News Kannada
Tuesday, November 29 2022

ನುಡಿಚಿತ್ರ

ಸ್ವಚ್ಛ ಧರ್ಮಸ್ಥಳಕ್ಕಾಗಿ ‘ರಿಕ್ತ’ ಕ್ರಾಂತಿ - 1 min read

Photo Credit :

ಸ್ವಚ್ಛ ಧರ್ಮಸ್ಥಳಕ್ಕಾಗಿ 'ರಿಕ್ತ' ಕ್ರಾಂತಿ

ದೇಶದಲ್ಲೇ ಅತ್ಯಂತ ಸ್ವಚ್ಛ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡ ಧರ್ಮಸ್ಥಳ ಇದೀಗ ಹೊಸ ಧ್ಯೇಯ ವಾಕ್ಯದೊಂದಿಗೆ ಮುಂದಡಿಯಿಟ್ಟಿದೆ. ಸ್ವಚ್ಛತೆಯ ಉದ್ದೇಶದೊಂದಿಗೆ ಯಂತ್ರ ಕ್ರಾಂತಿಯ ಹಾದಿಯಲ್ಲಿದೆ. ‘ಸ್ವಚ್ಛ ಧರ್ಮಸ್ಥಳ’ದ ಪರಿಕಲ್ಪನೆ ಯಾಂತ್ರಿಕ ನೆರವಿನೊಂದಿಗೆ ಸಾಕಾರಗೊಳ್ಳುತ್ತಿದೆ.

ದೀಪೋತ್ಸವದಲ್ಲಿ ಸಂಭ್ರಮ ಮಾಮೂಲಿ. ಅದರೊಂದಿಗೆ ಜನದಟ್ಟಣೆ ಕೂಡ. ಮುಖ್ಯದ್ವಾರದಿಂದ ಇಡೀ ದೀಪೋತ್ಸವದ ಹೆದ್ದಾರಿಗಳನ್ನು ಸುತ್ತುಹೊಡೆಯುವ ಜನ ಅಲ್ಲಲ್ಲಿ ಕಸ ಎಸೆಯುದು ಸಾಮಾನ್ಯ. ಆ ಕಸವನ್ನು ಒಟ್ಟುಮಾಡಿ, ಪರಿಸರವನ್ನು ಸ್ವಚ್ಛ ಮಾಡುವುದು ಬಹುದೊಡ್ಡ ಸವಾಲು. ಇದಕ್ಕೆ ಪರಿಹಾರವೆಂಬಂತೆ ಈ ಬಾರಿ ಎಸ್ಡಿಎಂ ಪಾಲಿಟೆಕ್ನಿಕ್ನ ಆವಿಷ್ಕಾರಿ ಉಪನ್ಯಾಸಕರ ವೃಂದ ‘ರಿಕ್ತ’ ಪವರ್ ವ್ಯಾಕ್ಯುಮ್ ಕ್ಲೀನರ್ ಎಂಬ ಯಂತ್ರವನ್ನು ಆವಿಷ್ಕರಿಸಿದೆ. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಹಾಗೂ ಡಾ. ಬಿ. ಯಶೋವರ್ಮ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಫಲವಾಗಿ ‘ರಿಕ್ತ’ ಜನ್ಮತಾಳಿದೆ.

ವೆಂಚುರಿ ಇಫೆಕ್ಟ್ (ಕೊಳವೆ ಪರಿಣಾಮ)ಎಂಬ ಪರಿಕಲ್ಪನೆಯಲ್ಲಿ ಈ ಕಸ ತೆಗೆಯುವ ಯಂತ್ರವನ್ನು ತಯಾರಿಸಲಾಗಿದ್ದು, ಇದು ಪರಿಣಾಮಕಾರಿಯಾಗಿ ಕಸವನ್ನು ಹೀರಿಕೊಳ್ಳುವ(ಇಫೆಕ್ಟಿವ್ ಸಕ್ಷನ್) ಮುಖಾಂತರ ಕಾರ್ಯ ನಿರ್ವಹಿಸುತ್ತದೆ. ಸುಮಾರು 50ರಿಂದ 60 ಕೆ.ಜಿ ತೂಕವಿರುವ ಈ ಯಂತ್ರದಲ್ಲಿ ಬ್ಲೋವರ್, ವೆಂಚುರಿ(ಕೊಳವೆ), ಸಕ್ಷನ್ ಪೈಪ್ಸ್(ಹೀರುವ)ಗಳಂತಹ ಪಾಥಮಿಕ ಭಾಗಗಳಿವೆ. ಬ್ಲೋವರ್ ಮೂಲಕ ಚಲಿಸುವ ಗಾಳಿಯು ಸಕ್ಷನ್ ಪೈಪಿನಲ್ಲಿ ನಿರ್ವಾತವನ್ನು ಉಂಟುಮಾಡಿ ಸುತ್ತಮುತ್ತ ಇರುವ ಕಸಕಡ್ಡಿಗಳನ್ನು ಯಂತ್ರದ ಒಳಗೆ ಎಳೆದುಕೊಳ್ಳುತ್ತದೆ. ಪೇಪರ್, ಪ್ಲಾಸ್ಟಿಕ್, ನೀರಿನ ಬಾಟಲಿ, ಚಿಕ್ಕಪುಟ್ಟ ಕಸ ಕಡ್ಡಿ ಇವುಗಳನ್ನೆಲ್ಲಾ ಪೈಪ್ ಗಳೊಳಗೆ  ಎಳೆದುಕೊಳ್ಳುತ್ತದೆ. ಈ ಯಂತ್ರವನ್ನು ಪಿಕ್ಅಪ್, ಆಟೋ, ಲಾರಿಯಂತಹ ವಾಹನಗಳಿಗೆ ಅಳವಡಿಸಬಹುದಾಗಿದ್ದು, ಹೀರಿಕೊಂಡ ಕಸ ನೇರವಾಗಿ ವಾಹನದಲ್ಲಿರುವ ಖಾಲಿ ಪ್ರದೇಶದಲ್ಲಿ ಸಂಗ್ರಹವಾಗುತ್ತದೆ.

