ಸರ್ಪದೋಷ ಕಳೆಯುವ.. ಇಷ್ಟಾರ್ಥ ನೆರವೇರಿಸುವ.. ನಾಗಪೂಜೆಯ ನಾಡು ಸುಬ್ರಹ್ಮಣ್ಯ ಪವಿತ್ರ ಕ್ಷೇತ್ರ ಮಾತ್ರವಲ್ಲ ನಿಸರ್ಗದ ನೆಲೆವೀಡು ಹೀಗಾಗಿ ಇಲ್ಲಿಗೆೆ ಆಸ್ತಿಕರು, ನಾಸ್ತಿಕರು ಎಲ್ಲರೂ ಆಗಮಿಸುತ್ತಿರುತ್ತಾರೆ.
ಸುತ್ತಲೂ ಹಸಿರು ಹಚ್ಚಡವನ್ನೊದ್ದು ಮುಗಿಲೆತ್ತರಕ್ಕೇರಿ ನಿಂತ ಪರ್ವತಶ್ರೇಣಿಗಳು…ಅವುಗಳ ನಡುವಿನಲ್ಲಿ ತೂಗಿ ತೊನೆಯುವ ತೆಂಗು ಅಡಿಕೆ ತೋಟಗಳು… ಜುಳು ಜುಳು ನಿನಾದಗೈಯ್ಯುತ್ತಾ ಹರಿವ ಕುಮಾರಧಾರಾ ನದಿ… ದೇಗುಲದಿಂದ ಅಲೆಅಲೆಯಾಗಿ ಹೊರಹೊಮ್ಮುವ ಗಂಟೆಯ ನಿನಾದ… ಕಿವಿಗೆ ಅಪ್ಪಳಿಸುವ ಚಂಡೆಯ ಸದ್ದು… ಭಕ್ತಿ ಭಾವದಿಂದ ಸುಬ್ರಹ್ಮಣ್ಯನಿಗೆ ನಮಿಸುವ ಭಕ್ತರು… ಇದು ಸುಬ್ರಹ್ಮಣ್ಯ ಕ್ಷೇತ್ರದ ನಿತ್ಯದ ಸುಂದರ ದೃಶ್ಯಗಳು.
ದೇವರ ದರ್ಶನ ಪಡೆದು ಪುನೀತರಾಗುವ ಉದ್ದೇಶದಿಂದ ಹೋಗುವ ಭಕ್ತರು ಒಂದೆಡೆಯಾದರೆ ಪ್ರವಾಸದ ದೃಷ್ಠಿಯಿಂದ ತೆರಳುವ ಜನರು ಇದ್ದಾರೆ. ಇವರನ್ನು ಇಲ್ಲಿನ ನಿಸರ್ಗ ಸೌಂದರ್ಯ ತನ್ನತ್ತ ಸೆಳೆಯುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ಸೇರಿದ ಸುಬ್ರಹ್ಮಣ್ಯ ಕೊಡಗು, ಹಾಸನ ಜಿಲ್ಲೆಗಳಿಗೆ ಹೊಂದಿಕೊಂಡಂತಿದೆ. ಕ್ಷೇತ್ರದ ಪೂರ್ವಕ್ಕೆ ಸಹ್ಯಾದ್ರಿ ಶ್ರೇಣಿಯ ಕುಮಾರ ಪರ್ವತ, ಶೇಷ ಪರ್ವತ ಹಾಗೂ ಸಿದ್ದ ಪರ್ವತಗಳಿದ್ದು, ದಟ್ಟ ಕಾಡನ್ನು ಹೊಂದಿ ತನ್ನದೇ ಆದ ನಿಸರ್ಗ ರಮಣೀಯತೆಯಿಂದ ಗಮನಸೆಳೆಯುತ್ತದೆ.
ಇಲ್ಲಿನ ಕುಮಾರ ಪರ್ವತದ ಚಾರಣಕ್ಕಾಗಿ ಬರುವ ದೊಡ್ಡ ಚಾರಣಿಗರ ದಂಡೇ ಇದೆ. ಆಗಾಗ್ಗೆ ಇಲ್ಲಿಗೆ ಆಗಮಿಸಿ ಇಲ್ಲಿನ ನಿಸರ್ಗ ಸೌಂದರ್ಯ ಆಸ್ವಾದಿಸಿ ಹೊರಟು ಹೋಗುತ್ತಾರೆ.
