ಮಂಗಳೂರು: ಕ್ರಿಕೆಟ್ ಅಂದರೆ ಎಲ್ಲರಿಗೂ ಇಷ್ಟ, ಅದರಲ್ಲೂ ಮಂಗಳೂರಿಗರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಎಂದರೆ ಇನ್ನೂ ಇಷ್ಟ, ಇದಕ್ಕೆ ಪುಷ್ಟಿ ನೀಡುವಂತೆ ನಗರದಲ್ಲಿ ಆಗಾಗ್ಗೆ ನಡೆಯುವ ಟೆನಿಸ್ ಬಾಲ್ ಟೂರ್ನಿಗಳು. ಇದಕ್ಕೆ ಪೂರಕವೆಂಬಂತೆ ನಗರದ ಕದ್ರಿ ಪಾರ್ಕ್ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುವಾಗ ದಾರಿಯಲ್ಲಿ ಬಣ್ಣ ಬಣ್ಣದ ಬ್ಯಾಟುಗಳು ನೋಡಲು ಸಿಗುತ್ತದೆ.
ಮಹಾರಾಷ್ಟ್ರದಿಂದ ಬಂದ ಕುಟುಂಬಗಳು ಈ ಬ್ಯಾಟು ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಬ್ಯಾಟ್ ಗಳನ್ನು ನೀಡುವ ಮೂಲಕ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ತಮ್ಮ ಹೊಟ್ಟೆ ಪಾಡಿಗಾಗಿ ದಾರಿಯನ್ನು ಕಂಡುಕೊಂಡಿವೆ.
ಈ ಬ್ಯಾಟ್ ಗಳು ವಾರೂಲ್ ಎಂಬ ಮರದಿಂದ ತಯಾರಿಸಲಾಗಿದ್ದು, ಟೆನ್ನಿಸ್ ಬಾಲ್ನಲ್ಲಿ ಕ್ರಿಕೆಟ್ ಆಡುವವರಿಗೆ ಇವರು ತಯಾರಿಸುವ ಬ್ಯಾಟ್ ಉತ್ತಮವಾಗಿದ್ದು, ಜನರನ್ನು ತನ್ನತ್ತ ಹೆಚ್ಚು ಆಕರ್ಷಿಸಲು ಬ್ಯಾಟ್ ಮೇಲೆ ಬಣ್ಣ ಬಣ್ಣದ ಟೇಪ್ ಗಳನ್ನು ಹಾಕಲಾಗಿದೆ.
‘ನ್ಯೂಸ್ ಕನ್ನಡ’ ಜೊತೆ ಮಾತನಾಡಿದ ಬ್ಯಾಟ್ ತಯಾರಕರೊಬ್ಬರು ಹೇಳುವಂತೆ ತಮ್ಮಲ್ಲಿ ಕನಿಷ್ಠ 150 ರಿಂದ 450ರೂ.ವರೆಗೆ ಬೆಲೆ ಬಾಳುವ ಬ್ಯಾಟ್ ಗಳಿದ್ದು, ಉತ್ತಮ ದರ್ಜೆಯ ಬ್ಯಾಟ್ ಗಳು ಅತೀ ಕಡಿಮೆ ಕಡಿಮೆ ದರದಲ್ಲಿ ಲಭ್ಯವಿದ್ದು, ಪುಟ್ಟ ಪುಟ್ಟ ಮಕ್ಕಳಿಗೋಸ್ಕರ ಮಾಡಿದ ಬ್ಯಾಟ್ ಗಳು ಪ್ರಮುಖ ಆಕರ್ಷಣೆ ಆಗಿದೆ. ಬ್ಯಾಟ್ ಗಳ ಜೊತೆಗೆ ವಿಕೆಟ್ ಸ್ಟಂಪ್ ಗಳು ಕೂಡ ಇಲ್ಲಿ ಸಿಗುತ್ತವೆ ಎಂದಿದ್ದಾರೆ.
ಈ ಕುಟುಂಬ ಮಂಗಳೂರಿಗೆ ಬಂದು ಕೇವಲ 10 ದಿನಗಳು ಮಾತ್ರವೇ ಆಗಿದ್ದು, ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವ ಜನರನ್ನು ಒಂದು ಸಲ ತನ್ನತ್ತ ನೋಡುವಂತೆ ಮಾಡುತ್ತಿರುವುದು ಮಾತ್ರ ಸುಳ್ಳಲ್ಲ.