ಸುಮಾರು 45 ಸಾವಿರ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಯಂತ್ರವು ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಾಪಕರ ಪ್ರಥಮ ಪ್ರಯತ್ನವಾಗಿದ್ದು, ಯಾರು ಬೇಕಾದರೂ ಬಳಸಬಲ್ಲ ಸುಲಭ ಮಾದರಿಯಲ್ಲಿ ಯಂತ್ರವನ್ನು ರೂಪಿಸಲಾಗಿದೆ. ಕೆಲಸಗಾರರ ಕೊರತೆಯನ್ನು ಬದಿಗಿಟ್ಟು ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡುವ ನಿಟ್ಟಿನಲ್ಲಿ ಈ ಯಂತ್ರ ಬಹಳ ಉಪಯುಕ್ತವಾಗಿದೆ. ಪ್ರಾರಂಭದಲ್ಲಿ ಇದರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಉಜಿರೆಯ ಕಾಲೇಜು ಪರಿಸರದಲ್ಲಿನ ಕಸ ತೆಗೆಯುವ ಪ್ರಯತ್ನ ಮಾಡಲಾಯಿತು. ಇದು ಯಶಸ್ವಿಯಾದ ಬೆನ್ನಲ್ಲೇ ಪಾದಯಾತ್ರೆಯಿಂದ ಶುರುವಾದ ಲಕ್ಷದೀಪೋತ್ಸವದಲ್ಲಿ ಪಾದಯಾತ್ರೆಯ ರಸ್ತೆಯನ್ನು ಒಳಗೊಂಡಂತೆ ಇಡೀ ಧರ್ಮಸ್ಥಳದ ಪರಿಸರವನ್ನು ಸತತ 5 ದಿನಗಳಿಂದ ಈ ಯಂತ್ರ ಸ್ವಚ್ಛ ಪಡಿಸುತ್ತಿದೆ.

ಒಂದು ಲೀಟರ್ ಪೆಟ್ರೋಲ್ ಗೆ ಸುಮಾರು 2 ಗಂಟೆಗಳಷ್ಟು ಕಾರ್ಯನಿರ್ವಹಿಸಬಲ್ಲ ಸಾಮಥ್ರ್ಯವಿರುವ ಈ ಯಂತ್ರವನ್ನು ಶಿವರಾಜ್, ಅಮರೇಶ್, ಶಿವಪ್ರಸಾದ, ಚೇತನ್, ಧನರಾಜ್, ಮಿಥುನ್ ಕುಮಾರ್, ಶ್ರೇಯಾಂಕ್ ಮತ್ತು ಆಶೋಕ್ ಅವರನ್ನೊಳಗೊಂಡ ಎಸ್ಡಿಎಂ ಪಾಲಿಟೆಕ್ನಿಕ್ನ ಆವಿಷ್ಕಾರಿ ಉಪನ್ಯಾಸಕರ ವೃಂದ ಖಾವಂದರು ಮತ್ತು ಡಾ.ಬಿ.ಯಶೋವರ್ಮ ಅವರ ಮಾರ್ಗದರ್ಶನದಲ್ಲಿ ರೂಪಿಸಿದೆ. ಇದಕ್ಕೆ ಎಸ್ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಕೆ.ಪಿ.ಪ್ರಸಾದ್ ಅವರ ಸಹಕಾರವಿದೆ.

