ಕರಾವಳಿ ನಗರ ಮಂಗಳೂರು, ಕಲೆ ಸಂಪ್ರದಾಯಗಳ ಬೀಡು ಅಂತಾನೆ ಹೇಳಬಹುದು, ಇದಕ್ಕೆ ಸಾಕ್ಷಿ ಎಂಬಂತೆ ನಮಗೆ ಹೆಜ್ಜೆಗೊಂದರಂತೆ ಸಿಗುವ ದೇವಾಲಯಗಳು, ಪ್ರತಿಯೊಂದು ದೇವಾಲಯಗಳಿಗೂ ಕೂಡ ಅದರದೇ ಆದ ಮಹತ್ವ ಹಾಗೂ ವೈಶಿಷ್ಟವಿದೆ. ಹೀಗೆ ಮಂಗಳೂರಿನ ಹೃದಯ ಭಾಗ, ರಥಬೀದಿ ಕಾರ್ಸ್ಟ್ರೀಟ್ ನಲ್ಲೊಂದು ಪುರಾತನವಾದ ಕರಣೀಕ ಮುಖ್ಯಪ್ರಾಣ ಹನುಮಂತ ಕ್ಷೇತ್ರವಿದೆ. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಎಲ್ಲರಿಗೂ ಈ ಸ್ಥಳ ತುಂಬಾನೇ ಚಿರಪರಿಚಿತವಾಗಿದ್ದು, ಅನೇಕ ವಿಶೇಷತೆಗಳನ್ನು ಈ ದೇವಸ್ಥಾನ ಹೊಂದಿದೆ.
ಹಿನ್ನೆಲೆ: ಇಲ್ಲಿನ ಉಪಾಸನ ವಿಶೇಷವೆಂದರೆ ಮಧ್ವಾಚಾರ್ಯರ ಸಂಪ್ರದಾಯ, ಈ ದೇವಸ್ಥಾನವು ವಂಶ ಪಾರಂಪರಿಕ ಕರಣೀಕ ವೃತ್ತಿಯವರಿಂದ ಕಾರಣೀಕ ಹನುಮಂತ ದೇವಸ್ಥಾನವೆಂದು, ಶ್ರೀ ಮುಖ್ಯಪ್ರಾಣ ಉಪಾಧ್ಯಾಯರೆಂಬವರ ಉಪಾಸನಾ ಸಾಮರ್ಥ್ಯದಿಂದ ಈ ಕ್ಷೇತ್ರವು ಮುಖ್ಯಪ್ರಾಣ ದೇವಸ್ಥಾನವೆಂದು ಪ್ರಖ್ಯಾತಿ ಹೊಂದಿದೆ. ಈ ಸ್ಥಳವು ವೃಂದಾವನ ಸ್ವರೂಪಿಗಳಾದ ಶ್ರೀ ವಾದಿರಾಜರು ಮತ್ತು ಶ್ರೀ ಗುರುರಾಘವೇಂದ್ರರ ಕ್ಷಣ ಕ್ಷಣದ ಮಾನಸ ಪೂಜೆಗಾಗಿಯೇ ಎಂಬಂತೆ ಕಾರಣೀಕ ದೇವಸ್ಥಾನವೆಂಬ ಖ್ಯಾತಿ ಪಡೆದಿರುವ ಈ “ನಾಡಿನ ಏಕೈಕ ಎದುರುಮುಖ ಅಭಯಹಸ್ತ ಮತ್ತು ಸಂಜೀವಿನಿ ಬಳ್ಳಿ” ಹೊಂದಿರುವ ಬಂಗಾರ ವರ್ಣದ ಭವ್ಯವಾದ ಮುಖ್ಯಪ್ರಾಣ ದೇವರ ಪ್ರತಿಷ್ಠಾಪನೆಗೆ ಕಾರಣರಾದರು.
