ಪ್ರತಿ ವರ್ಷ ಡಿಸೆಂಬರ್ ನ ಕೊನೆಯ ದಿನ ಬರುತ್ತಿದ್ದಂತೆಯೇ ಮುಂದಿನ ಹೊಸ ವರ್ಷದ ಕಲ್ಪನೆಯಲ್ಲಿ ನಾವು ವಿಹರಿಸುವುದು ಸಾಮಾನ್ಯ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಒಂದು ವರ್ಷಗಳ ಕಾಲ ನಾವು ಸವೆಸಿದ ಒಂದೊಂದು ದಿನವೂ ನಮ್ಮ ಪಾಲಿಗೆ ಹೊಸ ಅನುಭವ ನೀಡಿರುತ್ತದೆ. ಬಹಳಷ್ಟು ಮಂದಿ ಏನನ್ನು ಪಡೆದುಕೊಂಡಿದ್ದೇವೆ ಎನ್ನುವುದಕ್ಕಿಂತ ಏನು ಕಳೆದುಕೊಂಡಿದ್ದೇವೆ ಎಂಬುವುದರ ಲೆಕ್ಕಾಚಾರವನ್ನು ನಮ್ಮ ಮುಂದಿಡುತ್ತಾರೆ.
ಒಂದು ವರ್ಷದಲ್ಲಿ ನಡೆದ ಅಷ್ಟು ಘಟನೆಗಳು ನಮ್ಮ ಕಣ್ಣು ಮುಂದೆ ಬಂದು ನಿಲ್ಲುತ್ತವೆ. ಅವು ಸಾಮಾಜಿಕವೂ ಆಗಿರಬಹುದು, ವೈಯಕ್ತಿಕವೂ ಇರಬಹುದು. ಸಿಹಿ ಕ್ಷಣಕ್ಕಿಂತ ಕಹಿ ಕ್ಷಣಗಳು ಹೆಚ್ಚು ನಮ್ಮನ್ನು ಕಾಡುತ್ತವೆ. ಕೆಲವು ಘಟನೆಗಳು ಇತಿಹಾಸವಾಗಿ ಉಳಿದರೆ ಮತ್ತಷ್ಟು ಘಟನೆಗಳು ಹತ್ತರಲ್ಲಿ ಹನ್ನೊಂದು ಎಂಬಂತೆ ಕಳೆದು ಹೋಗಿರುತ್ತದೆ. ಇಷ್ಟು ವರ್ಷದ ನಮ್ಮ ಬದುಕಿನಲ್ಲಿ ಕಳೆದು ಹೋದ ವರ್ಷಗಳಲ್ಲಿ ಬದಲಾವಣೆ ಆಗಿದೆಯಾ ಎಂಬುದನ್ನು ಮೆಲುಕು ಹಾಕಲು ನಾವು ಹೋಗುವುದಿಲ್ಲ ಬದಲಾಗಿ ಹೊಸ ವರ್ಷದಲ್ಲಿ ಹೊಸ ಆಶೋತ್ತರಗಳೊಂದಿಗೆ ಹೆಜ್ಜೆ ಇಡಲು ಬಯಸುತ್ತೇವೆ. ಒಂದಷ್ಟು ಒಳ್ಳೆಯ ನಿರೀಕ್ಷೆಯನ್ನಿಟ್ಟುಕೊಳ್ಳುತ್ತೇವೆ. ಅವು ಈಡೇರಲಿ ಎಂಬ ಬಯಕೆಯೊಂದಿಗೆ ನೂತನ ವರ್ಷವನ್ನು ಬರಮಾಡಿಕೊಳ್ಳುತ್ತೇವೆ.
