ದೇಶ ಭಕ್ತಿ.. ಜೀವನದಲ್ಲಿ ಶಿಸ್ತು.. ಪರಿಸರದಲ್ಲಿ ಸ್ವಚ್ಛತೆ.. ಪ್ರಾಣಿಪಕ್ಷಿಗಳ ಬಗ್ಗೆ ಪ್ರೀತಿ.. ಇದು ದೇಶಕಂಡ ಅಪ್ರತಿಮ ವೀರಯೋಧ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಜೀವನದಲ್ಲಿ ರೂಢಿಸಿಕೊಂಡು ಬಂದಿದ್ದ ಗುಣಗಳು. ಇವತ್ತು ಇಡೀ ದೇಶದಲ್ಲಿ ಸ್ವಚ್ಛತಾ ಆಂದೋಲನ ನಡೆಯುತ್ತಿದೆ. ಆದರೆ ಹಲವು ದಶಕಗಳ ಹಿಂದೆಯೇ ಸ್ವಚ್ಛತೆಗೆ ಕಾರ್ಯಪ್ಪ ಅವರು ಒತ್ತು ನೀಡಿದ್ದರು. ಕಸವನ್ನು ಬುಟ್ಟಿಯಲ್ಲೇ ಹಾಕುವಂತೆ ಮಕ್ಕಳಿಗೆ ಹಿತವಚನ ನೀಡುತ್ತಿದ್ದರು.
ಅವರನ್ನು ಕಂಡಾಗ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆಯುವ ಮಕ್ಕಳನ್ನು ಬೆನ್ನುತಟ್ಟಿ ಮಿಠಾಯಿ ನೀಡಿ ಕಳುಹಿಸುತ್ತಿದ್ದರು. ಒಂದು ವೇಳೆ ಮಿಠಾಯಿ ಪಡೆದ ಮಕ್ಕಳು ಅದರ ಮೇಲಿನ ಕವರನ್ನು ಅಲ್ಲಿಯೇ ಎಸೆದರೆ ಅವರಿಗೆ ಶಿಸ್ತಿನ ಪಾಠ ಹೇಳಿಕೊಡುತ್ತಿದ್ದರಲ್ಲದೆ, ಕಿಸೆಯಲ್ಲಿಟ್ಟುಕೊಂಡು ಕಸದ ಬುಟ್ಟಿಗೆ ಹಾಕುವಂತೆ ತಿಳಿ ಹೇಳುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದರು.
ನಿವೃತ್ತಿಯ ದಿನಗಳಲ್ಲಿ ತಾವಿದ್ದ ರೋಷನಾರದ ಸುತ್ತಲಿನ ಜಾಗಗಳಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಪ್ರೇಮ ಮೆರೆದಿದ್ದರು. ಅವರು ಮನಸ್ಸು ಮಾಡಿದ್ದರೆ ಅದನ್ನು ತೋಟವನ್ನಾಗಿ ಪರಿವರ್ತಿಸಬಹುದಿತ್ತು. ಆದರೆ ಅವರು ಹಾಗೆ ಮಾಡದೆ ಮರಗಳಲ್ಲಿ ಪಕ್ಷಿಗಳಿಗೆ ಅನುಕೂಲವಾಗುವಂತೆ ಕೃತಕ ಗೂಡುಗಳನ್ನಿರಿಸಿದ್ದರು. ಆ ಮೂಲಕ ಪರಿಸರ ಸಂರಕ್ಷಣೆಯ ಅರಿವನ್ನು ತಮ್ಮ ಮೂಲಕವೇ ಸಾರಿದ್ದರು. ಸಮಯಕ್ಕೆ ಅವರು ಹೆಚ್ಚಿನ ಗೌರವ ನೀಡುತ್ತಿದ್ದರು. ಅತಿಥಿಗಳನ್ನು ಭೇಟಿ ಮಾಡುವುದಿರಲಿ, ಕಾರ್ಯಕ್ರಮಕ್ಕೆ ತೆರಳವುದಿರಲಿ ಸಮಯಪಾಲನೆಯನ್ನು ಶಿಸ್ತುಬದ್ಧವಾಗಿ ಮಾಡುತ್ತಿದ್ದರು. ಇಂತಹ ವೀರಯೋಧನನ್ನು ಇಂದು(ಜನವರಿ 28) ನೆನಪಿಸಿಕೊಳ್ಳುವುದು ಅಗತ್ಯವಾಗಿದೆ. ಕಾರಣ ಅವರ ಜನ್ಮದಿನ. ಇವತ್ತು ಕೊಡಗಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಮತ್ತು ಸೇವೆ ಸಲ್ಲಿಸುತ್ತಿರುವ ಯೋಧರಿದ್ದಾರೆ. ಅವರಿಗೆಲ್ಲ ಕಾರ್ಯಪ್ಪ ಅವರೇ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಕೊಡಂದೆರ ಮಾದಪ್ಪರರ ಪುತ್ರರಾಗಿ 1899 ಜನವರಿ 28ರಂದು ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಜನಿಸಿದ ಕಾರ್ಯಪ್ಪರವರು ಕುಶಾಲನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿ, ಪ್ರೌಢ ಶಿಕ್ಷಣ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್ ಅಂದರೆ ಈಗಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಿತು. ಆ ನಂತರ ಹೆಚ್ಚಿನ ಶಿಕ್ಷಣವನ್ನು ಮದ್ರಾಸಿನ ಫ್ರೆಸಿಡೆನ್ಸಿ ಕಾಲೇಜಿನಲ್ಲಿ ಪಡೆದರು. ತಮ್ಮ 18ನೇ ವಯಸ್ಸಿಗೆ ಸೇನೆಗೆ ಸೇರುವ ಹಂಬಲದಿಂದ ಶಿಮ್ಲಾದಲ್ಲಿ ನಡೆಯುತ್ತಿದ್ದ ಸೇನಾ ನೇಮಕಾತಿ ಸ್ಥಳಕ್ಕೆ ತೆರಳಿ ಅಲ್ಲಿ ನಡೆದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸೇನೆಗೆ ಸೇರ್ಪಡೆಯಾದರು.
1917ರ ಪ್ರಥಮ ವಿಶ್ವ ಯುದ್ಧದ ವೇಳೆಗೆ ಅವರಿಗೆ ವೀರಯೋಧನಾಗಿ ಹೋರಾಡುವ ಅವಕಾಶ ಅವರಿಗೆ ಒದಗಿಬಂದಿತ್ತು. 1918ರಲ್ಲಿ ಬ್ರಿಟಿಷ್ ಆಡಳಿದ ಕಿಂಗ್ಸ್ ಕಮಿಷನ್ನ ಕಠಿಣ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಸೇನೆಯ ಕಠಿಣ ತರಬೇತಿಯನ್ನು ಮುಗಿಸಿ ಇಂದೂರಿನ ಡೆಲಿ ಕೆಡೆಟ್ ಕಾಲೇಜಿನಲ್ಲಿ ಸೈನ್ಯಕ್ಕೆ ನಿಯುಕ್ತರಾದರರು. ಬಳಿಕ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರ್ಪಡೆಗೊಂಡು ಮುಂಬಯಿಯಲ್ಲಿದ್ದ ಕರ್ನಾಟಿಕ್ ಪದಾತಿದಳಕ್ಕೆ ನಿಯುಕ್ತಿಗೊಂಡರು.
ಮೆಸೊಪೊಟಾಮಿಯಾ(ಈಗಿನ ಇರಾಕ್)ದಲ್ಲಿದ್ದ 37(ವೇಲ್ಸ್ ರಾಜಕುಮಾರನ) ಡೊಗ್ರಾ ದಳದೊಂದಿಗೆ ಸೈನ್ಯದ ಸಕ್ರಿಯ ಸೇವೆಯನ್ನು ಪ್ರಾರಂಭಿಸಿದರು. ನಂತರ ಇವರನ್ನು 2ನೇ ರಾಜಪೂತ್ ಲಘು ಪದಾತಿದಳ(ವಿಕ್ಟೊರಿಯಾ ರಾಣಿಯ ಸ್ವಂತ)ಕ್ಕೆ ವರ್ಗಾಯಿಸಲಾಯಿತು. 1933ರಲ್ಲಿ ಕ್ವೆಟ್ಟಾದಲ್ಲಿದ್ದ ಸಾಫ್ಟ್ ಕಾಲೇಜಿನಲ್ಲಿ ತರಬೇತಿ ಪಡೆದ ಇವರು ಈ ತರಬೇತಿಯನ್ನು ಪಡೆದ ಮೊದಲ ಭಾರತೀಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 1946ರಲ್ಲಿ ಫ್ರಂಟೀಯರ್ ಬ್ರಿಗೆಡ್ ಗುಂಪಿನ ಬ್ರಿಗೇಡಿಯರರಾಗಿ ಬಡ್ತಿ ಪಡೆದ ಇವರು ಕರ್ನಲ್ ಅಯೂಬ್ ಖಾನ್ (ಸ್ವಾತಂತ್ರ್ಯ ಬಳಿಕ ಪಾಕಿಸ್ತಾನದ ಸೈನ್ಯದ ಫೀಲ್ಡ್ ಮಾರ್ಷಲ್ ಮತ್ತು 1962ರಿಂದ 1969ರವರೆಗೆ ರಾಷ್ಟ್ರಪತಿಯಾಗಿದ್ದರು) ಇವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಕಾರ್ಯಪ್ಪನವರು ತಮ್ಮ ಸೇವಾವಧಿಯಲ್ಲಿ ವಿವಿಧ ದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, 1941-42ರ ವೇಳೆಯಲ್ಲಿ ಸಿರಿಯಾ ಮತ್ತು ಇರಾನ್ದೇಶಗಳಲ್ಲಿಯೂ, 1943-44ರಲ್ಲಿ ಬರ್ಮಾದಲ್ಲಿ ಹಾಗೂ ವಝಿರಿಸ್ತಾನದಲ್ಲಿ ಕಾರ್ಯನಿರ್ವಹಿಸಿದರು. 1942ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಯಿತು, ಅವತ್ತಿನ ದಿನಕ್ಕೆ ಇಂತಹ ಅಧಿಕಾರ ಪಡೆದ ಮೊದಲ ಭಾರತೀಯ ಅಧಿಕಾರಿ ಅವರಾಗಿದ್ದರು. ಆದಾದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಸಲುವಾಗಿ 26ನೆಯ ಡಿವಿಜನ್ನಿನಲ್ಲಿ ಕೆಲಸ ನಿರ್ವಹಿಸಿದ ಅವರು ಅದನ್ನು ಯಶಸ್ವಿಗೊಳಿಸಿದಾಗ ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ ಪ್ರಶಸ್ತಿಯನ್ನು ನೀಡಲಾಯಿತು.
1947ರಲ್ಲಿ ಯುನೈಟೆಡ್ ಕಿಂಗ್ಡಮ್ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದ ಅವರು, ಅಲ್ಲಿಯೂ ಆ ತರಬೇತಿಯನ್ನು ಪಡೆದ ಮೊದಲ ಭಾರತೀಯರಾದರು. ಸ್ವಾತಂತ್ರ್ಯ ನಂತರ ಭಾರತದ ಬಳಿಕ ಕಾರ್ಯಪ್ಪನವರು ಮೇಜರ್ ಜನರಲ್ ಪದವಿಗೆ ಏರಿದರಲ್ಲದೆ, ಸೈನ್ಯದ ಉಪ ದಂಡನಾಯಕರಾದರು. ನಂತರ ಲೆಫ್ಟಿನೆಂಟ್ ಜನರಲ್ ಎಂದು ಪದೊನ್ನತಿಗೊಳಿಸಿ ಪೂರ್ವದ ಸೈನ್ಯದ ಕಮಾಂಡರ್ ಆದರು. 1947ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮದ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲ್ ಗಳನ್ನು ವಾಪಸ್ ಪಡೆಯುವಲ್ಲಿಯೂ ಯಶಸ್ವಿಯಾದರು. 1983ರಲ್ಲಿ ಭಾರತದ ಮಹಾದಂಡನಾಯಕ(ಫೀಲ್ಡ್ಮಾರ್ಷಲ್)ರಾದರು. ಇವರು ನಿವೃತ್ತಿಯ ಬಳಿಕ ಮಡಿಕೇರಿಯ ನಿಸರ್ಗ ಸುಂದರ ಸ್ಥಳವಾದ ರೋಷನಾರದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದರು. 1993ರ ಮೇ 15ರಂದು ನಮ್ಮನ್ನಗಲಿದರು. ಪುಟ್ಟ ಜಿಲ್ಲೆ ಕೊಡಗಿನಲ್ಲಿ ಹುಟ್ಟಿ ದೇಶದ ಮನೆ ಮಾತಾಗಿ ಬೆಳೆಯುವಲ್ಲಿ ಕಾರ್ಯಪ್ಪ ಅವರು ಮಾಡಿದ ಸಾಧನೆ ಮಾತ್ರ ಅಸಾಧ್ಯವಾದುದಾಗಿದೆ.