ಈ ಕ್ಷೇತ್ರವು ಅನೇಕ ವಿಚಾರಗಳಲ್ಲಿ ಗಮನೀಯವಾಗಿದ್ದು, ದೇವಸ್ಥಾನದ ಇನ್ನೊಂದು ವಿಶೇಷತೆಯೆಂದರೆ ಪ್ರತಿಷ್ಠಾಪನೆಗೊಂಡ ದಿನದಿಂದ, ಅಂದಿನಿಂದ ಇಂದಿನವರೆಗೂ ಕೂಡ ಪುನಃಪ್ರತಿಷ್ಠಾಪನೆ ಎಂಬ ವಿಷಯ ಕಂಡು ಕೇಳರಿಯದ ದೇವಸ್ಥಾನದಲ್ಲಿ ಶ್ರೀ ವಾದಿರಾಜರು ಮತ್ತು ಶ್ರೀ ಗುರುರಾಘವೇಂದ್ರ ಶ್ರೀಪಾದರ ಆರಾಧನೆ ಜೊತೆಗೆ ಶ್ರೀ ಹನುಮಂತದಂತರ್ಗತ ಶ್ರೀ ಸೀತಾರಾಮಚಂದ್ರ ದೇವರ ಆರಾಧನೆ ಮುಖ್ಯವಾಗಿದೆ. ಈ ದೇವಸ್ಥಾನವು ಸಿಂಹಾಯದ ವಾಸ್ತು ಶೈಲಿಯಲ್ಲಿದೆ.
ಅವಲಕ್ಕಿ ಖಜ್ಜಾಯ: ಈ ಸ್ಥಳಕ್ಕೆ ಅವಲಕ್ಕಿ ಕೇರಿ, ಬಜಿಲ ಕೇರಿ ಎಂಬ ಹೆಸರು ಕೂಡ ಇದೆ. ದೇವಸ್ಥಾನದ ಬಲಭಾಗದ ಮೇಲಿನ ಬದಿ ಬಜಿಲಕೇರಿ, ಹಿಂದೆ ಅವಲಕ್ಕಿ ರಾಟೆ ಉಳ್ಳವರು ಮತ್ತು ಇತರರು ಹರಕೆಯಾಗಿ, ರಾಟೆಯಿಂದ ಮುಷ್ಟಿ ಅವಲಕ್ಕಿ ತಂದು ಕೊಟ್ಟು, ಶನಿ ಗ್ರಹಚಾರ ಪರಿಹಾರಕ್ಕಾಗಿ, ಶನಿಪೂಜೆಯ ಕ್ರಮದ ಅಂಗವಾಗಿ ಅವಲಕ್ಕಿ ಖಜ್ಜಾಯ ನೈವೇದ್ಯ ಮಾಡಿಸುತ್ತಿದ್ದರು. ಅವಲಕ್ಕಿ ಖಜ್ಜಾಯವು ಇಂದಿಗೂ ಪ್ರಸಿದ್ಧಿಯನ್ನು ಪಡೆದಿದೆ ಹಾಗೂ ವಾರದ ಮುಖ್ಯದಿನವೆಂದು ಆಚರಿಸುವ ಶನಿವಾರದಂದು ಶ್ರೀ ದೇವರಿಗೆ ಅಗತ್ಯವಾಗಿ ನೈವೇದ್ಯ ಮಾಡಲೇಬೇಕು. ಹೀಗೆ ಅವಲಕ್ಕಿ ಖಜ್ಜಾಯವು ಒಂದು ಸೇವೆಯಾಗಿ ಇಲ್ಲಿ ಸ್ಥಾಪಿತವಾಗಿರುತ್ತದೆ.