ಕಳೆದು ಹೋದ ಈ ವರ್ಷ ನನ್ನ ಬದುಕಿನಲ್ಲಿ ಒಳಿತು ಆಗಿಲ್ಲ ಬರೀ ಕಷ್ಟಗಳನ್ನೇ ತಂದಿದೆ ಎಂದು ಹಲಬುವವರೇ ಜಾಸ್ತಿ. ಅದು ತಪ್ಪು ಎನ್ನಲಾಗುವುದಿಲ್ಲ ಕಾರಣ ಹೊಸ ವರ್ಷಕ್ಕೆ ನಮ್ಮದೇ ಆದ ಹತ್ತು ಯೋಜನೆ, ಕಲ್ಪನೆಗಳನ್ನಿಟ್ಟುಕೊಂಡು ಹೆಜ್ಜೆ ಹಾಕಿರುತ್ತೇವೆ. ಅವುಗಳೆಲ್ಲಾ ಕಾರ್ಯಗತವಾಗದಿದ್ದಾಗ ನಮ್ಮಲ್ಲಿ ನಿರಾಶೆ ಮೂಡುವುದು ಸಹಜ. ಹಾಗೆ ನೋಡಿದರೆ ಹೊಸ ವರ್ಷದಲ್ಲೇನಿದೆ? ಏನೂ ಇಲ್ಲ. ಎಲ್ಲಾ ದಿನಗಳಂತೆ ಅದೂ ಕೂಡ. ವರ್ಷದ ಮೊದಲ ದಿನವಷ್ಟೆ ಹೊಸತು. ನಂತರ ಅದು ಕೂಡ ಹಳೆದಾಗುತ್ತದೆ. ಮತ್ತೆ ಹೊಸ ವರ್ಷ ಬಂದಾಗ ನಾವು ಅದನ್ನು ಸ್ವಾಗತಿಸಲು ಸಿದ್ಧವಾಗಿ ಬಿಡುತ್ತೇವೆ. ಇದೆಲ್ಲವೂ ನೈಸರ್ಗಿಕ ನಿಯಮ.
ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು ಹಳೆಯ ವರ್ಷದ ದಿನಗಳನ್ನು ಮೆಲುಕು ಹಾಕುತ್ತಾ ಸಂತಸದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ದುಃಖದ ಕ್ಷಣಗಳನ್ನು ಮರೆಯುತ್ತಾ ಮುನ್ನಡೆಯಬೇಕು.
ಕಳೆದ ವರ್ಷದಲ್ಲಿ ನಮಗೆ ಏನು ಒಳ್ಳೆದಾಗಿದೆ ಎನ್ನುವುದಕ್ಕಿಂತ ನಾವು ನಮಗೆ, ನಮ್ಮ ಕುಟುಂಬಕ್ಕೆ, ಸಮಾಜಕ್ಕೆ ಒಳ್ಳೆದಾಗುವ ಯಾವುದಾದರು ಕೆಲಸ ಮಾಡಿದ್ದೇವೆಯೇ ಎಂಬುವುದನ್ನು ಕೂಡ ಯೋಚಿಸಬೇಕಾಗಿದೆ. ಕೇವಲ ನಮ್ಮ ಬಗ್ಗೆ ಯೋಚಿಸಿದರೆ ಏನು ಪ್ರಯೋಜನ ಇಡೀ ಸಮಾಜದ ಬಗ್ಗೆ ಯೋಚಿಸುವ ಮತ್ತು ನಮಗಿಂತ ಕಷ್ಟದಲ್ಲಿರುವವರಿಗೆ ನಮ್ಮಿಂದ ಏನಾದರು ಸಹಾಯ ಮಾಡುವ ಮನೋಭಾವ ನಮ್ಮಲ್ಲಿ ಹುಟ್ಟಬೇಕು. ನಮ್ಮಿಂದ ಬೇರೆಯವರಿಗೆ ಯಾವ ರೀತಿಯ ಅನುಕೂಲವಾಗಿದೆ? ಎಂಬುವುದನ್ನು ಕೂಡ ಆಲೋಚಿಸಬೇಕಾಗಿದೆ. ನಮಗೆ ನಾವು ಅನುಕೂಲ ಮಾಡಿಕೊಳ್ಳುವುದರಲ್ಲಿ ಹೆಚ್ಚುಗಾರಿಕೆ ಏನಿದೆ? ಅದೇ ಬೇರೆಯವರಿಗೆ ಒಂದಷ್ಟು ಸಹಾಯ ಮಾಡಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವುದಿದೆಯಲ್ಲ ಅದು ಕೊಡುವ ಸುಖ ನಿಜಕ್ಕೂ ಮರೆಯಲಾಗದ್ದು.
