ಸುಳ್ಯ: ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ದೇವರ ವಿಗ್ರಹವೊಂದು ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಐವರ್ನಾಡು ಗ್ರಾಮದ ಬರೆಮೆಲು ಕರುಣಾಕರ ಅವರ ಮನೆಯ ಸಮೀಪದಲ್ಲಿ ಗೋಳಿ ಮರದ ಬುಡದಲ್ಲಿ ಮುರಕಲ್ಲಿನ ಮಧ್ಯೆ ದೇವರ ವಿಗ್ರಹ ಪತ್ತೆಯಾಗಿದೆ.
ಯಾವ ದೇವರ ವಿಗ್ರಹ ಎಂಬುದನ್ನು ನಿಖರವಾಗಿ ತಿಳಿದು ಬಂದಿಲ್ಲ. ಕೃಷ್ಣ ಶಿಲೆಯಲ್ಲಿ ನಿರ್ಮಿಸಿದೆಂದು ಅಂದಾಜಿಸಲಾಗಿರುವ ಈ ವಿಗ್ರಹಕ್ಕೆ ನಾಲ್ಕು ಕೈಗಳಿದ್ದು ಕೈಯಲ್ಲಿ ಗದೆ, ಕತ್ತಿ ಹಿಡಿದಿದ್ದರೆ ಒಂದು ಕೈಯಲ್ಲಿ ಶಂಖ ಅಥವಾ ಕಮಲ ಹಿಡಿದಂತೆ ಕಂಡು ಬರುತ್ತಿದೆ. ಇವರ ಸ್ಥಳದಲ್ಲಿ ಮನೆಯಿಂದ ಸುಮಾರು ನೂರು ಮೀಟರ್ ದೂರದಲ್ಲಿ ದೇವರ ವಿಗ್ರಹ ಪತ್ತೆಯಾಗಿರುವುದು ತಿಳಿದು ಸ್ಥಳದಲ್ಲಿ ಕಾಡು ಮತ್ತಿತರ ಪೊದೆಗಳನ್ನು ಕಡಿಯಲಾಗಿದೆ.
ಮುರ ಕಲ್ಲಿನ ಒಂದು ಭಾಗವನ್ನು ಬಿಡಿಸಿದ ಕಾರಣ ಮೂರ್ತಿಯ ಎದುರಿನ ಭಾಗ ಸರಿಯಾಗಿ ಗೋಚರಿಸುವಂತಾಗಿದೆ. ವಿಷಯ ತಿಳಿದು ನೂರಾರು ಮಂದಿ ಸ್ಥಳಕ್ಕೆ ಬಂದು ಮೂರ್ತಿಯನ್ನು ವೀಕ್ಷಿಸಿ ತೆರಳಿದ್ದಾರೆ. ಈ ಮೂರ್ತಿ ಇಲ್ಲಿ ಉದ್ಭವವಾಗಿದೆಯೋ ಎಂಬುದನ್ನು ತಿಳಿಯಲು ಮತ್ತು ಈ ಮೂರ್ತಿಯ ಇನ್ನಷ್ಟು ವಿಚಾರಗಳನ್ನು ತಿಳಿಯಲು ದೇವ ಪ್ರಶ್ನೆ ಇಡಲು ನಿರ್ಧರಿಸಿರುವುದಾಗಿ ಕರುಣಾಕರ ಬರೆಮೇಲು ತಿಳಿಸಿದ್ದಾರೆ.