ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣದಿಂದ ಬಹಳಷ್ಟು ಕೆರೆಗಳು ತುಂಬಲೇ ಇಲ್ಲ. ಹೀಗಾಗಿ ಬರ ಎಲ್ಲೆಡೆ ತಾಂಡವವಾಡುತ್ತಿದೆ. ಜತೆಗೆ ನೀರಿಗಾಗಿ ಹಾಹಾಕಾರವೂ ಸೃಷ್ಠಿಯಾಗಿದೆ.
ಇನ್ನೇನು ನೀರು ತುಂಬುವುದೇ ಇಲ್ಲವೇನೋ ಎಂಬಂತಿದ್ದ ಹನೂರಿನ ಬೆಳತ್ತೂರು ಬಳಿಯ ಹುಬ್ಬೆಹುಣಸೆ ಕೆರೆ ಇತ್ತೀಚೆಗೆ ಸುರಿದ ಆಕಸ್ಮಿಕ ಮಳೆಯಿಂದ ತುಂಬಿ ಹೋಗಿತ್ತು. ಅದು ಕೂಡ ಅಚ್ಚರಿಯ ರೀತಿಯಲ್ಲಿ.
ಕೊಳ್ಳೇಗಾಲ ತಾಲೂಕನ್ನು ರಾಜ್ಯದ ಬರಪೀಡಿತ ತಾಲೂಕಿನ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಮೊದಲ ಪಟ್ಟಿಯನ್ನು ಕೂಡ ಕಳುಹಿಸಲಾಗಿತ್ತು. ಆದರೆ ಎರಡನೇ ಪಟ್ಟಿ ಕಳುಹಿಸುವ ವೇಳೆಗೆ ಇದ್ದಕ್ಕಿದ್ದಂತೆ ಹನೂರಿನ ಬೆಳತ್ತೂರು ಭಾಗದಲ್ಲಿ ಭಾರೀ ಮಳೆ ಸುರಿಯಿತು. ಪರಿಣಾಮ ಒಂದೆರಡು ಗಂಟೆಯೊಳಗೆ ಹುಬ್ಬೆಹುಣೆಸೆ ಕೆರೆಯು ಭರ್ತಿಯಾಗಿ ಬಿಟ್ಟಿತು. ಇದನ್ನು ನೋಡಿದ ಜನ ಇದು ಮಲೆಮಹದೇಶ್ವರನ ಪವಾಡ ಎಂದು ಮಾತನಾಡಿಕೊಂಡರು.
ವಿಷಯ ತಿಳಿಯುತ್ತಿದ್ದಂತೆಯೇ ಜನ ಕೆರೆ ನೋಡಲು ಬರತೊಡಗಿದರು. ಅಷ್ಟೇ ಅಲ್ಲದೆ, ಕ್ಷೇತ್ರದ ಶಾಸಕ ನರೇಂದ್ರ ಅವರು ಬಾಗಿನ ಅರ್ಪಿಸಿ ಖುಷಿಪಟ್ಟರು. ಆದರೆ ಮತ್ತೆ ಮಳೆಯಾಗದ ಕಾರಣದಿಂದ ತುಂಬಿದ್ದ ನೀರು ಖಾಲಿಯಾಗತೊಡಗಿತು.
ಇದೀಗ ಬಿಸಿಲು ಹೆಚ್ಚಾಗುತ್ತಿರುವುದರಿಂದ ನೀರು ಬತ್ತುತ್ತಿದೆ. ಕೆರೆಯಲ್ಲಿ ನೀರು ಖಾಲಿಯಾಗುತ್ತಿರುವುದರಿಂದ ಸುತ್ತಮುತ್ತಲ ಜನರಲ್ಲಿ ಆತಂಕ ಸೃಷ್ಠಿಯಾಗಿದೆ. ಹೀಗೆ ಮುಂದುವರೆದರೆ ಕೆರೆಯ ನೀರು ಸಂಪೂರ್ಣ ಬತ್ತುವ ಸಾಧ್ಯತೆ ಇಲ್ಲದಿಲ್ಲ.
ಈ ಕೆರೆಗೆ ನದಿ ನೀರನ್ನು ತುಂಬಿಸುವಂತೆ ಒತ್ತಾಯ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆರೆಯಲ್ಲಿ ನೀರು ತುಂಬಿಕೊಂಡಿದ್ದರೆ ಜನ ಜಾನುವಾರುಗಳಿಗೆ ಕುಡಿಯಲು, ಗ್ರಾಮಸ್ಥರಿಗೆ ಬಟ್ಟೆಬರೆ ತೊಳೆಯಲು ಉಪಯೋಗವಾಗುವುದರೊಂದಿಗೆ ಅಂತರ್ಜಲ ಮಟ್ಟವೂ ಹೆಚ್ಚುತ್ತಿತ್ತು. ಆದರೆ ಇದೀಗ ಕೆರೆಯಲ್ಲಿ ನೀರು ಖಾಲಿಯಾಗುತ್ತಿರುವುದನ್ನು ನೋಡಿದರೆ ಬೇಸಿಗೆಯಲ್ಲಿ ಏನಾಗಬಹುದೋ ಎಂಬ ಭಯ ಕಾಡುತ್ತಿದೆ.