ಹೊಸವರ್ಷವನ್ನು ಸ್ವಾಗತಿಸಲು ವಯಕ್ತಿಕವಾಗಿ ನಾವು ಹಲವು ರೀತಿಯಲ್ಲಿ ಸಿದ್ಧರಾಗಿರುತ್ತೇವೆ. ಕೆಲವರು ಹೊಸ ವಸ್ತುಗಳ ಖರೀದಿಗೆ ಮುಂದಾದರೆ, ಮತ್ತೆ ಕೆಲವರು ಹೊಸವ್ಯವಹಾರ, ವ್ಯಾಪಾರ, ಉದ್ದಿಮೆ ಆರಂಭಿಸಬೇಕೆನ್ನುವ ಚಿಂತನೆಯಲ್ಲಿ ತೊಡಗಿರಬಹುದು. ಹೊಸವರ್ಷಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ ಏನಾದರೊಂದು ಸಾಧನೆ ಮಾಡುತ್ತೇನೆ ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕಿದೆ. ಸಾಮಾನ್ಯವಾಗಿ ಹೊಸ ವರ್ಷಾಚರಣೆ ಎಂಬುವುದು ಮೋಜು, ಮಸ್ತಿಗೆ ಸೀಮಿತವಾಗಿದೆ. ಕೆಲವರು ತಮ್ಮ ಮನೆಗಳಲ್ಲಿ ಹೊಸವರ್ಷವನ್ನು ಸ್ವಾಗತಿಸಿದರೆ ಇನ್ನು ಕೆಲವರು ಪ್ರವಾಸ ತೆರಳಿ ಹೊಸ ಸ್ಥಳಗಳಲ್ಲಿ ಹೊಸವರ್ಷಾಚರಣೆ ಮಾಡುತ್ತಾರೆ.
ಪಾಶ್ಚಿಮಾತ್ಯ ದೇಶಗಳ ಪ್ರಭಾವ ನಮ್ಮ ದೇಶದ ಮೇಲೆ ಬೀರಿರುವುದರಿಂದ ಇಲ್ಲೂ ಕೂಡ ವರ್ಷಾಚರಣೆಯ ಸಂಭ್ರಮ ದಿಕ್ಕು ತಪ್ಪುತ್ತಿದೆ. ಕುಡಿದು, ತಿಂದು, ಕುಣಿದು ಕುಪ್ಪಳಿಸೋದು ಪ್ರಮುಖವಾಗಿ ಕಂಡು ಬರುತ್ತಿದೆ. ನಗರ ಪ್ರದೇಶಗಳಲ್ಲಿ ನೇರವಾಗಿ ಬೀದಿಗಿಳಿಯುವ ಕೆಲವರು ಸಂಭ್ರಮಾಚರಣೆಯ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದೂ ನಡೆಯುತ್ತದೆ. ಅದೇನೆ ಇರಲಿ ಎಲ್ಲರಿಗೂ ಹೊಸ ವರ್ಷದ ಬಗ್ಗೆ ತಮ್ಮದೇ ಆದ ನಿರೀಕ್ಷೆ ಮತ್ತು ಹತ್ತು ಹಲವು ಕನಸುಗಳಿರುತ್ತವೆ. ಕಳೆದು ಹೋದ ವರ್ಷದಲ್ಲಿ ಅನುಭವಿಸಿದ ಎಲ್ಲಾ ಕಷ್ಟಗಳು ಪರಿಹಾರವಾಗಿ ಬಾಳು ಹಸನಾಗಲಿ ಎಂಬ ಬಯಕೆಯೊಂದಿಗೆ ಹೊಸ ವರ್ಷದತ್ತ ಹೆಜ್ಜೆಯಿಡೋಣ.