ಚಾರಣಪ್ರಿಯರಿಗೆ ಮುದನೀಡುವ ಬೆಟ್ಟಗಳು ಕೊಡಗಿನಲ್ಲಿ ಹಲವಾರು ಇದ್ದು. ಇದೀಗ ಚಾರಣಕ್ಕೆ ಇವುಗಳು ಯೋಗ್ಯವಾಗಿವೆ ಎಂದರೆ ತಪ್ಪಾಗಲಾರದು. ಚಾರಣ ಮಾಡಲೇಬೇಕೆಂದು ಬರುವವರು ಅರಣ್ಯದಲ್ಲಿ ಸಂಚರಿಸಿ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಹೀಗಾಗಿ ಯಾವುದೇ ತೊಂದರೆಯಾಗದ ಬೆಟ್ಟಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.
ಕೊಡಗಿನಲ್ಲಿ, ಪುಷ್ಪಗಿರಿ, ತಡಿಯಂಡಮೋಳ್ ಬೆಟ್ಟಕ್ಕೆ ಬಹಳಷ್ಟು ಮಂದಿ ಚಾರಣಕ್ಕಾಗಿ ಬರುವುದನ್ನು ನಾವು ಕಾಣಬಹುದು. ಆದರೆ ಇವುಗಳ ನಡುವೆ ಸೋಮವಾರಪೇಟೆ ತಾಲೂಕಿನಲ್ಲಿರುವ ಭತ್ತದ ರಾಶಿ ಬೆಟ್ಟ ಕೂಡ ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಬೆಟ್ಟ ಎಂದರೆ ತಪ್ಪಾಗಲಾರದು.
ಈ ಬೆಟ್ಟಕ್ಕೆ ತೆರಳಬೇಕಾದರೆ ಸೋಮವಾರಪೇಟೆಯಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಸಿಂಗನಳ್ಳಿಗೆ ತೆರಳಿ ಅಲ್ಲಿಂದ ತಮ್ಮ ಚಾರಣವನ್ನು ಆರಂಭಿಸಬಹುದು.
ಸಾಮಾನ್ಯವಾಗಿ ಬೆಟ್ಟದ ಹೆಸರು ಕೇಳಿದರೆ ಅಚ್ಚರಿಯಾಗುತ್ತದೆ. ಇದೇನಪ್ಪಾ ಭತ್ತದರಾಶಿ ಬೆಟ್ಟ ಎಂಬ ಕುತೂಹಲವೂ ಮೂಡುತ್ತದೆ. ಇನ್ನು ಈ ಬೆಟ್ಟಕ್ಕೆ ಇಂತಹ ಹೆಸರು ಹೇಗೆ ಬಂತು ಹುಡುಕುತ್ತಾ ಹೋದರೆ ದಂತಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಬಹುಶಃ ಬೇಸಿಗೆಯಲ್ಲಿ ಈ ಬೆಟ್ಟವನ್ನು ದೂರದಿಂದ ನೋಡಿದವರು ಭತ್ತದರಾಶಿ ಬೆಟ್ಟ ಎಂದು ಹೆಸರಿಟ್ಟಿರಬೇಕು. ಏಕೆಂದರೆ ಬೇಸಿಗೆಯಲ್ಲಿ ಬೆಟ್ಟದ ಮೇಲಿರುವ ಹುಲ್ಲು ಒಣಗಿ ಭತ್ತದ ರಾಶಿ ಮಾಡಿಟ್ಟಂತೆ ಕಾಣುತ್ತದೆ. ಇದು ಬೆಟ್ಟಕ್ಕೆ ಹೆಸರು ಬರಲು ಕಾರಣವಾಗಿರಬಹುದು.
