ಕೊಡಗು: ಒಂದೆಡೆ ಮಳೆ ಕಡಿಮೆಯಾಗಿ ಸಣ್ಣಗೆ ನಡುಕ ಹುಟ್ಟಿಸುವ ಚಳಿ ಆರಂಭವಾಗಿದೆ. ಮತ್ತೊಂದೆಡೆ ಹಚ್ಚಹಸಿರಾಗಿದ್ದ ಭತ್ತದ ಗದ್ದೆಯ ಬಯಲುಗಳು ತೆನೆಬಿಟ್ಟು ಹೊಂಬಣ್ಣಕ್ಕೆ ತಿರುಗಿವೆ. ಮನೆ, ಮನಗಳಲ್ಲಿ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಡಿಸೆಂಬರ್ 13ರಂದು ಕೊಡಗಿನಾದ್ಯಂತ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆನೋಡಿದರೆ ಕೊಡಗಿನವರಿಗೆ ಹುತ್ತರಿ ಹಬ್ಬ ಸುಗ್ಗಿ ಹಬ್ಬವಾದರೂ ಇದರಲ್ಲಿ ಇಲ್ಲಿನ ಸಂಸ್ಕೃತಿ, ಸಂಪ್ರದಾಯದ ಲೇಪನ, ಜಾನಪದ ಮಿಳಿತವಾಗಿದೆ. ಗದ್ದೆಯಿಂದ ತೆನೆಯೊಡೆದ ಧಾನ್ಯ(ಭತ್ತ)ವನ್ನು ತಂದು ಅದನ್ನು ಪೂಜಿಸಿ, ಹೊಸ ಅಕ್ಕಿಯ ಪಾಯಸ ಮಾಡಿ ಮನೆಮಂದಿಯೆಲ್ಲಾ ಸೇವಿಸುವ ಮೂಲಕ ವರ್ಷ ಪೂರ್ತಿ ಮನೆಯಲ್ಲಿ ಧಾನ್ಯ ತುಂಬಿರಬೇಕೆಂದು ಪ್ರಾರ್ಥಿಸುವುದು ಹಬ್ಬದ ಸಂಪ್ರದಾಯ.
ಹಿರಿಯಮನೆ (ಐನ್ಮನೆ)ಯಲ್ಲಿ ಸೇರಿ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿ ತೂಗು ದೀಪದ ಕೆಳಗೆ ಚಾಪೆ ಹಾಸಿ ಹುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಹಲಸಿನ ಎಲೆ, ಕುಂಬಳಿ ಎಲೆ, ಕಾಡು ಗೇರು ಎಲೆ ಹೀಗೆ ಐದು ತರಹದ ಎಲೆಯನ್ನು ಹಾಗೂ ಕಾಡಿನಲ್ಲಿ ಸಿಗುವ ಅಚ್ಚುನಾರನ್ನು ಇರಿಸಲಾಗುತ್ತದೆ. ಮತ್ತೊಂದು ಕುಕ್ಕೆಯ ತುಂಬ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರಿನಲ್ಲಿ ಅಕ್ಕಿ ತುಂಬಿಡಲಾಗುತ್ತದೆ. ಹುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡಲಾಗುತ್ತದೆ. ಇದರ ಪಕ್ಕದಲ್ಲಿ ಕುಡುಗೋಲು, ಮುಕ್ಕಾಲಿಯ ಮೇಲೆ ತಳಿಯಕ್ಕಿ ಬೊಳ್ಚ, ಮೂರು ವೀಳ್ಯದೆಲೆ ಹಾಗೂ ಮೂರು ಅಡಿಕೆಯನ್ನು ಇಡಲಾಗುತ್ತದೆ.
ಮುತೈದೆಯರು ಅಕ್ಕಿ ಹಿಟ್ಟಿನಿಂದ ಹಬ್ಬಾಚರಣೆಗೆ ಇರಿಸಲಾದ ವಸ್ತುಗಳ ಮುಂದೆ ರಂಗೋಲಿ ಇಡುತ್ತಾರೆ. ಬಳಿಕ ದೇವರನ್ನು ಪ್ರಾರ್ಥಿಸುತ್ತಾ ಎಲೆಗಳನ್ನು ಸಂಪ್ರದಾಯದಂತೆ ಒಂದರ ಮೇಲೊಂದು ಇಟ್ಟು ನಾರಿನಿಂದ ಕಟ್ಟಲಾಗುತ್ತದೆ. ಇದನ್ನು ನೆರೆ ಕಟ್ಟುವುದು ಎಂದು ಕರೆಯುತ್ತಾರೆ. ಬಳಿಕ ಬೇಯಿಸಿದ ಹುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಸೇರಿಸಿ ಸೇವಿಸುತ್ತಾರೆ. ಜೊತೆಗೆ ಇತರೆ ತಿಂಡಿ ತೀರ್ಥಗಳೂ ಇರುತ್ತವೆ. ಇದನ್ನು ಫಲಹಾರ ಎನ್ನುತ್ತಾರೆ. ಫಲಹಾರದ ಬಳಿಕ ಸಿದ್ದಪಡಿಸಲಾದ ಕುತ್ತಿಯನ್ನು ಕುಟುಂಬದ ಹಿರಿಯರೊಬ್ಬರು ಹೊತ್ತು ಊರಿನಲ್ಲಿರುವ ಅಂಬಲ(ಮೈದಾನ)ಕ್ಕೆ ತೆರಳುತ್ತಾರೆ. ಅಲ್ಲಿಗೆ ಸುತ್ತಮುತ್ತಲಿನ ಕುಟುಂಬದವರು, ಸಂಬಂಧಿಕರು ಬರುತ್ತಾರೆ. ಅಲ್ಲಿಂದ ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯಲು ಕುಡುಗೋಲನ್ನು ಕದಿರು ತೆಗೆಯುವವನ ಕೈಗೆ ನೀಡುತ್ತಾರೆ. ಈ ಸಂದರ್ಭ ಮುತೈದೆಯೊಬ್ಬರು ತಳಿಯಕ್ಕಿ ಬೊಳ್ಚವನ್ನು ಹಿಡಿದುಕೊಳ್ಳುತ್ತಾರೆ. ಬಳಿಕ ಮನೆಯವರೆಲ್ಲರೂ ಒಡ್ಡೋಲಗದೊಂದಿಗೆ ಕದಿರು ಕೊಯ್ಯುವ ಗದ್ದೆಯತ್ತ ತೆರಳುತ್ತಾರೆ.
