ಕಾಡಂಚಿನ ಜನರನ್ನು ಈ ಬಾರಿಯ ಬರ ಕಂಗೆಡಿಸುವಂತೆ ಮಾಡಿದ್ದು, ಪರಿಣಾಮ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ನಡೆಯಬೇಕಾದ ಪರಿಸ್ಥಿತಿ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಬಳಿಯಿರುವ ಮೆದಗನಾಣೆ ಸೋಲಿಗರ ಪೋಡಿನ ಹೆಣ್ಮಕ್ಕಳದಾಗಿದೆ.
ಮಲೆಮಹದೇಶ್ವರಬೆಟ್ಟದಿಂದ ಸುಮಾರು 6 ಕಿ.ಮೀ ದೂರದಲ್ಲಿ ಮೆದಗನಾಣೆ ಗ್ರಾಮವಿದ್ದು, ಇದು ಕಾಡಂಚಿಗೆ ಹೊಂದಿಕೊಂಡಂತೆ ಇದೆ. ಇಲ್ಲಿಗೆ ಆಧುನಿಕ ಯಾವ ಸೌಲಭ್ಯವೂ ಬಾರದ ಕಾರಣ ಸ್ವಾತಂತ್ರ್ಯ ಬಂದರೂ ಆದಿಮಾನವರಂತೆ ಇಲ್ಲಿನ ಆದಿವಾಸಿಗಳು ಜೀವನ ಸಾಗಿಸುತ್ತಿದ್ದಾರೆ. ಸಾಮಾನ್ಯವಾಗಿ ಹಾಡಿಗಳಲ್ಲಿ ವಾಸಿಸುವ ಜನ ಅನಕ್ಷರಸ್ಥರಾಗಿರುತ್ತಾರೆ. ಕೂಲಿ ಮಾಡಿಯೋ, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಿಯೋ ಜೀವನ ಮಾಡುತ್ತಾರೆ. ಇವರಿಗೆ ಒಂದಷ್ಟು ಹೊಟ್ಟೆಗೆ ಅನ್ನ ಸಿಕ್ಕಿದರೆ ಸಾಕು. ಅಷ್ಟಕ್ಕೆ ತೃಪ್ತಿಯಾಗುತ್ತಾರೆ.
ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿರುವ ನಮ್ಮ ಜನಪ್ರತಿನಿಧಿಗಳು ಚುನಾವಣೆ ಬಂದಾಗ ಅವರಿಗೆ ಇಲ್ಲಸಲ್ಲದ ಭರವಸೆ ನೀಡಿ ಮತಪಡೆಯುತ್ತಾರೆ. ಆ ನಂತರ ಇತ್ತ ತಿರುಗಿ ನೋಡದ ಕಾರಣ ಹಾಡಿಗಳು ಇಂದಿಗೂ ಕನಿಷ್ಠ ಸೌಲಭ್ಯವಿಲ್ಲದೆ ಕಷ್ಟದಲ್ಲೇ ಜೀವನ ಸಾಗಿಸುವಂತಾಗಿದೆ.ಮೆದಗನಾಣೆಯ ಸೋಲಿಗರ ಪೋಡಿನಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು 200ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಮಹದೇಶ್ವರ ಬೆಟ್ಟ – ಪಾಲಾರ್ ಮಾರ್ಗವಾಗಿ ತೆರಳಿ ಮಧ್ಯದಗರಕಟ್ಟೆ ಬಳಿ ಬಸ್ ಇಳಿದು ಅಲ್ಲಿಂದ 4 ಕಿ.ಮೀ. ನಡೆದು ಸಾಗಿದರೆ ಮೆದಗನಾಣೆ ಸೋಲಿಗರ ಹಾಡಿ ಸಿಗುತ್ತದೆ. ಇಲ್ಲಿನವರು ಯಾವುದೇ ವಸ್ತು ಬೇಕಾದರೂ ಮಹದೇಶ್ವರಬೆಟ್ಟಕ್ಕೆ ಬರಲೇಬೇಕು. ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ಭಯದಿಂದಲೇ ಹೆಜ್ಜೆಹಾಕಿಕೊಂಡು ಕಾಡಿನ ನಡುವೆ ನಡೆಯಬೇಕಾಗಿದೆ. ದಿನನಿತ್ಯದ ಅಗತ್ಯವಸ್ತುಗಳನ್ನು ಕೊಂಡು ತರಬಹುದು ಆದರೆ ನಿತ್ಯದ ಖರ್ಚಿಗೆ ನೀರು ತರುವುದೇ ಪೋಡಿಯ ಹೆಣ್ಣುಮಕ್ಕಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಹಿಂದಿನಿಂದಲೂ ಪೋಡಿಯ ಜನ ಅರಣ್ಯ ಪ್ರದೇಶದಲ್ಲಿರುವ ಕೆರೆ ಮತ್ತು ಕೆರೆಯೊಳಗಿನ ಒಂದು ಬಾವಿಯನ್ನು ಆಶ್ರಯಿಸಿದ್ದು ಅದರಲ್ಲಿನ ನೀರನ್ನೇ ಬಳಸಿಕೊಳ್ಳುತ್ತಿದ್ದರು. ಆದರೆ ಈ ಬಾರಿಯ ಬರ ಇದ್ದ ನೀರನ್ನು ಇಂಗುವಂತೆ ಮಾಡಿದ್ದರಿಂದ ನೀರನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಪೋಡಿಯ ಹೆಣ್ಣುಮಕ್ಕಳು ನೀರಿಗಾಗಿ ಸುಮಾರು ಆರು ಕಿ.ಮೀ. ನಡೆದುಕೊಂಡು ಮಲೆಮಹದೇಶ್ವರ ಬೆಟ್ಟದಿಂದ ನೀರನ್ನು ಕೊಂಡೊಯ್ಯುತ್ತಿದ್ದಾರೆ. ಅರಣ್ಯದ ನಡುವೆ ಹೋಗುವಾಗ ಜೀವವನ್ನು ಕೈಯಲ್ಲಿ ಹಿಡಿದು ನಡೆಯಬೇಕಾಗಿದೆ. ಯಾವಾಗ ಆನೆಗಳು ಬರುತ್ತವೆಯೋ ಎಂಬ ಭಯ ಅವರದ್ದಾಗಿದೆ. ಆದರೆ ಮನೆಗೆ ಜೀವಜಲ ಬೇಕಾಗಿದೆ. ಹಾಗಾಗಿ ನಡೆಯುವುದು ಅನಿವಾರ್ಯವಾಗಿದೆ.
ಎಲ್ಲ ರೀತಿಯ ಭಾಗ್ಯ ನೀಡುತ್ತೇವೆಂದು ಬಡಾಯಿಕೊಚ್ಚಿಕೊಳ್ಳುವ ಆಡಳಿತರೂಢರು ಕನಿಷ್ಟ ನೀರಿನ ಸೌಲಭ್ಯ ಕಲ್ಪಿಸಿ ದಿನಕ್ಕೆ ಹೆಣ್ಣುಮಕ್ಕಳು ಹತ್ತಾರು ಕಿ.ಮೀ. ನಡೆಯುವುದನ್ನು ತಪ್ಪಿಸಿ ಪುಣ್ಯ ಕಟ್ಟಿಕೊಳ್ಳಬೇಕಿದೆ. ಇದು ಸಾಧ್ಯನಾ ಎಂಬುದೇ ಮಿನಿಯನ್ ಡಾಲರ್ ಪ್ರಶ್ನೆಯಾಗಿದೆ.