ಮೈಸೂರು ಅರಮನೆ ಇದೀಗ ಇನ್ನಷ್ಟು ಮೆರಗುಪಡೆದಿದೆ ಇದಕ್ಕೆ ಕಾರಣ ಇಲ್ಲಿ ಸೃಷ್ಟಿಯಾಗಿರುವ ಪುಷ್ಪಲೋಕ. ನೂರಾರು ಬಗೆಯ ಪುಷ್ಪಗಿಡಗಳು, ಬೋನ್ಸಾಯ್, ಕ್ಯಾಕ್ಟಸ್, ಎಲೆಗಿಡಗಳು, ಹೂ ಬಳ್ಳಿಗಳು ತಮ್ಮದೇ ಆದ ಸೌಂದರ್ಯದಿಂದ ಕಂಗೊಳಿಸುತ್ತಿದ್ದು ಅರಮನೆ ಆವರಣಕ್ಕಿಟ್ಟ ಪುಷ್ಪರಂಗವಲ್ಲಿ ಎಂಬಂತೆ ಗೋಚರಿಸುತ್ತಿದೆ. ಈ ಸುಂದರ ಪುಷ್ಪಲೋಕದಲ್ಲಿ ವಿಹರಿಸಲೆಂದೇ ಪ್ರವಾಸಿಗರ ದಂಡು ಆಗಮಿಸುತ್ತಿದ್ದು, ಪುಷ್ಪಲೋಕದಲ್ಲಿ ನಡೆದಾಡಿ ಖುಷಿ ಪಡುತ್ತಿದ್ದಾರೆ.
ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಫಲಪುಷ್ಪ ಲೋಕ ನೋಡುಗರ ಕಣ್ಮನ ತಣಿಸುತ್ತಿವೆ. ವಿವಿಧ ಬಣ್ಣ, ಆಕಾರ, ಚೆಲುವುಗಳಿಂದ ಒಂದಕ್ಕಿಂತ ಮತ್ತೊಂದು ಕಡಿಮೆಯೇನು ಇಲ್ಲ ಎಂಬಂತೆ ತಮ್ಮ ಚೆಲುವನ್ನು ಹೊರ ಸೂಸುತ್ತಿದ್ದು, ಕ್ರಿಸ್ಮಸ್ ಮತ್ತು ಹೊಸವರ್ಷಕ್ಕೊಂದು ವಿಶೇಷವಾಗಿ ಗಮನಸೆಳೆಯುತ್ತಿದೆ.
ಇಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕುಂಡಗಳನ್ನು ಹಾಗೂ ಲಕ್ಷದಷ್ಟು ಹೂಗಳನ್ನು ಬಳಸಿ ಪುಷ್ಪಲೋಕವನ್ನು ಸೃಷ್ಟಿಸಲಾಗಿದೆ. ಈ ಪುಷ್ಟಗಳಲೋಕದ ನಡು ನಡುವೆ ಒಂಟೆ, ಕುದುರೆಗಳು ಕಾಣಸಿಗುತ್ತವೆ. ಚುಕುಬುಕು ರೈಲು, ಹಳೆಯ ಕಾಲದ ಸ್ಕೂಟರ್, ಜೀಪುಗಳನ್ನು ಅಲಂಕಾರ ಮಾಡಿಡಲಾಗಿದೆ. ದಸರಾ ಜಂಬೂ ಸವಾರಿ, ಸೇನಾಧಿಪತಿಗಳೊಂದಿಗೆ ಹೊರಟ ಮಹಾರಾಜರ ಪಡೆ, ಇತಿಹಾಸದ ಕಥೆ ಹೇಳುವ ಫಿರಂಗಿ, ಟಾಂಗಾಗಳಿಗೆ ಸ್ಥಾನ ನೀಡಲಾಗಿದೆ.
ಎಲ್ಲರ ಕೈಸೇರಿರುವ 2000 ರೂ. ನೋಟುಗಳು ಮುದ್ರಣಗೊಳ್ಳುತ್ತಿರುವ ದೃಶ್ಯ, ಪುಷ್ಟಗಳಲ್ಲೇ ಸೃಷ್ಟಿಯಾದ ಚಿಟ್ಟೆಗಳು, ರೋಬೋಟ್, ಗುಲಾಬಿ ಹೂಗಳಿಂದಲೇ ಸೃಷ್ಟಿಯಾದ ಮೊಲ, ವಿವಿಧ ಬಗೆಯ ಪುಷ್ಟಗಿಡಗಳು ಹಾಗೂ ಗುಲಾಬಿ ಹೂಗಳಿಂದ ನಿರ್ಮಾಣಗೊಂಡ ಬೃಹತ್ ಶಿವಲಿಂಗ ಎಲ್ಲವೂ ಪುಷ್ಪಲೋಕಕ್ಕೆ ಕಾಲಿಟ್ಟವರನ್ನು ಚಕಿತಗೊಳಿಸುತ್ತದೆ. ಸಂಜೆಯಾಗುತ್ತಿದ್ದಂತೆಯೇ ಅರಮನೆಯ ಬೆಳಕಿನಲ್ಲಿ ಮಿಂದೇಳುತ್ತಿರುವ ಪುಷ್ಪರಾಣಿಯರನ್ನು ನೋಡಲು ಕಣ್ಣುಗಳೇ ಸಾಲದಾಗುತ್ತದೆ. ಪುಷ್ಪವನದಲ್ಲಿ ಪುಷ್ಪ ರಾಣಿಯರ ನಡುವೆ ಹೆಜ್ಜೆ ಹಾಕುತ್ತಾ ರಿಲ್ಯಾಕ್ಸ್ ಆಗಬೇಕಾದರೆ ಈ ಪುಷ್ಪಲೋಕ ಜನವರಿ 1 ರವರೆಗೂ ಇರುವುದರಿಂದ ಯಾರು ಬೇಕಾದರೂ ಇಲ್ಲಿಗೆ ಆಗಮಿಸಿ ಖುಷಿಪಟ್ಟು ಪುಷ್ಪಲೋಕದ ಬೆಡಗಿಯರೊಂದಿಗೆ ಕಾಲ ಕಳೆಯಲು ಅಡ್ಡಿಯಿಲ್ಲ.