ಮಡಿಕೇರಿ: ಕೊಡಗಿನಲ್ಲಿ ಕಾಡಿನಿಂದ ನಾಡಿನತ್ತ ಹಾವುಗಳು ಬರುವುದು ಹೊಸತೇನಲ್ಲ. ಕೆಲವೊಮ್ಮೆ ಮನೆಯೊಳಗೆ ಸೇರಿಕೊಂಡು ಮನೆಯವರನ್ನು ಬೆಚ್ಚಿ ಬೀಳಿಸುವುದು ಇದೆ. ಹಲವು ಬಾರಿ ತಮಗೆ ಗೊತ್ತಿಲ್ಲದೆ ಹಾವನ್ನು ತುಳಿದೋ, ಮುಟ್ಟಿಯೋ ಕಚ್ಚಿಸಿಕೊಂಡು ಸಾವನ್ನಪ್ಪಿದ ಪ್ರಕರಣಗಳು ಬೇಕಾದಷ್ಟು ನಡೆದಿವೆ.
ಮೊದಲೆಲ್ಲ ಹಾವನ್ನು ಕಂಡರೆ ಹೊಡೆದೋ, ಗುಂಡು ಹಾರಿಸಿಯೋ ಸಾಯಿಸುವ ಅಭ್ಯಾಸವಿತ್ತು. ಆದರೆ ಇತ್ತೀಚೆಗೆ ಹಾವನ್ನು ಸಾಯಿಸುವವರ ಸಂಖ್ಯೆ ಕಡಿಮೆಯಾಗಿದೆ. ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಹೊಸ ಪರಿಪಾಠ ಶುರುವಾಗಿದೆ. ಇದೊಂದು ರೀತಿಯ ಒಳ್ಳೆಯ ಬೆಳವಣಿಗೆ ಎಂದರೆ ತಪ್ಪಾಗಲಾರದು. ಮೈಸೂರಿನಲ್ಲಿ ಸ್ನೇಕ್ ಶ್ಯಾಮ್ ಅವರು ಸುಮಾರು ಮೂವತ್ತೈದು ಸಾವಿರಕ್ಕೂ ಹೆಚ್ಚು ಹಾವನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಹಾವುಗಳ ಸಂರಕ್ಷಣೆಯಲ್ಲಿ ತೊಡಗಿದ್ದು, ಅವರ ಕಾರ್ಯಗಳು ದೇಶ ವಿದೇಶಗಳಲ್ಲಿ ಜನಮನ ಸೆಳೆಯುತ್ತಿದ್ದಂತೆಯೇ ಅವರಿಂದ ಪ್ರಭಾವಿತರಾದ ಹಲವರು ಹವ್ಯಾಸಕ್ಕಾಗಿ ಹಾವು ಹಿಡಿದು ಸಂರಕ್ಷಣೆ ಮಾಡುವ ಕಾರ್ಯಕ್ಕೆ ಮುಂದಾದರು. ಇವರ ಪೈಕಿ ಸ್ನೇಕ್ ಶರತ್ ಕೂಡ ಒಬ್ಬರು. ಕೊಡಗಿನಲ್ಲಿ ಬಹಳಷ್ಟು ಮಂದಿ ಹಾವು ಹಿಡಿಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಶರತ್ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಇದುವರೆಗೆ ಹಿಡಿದಿದ್ದಾರೆ. ಇದರಲ್ಲಿ ಸುಮಾರು 15 ಹಾವುಗಳು ಅಪಾಯಕಾರಿ ಕಾಳಿಂಗ ಸರ್ಪಗಳಾಗಿವೆ ಎನ್ನುವುದು ವಿಶೇಷವಾಗಿದೆ.
