ಮಡಿಕೇರಿ: ಮಹಾರಾಷ್ಟ್ರದ ನಾಸಿಕ್ ನಿಂದ ಬಂದ ಯುವಕರ ತಂಡ ಕೊಡಗು ಜಿಲ್ಲೆಯಾದ್ಯಂತ ಸಂಚರಿಸಿ ಪಟ್ಟಣಗಳಲ್ಲಿ ವಿವಿಧ ಸಾಹಸಗಳನ್ನು ಮಾಡುತ್ತಾ ಹೊಟ್ಟೆಪಾಡು ಕಳೆಯುತ್ತಿದೆ.
ಬೀದಿಯಲ್ಲೇ ಡೊಂಬರಾಟ ನಡೆಸುತ್ತಿರುವ ಇವರ ಕೆಲವು ಸಾಹಸಗಳನ್ನು ಜನ ಅಚ್ಚರಿಯಿಂದ ನೋಡುತ್ತಿದ್ದಾರೆ. ಅಷ್ಟೇ ಅಲ್ಲದೆ ಹೊಟ್ಟೆಪಾಡಿಗಾಗಿ ಇಷ್ಟೊಂದು ಸರ್ಕಸ್ ಮಾಡಬೇಕಾ? ಎಂಬ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ.
ಕೊಡಗಿನಲ್ಲಿ ಕಾಫಿ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಇಲ್ಲಿ ಕಾರ್ಮಿಕರ ಕೊರತೆಯಿದೆ. ತೋಟ ಕೆಲಸ ಮಾಡುವ ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ ಇನ್ನೂರೈವತ್ತರಿಂದ ಮುನ್ನೂರು ರೂಪಾಯಿ ಕೂಲಿ ನೀಡಲಾಗುತ್ತದೆ. ಕಷ್ಟ ಪಟ್ಟು ದುಡಿಯುವವರಿಗೆ ಇಲ್ಲಿ ಸಂಪಾದನೆ ಕಷ್ಟವಲ್ಲ. ಹೀಗಿರುವಾಗ ಚಿಲ್ಲರೆ ಹಣಕ್ಕಾಗಿ ಇಷ್ಟೊಂದು ಪ್ರಾಣಾಪಾಯದ ಸರ್ಕಸ್ ಮಾಡಬೇಕಾ ಎಂಬ ಪ್ರಶ್ನೆ ಇಲ್ಲಿನವರದ್ದಾಗಿದೆ.
ಆದರೆ ಡೊಂಬರಾಟ ಮಾಡಿ ಬದುಕುವ ನಾಸಿಕ್ ನ ಯುವಕರಿಗೆ ಅದ್ಯಾವುದೂ ಅರ್ಥವಾಗದೆ ತಮ್ಮ ಪಾಡಿಗೆ ತಾವು ರಸ್ತೆ ಬದಿಯಲ್ಲೇ ವಿವಿಧ ಸರ್ಕಸ್ ಮಾಡಿ ಶಹಬ್ಬಾಸ್ ಗಿಟ್ಟಿಸಿಕೊಳ್ಳುತ್ತಿದ್ದು, ಜನರು ಹಾಕುವ ಚಿಲ್ಲರೆ ಕಾಸಿಗೆ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.
ಜಾಕೀರ್ ನೇತ್ರೃತ್ವದ ಯುವಕರ ತಂಡ ಕೊಡಗಿನ ಸುಂಟಿಕೊಪ್ಪ ಪಟ್ಟಣದ ಕನ್ನಡ ವೃತ್ತದ ಬಳಿ ಮರದ ಅಂದಾಜು 15 ಅಡಿ ಉದ್ದದ 2 ಬಡಿಗೆಗಳನ್ನೇರಿ ಬಡಿಗೆಯನ್ನು ಹಿಡಿದು ರಸ್ತೆಯಲ್ಲಿ ನಡೆಯುವ ಮೂಲಕ ಚೂಪಾದ 3 ಆಯುಧಗಳನ್ನು ಉದ್ದದ ಕೋಲಿನಿಂದ ಮೇಲೆತ್ತುವುದು, ಬರಿಗೈಯಿಂದ ಗ್ರಾನೈಟ್ ಕಲ್ಲನ್ನು ಒಡೆದು ತುಂಡರಿಸುವುದು ಸೇರಿದಂತೆ ವಿವಿಧ ಸಾಹಸ ಪ್ರದರ್ಶನ ಮಾಡಿದರು.
ಯುವಕರ ತಂಡ ರಸ್ತೆ ಬದಿ ಸಾಹಸ ಪ್ರದರ್ಶನ ಮಾಡುತ್ತಿದ್ದರೆ ಜನ ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಜೀವದ ಹಂಗು ತೊರೆದು ಯುವಕರು ತಾವು ಕಲಿತಿರುವ ಅಪಾಯಕಾರಿ ಸಾಹಸ ಪ್ರದರ್ಶನಗಳನ್ನು ಮಾಡಿ ನೆರೆದವರು ಅಚ್ಚರಿ ಪಡುವಂತೆ ಮಾಡಿದರು.
ಬಳಿಕ ನೆರೆದವರು ನೀಡಿದ ಚಿಲ್ಲರೆ ಕಾಸು ಪಡೆದ ಯುವಕರ ತಂಡ ಮುಂದಿನ ಹಾದಿ ಹಿಡಿಯಿತು.