ಹುತ್ತರಿ ಹಬ್ಬ ಕಳೆದಿದೆ. ಆದರೆ ಹಬ್ಬದ ಹಿನ್ನಲೆಯಲ್ಲಿ ನಡೆಯುತ್ತಿರುವ ಸಂಪ್ರದಾಯಬದ್ಧ ಕೋಲಾಟದ ರಂಗು ಮಾತ್ರ ನಿಂತಿಲ್ಲ.ಹುತ್ತರಿ ಹಬ್ಬದ ಪ್ರಯುಕ್ತ ಹಬ್ಬ ಕಳೆದ ಮೂರನೇ, ಐದನೇ, ಏಳನೇ, ಒಂಬತ್ತನೇ ದಿನಗಳಿಗೆ ಜಿಲ್ಲೆಯಾದ್ಯಂತ ಅಲ್ಲಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ಗ್ರಾಮಸ್ಥರು ಒಂದೆಡೆ ಸೇರಿ ಊಟೋಪಚಾರ ಮಾಡುವುದರೊಂದಿಗೆ ಕೋಲಾಟ ಸೇರಿದಂತೆ ಇತರೆ ಸಾಂಪ್ರದಾಯಿಕ ನೃತ್ಯಗಳನ್ನು ಮಾಡಿ ಸಂಭ್ರಮಿಸುತ್ತಾರೆ.
ಹಬ್ಬದ ಪ್ರಯುಕ್ತ ಸಮೀಪದ ಕಡಗದಾಳಿನ ಕುರುಳಿ ಅಂಬಲ ಮಂದ್ ನಲ್ಲಿ ನಡೆದ ಸಾಂಪ್ರದಾಯಿಕ ಕೋಲಾಟ ಗಮನಸೆಳೆಯಿತಲ್ಲದೆ, ಎಲ್ಲರೂ ಒಂದೆಡೆ ಕಲೆತು ಕೋಲಾಟವಾಡಿ ಖುಷಿಪಟ್ಟರು. ಕಡಗದಾಳುವಿನ ಕುರುಳಿ ಅಂಬಲ ಮಂದ್ನಲ್ಲಿ ನಡೆಯುವ ಹುತ್ತರಿಕೋಲಾಟಕ್ಕೆ ಇತಿಹಾಸವಿದ್ದು, ಹಿಂದಿನ ಕಾಲದಿಂದಲೂ ಇಲ್ಲಿ ಕೋಲಾಟವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಇಲ್ಲಿನ ಹುತ್ತರಿ ಕೋಲಾಟದ ವಿಶೇಷವೇನೆಂದರೆ, ಹಬ್ಬಕ್ಕೆ ಮುಂಚಿತವಾಗಿ ರಾತ್ರಿ ಈಡು ತೆಗೆಯಲಾಗುತ್ತದೆ. ಹಬ್ಬದ ಎರಡನೇ ದಿನದ ಮುಂಚಿತವಾಗಿ ಮುಂಜಾನೆ ಊರಿನವರು ಮಂದ್ನ್ನು ತೆರೆಯಲಾಯಿತು. ಅಂದು ರಾತ್ರಿಯಿಂದಲೇ ಮಂದ್ ಕೋಲ್ ಪ್ರಾರಂಭವಾಯಿತು. ಬೆಳಗ್ಗೆ ಮಂದ್ನಲ್ಲಿ ಊರಿನವರು ತೋರಣ ಕಟ್ಟಿ ಊರುತಕ್ಕರಾದ ಕೊರವಂಡ ಅಯ್ಯಪ್ಪ ಅವರ ಮನೆಗೆ ತೆರಳಿ ಫಲಹಾರ ಸ್ವೀಕರಿಸಿ ವಾಲಗ, ದುಡಿಕೊಟ್ಟ್ ಹಾಡಿನೊಂದಿಗೆ ಊರಿನವರು ಮಂದ್ಗೆ ಆಚರಿಸಲಾಗಿ ನಾಡ್ಕೋಲ್ ನಡೆಯಿತು.
ಬೆಳಗ್ಗೆ ಮಂದ್ನ ದೇಶತಕ್ಕರಾದ ಪಾಂಡಿರ ಕುಟುಂಬದವರನ್ನು, ಕಗ್ಗೋಡು, ಬಿಳಿಗೇರಿ, ಅಂದಗೋವೆ, ಇಬ್ನಿವಳವಾಡಿ, ಈರಳೆವಳಮುಡಿ, ಚೆಟ್ಟಳ್ಳಿಯ ನೂರಕೋಲು ನಾಡು, ಮರಗೋಡು ನಾಡಿನ ತಕ್ಕಮುಖ್ಯಸ್ಥರನ್ನು ತಳಿಯತಕ್ಕಿ ಬೊಳ್ಚ ಸಹಿತ ವಾಲಗ, ದುಡಿಕೊಟ್ಟ್ ಹಾಡಿನೊಂದಿಗೆ ಊರಿನವರು ಮಂದ್ನಲ್ಲಿ ಸ್ವಾಗತಿಸಲಾಯಿತು.
ತಕ್ಕರಿಗೆ ಮಂದ್ನಲ್ಲಿ ಸತ್ಕರಿಸಲಾಗಿ ನಾಡ್ ತಕ್ಕ, ಊರುತಕ್ಕರು ಹಾಗೂ ಊರಿನವರು ಸೇರಿ ಕೋಲಾಟ ಆಡಲಾಯಿತು. ನಂತರ ಬೊಳಕಾಟ್, ಪರೆಯಕಳಿ, ಕಪ್ಪೆಯಾಟ್, ವಾಲಗತಾಟ್, ದುಡಿಕೊಟ್ಟ್ ನಡೆಯಿತು. ಬಳಿಕ ನೆರೆದವರಿಗೆ ಫಲಹಾರ ನೀಡಿ ವಾಲಗ, ದುಡಿಕೊಟ್ಟ್ ಹಾಡಿನೊಂದಿಗೆ ತಕ್ಕರನ್ನು ಬೀಳ್ಕೊಡಲಾಯಿತು.