ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಅವಧೂತ ಆಶ್ರಮದಲ್ಲಿರುವ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ವೃಕ್ಷ ಪ್ರೇಮಿಗಳಿಂದ ತುಂಬಿ ತುಳುಕುತ್ತಿದ್ದು, ಹೆಮ್ಮರವಾಗಿ ಬೆಳೆಯಬೇಕಾದ ಸಸ್ಯಗಳು ವಾಮನರೂಪ ತಾಳಿ ಕುಂಡಗಳಲ್ಲಿ ಪ್ರತಿಷ್ಠಾಪನೆಗೊಂಡು ಅಚ್ಚರಿ ಮೂಡಿಸುತ್ತಿವೆ.
ಇದೀಗ ಇಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬೋನ್ಸಾಯ್ ಸಮಾವೇಶ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ವಿಶ್ವದ ಗಮನಸೆಳೆಯುವಂತೆ ಮಾಡಿದೆ. ಹಾಗೆ ನೋಡಿದರೆ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಆಶ್ರಮದಲ್ಲಿ ಕಿಷ್ಕಿಂದ ಲೋಕ ಸೃಷ್ಠಿಯಾಗಿ ಹಲವು ವರ್ಷಗಳೇ ಕಳೆದಿವೆ. ಈಗಾಗಲೇ ಈ ಸುಂದರ ಉದ್ಯಾನವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಹೋಗಿರುವ ಲಕ್ಷಾಂತರ ದೇಶಿ ವಿದೇಶಿ ಪ್ರವಾಸಿಗರಿದ್ದಾರೆ.
ಇದೀಗ ಇಲ್ಲಿ ಸಮಾವೇಶ ಮತ್ತು ಬೋನ್ಸಾಯ್ ಪ್ರದರ್ಶನ, ಮಾರಾಟ ಏರ್ಪಡಿಸಿರುವುದು, ಬೋನ್ಸಾಯ್ ಗಾರ್ಡನ್ನ ಚೆಲುವನ್ನು ಸವಿಯುವುದರೊಂದಿಗೆ ಅವುಗಳನ್ನು ಕೊಂಡೊಯ್ದು ತಾವು ಕೂಡ ಮನೆ ಹಾಗೂ ಗಾರ್ಡನ್ನಲ್ಲಿ ಬೆಳೆಸಲು ಸಾಧ್ಯವಾಗುತ್ತಿದೆ. ಬೋನ್ಸಾಯ್ಗೆ ಬೇಕಾದ ಸಸ್ಯ, ಕುಂಡ ಮೊದಲಾದವುಗಳು ಇಲ್ಲಿ ದೊರೆಯುತ್ತಿದೆ. ಅಷ್ಟೇ ಅಲ್ಲದೆ ಮಾಹಿತಿ ಸಿಗುತ್ತಿರುವುದರಿಂದ ಅನುಕೂಲವಾಗುತ್ತಿದೆ.
ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬೋನ್ಸಾಯ್ ಗಾರ್ಡನ್ ನೆಲೆನಿಂತಿದ್ದು, ಪ್ರತಿ ಸಸ್ಯ ಕುಂಡಗಳನ್ನು ಜೋಡಿಸಿಟ್ಟ ರೀತಿ ಅದ್ಭುತ. ಗಾರ್ಡನ್ನೊಳಗೊಂದು ಸುತ್ತು ಬಂದದ್ದೇ ಅದರೆ ಈ ಗಾರ್ಡನ್ ಗೆ ಮಹತ್ವ ಅರಿವಾಗುತ್ತದೆ. ಈ ಗಾರ್ಡನ್ ನಲ್ಲಿ ವಿದೇಶದ ಜಪಾನ್, ಚೀನಾ, ಅಮೇರಿಕ, ವೆಸ್ಟ್ಇಂಡೀಸ್, ಕೆನಡಾ, ಇಂಗ್ಲೆಂಡ್, ಮಲೇಶಿಯಾ, ಇಂಡೋನೇಶಿಯಾ, ಯುರೋಪ್ ಮೊದಲಾದ ದೇಶಗಳಿಂದ ತಂದಂತಹ ಅಪರೂಪದ ಸಸ್ಯಗಳಿವೆ. ಅವುಗಳ ಬಗ್ಗೆ ಮಾಹಿತಿಯೂ ಇದೆ.
