೆಗಳು ಅಪರೂಪದ ವಾಸ್ತುಶಿಲ್ಪವನ್ನು ಹೊಂದಿವೆ. ಇಲ್ಲಿ ಕೆತ್ತಲಾಗಿರುವ ಕಲ್ಲಿನ ಕೆತ್ತನೆಗಳು ಕೂಡ ಆಕರ್ಷಕವಾಗಿದೆ. ಕಟ್ಟಡವು ಪ್ರಧಾನ ಗುಮ್ಮಟ ಹಾಗೂ ನಾಲ್ಕು ಮೂಲೆಯಲ್ಲಿ ಚಿಕ್ಕದಾದ ಗುಮ್ಮಟವನ್ನು ಹೊಂದಿ ಗಮನಸೆಳೆಯುತ್ತದೆ. ಕಿಟಕಿಗೆ ಪಂಚಲೋಹದ ಸರಳುಗಳನ್ನು ಅಳವಡಿಸಲಾಗಿದೆ. ಹಾಗೆ ನೋಡಿದರೆ ಗದ್ದಿಗೆಗೆ ಸೇರಿರುವ ಜಾಗಗಳು ಕೂಡ ಅತಿಕ್ರಮಣವಾಗಿವೆ. ಕರ್ಣಂಗೇರಿಯ ಸರ್ವೇ ನಂ. 30/1ರಲ್ಲಿದ್ದ 19.80ಎಕರೆ ಪ್ರದೇಶದ ಪೈಕಿ 1.25ಎಕರೆ ಜಾಗವನ್ನು ಸಹಕಾರ ತರಬೇತಿ ಸಂಸ್ಥೆಗೆ ಮಾರಲಾಗಿದೆ. ಉಳಿದ 18.55 ಎಕರೆ ಪ್ರದೇಶದಲ್ಲಿ ಸುಮಾರು ನಾಲ್ಕೈದು ಎಕರೆ ಪ್ರದೇಶಗಳು ಅತಿಕ್ರಮಣವಾಗಿದ್ದು ಅಲ್ಲಿ ಮನೆಗಳು ತಲೆ ಎತ್ತಿವೆ.
ಪುರಾತತ್ವ ಇಲಾಖೆಗೆ ಹಸ್ತಾಂತರ: ಭವಿಷ್ಯದಲ್ಲಿ ಗದ್ದಿಗೆ ಪ್ರವಾಸಿತಾಣವಾಗಿ ಗಮನಸೆಳೆಯಬೇಕು ಆ ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸಿ ಅದಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಸಂರಕ್ಷಿಸಬೇಕೆಂಬ ಒತ್ತಾಯ ಹಾಗೂ ಹೋರಾಟ ಕಳೆದ ಕೆಲವು ದಶಕಗಳಿಂದ ನಡೆಯುತ್ತಲೇ ಬಂದಿದೆ. ಬಹುಶಃ ಹೋರಾಟದ ಫಲವಾಗಿಯೋ ಏನೋ ಕೊಡಗು ದೇವಸ್ಥಾನಗಳ ನಿಧಿ ವ್ಯವಸ್ಥಾಪನಾ ಸಮಿತಿಯ ಅಧೀನದಲ್ಲಿದ್ದ ಗದ್ದಿಗೆಯನ್ನು 25-9-1981ರಲ್ಲಿ ಸರ್ಕಾರಿ ಸುತ್ತೋಲೆ ಹೊರಡಿಸಿ ಪುರಾತತ್ವ ಇಲಾಖೆಯ ಅಧೀನಕ್ಕೊಳಪಡಿಸಲಾಯಿತು.
ಒಟ್ಟಾರೆ ಗದ್ದಿಗೆ ಭವ್ಯ ಕಟ್ಟಡವಾಗಿದ್ದು, ಇಲ್ಲಿ ಉದ್ಯಾನವನ, ನಿರ್ಮಿಸಿ ಒಂದಷ್ಟು ಅಭಿವೃದ್ಧಿಪಡಿಸಿದ್ದರೂ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದ್ದು ಸಂಬಂಧಿಸಿದ ಇಲಾಖೆಯ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾಸಕ್ತಿಯ ಕೊರತೆಗೆ ಸಾಕ್ಷಿಯಾಗಿರುವುದು ಇಲ್ಲಿಗೆ ತೆರಳಿದ ಪ್ರವಾಸಿಗರಿಗೆ ಗೊತ್ತಾಗಿ ಬಿಡುತ್ತದೆ.