ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕುಂಜಿಲಗೇರಿ ದೇವಸ್ಥಾನ ಸಂಯುಕ್ತ ಆಶ್ರಯದಲ್ಲಿ ಕುಂಜಿಲಗೇರಿಯಲ್ಲಿ ನಡೆದ ಪುತ್ತರಿ ಸಾಂಸ್ಕ್ರತಿಕ ನಮ್ಮೆ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯನವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕೆಪಿಟಿಸಿಎಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಟ್ಟಕಾಳಂಡ ಮತ್ತಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಂದ್ಮಾನಿ ಸಂಸ್ಕೃತಿ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದರಲ್ಲದೆ, ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಮಾತನಾಡಿ ಕೊಡಗಿನ ಕೆಲವೆಡೆ ಮುಚ್ಚಿಹೋದ ಕೊಡವರ ಪವಿತ್ರ ನೆಲೆಯಾದ ಮಂದ್ ಅನ್ನು ತೆರೆಯಲಾಗಿದೆ ಅಲ್ಲಿ ಕೊಡವರ ಸಾಂಸ್ಕೃತಿಕ ಆಟ್ಪಾಟ್ ಪಡಿಪು ಕಾರ್ಯಕ್ರಮ ನಡೆಸಿಕೊಂಡು ಬಂದರೆ ಮಾತ್ರ ಅಲ್ಲಿ ಪಾವಿತ್ರ್ಯತೆ ಉಳಿಯಲು ಸಾಧ್ಯವಾಗುತ್ತದೆ.
ಕೊಡಗಿನಲ್ಲಿ ಕೆಂಬಟ್ಟಿ ಜನಾಂಗವಿಲ್ಲದೆ ಕೊಡವ ಪದ್ಧತಿ ಪರಂಪರೆ ಇಲ್ಲ, ಪ್ರತಿಯೊಂದು ಕೊಡವ ಪದ್ಧತಿಯಲ್ಲೂ ಅವರ ವಾಲಗ ಹಾಗೂ ಆಚಾರ ವಿಚಾರ ತಾಳೆಯಾಗುತ್ತಿದೆ. ಆದ್ದರಿಂದ ನಶಿಸಿ ಹೋಗುತ್ತಿರುವ ಕೆಂಬಟ್ಟಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅಕಾಡೆಮಿ ವತಿಯಿಂದ ಪರಿಕರಗಳನ್ನು ನೀಡಿ ಪ್ರೋತ್ಸಾಹಿಸಿದ್ದಾಗಿ ತಿಳಿಸಿದರು.
ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಮಾತನಾಡಿ ಇಲ್ಲಿನ ಸಂಸ್ಕೃತಿಯನ್ನು ಹೊರಗಡೆ ಮೋಜಿಗಾಗಿ ಪ್ರದರ್ಶನ ಮಾಡುವ ಬದಲು ಮೂಲ ಸಂಸ್ಕೃತಿಯ ದೇವ ನೆಲೆಯಾದ ಕೊಡಗಿನಲ್ಲಿಯೇ ಆಚರಿಸಿ ಉಳಿಸಿ ಬೆಳೆಸುವಲ್ಲಿ ಶ್ರಮಿಸೋಣ ಎಂದರು.
ಕುಮಾರಿ ಪ್ರತಿಭಾ ಮತ್ತು ತಂಡದಿಂದ ಸ್ವಾಗತ ನೃತ್ಯ, ಸ್ವಾತಿ ಮತ್ತು ತಂಡದಿಂದ ಕೋಲಾಟ್, ಊರಿನವರಿಂದ ಬೊಳಕಾಟ್, ಉಮ್ಮತಾಟ್, ಕೂತಂಡ ಬೆಲ್ಲು ಮಂದಣ್ಣ ತಂಡದಿಂದ ಬೊಳಕಾಟ್, ದೇವರ ಈಡ್, ಪರೆಯಕಳಿ, ಕರಿಯಣ್ಣ ಮತ್ತು ತಂಡದಿಂದ ಕಾಪಳ ಕಳಿ ಹಾಗೂ ತಾಲಿಪಾಟ್ ನೆರೆದವರ ಮನರಂಜಿಸಿತು.