ಹಿರಿಯರು ಹೇಳುವ ಪ್ರಕಾರ ಹಿಂದಿನ ಕಾಲದಲ್ಲಿ ಭತ್ತದ ಕೃಷಿಯೇ ಮೂಲಾಧಾರವಾಗಿತ್ತು. ಭತ್ತವನ್ನು ಹೆಚ್ಚು ಯಾರು ಬೆಳೆಯುತ್ತಾರೋ ಅವರಿಗೆ ಗೌರವ ನೀಡಲಾಗುತ್ತಿತ್ತು. ತಾವು ಬೆಳೆದ ಭತ್ತವನ್ನು ರಾಶಿ ಮಾಡುವಾಗ ಆಗುವ ಸಂಭ್ರಮವೇ ಬೇರೆ. ಹಿಂದೆ ಈ ಊರಿನಲ್ಲಿದ್ದ ರೈತನೊಬ್ಬನಿಗೆ ಮುಗಿಲೆತ್ತರಕ್ಕೆ ಭತ್ತದ ರಾಶಿ ಮಾಡಬೇಕೆಂಬ ಹಂಬಲ ಹುಟ್ಟಿತು. ಹೀಗಾಗಿ ತಾನು ಬೆಳೆದ ಭತ್ತವಲ್ಲದೆ, ಗ್ರಾಮದವರು ತಂದು ಸುರಿಯುವಂತೆ ಅಜ್ಞಾಪಿಸಿದನು. ಇವನ ಮಾತನ್ನು ತಳ್ಳಿಹಾಕಲಾಗದ ನೆಂಟರು, ಗ್ರಾಮದವರು ತಮ್ಮ ಬಳಿಯಿದ್ದ ಭತ್ತವನ್ನು ತಂದು ಹಾಕಿದರು. ಹೀಗೆ ಪ್ರತಿವರ್ಷವೂ ಈತ ಮಾಡತೊಡಗಿದನು. ಈತನ ಹುಚ್ಚಾಟ ನೋಡಿದ ಆತನ ಸಹೋದರಿಗೆ ಕೋಪಬಂತು. ಆಕೆ ನಿನ್ನ ಭತ್ತದ ರಾಶಿಗೆ ಬೆಂಕಿಬೀಳಲಿ, ಅಲ್ಲಿ ಹುಲ್ಲುಗಳು ಬೆಳೆಯಲಿ’ ಎಂದು ಶಾಪ ನೀಡಿದಳು. ಪರಿಣಾಮ ಭತ್ತದ ರಾಶಿ ನಾಶವಾಗಿ ಅದು ಬೆಟ್ಟವಾಗಿ ಅಲ್ಲಿ ಹುಲ್ಲು ಕುರುಚಲು ಗಿಡಗಳು ಬೆಳೆದವಂತೆ.
ಇನ್ನು ಕೆಲವರು ಹೇಳುವ ಪ್ರಕಾರ ಮೊದಲು ಈ ಬೆಟ್ಟಕ್ಕೆ ಮುಗಿಲು ತಾಕುತ್ತಿತ್ತಂತೆ ಒಬ್ಬಳು ಭತ್ತ ಕುಟ್ಟುವಾಗ ಒನಕೆ ತಾಗಿ ಮೇಲಕ್ಕೆ ಹೋಗಿಬಿಟ್ಟಿತ್ತಂತೆ. ಹೀಗೆ ದಂತ ಕಥೆಗಳ ಮಹಾಪೂರವೇ ಇದೆ.
ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಗೆ ಸೇರಿದ ಸಿಂಗನಳ್ಳಿ ಕುಗ್ರಾಮ. ಇಲ್ಲಿನವರದು ಕೃಷಿಯಿಂದಲೇ ಬದುಕು. ಮಳೆಗಾಲದಲ್ಲಿ ಮಳೆ ಸುರಿದಾಗ ಈ ಬೆಟ್ಟದತ್ತ ಹೋಗುವುದು ಸಾಧ್ಯವಾಗದ ಕೆಲಸ. ಜಿಗಣೆಗಳು ಹುಟ್ಟಿಕೊಳ್ಳುತ್ತವೆ. ಅಕ್ಟೋಬರ್ ನಂತರದ ದಿನಗಳು ಚಾರಣಪ್ರಿಯರಿಗೆ ಈ ತಾಣ ಮುದ ನೀಡುತ್ತವೆ.