ಗಾರ್ಡನ್ ಮಧ್ಯೆ ನಡೆದಾಡಲು ಕಾಲುದಾರಿಗಳಿದ್ದು, ಅದರಲ್ಲಿ ನಡೆಯುತ್ತಾ ಹೋದರೆ ಕಾಲುವೆಯಲ್ಲಿ ಹರಿಯುವ ನೀರು, ಪುಟ್ಟ ಜಲಧಾರೆ, ಸಣ್ಣಪುಟ್ಟ ಸುಂದರ ಕಲ್ಲುಗಳಿಂದ ನಿರ್ಮಿಸಿದ ಸುಂದರ ಕೊಳಗಳು. ಅವುಗಳನ್ನು ಹಾದುಹೋಗಲೆಂದೇ ನಿರ್ಮಾಣಗೊಂಡ ಸೇತುವೆಗಳು ನಮ್ಮ ಮುಂದೆ ಅದ್ಭುತ ಲೋಕವನ್ನು ತೆರೆದಿಡುತ್ತದೆ. ಇಲ್ಲಿನ ಪುಟ್ಟ ಕೊಳದಲ್ಲಿ ತೇಲುವ ರಾಮಶಿಲೆ ಗಾರ್ಡನ್ ಗೆ ಮೆರಗು ನೀಡುತ್ತದೆ.
ಹಾಗೆ ನೊಡಿದರೆ ಬೋನ್ಸಾಯ್ ಹುಟ್ಟೇ ರೋಚಕ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹಲವು ಮಾಹಿತಿಗಳು ಲಭ್ಯವಾಗುತ್ತವೆ. ಕ್ರಿ.ಶ. ಮೂರನೇ ಶತಮಾನದಲ್ಲಿಯೇ ಬೋನ್ಸಾಯ್ ಗಿಡಗಳು ಇದ್ದವೆನ್ನಲಾಗಿದೆ. “ಬೋನ್” ಎಂದರೆ ಕುಂಡ “ಸಾಯ್” ಎಂದರೆ ಮರ ಎಂದು ಹೇಳಲಾಗುತ್ತಿದೆ. ಬೋನ್ಸಾಯ್ ಪದ್ಧತಿಯಲ್ಲಿ ಬೆಳೆಸುವ ಮರಗಳಿಗೆ “ಕುಬ್ಜವೃಕ್ಷ” ಎಂದು ಕರೆಯಲಾಗುತ್ತದೆ. ಚೀನಾ ದೇಶದಲ್ಲಿ ಈ ಕುಬ್ಜ ವೃಕ್ಷಗಳನ್ನು ಬೆಳೆಸಲಾಗುತ್ತಿತ್ತು ಎನ್ನುವುದಕ್ಕೆ ಆಧಾರಗಳಿವೆ.
ಪ್ರಾಚೀನ ಚೀನಿ ವೈದ್ಯರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತಿದ್ದಾಗ ಜೀವಂತ ಔಷಧಿ ಸಸ್ಯಗಳನ್ನು ಕೊಂಡೊಯ್ಯಲು ಅನುಕೂಲವಾಗುವ ದೃಷ್ಟಿಯಿಂದ ಬೋನ್ಸಾಯ್ ಕಲೆಯನ್ನು ಕರಗತ ಮಾಡಿಕೊಂಡಿದ್ದರು ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ಚೀನಿ ವೈದ್ಯರು ಔಷಧಿಗಾಗಿ ಸಸ್ಯಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಕೊಂಡೊಯ್ಯುತ್ತಿದ್ದರಲ್ಲದೆ, ಆಗಾಗ್ಗೆ ಅದರ ಎಲೆಗಳನ್ನು ಔಷಧಿಗೆ ಬಳಸುತ್ತಿದ್ದರಿಂದ ಕಾಂಡ ಮತ್ತು ಬೇರುಗಳು ದಪ್ಪವಾಗಿ ಬೆಳೆಯುತ್ತಿದ್ದವು. ಇದನ್ನು ಗಮನಿಸಿದ ಗಿಡಮೂಲಿಕಾ ವೈದ್ಯರು ಬೋನ್ಸಾಯ್ ಹುಟ್ಟಿಗೆ ಕಾರಣರಾದರು ಎಂದು ಹೇಳಲಾಗುತ್ತದೆ.
ಇಂದು ಬಹಳಷ್ಟು ಗಿಡಮೂಲಿಕೆಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಆದುದರಿಂದ ಬೋನ್ಸಾಯ್ ಗಾರ್ಡನ್ ಮೂಲಕ ಆ ಕಾರ್ಯವನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ತಮ್ಮ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ಮೂಲಕ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.