ಸಂಕ್ರಾಂತಿ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪಟ್ಟಣ ಪ್ರದೇಶಗಳಲ್ಲಿ ಎಳ್ಳುಬೆಲ್ಲ, ಕಬ್ಬು, ಹೂ, ಹಣ್ಣು ಖರೀದಿಯಲ್ಲಿ ತೊಡಗಿಸಿಕೊಂಡಿರುವ ಜನ, ಮನೆಮನೆಗೆ ತೆರಳಿ ಎಳ್ಳುಬೆಲ್ಲ ಬೀರುವ ದೃಶ್ಯಗಳು ಕಂಡು ಬರುತ್ತದೆ.
ಸಂಕ್ರಾಂತಿ ಹಬ್ಬವನ್ನು ಮುಖ್ಯವಾಗಿ ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು, ಕೇರಳಗಳಲ್ಲಿ ಆಚರಿಸಲಾಗುತ್ತದೆ. ಧಾನ್ಯ ಲಕ್ಷ್ಮಿ ಮನೆಗೆ ಬರುವ(ಸುಗ್ಗಿ) ಸಂದರ್ಭ ಆಚರಿಸಲಾಗುವ ಸಂಕ್ರಾಂತಿ ಸಮೃದ್ಧಿಯ ಸಂಕೇತ.
ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸಿದಾಗ, “ಮಕರ ಸಂಕ್ರಾಂತಿ”ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ 14ರ ಸುಮಾರಿಗೆ ಬರುತ್ತದೆ. ಹಿಂದೆ ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು. ಈಗ ಉತ್ತರಾಯಣ ಡಿಸೆಂಬರ್ 22ಕ್ಕೆ ಆದರೂ, ಹಿಂದಿನಂತೆಯೇ ಜನವರಿ 14 ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಎಳ್ಳನ್ನು ತಯಾರಿಸಿ ಅಥವಾ ಖರೀದಿಸಿ ತಂದು ಸುತ್ತಲಿನ ಮನೆಗಳಿಗೆ “ಎಳ್ಳು ಬೀರುವುದು” ಮತ್ತು ಸ್ನೇಹಿತರು-ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಲ್ಲಿ ಕಂಡು ಬರುವ ಸಂಪ್ರದಾಯವಾಗಿದೆ.
ತಮಿಳುನಾಡಿನಲ್ಲಿ ಈ ಹಬ್ಬವನ್ನು “ಪೊಂಗಲ್” ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳಕಾಲ ನಡೆಯುತ್ತದೆ. ಈ ಸಂದರ್ಭ ಹೊಸಬಟ್ಟೆ ತೊಡುವುದು, ಸಮೃದ್ದಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸುವುದು, ಗೋಪೂಜೆ, ಗೂಳಿಯನ್ನು ಪಳಗಿಸುವ ಜಲ್ಲಿಕಟ್ಟು ಆಟವೂ ನಡೆಯುತ್ತದೆ.(ಇದನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಈ ಬಾರಿ ಆದೇಶಿಸಿದೆ) ಹಲವೆಡೆ ವರ್ಷಪೂರ್ತಿ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಕಿಚ್ಚು ಹಾಯಿಸುವ ಸಂಪ್ರದಾಯವೂ ಇದೆ.
ಕೇರಳದಲ್ಲಿ ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ ಕಾಣುವ ‘ಮಕರಜ್ಯೋತಿ’ಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕಾಗಮಿಸುತ್ತಾರೆ. “ಮಕರ ವಿಳಕ್ಕು” ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ. ಶಬರಿಮಲೆಗೆ ತೆರಳಿದ ವೃತಧಾರಿಗಳು ಇದನ್ನು ವೀಕ್ಷಿಸಿದರೆ ಜೀವನ ಪಾವನ ಎಂಬ ನಂಬಿಕೆಯೂ ಇದೆ.
ದೇಶದ ವಿವಿಧೆಡೆ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಹಾಗೂ ಎಳ್ಳಿನ ಉಂಡೆಗಳನ್ನು ಹಂಚುವ ಸಂಪ್ರದಾಯವೂ ಇಲ್ಲಿದೆ. ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಯನ್ನು “ಲೋಹರಿ,” ಎಂದು ಕರೆಯುತ್ತಾರೆ. ಹಬ್ಬದ ಆಚರಣೆ ಕುರಿತಂತೆ ವಿಭಿನ್ನತೆ ಕಂಡು ಬಂದರೂ ಸಂಕ್ರಾಂತಿ ಸಮೃದ್ಧಿಯ ಸಂಕೇತವಾಗಿ ಉಳಿದಿರುವುದಂತು ಸತ್ಯ…