See also  ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆ

ಈ ವರ್ಷದ ಲಕ್ಷದೀಪೋತ್ಸವದ ಅನೇಕ ಆಕರ್ಷಣೆಗಳಲ್ಲಿ ಸ್ಚಚ್ಛ ಧರ್ಮಸ್ಥಳದ ಧ್ಯೇಯವನ್ನೊಳಗೊಂಡ ‘ರಿಕ್ತ’ ಪವರ್ ವ್ಯಾಕ್ಯುಮ್ ಕ್ಲೀನರ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಮತ್ತೊಂದು ವಿಶೇಷ. ಪಾಲಿಟೆಕ್ನಿಕ್ ಕಾಲೇಜಿನ ಮ್ಯಾನೇಜರ್ ಚಂದ್ರನಾಥ್ ಜೈನ್ ನೇತೃತ್ವದ ತಂಡದಲ್ಲಿ ಅಜಿತ್, ನಾರಾಯಣ್ ಮತ್ತು ರಾಜೇಶ್ ಸ್ವಚ್ಛ ಧರ್ಮಸ್ಥಳದ ಸೃಷ್ಠಿಗೆ ಕೈಜೋಡಿಸಿದ್ದಾರೆ. ಈ ಮಿಷನ್ಗೆ  ಅಳವಡಿಸಲಾಗಿರುವ ಪೈಪ್ ಗಾತ್ರ ಚಿಕ್ಕದಿರುವುದರಿಂದ ದೊಡ್ಡ ಗಾತ್ರದ ಕಸ ಪೈಪ್ನೊಳಗೆ ಹೋಗುವುದಿಲ್ಲ. ಇದು ಪ್ರಥಮ ಪ್ರಯತ್ನವಾಗಿರುವುದರಿಂದ ಮುಂದಿನ ಹಂತದಲ್ಲಿ ಇನ್ನಷ್ಟು ಸಮರ್ಪಕವಾಗಿ ರೂಪಿಸಲಾಗುವುದು ಅಂತಾರೆ ಪಾಲಿಟೆಕ್ನಿಕ್ ಕಾಲೇಜಿನ ಮ್ಯಾನೇಜರ್ ಚಂದ್ರನಾಥ್ ಜೈನ್.

ಇದೇ ರೀತಿ ಹಲವು ಪರಿಸರ ಸ್ನೇಹಿ ಯಂತ್ರಗಳ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಎಸ್ಡಿಎಂ ಪಾಲಿಟೆಕ್ನಿಕ್  ತನ್ನ ಕ್ರೀಯಾಶೀಲತೆಯಿಂದಾಗಿ ರಾಜ್ಯಮಟ್ಟದಲ್ಲಿಯೂ ಗುರುತಿಸಿಕೊಂಡಿದೆ. ಇಲ್ಲಿನ ವಿದ್ಯಾರ್ಥಿಗಳು ರೂಪಿಸಿದ ಕೊಕನಟ್ ಕಟ್ಟರ್ ಯಂತ್ರವು ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಅಡಿಕೆಯನ್ನು ಗೊನೆಯಿಂದ ಬೇರ್ಪಡಿಸುವ ಯಂತ್ರ ಬೆಳಗಾಂನಲ್ಲಿ 2015ರಲ್ಲಿ ಪ್ರಥಮ ಸ್ಥಾನ ಲಭಿಸಿದೆ. ಈ ವರ್ಷ ರಬ್ಬರ್ ಮಿಕ್ಷಿಂಗ್ ಯಂತ್ರದ ಮಾದರಿಗೆ ಮಂಗಳೂರಿನಲ್ಲಿ ನಡೆದ ಇಂಜಿನಿಯರ್ಸ್ ಡೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದೊರೆತಿದೆ. ಇಷ್ಟೇ ಅಲ್ಲದೇ ಸಿಪ್ಪೆ ತೆಗೆಯುವ ಮಿಷನ್, ಅಡಿಕೆ ಮರ ಮತ್ತು ತೆಂಗಿನ ಮರ ಹತ್ತುವ ಯಂತ್ರ, ಮರಳಿನಿಂದ ಕಸ ಬೇರೆ ಮಾಡುವ ಯಂತ್ರ ಹೀಗೆಯೇ ಹತ್ತು ಹಲವು ಪ್ರಯತ್ನಗಳು ಇಲ್ಲಿ ನಡೆದಿದೆ.

ವರದಿ: ಪವಿತ್ರ ಬಿದ್ಕಲ್ಕಟ್ಟೆ
ಚಿತ್ರಗಳು: ಪವನ್ ಎಂ.ಸಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು