ಕೊಡವರಲ್ಲಿಯೇ ಬಹಳಷ್ಟು ಮಂದಿ ಜನರು ಈ ಅಂಗಕಳಿಯನ್ನು ಕೇಳಿದರೆ ಆಶ್ಚರ್ಯ ಆಗಬಹುದು. ಏಕೆಂದರೆ ಇದು ಇವತ್ತಿನ ದಿನಗಳಲ್ಲಿ ಕೆಲವೇ ಭಾಗದಲ್ಲಿ ಕೊಡವರ ಸಾವಿನಲ್ಲಿ ಕೆಂಬಟ್ಟಿ ಜನಾಂಗದಿಂದ ಆಚರಿಸಲ್ಪಡುವ ಒಂದು ವಿಶಿಷ್ಟ್ಟವಾದ ಜಾನಪದ ನೃತ್ಯ. ಕೊಡವರ ಸಂಪ್ರದಾಯದಲ್ಲಿ ಮರೆಯಾಗಿ ಹೋಗುತ್ತಿದೆ ಈ ಅಂಗಕಳಿ ಆಟ.
ಕೊಡವರಲ್ಲಿ ಒಕ್ಕದ, ಅಂದರೆ ಕುಟುಂಬದ ಪಟ್ಟೇದಾರರು ಮೃತರಾದರೆ, ಅಥವಾ ಕುಟುಂಬದ ಹಿರಿಯ ವ್ಯಕ್ತಿ ತುಂಬಾ ವಯಸ್ಸಾಗಿ ಮೃತಪಟ್ಟರೆ ಅಂಗಕಳಿ ಎಂಬ ಕುಣಿತ ಮಾಡಿಸುತ್ತಾರೆ. ಊರಿನಲ್ಲಿ ಇರುವ ಕೆಂಬಟ್ಟಿಗಳನ್ನು ಕರೆಸಿ ಈ ಅಂಗಕಳಿಯನ್ನುಮಾಡಿಸುತ್ತಾರೆ. ಮಣೆಯ ಮೇಲೆ ಕೈಯೆಣ್ಣೆ ದೀಪ ಇಟ್ಟು, ಇದರ ಪಕ್ಕದಲ್ಲಿ( ಪುತ್ತರಿ ಪಚ್ಚೆ) ಬಿದಿರಿನ ಕುಕ್ಕೆಯಲ್ಲಿ ಭತ್ತವನ್ನು ತುಂಬಿಟ್ಟು, ಇನ್ನೊಂದರಲ್ಲಿ ಅಕ್ಕಿ, ತೆಂಗಿನಕಾಯಿಯನ್ನು ಇಟ್ಟು ಅಕ್ಕಿಯ ಮೇಲೆ ಸಣ್ಣ ಕಬ್ಬಿಣದ ಸಲಾಕೆಯನ್ನು ಚುಚ್ಚಲಾಗುತ್ತೆ. ಅಂಗಕಳಿ, ಆಡುವ ಒಬ್ಬನಿಗೆ” ಮುಂಡು, (ಬಿಳಿಪಂಚೆ )ಕೊಡಬೇಕು. ಆ ಮುಂಡು ಬಟ್ಟೆಯನ್ನು ಸುತ್ತಿಕೊಂಡು ಸಾವಿಗೆ ಕೈಕೊಡುವಂತ್ತೆ ಮಾಡಿ “ಕಟ್ಟಿರೋ ಅದನ್ನೇ ಬೊಳ್ಳ ಅಥವಾ ಕಟ್ಟಿರೋ ಅಬ್ಬಾಯೇ ಎಂದು ಮೂರೂ ಬರಿ ಶವದ ಕೈ ಹಿಡಿದು ದೀಪದ ಸುತ್ತಲೂ ಮಾಲೆ ಪೋಯಿತ್ಹೊಡೆಯುತ ಡೋಲಿಗೆ ತಕ್ಕಂತೆ ವಿಶೇಷವಾದ ಕುಣಿತವನ್ನು ಕುಣಿಯುತ್ತಾನೆ.
ಅಂಗಕಳಿ ಮಾಡುವ ವ್ಯಕ್ತಿಯು ಸತ್ತ ವ್ಯಕ್ತಿಗಿಂತ ಕಿರಿಯವನಾದರೆ ಆತ ಕೊಡವರಂತೆ ಮೆಂಗತೆ ಇರಬೇಕು. ಮೆನ್ಗತೆ ಅಂದರೆ ಕೊಡವರ ಸಂಪ್ರದಾಯದಂತೆ ವಿಧಿವಿಧಾನಗಳು ಮುಗಿಯುವ ತನಕ ಹಲವು ಶಿಸ್ತುಬದ್ಧ ಕಟ್ಟುಪಾಡನ್ನು ಪಾಲಿಸುವುದು. ಅಂಗಕಳಿ ಮುಗಿಸಿ ಆತ ಹೋಗುವಾಗ ಕುಕ್ಕೆಯಲ್ಲಿ ಅಕ್ಕಿ, ತೆಂಗಿನಕಾಯಿ, ಉಪ್ಪು, ಮಾಂಸ, ಎಣ್ಣೆಯ ಜೊತೆ ಬಿಳಿ ಕುಪ್ಪುಸಕ್ಕೆ ಬೇಕಾಗುವಷ್ಟು ಬಿಳಿ ಬಟ್ಟೆ ಕೊಡಬೇಕು.
ಹೆಂಗಸರು ಮೆಂಗತೆ ಇದ್ದರೆ ಸತ್ತ ದಿನ ನಿಪ್ಪು ತುಣಿಗೆ ಬಿಳಿಬಟ್ಟೆ ಕೊಡಬೇಕು. ಒಂದು ಸೆರೆಗೆ ಬೇಕಾದಷ್ಟು ಬಿಳಿ ಬಟ್ಟೆ ಕೊಡಬೇಕಾಗತ್ತೆ. ಹಾಗೆಯೇ ಈ ಜಾನಪದ ಅಂಗಕಳಿ ಕಲಾವಿದರಾದ ಈಗ ಬೆರಳೆಣಿಕೆಯಷ್ಟು ಕಾಣ ಸಿಗುವ ಕೆಂಬಟ್ಟಿ ಜನಾಂಗದ ಬಿದ್ದಂಡ ಕುಟದಸನ್ನು ಹಾಗು ಬೊಳ್ಳು, ತಂಡದವರು ಹೇಳುವಂತೆ ಶಿವನು ಬಸ್ಮಾಸುರನಿಗೆ ಯಾರ ತಲೆಯ ಮೇಲೆ ಕೈಯ್ಯನು ಇಡುತ್ತಿಯೋ ಅವರು ಭಸ್ಮವಾಗಲೆಂದು ವರವನ್ನು ನೀಡಿದಾಗ, ಬಸ್ಮಾಸುರನು ಅದನ್ನು ಪರೀಕ್ಷಿಸಲು ಶಿವನ ತಲೆಯ ಮೇಲೆ ಕೈಯ್ಯನ್ನು ಇಡಲು ಹೋದಾಗ ಶ್ರೀಕೃಷ್ಣನು ಹೆಣ್ಣಿನ ವೇಷ ಧರಿಸಿ ಶಿವನ್ನನ್ನು ಬಸ್ಮಾಸುರನಿಂದ ರಕ್ಷಿಸುವ ಜಾನಪದ ಕಥೆಯ ಆಧಾರವೇ ಈ ಅಂಗಕಳಿ.
ಕಲಾವಿದರಾದ ಸನ್ನುವಿನ ಪ್ರಕಾರ ನಮ್ಮ ಮೂರು ತಲೆಮಾರಿನಿಂದ ಬಂದ ಸಂಪ್ರದಾಯವನ್ನು ನಾವು ಪಾಲಿಸಿಕೊಂಡು ಬಂದಿರುತೇವೆ, ಅವರ ಹೇಳಿಕೆಯಂತೆ ಅಂಗಕಳಿಯನ್ನು ಅಮ್ಮ ಕೊಡವರು, ಕೊಡವರು, ಮೇದರು, ಹಾಗು ಕೆಂಬಟ್ಟಿ ಜನಾಂಗದ ಹಿರಿಯರು ಸತ್ತಾಗ ಮಾತ್ರ ಆಚರಿಸುತ್ತಾರೆ. ಕೊಡಗಿನಲ್ಲಿ ಅವನತಿಯನ್ನು ಕಾಣುತ್ತಿರುವ ಈ ಕೆಂಬಟ್ಟಿ ಜನಾಂಗದವರು ತಮ್ಮ ಸಂಪ್ರದಾಯವನ್ನು ಮೈಸೂರು, ಬೆಂಗಳೂರು, ಹಾಗು ಹಲವು ಕಡೆಗಲ್ಲಿ ಜಾನಪದ ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ಸರಕಾರ ಅವರನ್ನು ಗುರುತಿಸಿ ಅವರಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸಿಕೊಟ್ಟಿಲ್ಲವೆಂಬುದು ಪಾರಣೆಯ ಬಾವಲಿ ಗ್ರಾಮದಲ್ಲಿ ಕಾಣ ಸಿಗುವ ಕೆಂಬಟ್ಟಿ ಜನಾಂಗದವರ ಅಳಲು .