ಸಿಂಗನಹಳ್ಳಿಯ ತಳದಿಂದ ಬೆಟ್ಟವನ್ನೇರುತ್ತಾ ಹೋದಂತೆ ನಿಸರ್ಗದ ನಡುವಿನ ಚೆಲುವು ಬೆಟ್ಟವನ್ನೇರಲು ಪ್ರೇರೇಪಿಸುತ್ತದೆ. ಇತರೆ ಬೆಟ್ಟಗಳಿಗೆ ಹೋಲಿಸಿದರೆ ಇಲ್ಲಿ ಚಾರಣ ಕಷ್ಟವೇನಲ್ಲ. ಏರುತ್ತಾ ಹೋದಂತೆ ಬೆಟ್ಟದ ಮೇಲ್ಭಾಗದಲ್ಲಿ ಸಿಗುವ ವಿಶಾಲವಾದ ಮೈದಾನದಂತಹ ಪ್ರದೇಶ ಗಮನಸೆಳೆಯುತ್ತದೆ.
ಇಲ್ಲಿಂದ ನಿಂತು ಕಣ್ಣುಹಾಯಿಸಿದರೆ ಪ್ರಕೃತಿಯ ಚೆಲುವಿನ ನೋಟ ಒಂದು ಕ್ಷಣ ನಮ್ಮನ್ನು ಮೈಮರೆಸಿಬಿಡುತ್ತದೆ. ಪುಷ್ಪಗಿರಿ ಬೆಟ್ಟದ ತಪ್ಪಲು, ಮಾದಾಪುರ ಸಮೀಪದ ಕೋಟೆ ಬೆಟ್ಟ, ಮಾಲಂಬಿ ಬೆಟ್ಟ, ಕಾಟಿಕಲ್ಲು ಬೆಟ್ಟ, ಚೌಡ್ಲು ಬೆಟ್ಟ, ಮೂಕ್ರಿ ಗುಡ್ಡ, ಮಕ್ಕಳ ಗುಡಿ ಬೆಟ್ಟ, ದೊಡ್ಡಕಲ್ಲು ಬೆಟ್ಟ, ಹಾರಂಗಿ ಜಲಾಶಯ, ಹೇಮಾವತಿ ಜಲಾಶಯದ ಹಿನ್ನೀರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಯ ಪರ್ವತ ಶ್ರೇಣಿಗಳ ಸುಂದರ ನೋಟಗಳು ಲಭ್ಯವಾಗುತ್ತವೆ.
ದಕ್ಷಿಣ ಕನ್ನಡ, ಹಾಸನ, ಮೈಸೂರು ಕಡೆಯಿಂದ ಬರಲು ಇಲ್ಲಿಗೆ ರಸ್ತೆ ಸೌಲಭ್ಯವಿದೆ. ಇಲ್ಲಿ ರಾತ್ರಿ ಉಳಿದು ಕೊಳ್ಳುವ ಪ್ರಯತ್ನ ಮಾಡುವುದು ಅಪಾಯ. ಕಾರಣ ಯಾವಾಗ ಬೇಕಾದರೂ ಕಾಡು ಪ್ರಾಣಿಗಳು ಸುಳಿದಾಡುವ ಸಾಧ್ಯತೆಯಿದೆ. ಚಾರಣಕ್ಕೆ ತೆರಳುವವರು ಸ್ಥಳೀಯರ ಸಹಕಾರ ಪಡೆದು ಅವರ ಮಾರ್ಗದರ್ಶನದಲ್ಲಿ ತೆರಳಿದರೆ ಉತ್ತಮ…