ಗುಂಡ್ಲುಪೇಟೆ: ಕಳೆದ ಕೆಲ ದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹುಲಿಗಳು ಕಾಣಲು ಸಿಗುತ್ತಿರುವುದು ಸಂತಸದ ವಿಚಾರವಾಗಿದೆ.
ಹುಲಿಗಳು ಅರಣ್ಯದಲ್ಲಿ ನೋಡಲು ಸಿಗುತ್ತಿವೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಸಫಾರಿಗಾಗಿ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಈಗಾಗಲೇ ಅರಣ್ಯದಲ್ಲಿ ಹಸಿರಾಗಿದ್ದ ಪೊದೆಗಳು ಒಣಗಿ ಹೋಗಿದ್ದು, ಕಾಡು ಪ್ರಾಣಿಗಳು ಪರದಾಡುವಂತಾಗಿದೆ. ಹಸಿರು ಮೇವು ತಿಂದು ಬದುಕುವ ಪ್ರಾಣಿಗಳು ಕಂಗಾಲಾಗಿವೆ. ಅವು ಮೇವು ಮತ್ತು ನೀರಿಗಾಗಿ ಅರಣ್ಯದಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಅಲೆಯುತ್ತಿವೆ. ಇದೇ ಸ್ಥಿತಿ ಹುಲಿಗಳದ್ದಾಗಿದ್ದು, ನೀರು ಹುಡುಕಿಕೊಂಡು ಅರಣ್ಯದಲ್ಲಿ ಸಂಚರಿಸುತ್ತಿವೆ. ಹೀಗೆ ತಮ್ಮ ದಾಹ ತಣಿಸಲು ತನ್ನ ಎರಡು ಮರಿಗಳೊಂದಿಗೆ ಬಂದ ಹುಲಿಗಳ ಚಿತ್ರ ಛಾಯಾಗ್ರಾಹಕ ಮಂಜುನಾಥ್ ಹೆಗ್ಗಡೆ ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಂಗಳವಾರ ಬೆಳಿಗ್ಗೆ ಮುಂಜಾನೆ ಸಫಾರಿಗೆ ಮಂಜುನಾಥ ಹೆಗಡೆಯವರಿಗೆ ಬಂಡೀಪುರದ ಬಸವನಕಟ್ಟೆ ಕೆರೆಯಲ್ಲಿ ನೀರು ಕುಡಿಯುತ್ತಿರುವ ತಾಯಿ ಹಾಗೂ ಎರಡು ಮರಿ ಹುಲಿಗಳು ಕಂಡು ಬಂದಿವೆ. ಸುಮಾರು 15 ನಿಮಿಷಗಳ ಕಾಲ ಕೆರೆ ಬಳಿಯಿದ್ದ ಅವುಗಳು ಬಳಿಕ ಕಾಡಿನೊಳಕ್ಕೆ ಹೋಗಿವೆ. ಇದನ್ನು ಅವರು ಸೆರೆಹಿಡಿದು ಖುಷಿಪಟ್ಟಿದ್ದಾರೆ.
ಇನ್ನು ಬಂಡೀಪುರ ಸಫಾರಿ ವಾಹನ ಚಾಲಕ ಸುನಿಲ್ ಎಂಬುವರಿಗೂ ಅರಣ್ಯದ ನಡುವೆ ಹೋಗುತ್ತಿದ್ದಾಗ ಎರಡು ಹುಲಿಗಳು ಕಂಡಿವೆ. ಒಟ್ಟಾರೆ ಕೆಲ ದಿನಗಳಿಂದ ಅರಣ್ಯದಲ್ಲಿ ಹುಲಿಗಳು ನೋಡಲು ಸಿಗುತ್ತಿರುವುದು ಪ್ರವಾಸಿಗರಿಗೆ ಖುಷಿ ತಂದಿದೆ.