ಇತ್ತೀಚೆಗೆ ದಕ್ಷಿಣ ಕೊಡಗಿನ ಗೋಣಿಕೊಪ್ಪಲು ಸಮೀಪದ ದೇವರಪುರ ಸಾವಿರಬಟ್ಟಿ ಕಾಫಿ ತೋಟದ ಹಾದಿಯಲ್ಲಿದ್ದ ಹಾಗೂ ಈಚೂರು-ನಾಡುಗುಂಡಿಯಲ್ಲಿದ್ದ ಎರಡು ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಎರಡು ಕಾಳಿಂಗಸರ್ಪಗಳು ಭಾರೀ ಗಾತ್ರದವುಗಳಾಗಿದ್ದು, ಯಾರದಾದರು ಮನೆ ಸೇರಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು. ಈ ಸರ್ಪಗಳು ಕಾಡಿನಿಂದ ನಾಡಿನತ್ತ ಬರಲು ಕಾರಣವೇನು ಎಂಬುದನ್ನು ನೋಡುವುದಾದರೆ ಬೇಸಿಗೆಯಲ್ಲಿ ಅರಣ್ಯದಲ್ಲಿ ಸಂಭವಿಸುವ ಕಾಳ್ಗಿಚ್ಚು ಮತ್ತು ನೀರು, ಆಹಾರದ ಸಮಸ್ಯೆಯಿಂದಾಗ ಆಹಾರ ಅರಸಿಕೊಂಡು ಅರಣ್ಯದಿಂದ ಮುಖ ಮಾಡುತ್ತಿವೆ.
ಮಳೆ ಬಿದ್ದ ತಕ್ಷಣ ಕಾಡಿನಿಂದ ರಸ್ತೆ ಬದಿಗೆ ಬರುವ ಹಾವುಗಳು ಮಣ್ಣಿನ ವಾಸನೆಯನ್ನು ಆಘ್ರಾಣಿಸುತ್ತಿರುತ್ತವೆ. ಈ ವೇಳೆ ವಾಹನಗಳ ಚಕ್ರಕ್ಕೆ ಸಿಲುಕಿ ಸಾಯುತ್ತವೆ. ಆದರೆ ಬೇಕಂತಲೇ ಹಾವುಗಳನ್ನು ಹೊಡೆದು ಸಾಯಿಸುವವರ ಸಂಖ್ಯೆ ಕಡಿಮೆಯಾಗಿದ್ದು, ಇದಕ್ಕೆ ಹಾವುಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಮತ್ತು ಅಲ್ಲಲ್ಲಿ ಹಾವು ಹಿಡಿದು ಕಾಡಿಗೆ ಬಿಡುವ ಹವ್ಯಾಸದಲ್ಲಿ ತೊಡಗಿಸಿಕೊಂಡಿರುವ ಯುವಕರು ಇರುವುದು ಕಾರಣವಾಗಿದೆ.
ಸ್ನೇಕ್ ಶರತ್ ಮತ್ತು ಸ್ನೇಕ್ ಬಾವೆ ಅವರು ತಾವು ಹಿಡಿದ ಕಾಳಿಂಗ ಸರ್ಪಗಳನ್ನು ಕಾಡಿಗೆ ಬಿಡುವ ಮುನ್ನ ಗೋಣಿಕೊಪ್ಪದಲ್ಲಿ ಸಾರ್ವಜನಿಕರ ದರ್ಶನಕ್ಕೆ ಬಿಟ್ಟಿದ್ದರು. ಅವು ತಮ್ಮದೇ ಭಾವಭಂಗಿಯಿಂದ ಎಲ್ಲರ ಗಮನಸೆಳೆದವು ಕೆಲವರು ಅವುಗಳ ಚಿತ್ರವನ್ನು ಕ್ಯಾಮರಾಗಳಲ್ಲಿ ಸೆರೆಹಿಡಿದುಕೊಂಡು ಖುಷಿ ಪಟ್ಟರು. ಬಳಿಕ ಮಾಕುಟ್ಟ ವನ್ಯಜೀವಿ ವಲಯದಲ್ಲಿ ಬಿಡಲಾಯಿತು.
ಹಾವುಗಳನ್ನು ಕಂಡಲ್ಲಿ ಸಾಯಿಸದೆ ರಕ್ಷಿಸಿ ಎಂದು ಮನವಿ ಮಾಡುವ ಸ್ನೇಕ್ ಶರತ್ ಹಾವು ಕಂಡಲ್ಲಿ ತಮ್ಮ ಮೊಬೈಲ್ (9449260053)ಗೆ ಕರೆ ಮಾಡುವಂತೆ ವಿನಂತಿಸುತ್ತಾರೆ.