ಕಳೆದ ಕೆಲವು ವರ್ಷಗಳಿಂದ ಕಾಡದ ಚಳಿ ಈ ಬಾರಿ ಕಾಣಿಸಿಕೊಳ್ಳುತ್ತಿರುವುದರಿಂದ ಮುಂಜಾನೆಯ ಚಳಿಗೆ ಪಟ್ಟಣ ಸೇರಿದಂತೆ ಗ್ರಾಮೀಣ ಮಂದಿ ಥರಗುಟ್ಟುತ್ತಿದ್ದಾರೆ.
ಉಷ್ಣಾಂಶ 9ಡಿಗ್ರಿ ಸೆಲ್ಷಿಯಸ್ ಗೆ ಬಂದಿದ್ದರಿಂದ ಚಳಿ ತಡೆಯಲಾರದೆ ಮೃಗಾಲಯದ ಪ್ರಾಣಿಗಳು ಸಾವನ್ನಪ್ಪುತ್ತಿವೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಮುಂಜಾನೆ ಎದ್ದು ಜಮೀನಿಗೆ ಹೋಗುತ್ತಿದ್ದ ರೈತರು, ಬೆಳಗ್ಗೆ ಎದ್ದು ವಾಕಿಂಗ್ ಹೋಗುತ್ತಿದ್ದ ಪಟ್ಟಣಿಗರು ಕಂಬಳಿ ಎಳೆದುಕೊಂಡು ಮಲಗಿ ನಿದ್ರಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮುಂಜಾನೆ ಮಂಜು ಕವಿಯುತ್ತಿದ್ದು, ಒಬ್ಬರನೊಬ್ಬರು ಕಾಣದಷ್ಟು ದಟ್ಟ ಮಂಜು ವ್ಯಾಪಿಸುತ್ತಿದ್ದು, ಚಳಿ… ಚಳಿ… ಎಂದು ಗುನುಗುತ್ತಾ ಜನ ಎತ್ತಿಟ್ಟಿದ್ದ ಸ್ವೆಟರ್, ಜರ್ಕಿನ್ ಗಳನ್ನು ಹೊರತೆಗೆಯುತ್ತಿದ್ದಾರೆ.
ಈ ನಡುವೆ ವಾತಾವರಣದಲ್ಲಾದ ಬದಲಾವಣೆಯಿಂದ ಮಕ್ಕಳು ಹುಷಾರ್ ತಪ್ಪುತ್ತಿದ್ದಾರೆ. ಅಸ್ತಮಾ, ಕೆಮ್ಮು, ಶೀತ, ನೆಗಡಿ, ಗಂಟಲು ನೋವು ಮಕ್ಕಳು ಸೇರಿದಂತೆ ದೊಡ್ಡವರನ್ನು ಕಾಡುತ್ತಿದೆ. ಥರಗುಟ್ಟುವ ಚಳಿಯ ನಡುವೆಯೂ ಮುಂಜಾನೆಯ ಮಂಜಿನ ನೋಟ ಒಂದಷ್ಟು ಕಣ್ಣಿಗೆ ರಸದೂಟ ನೀಡುತ್ತಿದೆ. ಚಾಮುಂಡಿಬೆಟ್ಟವನ್ನು ಮಂಜು ಆವರಿಸುತ್ತಿದ್ದು, ಬೆಳಿಗ್ಗೆ 10ಗಂಟೆಯಾದರೂ ಸರಿಯುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿಯೂ ಮಂಜಿನ ನೋಟ ಕಣ್ಮನ ಸೆಳೆಯುತ್ತಿದೆ.
ಚಂಡಮಾರುತದ ಪರಿಣಾಮ ಕಳೆದ ಎರಡು ದಿನ ಜಿಟಿ ಜಿಟಿ ಮಳೆಯಿತ್ತಾದರೂ ಇದೀಗ ಒಂದಷ್ಟು ಬಿಸಿಲು ಜೊತೆ ಜೊತೆಯಲ್ಲೇ ಮಳೆ ಮೋಡ ಕಾಣಿಸಿಕೊಳ್ಳುತ್ತಿದೆ. ಒಂದಷ್ಟು ವ್ಯತಿರಿಕ್ತ ವಾತಾವರಣ ಮೈಸೂರಿನ ಜನರನ್ನು ಕಾಡುತ್ತಿದ್ದು ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.