ಎಳ್ಳೆಣ್ಣೆ: ಹಾಗೆಯೇ ಶನಿಗ್ರಹಚಾರ ಪರಿಹಾರಕ್ಕಾಗಿ ಭಕ್ತಾಧಿಗಳು ಭಕ್ತಿಯಿಂದ ಮುಖ್ಯಪ್ರಾಣನಿಗೆ ಎಳ್ಳೆಣ್ಣೆಯನ್ನು ಸಮರ್ಪಿಸುತ್ತಾರೆ. ಹಾಗೆ ಸಮರ್ಪಿಸಿದ ಎಳ್ಳೆಣ್ಣೆಯ ಸಂಗ್ರಹದಿಂದ ಸುಮಾರು 213 ಸಂಸ್ಥೆಗಳಿಗೆ ಅದನ್ನು ನೀಡುತ್ತಾರೆ. ಆದರಲ್ಲಿ 122 ದೇವಸ್ಥಾನ, 69 ಭಜನಾಮಂದಿರಗಳು, ಗೋಶಾಲೆ, ಮಠ ಹೀಗೆ ವಿವಿಧ ಸಂಸ್ಥೆಗಳು ಸೇರಿವೆ.
ಹರಿವಾಣ ನೈವೇದ್ಯ: ಕ್ಷೇತ್ರದ ಪ್ರಧಾನ ಅರ್ಚಕರಾದ ‘ಗುರುರಾಜ್ ಉಪಾಧ್ಯಾಯರು’ ಹೇಳುವಂತೆ, ಮಕ್ಕಳು ಮಾತನಾಡದೇ ಇದ್ದರೆ, ಮಾತನಾಡುವಾಗ ಸಮಸ್ಯೆಯುಂಟಾದಲ್ಲಿ ಅಥವಾ ಕೆಟ್ಟ ಮಾತುಗಳನಾಡುತ್ತಿದ್ದರೆ ಈ ಸಮಸ್ಯೆ ಪರಿಹಾರಕ್ಕಾಗಿ ಕ್ಷೇತ್ರದಲ್ಲಿ ಹರಿವಾಣ ನೈವೇದ್ಯ ಅರ್ಪಿಸುವುದು ಈ ದೇವಸ್ಥಾನದ ಮತ್ತೊಂದು ವಿಶೇಷತೆ. ವಾರದ ಎಲ್ಲಾ ದಿನಗಳಲ್ಲಿ ರಂಗಪೂಜೆಯು ನಡೆಯುತ್ತಿದ್ದು, ಎಳ್ಳೆಣ್ಣೆಯ ಜೊತೆಗೆ ಎಳನೀರಿನ ಅಭಿಷೇಕ ಇಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದಿದೆ.
ವರ್ಜದೇಹಿ ಹಾಗೆನೇ ಚಿರಂಜೀವಿ ಶಕ್ತಿಯ ಅವತಾರವಾಗಿರುವ ಹನುಮಂತನ ಈ ದೇವಸ್ಥಾನ ನಿಜವಾಗಿಯೂ ಕೂಡ ಮಂಗಳೂರಿನಲ್ಲಿ ಒಂದು ಶಕ್ತಿಯ ಕೇಂದ್ರವಾಗಿದೆ ಅಂತಾನೆ ಹೇಳಬಹುದು. ಶತಮಾನಗಳ ಇತಿಹಾಸವುಳ್ಳ ಪುರಾತನ ದೇವಾಲಯ ಇದಾಗಿದ್ದು, ಸಾವಿರಾರು ಭಕ್ತರ ಕಷ್ಟ, ನಷ್ಟದ ಜೊತೆಗೆ ಶನಿಗ್ರಹಚಾರವನ್ನು ಪರಿಹರಿಸುವ ಕಲಿಯುಗದ ಮಹಾನ್ ಶಕ್ತಿಯ ಸ್ವರೂಪ ಈ ಅಭಯ ಹಸ್ತ ಹನುಮನನ್ನು ನೋಡಬೇಕಾದರೆ ಒಮ್ಮೆ ಮಂಗಳೂರಿನ ಕಾರ್ಸ್ಟ್ರೀಟ್ ನಲ್ಲಿರುವ ಈ ಕ್ಷೇತ್ರಕ್ಕೆ ಭೇಟಿ ನೀಡಲೇಬೇಕು…