ಇನ್ನು ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ಹೇಳುವುದಾದರೆ ಹಿಂದೆ ಸುಬ್ರಹ್ಮಣ್ಯವು ಬಲ್ಲಾಳರಾಜನ ರಾಜಧಾನಿಯಾಗಿತ್ತು ಎನ್ನಲಾಗಿದೆ. ಇಲ್ಲಿನ ದೇವಾಲಯದಲ್ಲಿರುವ ಮೂರ್ತಿ ಬಲ್ಲಾಳ ಅರಸರದ್ದಾಗಿದೆ. ಇತಿಹಾಸದ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯನ್ನು ಹನ್ನೊಂದನೇ ಶತಮಾನದಲ್ಲಿ ಹೊಯ್ಸಳ ಬಲ್ಲಾಳ ಅರಸರು ಆಳುತ್ತಿದ್ದರೆನ್ನಲಾಗಿದೆ. ಆದರೆ ಇಕ್ಕೇರಿ ಅರಸರು ಆಳ್ವಿಕೆ ನಡೆಸಲು ಆರಂಭಿಸಿದ ಬಳಿಕ ಕೆಲವೊಂದು ಗ್ರಾಮಗಳಲ್ಲಿ ಮಾತ್ರ ಬಲ್ಲಾಳ ಅರಸರ ಆಳ್ವಿಕೆ ನಡೆಯುತ್ತಿತ್ತು. ಆ ಸಂದರ್ಭ ಸುಬ್ರಹ್ಮಣ್ಯವೂ ಅವರ ಆಳ್ವಿಕೆಗೆ ಒಳಪಟ್ಟಿತ್ತೆಂದು ಹೇಳಲಾಗಿದೆ.
ಸುಬ್ರಹ್ಮಣ್ಯ ಕ್ಷೇತ್ರವು ವರ್ಷದ ಎಲ್ಲ ದಿನಗಳಲ್ಲಿಯೂ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಅಷ್ಟೇ ಅಲ್ಲ ಸುತ್ತಲೂ ಪರ್ವತ ಹಾಗೂ ಅರಣ್ಯದಿಂದ ಆವೃತವಾಗಿರುವುದರಿಂದ ಮಳೆಯೂ ಹೆಚ್ಚಾಗಿಯೇ ಸುರಿಯುತ್ತಿರುತ್ತದೆ. ಇದೀಗ ಚಂಪಾ ಷಷ್ಠಿ ಬಂದಿರುವುದರಿಂದ ಭಕ್ತ ಸಾಗರವೇ ಇಲ್ಲಿಗೆ ಹರಿದು ಬರುತ್ತಿದೆ.
ದೇವಾಲಯದ ಬಗ್ಗೆ ಹೇಳುವುದಾದರೆ ಇದು ಸುಮಾರು ಎಂಟನೆಯ ಶತಮಾನದ ಹಳೆಯದು ಎನ್ನಲಾಗಿದೆ. ಇಲ್ಲಿ ನರಸಿಂಹ, ಉಮಾಮಹೇಶ್ವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆಯಾದರೂ ಸುಬ್ರಹ್ಮಣ್ಯನೇ ಆದಿದೈವನಾಗಿದ್ದಾನೆ. ಕುಮಾರಸ್ವಾಮಿಯು ದೇವಸೇನೆಯೊಂದಿಗೆ ಮತ್ತು ಭಕ್ತ ವಾಸುಕಿಯೊಂದಿಗೆ ಇಲ್ಲಿ ನೆಲೆಸಿದ್ದರಿಂದ ಪುತ್ರನ ಮೇಲಿನ ವಾತ್ಸಲ್ಯದಿಂದ ಶಿವಪಾರ್ವತಿಯರು ಕುಕ್ಕೆಲಿಂಗ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ.
ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಮುಖ್ಯ ದ್ವಾರದ ಎದುರಿಗೆ ಸುಬ್ರಹ್ಮಣ್ಯ ಸ್ವಾಮಿಯ ಗರ್ಭಗುಡಿಯಿದೆ. ಈ ಗರ್ಭಗೃಹ ಮತ್ತು ನೂತನವಾಗಿ ಕಟ್ಟಲ್ಪಟ್ಟ ಮುಖಮಂಟಪದ ಮಧ್ಯದಲ್ಲಿ ಗರುಡ ಕಂಬವಿದೆ. ಈ ಗರುಡ ಕಂಬವನ್ನು ಗರುಡ ಮಂತ್ರವನ್ನು ಮಂತ್ರಿಸಿ ವಾಸುಕಿಯ ಉಸಿರಾಟದ ವಿಷಬಾಧೆ ತಟ್ಟಬಾರದೆಂಬ ಉದ್ದೇಶದಿಂದ ನಿರ್ಮಿಸಿರುವುದಾಗಿ ಹೇಳಲಾಗಿದೆ. ಇನ್ನು ದೇವಾಲಯದಿಂದ ಉತ್ತರ ಭಾಗಕ್ಕೆ ತೆರಳಿದರೆ ಇಲ್ಲಿ ನಾವು ಹಲವು ಲಿಂಗಗಳನ್ನು ಕಾಣಬಹುದು. ಈ ಲಿಂಗಗಳನ್ನು ಕುಕ್ಕೆಯಲ್ಲಿಟ್ಟು ಪೂಜಿಸುತ್ತಿದ್ದುದರಿಂದ ಕುಕ್ಕೆಲಿಂಗ ಎಂದು ಕೂಡ ಕರೆಯಲಾಗುತ್ತಿದೆ.
ದೇವಸ್ಥಾನದಿಂದ ಅನತಿ ದೂರದಲ್ಲಿ ಆದಿಸುಬ್ರಹ್ಮಣ್ಯನ ದೇವಾಲಯವಿದೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದವರು ಇಲ್ಲಿಗೆ ತೆರಳಿ ದರ್ಶನ ಮಾಡದೆ ಮರಳುವಂತಿಲ್ಲ. ಇಲ್ಲೊಂದು ಬೃಹತ್ ವಾಲ್ಮಿಕ(ಹುತ್ತ) ಇದ್ದು, ಅಲ್ಲಿಂದ ತೆಗೆದ ಮಣ್ಣನ್ನು ಪ್ರಸಾದವಾಗಿ ನೀಡಲಾಗುತ್ತದೆ.
ಸುಬ್ರಹ್ಮಣ್ಯ ದೇವಾಲಯದ ಸುತ್ತ ಹಲವು ದೇವಾಲಯಗಳನ್ನು ನಾವು ಕಾಣಬಹುದಾಗಿದೆ. ಇಲ್ಲಿ ಭೈರದೇವರ ದೇವಾಲಯವಿದ್ದು, ಇದನ್ನು ಕಪಾಲೇಶ್ವರ ದೇವಾಲಯ ಎಂದು ಕೂಡ ಕರೆಯಲಾಗುತ್ತದೆ. ಸುಬ್ರಹ್ಮಣ್ಯ ದೇವಾಲಯದ ಗರ್ಭಗೃಹದ ಈಶಾನ್ಯಕ್ಕೆ ಉಮಾಮಹೇಶ್ವರ ದೇವಾಲಯವಿದ್ದು, ಇಲ್ಲಿನ ಆರಾಧ್ಯ ದೈವ ಉಮಾಮಹೇಶ್ವರನಾದರೂ ಸೂರ್ಯ, ಅಂಬಿಕಾ, ವಿಷ್ಣು, ಗಣನಾಥ ದೇವರ ಮೂರ್ತಿಗಳು ಇಲ್ಲಿವೆ. ಇವುಗಳೆಲ್ಲವೂ ಪ್ರಾಚೀನ ಕಾಲದ ಮೂರ್ತಿಗಳಾಗಿವೆ. ಗರ್ಭಗೃಹದ ಆಗ್ನೇಯ ದಿಕ್ಕಿಗೆ ವೇದವ್ಯಾಸ ಸಂಪುಟ ನರಸಿಂಹ ದೇವರ ದೇವಾಲಯವಿದೆ. ಸುಬ್ರಹ್ಮಣ್ಯ ದೇವಾಲಯದ ದಕ್ಷಿಣಕ್ಕೆ ಹೊಸಳ್ಳಿಗಮ್ಮನ ದೇವಾಲಯವಿದ್ದು, ಹೊಸಳ್ಳಿಗಮ್ಮ ಹಾಗೂ ಪುರುಷರಾಯ ಆರಾಧ್ಯದೈವರಾಗಿದ್ದಾರೆ.