ಗದ್ದೆ ತಲುಪಿದ ಬಳಿಕ ಹಾಲುಜೇನು ಮೊದಲಾದುವುಗಳನ್ನು ಕದಿರಿನ ಬುಡಕ್ಕೆ ಸುರಿಯಲಾಗುತ್ತದೆ. ಹುತ್ತರಿ ಕುಕ್ಕೆಯಲ್ಲಿ ಕೊಂಡೊಯ್ದ ಅಚ್ಚುನಾರಿನಿಂದ ಕಟ್ಟಿದ ಎಲೆಗಳನ್ನೊಳಗೊಂಡ ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಲಾಗುತ್ತದೆ. ಆ ನಂತರ ಹುತ್ತರಿ ಮೂಹೂರ್ತಕ್ಕೆ ಸುಸೂತ್ರವೆನಿಸುವಂತೆ ಗುಂಡೊಂದನ್ನು ಹಾರಿಸಲಾಗುತ್ತದೆ. ಕುತ್ತಿ ಹೊತ್ತ ಕುಟುಂಬದ ಹಿರಿಯ ವ್ಯಕ್ತಿ ದೇವರನ್ನು ಪ್ರಾರ್ಥಿಸಿ, ಕದಿರನ್ನು ಬೆಸ ಸಂಖ್ಯೆಯಲ್ಲಿ ಕೊಯ್ದು ಹುತ್ತರಿ ಕುಕ್ಕೆಯಲ್ಲಿ ಇಡಲಾಗುತ್ತದೆ. ಈ ಸಂದರ್ಭ ನೆರೆದವರು ಪೊಲಿ ಪೊಲಿ ದೇವಾ ಎಂದು ಘೋಷಣೆ ಕೂಗುತ್ತಾರೆ. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.
ಕದಿರು ತುಂಬಿದ ಕುಕ್ಕೆಯನ್ನು ತಲೆಯಲ್ಲಿ ಹೊತ್ತು ಪೊಲಿ ಪೊಲಿ ದೇವಾ ಎಂದು ಘೋಷಣೆ ಕೂಗುತ್ತಾ ಬರಲಾಗುತ್ತದೆ. ಅಲ್ಲದೆ ಕದಿರನ್ನು ಕೆಲವು ಕುಟುಂಬದವರು ದೇವಸ್ಥಾನಕ್ಕೆ ಅರ್ಪಿಸಿ ಬಳಿಕ ಮನೆಗೆ ತೆರಳಿದರೆ ಇನ್ನು ಕೆಲವರು ನೇರವಾಗಿ ಒಕ್ಕಲು ಕಣಕ್ಕೆ ತೆರಳಿ ಮನೆಗೆ ತೆರಳುತ್ತಾರೆ. ಮನೆಯಲ್ಲಿದ್ದ ಮುತೈದೆ ಕದಿರು ಕೊಯ್ದವನ ಕಾಲು ತೊಳೆದು ಹಾಲು ನೀಡಿ ಧಾನ್ಯ ಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳುತ್ತಾರೆ. ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಂಡ ನಂತರ ಕದಿರನ್ನು ಆಯುಧ, ವಾಹನ ಮುಂತಾದವುಗಳಿಗೆ ಕಟ್ಟಲಾಗುತ್ತದೆ. ಬಳಿಕ ಮನೆಯಲ್ಲಿ ಹೊಸ ಅಕ್ಕಿ ಪಾಯಸ ಮಾಡಿ ಸದಸ್ಯರೆಲ್ಲಾ ಒಂದೆಡೆ ಕುಳಿತು ಊಟ ಮಾಡುತ್ತಾರೆ.
ಕಾಲ ಕಳೆದಂತೆ ಬದಲಾದ ತಲೆಮಾರು ಹಿಂದಿನ ಕಾಲದಲ್ಲಿದ್ದ ಸಂಪ್ರದಾಯವನ್ನೆಲ್ಲ ರೂಢಿಸಿಕೊಂಡು ಬರುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಒಂದಷ್ಟು ಬದಲಾವಣೆಯಾಗಿದ್ದರೂ ಸಂಭ್ರಮ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ಹೊರಗಿದ್ದರೂ ಹಬ್ಬಕ್ಕಾಗಿ ತಮ್ಮ ಊರಿನ ಹಾದಿಹಿಡಿಯುತ್ತಾರೆ. ಕುಟುಂಬದವರೊಂದಿಗೆ ಸೇರಿ ಸಂಭ್ರಮಿಸುತ್ತಾರೆ.