ಕೊಡಗಿನ ನಾಪೋಕ್ಲು ಬಳಿಯಲ್ಲಿರುವ ನಿಸರ್ಗ ನಿರ್ಮಿತ ಮಕ್ಕಿ ಶಾಸ್ತಾವು ದೇವಾಲಯದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ವರ್ಷಕ್ಕೆ ಎರಡು ಬಾರಿ ಹಬ್ಬ ನಡೆಯುತ್ತಿದ್ದು, ಇದೀಗ ಮೊದಲ ಹಬ್ಬ ಆರಂಭವಾಗಿದೆ.
ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಲ್ಲಿ ಪೂಜಾ ಕಾರ್ಯದೊಂದಿಗೆ ಹರಕೆಯಾಗಿ ಮಣ್ಣಿನ ನಾಯಿಯನ್ನು ಅರ್ಪಿಸುವುದು ಹಬ್ಬದ ವಿಶೇಷವಾಗಿದೆ.
ದೇವಾಲಯ ಮತ್ತು ಇಲ್ಲಿ ನಡೆಯುವ ಪೂಜಾ ಕಾರ್ಯಗಳು ಎಲ್ಲವೂ ವಿಶೇಷವಾಗಿವೆ. ಹಾಗೆ ನೋಡಿದರೆ ದೇವಾಲಯವು ದಿಬ್ಬದ ಮೇಲೆ ನೆಲೆನಿಂತಿದ್ದು, ಸುಮಾರು ಐದು ಅಡಿ ಎತ್ತರದ ಕಟ್ಟೆಯ ನಡುವೆ ತ್ರಿಶೂಲಧಾರಿ ಶಾಸ್ತಾವು ದೇವರ ಮೂರ್ತಿ, ದೇವರಿಗೆ ಆಶ್ರಯವಾಗಿ ನಿಂತ ಹಲಸಿನ ಮರ ಹಾಗೂ ಸುತ್ತಲೂ ಹರಕೆಯಾಗಿ ಅರ್ಪಿಸಿದ ಮಣ್ಣಿನ ನಾಯಿಗಳನ್ನು ಕಾಣಬಹುದಾಗಿದೆ.
ಇನ್ನು ಇಲ್ಲಿಗೆ ಭೇಟಿ ನೀಡಿ ಸೂಕ್ಷ್ಮವಾಗಿ ಗಮನಿಸಿದರೆ ದೇವಾಲಯದ ಬಳಿಯಿರುವ ಹಲಸಿನ ಮರದಲ್ಲೊಂದು ಕಬ್ಬಿಣದ ಸರಪಳಿ ಸಿಕ್ಕಿಹಾಕಿಕೊಂಡಿರುವುದು ಕಂಡು ಬರುತ್ತದೆಯಲ್ಲದೆ, ಕುತೂಹಲವನ್ನು ಕೆರಳಿಸುತ್ತದೆ. ಇದರ ಬಗ್ಗೆ ತಿಳಿಯುತ್ತಾ ಹೋದರೆ ಒಂದಷ್ಟು ಮಾಹಿತಿ ಹೊರಬರುತ್ತದೆ. ಹಿಂದಿನ ಕಾಲದಲ್ಲಿ ತಿರುವಳ ಬರುತ್ತಿದ್ದ ವ್ಯಕ್ತಿಯೊಬ್ಬನನ್ನು ಯಾವುದೋ ಕಾರಣಕ್ಕೆ ಬಂಧಿಸಲಾಗಿತ್ತಂತೆ. ಆದರೆ ಹಬ್ಬದ ಸಂದರ್ಭ ಮಂತ್ರಘೋಷ ಮೇಳೈಸುತ್ತಿದ್ದಂತೆಯೇ ತಿರುವಳನ ಮೇಲೆ ದೇವರು ಅವಾಹನೆಯಾಗಿ ಬಂಧನದಿಂದ ತಪ್ಪಿಸಿಕೊಂಡು ಬಂದು ದೇವರ ಸನ್ನಿಧಿಯಲ್ಲಿ ಕೈ ಕೊಡವಿದಾಗ ಕೈಯ್ಯಲ್ಲಿದ್ದ ಖೋಳ ತುಂಡಾಗಿ ಹಲಸಿನ ಮರದಲ್ಲಿ ಸಿಲುಕಿತು ಎಂಬ ಕಥೆಯೂ ಜನಜನಿತವಾಗಿದೆ.
ಮಕ್ಕಿ ಶಾಸ್ತಾವು ದೇವಾಲಯವು ಕಾನನ ಹಾಗೂ ಕಾಫಿ ತೋಟಗಳ ನಡುವೆ ನೆಲೆನಿಂತಿದ್ದು, ನಿಶಬ್ದ ತಾಣವಾಗಿ ಗಮನಸೆಳೆಯುತ್ತದೆ. ಇಲ್ಲಿರುವ ಪುಟ್ಟ ಕೊಳವು ಕೂಡ ಹಲವು ವೈಶಿಷ್ಟ್ಯತೆಯನ್ನು ಹೊಂದಿದೆ.
ಇಲ್ಲಿನ ಹಬ್ಬಕ್ಕೆ ಸುತ್ತ ಮುತ್ತಲಿನ ಗ್ರಾಮಗಳ ಅಸಂಖ್ಯ ಭಕ್ತರು ಇಲ್ಲಿ ನೆರೆಯುತ್ತಾರೆ. ಇದೀಗ ನಡೆಯುವ ಹಬ್ಬ ಚಿಕ್ಕ ಹಬ್ಬವಾಗಿದ್ದು, ಎರಡು ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಎತ್ತು ಹೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು, ಮೇಲೇರಿ ಮುಂತಾದ ಸಾಂಪ್ರದಾಯಿಕ ಪೂಜೆಗಳು ನಡೆಯುತ್ತವೆ.
ಮಕ್ಕಿಶಾಸ್ತಾವು ದೇಗುಲಕ್ಕೆ ತೆರಳಬೇಕಾದರೆ ಮಡಿಕೇರಿ ಅಥವಾ ವೀರಾಜಪೇಟೆಗೆ ಬಂದರೆ ಅಲ್ಲಿಂದ ನಾಪೋಕ್ಲುಗೆ ತೆರಳಿದರೆ ಅಲ್ಲಿನ ಬೇತು ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ ಸಾಗಿದರೆ ದೇವಾಲಯವನ್ನು ತಲುಪಬಹುದಾಗಿದೆ.