ಮೈಸೂರು: ಕಬಿನಿ ಜಲಾಶಯದ ಹಿನ್ನೀರು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದ್ದು, ಇದುವರೆಗೆ ತುಂಬಿದ ಕಬಿನಿಯನ್ನು ನೋಡುತ್ತಿದ್ದ ಮಂದಿಗೆ ಖಾಲಿ ಖಾಲಿಯಾದ ಹಿನ್ನೀರಿನ ನೋಟ ಮತ್ತು ಅಲ್ಲಿ ಕಾಣಸಿಗುವ ಅಪರೂಪದ ಪಕ್ಷಿಗಳು, ಧೈತ್ಯಗಜ, ಹುಲಿ, ಜಿಂಕೆಗಳು, ಮೊಸಳೆಗಳು ಹೀಗೆ ಒಂದಲ್ಲ ಒಂದು ರೀತಿಯ ಸುಂದರ ದೃಶ್ಯಗಳು ಗಮನ ಸೆಳೆಯುತ್ತಿವೆ.
ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಹಿನ್ನೀರಿನಲ್ಲಿ ಪ್ರಾಣಿಗಳು, ಪಕ್ಷಿಗಳು, ಹಾವುಗಳು ಸೇರಿದಂತೆ ವಿವಿಧ ಪ್ರಾಣಿಗಳು ನೀರು ಕುಡಿಯಲು ಬಂದರೆ, ನೀರಿನೊಳಗಿರುವ ಮೊಸಳೆಗಳು ಪ್ರಾಣಿಗಳನ್ನು ಬೇಟೆಯಾಡಲು ದಂಡೆಗೆ ಬರುತ್ತಿವೆ. ಕಬಿನಿ ಹಿನ್ನೀರಿನಲ್ಲಿ ಕಾಣಸಿಗುವ ಹಕ್ಕಿಗಳ ಹಾರಾಟ, ಚೀರಾಟ, ಹುಳಹುಪ್ಪಟೆಗಳ ಬೇಟೆಯಾಡುವ ದೃಶ್ಯ ಮನಮೋಹಕವಾಗಿದೆ.
ಸದಾ ಅರಣ್ಯದ ನಡುವೆಯಿರುವ ಧೈತ್ಯಗಜವೊಂದು ಆಗೊಮ್ಮೆ ಈಗೊಮ್ಮೆ ಬಂದು ಎಲ್ಲರ ಗಮನ ಸೆಳೆಯುತ್ತದೆ. ಇದು ಭಾರೀ ಗಾತ್ರದಲ್ಲಿದ್ದು, ಉದ್ದದ ಕೋರೆಯೇ ಇದಕ್ಕೊಂದು ಭೂಷಣವಾಗಿದೆ. ಬೂದು ಬಣ್ಣದ ಬಾತುಕೋಳಿ (ಹೆಡೆಡ್ ಗೂಸ್) ಎಂಬ ಹಕ್ಕಿಗಳ ದಂಡು ಬಂದಿದ್ದು, ಎಲ್ಲೆಂದರಲ್ಲಿ ಹಾರಾಡುತ್ತಾ ಪಕ್ಷಿ ಪ್ರೇಮಿಗಳ ಮನಸೆಳೆಯುತ್ತಿವೆ. ಇವು ಹಿಮಾಲಯ ಕಡೆಯ ಚೀನಾ, ನೇಪಾಳದಿಂದ ಬಂದಿವೆ ಎನ್ನಲಾಗುತ್ತಿದೆ.
ಸದಾ ನೀರಿನಿಂದ ತುಂಬಿ ತುಳುಕುತ್ತಿದ್ದ ಜಲಾಶಯವನ್ನು ನೋಡಿದವರಿಗೆ ಅದು ಬರಿದಾಗಿರುವ ದೃಶ್ಯ ಅಚ್ಚರಿ ಮೂಡಿಸುತ್ತಿದೆ. ಬೇಸಿಗೆ ಆರಂಭದಲ್ಲೇ ಹೀಗಾದರೆ ಮುಂದೇನು ಎಂಬ ಭಯ ಸುತ್ತಲಿನವರನ್ನು ಕಾಡುತ್ತಿದೆ. ಈಗಾಗಲೇ ನಾಗರಹೊಳೆ ಮತ್ತು ಬಂಡೀಪುರದ ಅರಣ್ಯದಲ್ಲಿ ಮೇವು ಮತ್ತು ನೀರಿಗೆ ತೊಂದರೆ ಕಾಣಿಸಿಕೊಂಡಿರುವುದರಿಂದ ಹೆಚ್ಚಿನ ಪ್ರಾಣಿಗಳು ಕಬಿನಿ ಹಿನ್ನೀರಿನತ್ತ ಆಗಮಿಸುತ್ತಿದ್ದು ಅಲ್ಲಿಯೇ ವಾಸ್ತವ್ಯ ಹೂಡುತ್ತಿವೆ.
ಇವು ನೀರು ಕುಡಿಯಲು ಬರುವುದರಿಂದ ಅವುಗಳನ್ನು ಹಿಡಿದು ತಿನ್ನಲು ಮೊಸಳೆಗಳು ಹೊರಬರುತ್ತಿದ್ದು, ಕೆಲಕಾಲ ದಂಡೆಯ ಮೇಲೆ ಬಂದು ಬಿಸಿಲು ಕಾಯುತ್ತಾ ಮಲಗಿ ಆ ನಂತರ ಮತ್ತೆ ನೀರಿಗಿಳಿಯುತ್ತಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕಬಿನಿ ಹಿನ್ನೀರು ಹಲವು ನೋಟಗಳಿಗೆ ಸಾಕ್ಷಿಯಾಗುತ್ತಿದ್ದು, ಇದನ್ನು ನೋಡಲೆಂದೇ ಪ್ರವಾಸಿಗರು ಇತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.