ದೇವಾಲಯದ ಹೊರಪ್ರಕಾರದ ಈಶಾನ್ಯ ದಿಕ್ಕಿಗೆ ಶೃಂಗೇರಿ ಮಠವಿದ್ದು, ಇಲ್ಲಿ ಚಂದ್ರಮೌಳೇಶ್ವರ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಮಹಾದ್ವಾರದ ಎದುರಿಗೆ ಕಂಡುಬರುವ ಚಿಕ್ಕ ಹೊಳೆಯನ್ನು ದರ್ಪಣತೀರ್ಥ ಎಂದು ಕರೆಯಲಾಗುತ್ತದೆ. ಇದು ಉತ್ತರದಿಂದ ದಕ್ಷಿಣಕ್ಕೆ ಸುಮಾರು ಒಂದು ಮೈಲಿಗೂ ಹೆಚ್ಚು ದೂರ ಹರಿದು ಮತ್ಸ್ಯ ತೀರ್ಥವನ್ನು ಸೇರುತ್ತದೆ. ಸುಬ್ರಹ್ಮಣ್ಯ ದೇವಾಲಯದಿಂದ ಕೆಲವೇ ದೂರದಲ್ಲಿ ಕಾಶಿಕಟ್ಟೆಯಿದ್ದು, ಇಲ್ಲಿ ಆಂಜನೇಯ ಹಾಗೂ ಗಣಪತಿ ದೇವರುಗಳ ದೇವಾಲಯ ಹಾಗೂ ಬೃಹತ್ ಅಶ್ವತ್ಥ ಕಟ್ಟೆಯನ್ನೂ ಕಾಣಬಹುದು. ತೇರು ಬೀದಿಯ ಉತ್ತರಕ್ಕೆ ದ್ವೈತ ಸಂಪ್ರದಾಯದ ಉತ್ತರಾದಿಮಠವಿದ್ದು, ಇಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ದೇವಾಲಯದಿಂದ ಕುಮಾರಧಾರಾ ನದಿಯತ್ತ ಸಾಗುವಾಗ ದಾರಿ ಮಧ್ಯೆ ಕಂಡು ಬರುವ ಬಿಲದ್ವಾರ ಪವಿತ್ರಕ್ಷೇತ್ರವಾಗಿದ್ದು, ಇದೊಂದು ಗುಹೆಯಾಗಿದ್ದು, ಇದಕ್ಕೆ ಎರಡು ದಾರಿಗಳಿವೆ. ಒಂದು ದಕ್ಷಿಣಕ್ಕೆ, ಮತ್ತೊಂದು ಉತ್ತರಕ್ಕೆ ಸಾಗುತ್ತದೆ. ಸುಬ್ರಹ್ಮಣ್ಯ ಕೇತ್ರದಲ್ಲಿ ಹರಿಯುವ ಕುಮಾರಧಾರಾ ನದಿ ಪವಿತ್ರವಾಗಿದ್ದು, ಇದು ಭೂಮಿಯ ಒಡಲಾಳದಿಂದ ಉಕ್ಕಿಹರಿದ ಎಲ್ಲಾ ತೀರ್ಥಗಳ ಸಾರವನ್ನು ಹೊಂದಿದೆ ಎಂದು ನಂಬಲಾಗಿದೆ.
ಇನ್ನು ಇಲ್ಲಿಗೆ ಸಮೀಪದ ನಿಸರ್ಗ ರಮಣೀಯ ವೀಕ್ಷಣಾ ತಾಣ ಬಿಸಿಲೆಘಾಟ್ ಇದ್ದು, ಇಲ್ಲಿನ ನಿಸರ್ಗರಮಣೀಯತೆ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಎಲ್ಲ್ಲ ಕಡೆಗಳಿಂದಲೂ ಬಸ್ ಸಂಪರ್ಕವಲ್ಲದೆ, ರೈಲು ಸಂಪರ್ಕವೂ ಇರುವುದರಿಂದ ತೆರಳುವವರಿಗೆ ಯಾವುದೇ ತೊಂದರೆಯಿಲ್ಲ.